ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mind and Memory: ನೆನಪು- ಇದು ಮೆದುಳಿನ ವಿಷಯ

Mind and Memory
Published 2 ಆಗಸ್ಟ್ 2023, 0:11 IST
Last Updated 2 ಆಗಸ್ಟ್ 2023, 0:11 IST
ಅಕ್ಷರ ಗಾತ್ರ

ನಾವು, ಮಾನವರು, ಭೂಮಿಯ ಮೇಲಿನ ಇತರೆಲ್ಲಾ ಜೀವಿಗಳಂತೆಯೇ ಆದರೂ ಬೌದ್ದಿಕವಾಗಿ, ಭಾವುಕವಾಗಿ ಅವುಗಳಿಗಿಂತ ತುಸು ಭಿನ್ನ. ಪ್ರಾಣಿಗಳು ಆಯಾ ಕ್ಷಣದಲ್ಲಷ್ಟೆ ಬದುಕುತ್ತವೆ; ಅವು ನಮ್ಮಷ್ಟು ಭಾವುಕಜೀವಿಗಳಲ್ಲ; ಏನನ್ನೂ ನೆನಪಿಡುವುದಿಲ್ಲ. ಹಾಗಾಗಿ ಜಗತ್ತಿನ ಜೀವರಾಶಿಗಳಲ್ಲೇ ನಾವು ಹೆಚ್ಚಾಗಿ ಎಲ್ಲವನ್ನೂ ಭಾವಿಸುವವರೂ ಅನುಭವಿಸುವವರೂ ನೆನಪಿಡುವವರೂ ಎನ್ನಬಹುದು. ಇದವುಗಳ ಫಲವಾಗಿ ನಮ್ಮ ನೆನಪುಗಳು ಕೂಡ ನೂರಾರು. ಆ ನೆನಪು ಭಾವನೆ ಅನುಭವಗಳೆಲ್ಲವನ್ನೂ ಸಂಗ್ರಹಿಸಿ ಮುಂದಿನ ಹೆಜ್ಜೆಗಳಲ್ಲಿ ಅವುಗಳನ್ನು ಅನ್ವಯಿಸುತ್ತಾ ಬದುಕುವ ಬುದ್ಧಿವಂತಿಕೆ ನಮಗಿರುವುದು ವಿಶೇಷ. ಇದಕ್ಕೆಲ್ಲಾ ಬುನಾದಿಯೇ ನಮ್ಮ ಮೆದುಳು ಹಾಗೂ ಕಾಲಕಾಲಕ್ಕೂ ಅದು ವಿಕಾಸವಾಗುತ್ತಿರುವುದು, ನಮ್ಮ ಮೆದುಳಿನ ಸಂಕೀರ್ಣ ನರವ್ಯವಸ್ಥೆ, ಅದಕ್ಕಿರುವ ಅಗಾಧ ನೆನಪಿನ ಶಕ್ತಿ. ಹಾಗೆಯೇ ಮರೆವಿನ ಶಕ್ತಿಯೂ. ನಮಗಾಗುವ ಕಹಿ ಘಟನೆಗಳೆಲ್ಲವನ್ನೂ ಮರೆತರೆ ಮಾತ್ರವೇ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗುವುದು. ಹಾಗಾಗಿ ನೆನಪಿನ ಶಕ್ತಿಯಂತೆಯೇ ಮರೆವೂ ಕೂಡ ಒಂದು ಶಕ್ತಿ ಹಾಗೂ ವರವೇ, ಹಾಗಾದರೆ ಈ ನೆನಪು ಹಾಗೂ ಮರೆವನ್ನು ನಮ್ಮ ಮೆದುಳು ಹೇಗೆ ನಿರ್ವಹಿಸುತ್ತದೆ ಎನ್ನುವುದು ಅತ್ಯಂತ ಸೋಜಿಗದ ವಿಷಯವಲ್ಲವೇ?

ಮನುಷ್ಯನ ಮೆದುಳಿನಲ್ಲಿ ದಾಖಲಾಗುವ ನೆನಪುಗಳು ಬಹಳ ವೈವಿಧ್ಯ ಹಾಗೂ ಜಟಿಲವೆಂದು ಸಂಶೋಧಕರು ಹೇಳುತ್ತಾರೆ. ಸೂಚ್ಯ ಜ್ಞಾಪಕ ಶಕ್ತಿ, ಸ್ಪಷ್ಟ ಜ್ಞಾಪಕ ಶಕ್ತಿ, ಇಂದ್ರಿಯ ಸ್ಮರಣಾ ಶಕ್ತಿ, ಅಲ್ಪಾವಧಿ ಜ್ಞಾಪಕ ಶಕ್ತಿ ಮತ್ತು ದೀರ್ಘಾವಧಿ ಜ್ಞಾಪಕ ಶಕ್ತಿ. ಇವೆಲ್ಲಾ ನೆನಪುಗಳ ಬಗೆ. ಅರ್ಥಾತ್, ನಾವು ಅನುಭವಿಸಿದ್ದವನ್ನೂ ನಮ್ಮ ಮೆದುಳು ನೆನಪಿಟ್ಟುಕೊಳ್ಳುವುದು ಒಂದು ಸಂಕೀರ್ಣ ಹಾಗೂ ಆಶ್ಚರ್ಯಕರ ಕ್ರಿಯೆ. ಅದು ಇಂದ್ರಿಯಗಳ ಮೂಲಕ ಅನುಭವಿಸಿದ್ದಿರಬಹುದು, ಯಾವುದೇ ಸಂತಸ ಅಥವಾ ಕಹಿ ಘಟನೆಗಳಿರಬಹುದು. ಇಲ್ಲಿ ನಮ್ಮ ಮೆದುಳಿನಲ್ಲಿರುವ ಹಿಪೋಕ್ಯಾಂಪಸ್‌ ಅನ್ನುವ ಭಾಗ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೊದಲಿಗೆ ಎಲ್ಲ ಅನುಭವಗಳನ್ನೂ ಸ್ವೀಕರಿಸಿಕೊಳ್ಳುವ ಭಾಗವಿದು. ಮುಂದೆ ಆ ನೆನಪುಗಳ ಮಹತ್ವದ ಮೇಲೆ ಅವು ಮೆದುಳಿನ ಇತರೆ ಭಾಗದಲ್ಲಿ ದಾಖಲಾಗುತ್ತಹೋಗುತ್ತದೆ. ಈ ಎಲ್ಲವನ್ನೂ ನಮ್ಮ ಮೆದುಳು ಕ್ರೋಡೀಕರಿಸುತ್ತಹೋಗುತ್ತದೆ, ನಾವು ನಮ್ಮ ಕಪಾಟಿನಲ್ಲಿ ಬಟ್ಟೆ ಅಥವಾ ಕಡತಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವ ಹಾಗೆ. ನಾವು ನಮಗಾಗುವ ಎಲ್ಲ ಅನುಭವಗಳನ್ನೂ ನೆನಪಿಡಲಾಗುವುದಿಲ್ಲ. ಅದನ್ನು ಕಾಲಕಾಲಕ್ಕೆ ಮರೆಯುತ್ವಿರುತ್ತೇವೆ, ನಮಗೆ ಬೇಡವಾದ ವಸ್ತುಗಳನ್ನು ನಮ್ಮ ಕಪಾಟಿನಿಂದ ಆಗಾಗ್ಗೆ ತೆಗೆದು ಜಾಗ ಖಾಲಿಮಾಡಿಟ್ಟುಕೊಳ್ಳುವಂತೆ.

ಇದುವರೆಗೂ ಈ ‘ನೆನಪುಗಳ ವ್ಯವಸ್ಥಿತವಾದ ಕ್ರೋಡೀಕರಣ’ ಕ್ರಿಯೆಯ ಪ್ರಕಾರ ಎಲ್ಲ ನೆನಪುಗಳೂ ‘ಹಿಪೋಕ್ಯಾಂಪಸ್‌’ ಭಾಗದಲ್ಲಿದ್ದು, ಕಾಲಕಳೆದಂತೆ ‘ನಿಯೋಕಾರ್ಟೆಕ್ಸ್‌’ ಭಾಗಕ್ಕೆ ಹೋಗಿ ದಾಖಲಾಗುತ್ತವೆ ಎನ್ನಲಾಗುತ್ತಿತ್ತು. ಆದರೆ ಅದು ನಿಜವಲ್ಲವಂತೆ. ನಮ್ಮ ನೆನಪುಗಳು ಮುಂದೆ ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬರಬಹುದು ಎನ್ನುವುದನ್ನು ಆಧರಿಸಿ ಮೆದುಳಿನ ಯಾವ ಭಾಗದಲ್ಲಿ ಅದನ್ನು ದಾಖಲಿಸಬೇಕು ಎನ್ನುವುದನ್ನು ನಮ್ಮ ನರವ್ಯವಸ್ಥೆ ನಿರ್ಧರಿಸುತ್ತದೆ ಎಂದು ವರ್ಜೀನಿಯಾದ ಜನೀಲಿಯಾದ ರಿಸರ್ಚ್‌ ಕ್ಯಾಂಪಸ್‌ ಹಾಗೂ ಯೂನಿವರ್ಸಿಟಿ ಕಾಲೇಜ್‌ ಲಂಡನ್ನಿನ ಸಂಶೋಧಕರು ನೇಚರ್‌ ನ್ಯೂರೋಸೈನ್ಸ್‌ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಇವರ ಪ್ರಕಾರ ಕೆಲವು ನೆನಪುಗಳು ನಿಯೋಕಾರ್ಟೆಕ್ಸ್‌ ಭಾಗಕ್ಕೆ ವರ್ಗಾವಣೆಯಾಗದೆಯೇ, ಶಾಶ್ವತವಾಗಿ ಹಿಪೋಕ್ಯಾಂಪಸ್‌ ಭಾಗದಲ್ಲಿಯೇ ಉಳಿದುಕೊಳ್ಳಬಹುದಂತೆ. ಇದುವರೆಗೂ ಈ ಜಟಿಲವಾದ ವ್ಯವಸ್ಥಿತವಾದ ಕ್ರೋಡೀಕರಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಿದ್ದಾಂತಗಳನ್ನು ಮನೋತಜ್ಞರು ಪ್ರಕಟಿಸಿದ್ದಾರೆ. ಆದರೆ ಯಾರೊಬ್ಬರೂ ನೆನಪುಗಳು ಹಿಪೋಕ್ಯಾಂಪಸ್‌ ಭಾಗದಲ್ಲಿಯೇ ಉಳಿಯುತ್ತದೆಯೇ ಅಥವಾ ನಿಯೋಕಾರ್ಟೆಕ್ಸ್‌ ಭಾಗದಲ್ಲಿ ಹೋಗಿ ದಾಖಲಾಗುತ್ತದೆಯೇ ಎಂದು ಗಣೀತೀಯವಾದ ಪುರಾವೆ ನೀಡಿ ಸಾಬೀತುಪಡಿಸಿರಲಿಲ್ಲ. ಇದೋ ಈಗ ಜನೀಲಿಯಾದ ಸಂಶೋಧಕರು ಈ ದೀರ್ಘಕಾಲದ ಒಗಟನ್ನು ಬಿಡಿಸಲು ಒಂದು ‘ನ್ಯೂರಲ್‌ ನೆಟ್‌ ವರ್ಕ್‌ ಥಿಯರಿ’ ಅಥವಾ ‘ನರಜಾಲಸಿದ್ದಾಂತ’ ಎನ್ನುವ ಸಿದ್ದಾಂತವನ್ನು ಪ್ರಸ್ತುತಪಡಿಸಿದ್ದಾರೆ.

ಈ ಸಂಶೋಧಕರು ಹೇಳುವುದೇನೆಂದರೆ ನಮ್ಮ ನೆನಪುಗಳು ಅಥವಾ ಅನುಭವಗಳು ಮುಂದೆ ಸಾಮಾನ್ಯೀಕರಿಸಲ್ಪಡಬೇಕು; ಆಗ ಮಾತ್ರವೇ ಅವು ನಿಯೋಕಾರ್ಟೆಕ್ಸ್‌ ಭಾಗಕ್ಕೆ ವರ್ಗಾವಣೆಯಾಗುತ್ತವೆ. ಅರ್ಥಾತ್‌, ಅವು ಯಾವುದೇ ಪರಿಸ್ಥಿತಿಗಳಲ್ಲೂ ಬಳಸಿಕೊಳ್ಳಬಹುದಾದ ಅಥವಾ ಅನ್ವಯವಾಗಬಹುದಾದಂತಹ ನೆನಪುಗಳಾದರೆ ಮಾತ್ರವೇ ಅವನ್ನು ನಮ್ಮ ಮೆದುಳು ದಾಖಲಿಸಿಕೊಳ್ಳುಸುತ್ತದೆ. ಇದನ್ನು ‘ನೆನಪುಗಳ ಸಾಮಾನ್ಯೀಕರಣ’ ಎನ್ನಬಹುದು; ಒಂದು ಕಣಿವೆಯನ್ನು ನೋಡಿದಾಗ ಅಲ್ಲಿ ನೀರು ಇತ್ತು ಅಥವಾ ಇದೆ ಎನ್ನುವುದನ್ನು ನಾವು ಸಾಮಾನ್ಯವಾಗಿ ಹೇಗೆ ಅರ್ಥಮಾಡಿಕೊಳ್ಳುತ್ತೇವೆಯೋ ಹಾಗೆ. ಇಂತಹ ನೆನಪುಗಳು ನಮಗೆ ಜಗತ್ತನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಪ್ರಾಣಿಗಳಿಗೂ ಈ ನೆನಪಿನ ಅವಶ್ಯಕತೆ ಅನಿವಾರ್ಯ. ಒಂದು ಪರಿಸರದಲ್ಲಿ ನೆಲೆಸಿದ್ದಾಗ ಎಲ್ಲೆಲ್ಲಿ ಏನೇನು ಲಭ್ಯವಿದೆ ಎನ್ನುವದರ ಅರಿವು ಅವುಗಳಿಗಿರಬೇಕು. ಉದಾಹರಣೆಗೆ, ಅವುಗಳಿಗೆ ನೀರು ಬೇಕಾದಾಗ ಅಲ್ಲಿಯೇ ಹೋಗಿ ಕುಡಿಯಬೇಕು. ಇಲ್ಲಿ ನೆನಪು ಹಾಗೂ ಅರಿವಿನ ಅನಿವಾರ್ಯತೆ ಬಹಳಷ್ಟಿದೆ. ಹಾಗಾಗಿ ನೆನಪಿನ ಸಾಮಾನ್ಯೀಕರಣ ಅವುಗಳ ಮೆದುಳಿನಲ್ಲಿಯೂ ನಡೆಯುವ ಕ್ರಿಯೆಯೇ. ಇದು ಸಾಮಾನ್ಯ ಕಲ್ಪನೆಯಾಗಿರಬಹುದಷ್ಟೆ. ಈ ಸಾಮಾನ್ಯೀಕರಣ ಪ್ರಕ್ರಿಯೆಯೇ ಯಾಂತ್ರಿಕ ಕಲಿಕೆಯಲ್ಲಿಯೂ ಅನ್ವಯವಾಗುತ್ತಿರುವುದು.

ಆದರೆ ಈ ರೀತಿಯ ನೆನಪು ಸ್ಪಷ್ಟ ನೆನಪಿನ ಒಂದು ವಿಧವಾದ ಪ್ರಾಸಂಗಿಕ ನೆನಪಿಗಿಂತ ಭಿನ್ನ. ಇಲ್ಲಿ ನಮಗೆ ಸಂಪೂರ್ಣವಾಗಿ ಒಂದು ಪ್ರಸಂಗದ ನೆನಪು ನಮ್ಮ ಮುಂದೆ ಪ್ರಸ್ತುತವಾಗುತ್ತಹೋಗುತ್ತದೆ. ಅಂದರೆ ಕಣಿವೆಯನ್ನು ನೋಡಿದಾಗ ನೀರು ಇತ್ತೋ ಇಲ್ಲವೋ ಎನ್ನುವ ಒಂದು ಕಲ್ಪನೆ ನಮಗೆ ಮೂಡುವುದು ಸೂಚ್ಯ ನೆನಪಾದರೆ, ಇಲ್ಲಿ ನದಿ, ಬಾವಿ, ಸಮುದ್ರಗಳಂತಹ ಒಂದು ನೀರಿನ ಆಕರವೇ ನೆನಪಾಗುತ್ತದೆ. ಈ ದೃಷ್ಟಿಕೋನದಲ್ಲಿ ನೋಡುವುದಾದರೆ, ನೆನಪುಗಳ ಕ್ರೋಡೀಕರಣ ಎನ್ನುವುದು ಕೇವಲ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನೆನಪುಗಳನ್ನು ಅಥವಾ ಅನುಭವಗಳನ್ನು ನಕಲು ಮಾಡುವುದಲ್ಲ. ಪ್ರತಿಯಾಗಿ ಹಳೆಯ ನೆನಪುಗಳ ಆಧಾರದಿಂದ ಹೊಸದೊಂದು ನೆನಪನ್ನು ಸೃಷ್ಟಿಸುವುದಾಗುತ್ತದೆ. ನಮ್ಮ ಅನುಭವಕ್ಕೆ ಬರುವ ವಿಷಯಗಳು ಎಷ್ಟರ ಮಟ್ಟಿಗೆ ಸಾಮಾನ್ಯೀಕರಿಸಲ್ಪಡಬಲ್ಲವು ಎನ್ನವುದರ ಮೇಲೆ ಅವು ಹಿಪೋಕ್ಯಾಂಪಸ್‌ ಭಾಗದಲ್ಲಿಯೇ ಉಳಿಯುತ್ತದೆಯೇ ಅಥವಾ ಶಾಶ್ವತವಾಗಿ ದಾಖಲಾಗುವ ನಿಯೋಕಾರ್ಟೆಕ್ಸ್‌ ಭಾಗದಲ್ಲಿ ಹೋಗಿ ಸೇರುತ್ತವೆಯೇ ಎನ್ನುವುದು ನಿರ್ಧಾರವಾಗುತ್ತದೆ. ಹಾಗಾಗಿ ಸಾಮಾನ್ಯೀಕರಿಸಲ್ಪಡುವಂತವಾದ್ದರೆ ಮಾತ್ರವೇ ಅವು ನಿಯೋಕಾರ್ಟೆಕ್ಸ್‌ ಭಾಗಕ್ಕೆ ವರ್ಗಾವಣೆಯಾಗುತ್ತವೆ ಎನ್ನುವುದು ಇವರ ಅಭಿಪ್ರಾಯ.

ಈ ಸಂಶೋಧಕರು ಈ ಸಂಶೋಧಣೆಯ ಸಂದರ್ಭದಲ್ಲಿ, ಶಿಕ್ಷಕ-ವಿದ್ಯಾರ್ಥಿ-ಪುಸ್ತಕ ಮಾದರಿಯನ್ನು ಅಧ್ಯಯನ ಮಾಡಿದ್ದಾರೆ. ಇವರ ಪ್ರಕಾರ ಶಿಕ್ಷಕರು ವಿದ್ಯಾರ್ಥಿಗಳ ನರವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸಿದಾಗ ಅವರಲ್ಲಿ ಕಲಿಕೆ ಆರಂಭವಾಗುತ್ತದೆ. ಅದನ್ನು ವಿದ್ಯಾರ್ಥಿಗಳು ಪುಸ್ತಕದಲ್ಲಿ ಬರೆದಿಡುತ್ತಾರೆ. ಅದೇ ಪುಸ್ತಕವನ್ನು ಮುಂದೆಂದೋ ನೋಡಿದಾಗ ಮತ್ತೆ ವಿದ್ಯಾರ್ಥಿಯ ನೆನಪು, ಪರಿಸರ, ಅನುಭವ ಹಾಗೂ ಮೆದುಳಿನಲ್ಲಿ ಸಂಗ್ರಹವಾಗಿರುವ ಮಾಹಿತಿಯ ಆಧಾರದ ಮೇಲೆ ಅದು ಅರ್ಥವಾಗುತ್ತಹೋಗುತ್ತದೆ. ನೆನಪುಗಳು ಎಷ್ಟು ಸಾಮಾನ್ಯೀಕರಿಸಲ್ಪಡಬಲ್ಲವು ಎಂಬುದರ ಆಧಾರ ಮೇಲೆ ಈ ಕ್ರೋಡೀಕರಣವು ಹೇಗೆ ನಡೆಯುತ್ತದೆ ಎಂದು ತೋರಿಸಲು ಇವರು ಈ ‘ನ್ಯೂರಲ್‌ ನೆಟ್‌ವರ್ಕ್‌’ ಅಥವಾ ‘ನರಜಾಲವ್ಯವಸ್ಥೆ’ಯನ್ನು ಬಳಸಿಕೊಂಡಿದ್ದಾರೆ. ಈ ಹಿಂದೆ ಸಂಶೋಧಕರು ಅರಿತಿದ್ದ ವ್ಯವಸ್ಥಿತ ಕ್ರೋಡೀಕರಣ ಸಿದ್ಧಾಂತದಿಂದ ವಿವರಿಸಲಾಗದ ಮೆದುಳಿನ ನೆನಪಿನ ಜಾಲವನ್ನು ಈ ಸಿದ್ಧಾಂತವು ವಿವರಿಸಿತಂತೆ.

ಈ ಸಿದ್ದಾಂತವನ್ನು ಬಳಸಿಕೊಂಡು ಮೆದುಳಿನಲ್ಲಿ ಎಷ್ಟು ನೆನಪು ಕ್ರೋಡೀಕರಣವಾಗುತ್ತದೆ ಎಂಬುದನ್ನು ಮುಂದಿನ ಹಂತದಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗುತ್ತದೆ. ಈ ಕ್ರೋಡೀಕರಣವನ್ನು ನಿಯಂತ್ರಿಸುವ ನೆನಪುಗಳಲ್ಲಿ ನಮ್ಮ ಮೆದುಳು ನಿರೀಕ್ಷಿತ ಹಾಗೂ ಅನಿರೀಕ್ಷಿತ ಅಂಶಗಳ ವ್ಯತ್ಯಾಸಗಳನ್ನು ಹೇಗೆ ಗುರುತಿಸಬಲ್ಲದು, ವಿಭಾಗಿಸಬಲ್ಲದು ಎನ್ನುವುದನ್ನು ಪರೀಕ್ಷಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ, ಸಂಶೋಧಕರು. ನೆನಪು ಮತ್ತು ಮೆದುಳಿನ ನೆನಪನ್ನು ಸಂಗ್ರಹಿಸುವ, ವಿಂಗಡಿಸುವ ಹಾಗೂ ಶಾಶ್ವತವಾಗಿ ದಾಖಲಾಗಿಸುವ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳುವುದು ಸಂಶೋಧಕರಿಗೆ ಮುಂದೆ ಮೆದುಳಿನ ಅರಿವಿನ ಸಮಗ್ರತೆ ಹಾಗೂ ಅದು ಹೇಗೆ ಮಾನವನ ಆರೋಗ್ಯ ಮತ್ತು ಕೃತಕ ಬುದ್ದಿಮತ್ತೆಯಲ್ಲಿ ಸಹಾಯವಾಗಬಲ್ಲದು ಎಂಬುದರತ್ತ ಸಂಶೋಧನೆಗೆ ನಾಂದಿಯಾಗಬಲ್ಲದು ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT