ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಬಯೋ ಹ್ಯಾಕಿಂಗ್‌..? ಇಲ್ಲಿದೆ ಸಮಗ್ರ ಮಾಹಿತಿ

Last Updated 25 ಜೂನ್ 2022, 19:30 IST
ಅಕ್ಷರ ಗಾತ್ರ

ಮನುಷ್ಯನ ದೇಹವನ್ನೇ ಒಂದು ಕಂಪ್ಯೂಟರ್‌ ಪ್ರೋಗ್ರಾಮಿನಂತೆ ಭಾವಿಸಿ, ಅದರ ಅಂತರಾಳವನ್ನು ಹೊಕ್ಕು, ಒಳಗಿನ ದೋಷಗಳನ್ನು ಸರಿಪಡಿಸಲು ಪ್ರಾಚೀನ ವಿಧಾನಗಳಿಂದ ಹಿಡಿದು ಆಧುನಿಕ ಡಿಎನ್‌ಎ ತಂತ್ರಜ್ಞಾನದವರೆಗೆ ಯಾವುದಾದರೂ ಸರಿಯೇ, ಅದನ್ನು ಬಳಸಿಕೊಂಡು ಚಿರಯೌವನವನ್ನು ಪಡೆಯುವಂತಹ ಈ ಪ್ರಯೋಗ ಯಾರಿಗೆ ತಾನೇ ಬೇಡ!

***

ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ ಏಳುವ ಕೆನಡಾದ ಜಗದ್ವಿಖ್ಯಾತ ಐಸ್‌ ಹಾಕಿ ಆಟಗಾರ ಡಂಕನ್‌ ಕೀತ್‌ ತನ್ನ ಮನೆಯ ಮೊದಲ ಮಹಡಿಯಲ್ಲಿರುವ ವ್ಯಾಯಾಮ ಶಾಲೆಗೆ ತೆರಳುತ್ತಾನೆ. ಮೊದಲಿಗೆ ದೇಹವನ್ನು ಕೆಲಕಾಲ ಸೂರ್ಯನ ಕಿರಣಗಳಿಗೊಡ್ಡಿ ನಂತರ ಕೆಂಪು ಹಾಗೂ ಆವೆಗೆಂಪು ಬೆಳಕು ಸೂಸುವ ಬಲ್ಬಿನ ಕೆಳಗೆ ಎಂಟು ನಿಮಿಷ ಮಲಗುತ್ತಾನೆ. ಆನಂತರ ಅಷ್ಟೇ ಸಮಯ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಕಿರಣಗಳನ್ನು ಸೂಸುವ ಚಾಪೆಯ ಮೇಲೆ ಮಲಗುತ್ತಾನೆ. ಬಳಿಕ ತನ್ನ ಆಹಾರದಲ್ಲಿ ಗ್ಲುಟಾಥಿಯೋನ್‌ ಹಾಗೂ ವಿಟಮಿನ್‌ ‘ಸಿ’ ಇರುವಂತೆ ನೋಡಿಕೊಳ್ಳುತ್ತಾನೆ. ಅಲ್ಲದೇ ಆಗಾಗ ಅಶ್ವಗಂಧವನ್ನೂ ತನ್ನ ಆಹಾರದೊಂದಿಗೆ ಸೇವಿಸುತ್ತಾನೆ. ರಾತ್ರಿ ಮಲಗುವಾಗ ಜಲಜನಕದ ಇನ್ಹೇಲರ್‌ ಉಪಯೋಗಿಸಿ ಅದನ್ನು ಹೀರುತ್ತಾ ಮಲಗುತ್ತಾನೆ. ಈ ಎಲ್ಲಾ ಪ್ರಕ್ರಿಯೆಗಳು ತಾನು ಪ್ರತಿದಿನವೂ ಅತ್ಯಂತ ಕ್ರಿಯಾಶೀಲನಾಗಿರುವುದಕ್ಕೆ ಸಹಕಾರಿ ಎಂಬುದು ಆತನ ಬಲವಾದ ನಂಬಿಕೆ.

ಜೋಯಲ್‌ ಎರಿಕ್‌ ಪಿಂಟೊ ಎಂಬ ನ್ಯೂಟ್ರೀಷಿಯಸ್ಟ್‌ನ ದಿನಚರಿಯನ್ನೊಮ್ಮೆ ನೋಡೋಣ. ಮುಂಜಾನೆ ಎದ್ದಕೂಡಲೇ ಹಾಲು ಹಾಕದ ಕಾಫಿಯ ಮೇಲೆ ದೊಡ್ಡ ಬೆಣ್ಣೆಯ ಮುದ್ದೆಯನ್ನಿಟ್ಟು, ಆತ ಕುಡಿಯುತ್ತಾನೆ. ತಾನು ತಿನ್ನುವ ಆಹಾರದ ಪ್ರತೀ ಅಗುಳನ್ನೂ ತೂಕಮಾಡಿ, ಅದರಿಂದ ಎಷ್ಟು ಕ್ಯಾಲೊರಿ ಉತ್ಪತ್ತಿಯಾಗುತ್ತದೆಂದು ಲೆಕ್ಕಹಾಕಿ ಬಳಿಕ ತಿನ್ನುತ್ತಾನೆ. ಕೈ ಹೆಬ್ಬೆರಳಿನ ತುದಿಗೆ ಸದಾ ಗ್ಲುಕೋಮಿಟರ್‌ ಅಂಟಿಸಿಕೊಂಡು ಸದಾ ರಕ್ತದ ಗ್ಲುಕೋಸು ಎಷ್ಟಿದೆ ಎಂದು ನೋಡುತ್ತಲೇ ಇರುತ್ತಾನೆ. ವ್ಯಾಯಾಮ ಮಾಡಿದ್ದನ್ನು ಅಳತೆ ಮಾಡಲು ಸಾಧನವೊಂದನ್ನು ಇಟ್ಟುಕೊಂಡಿದ್ದಾನೆ. ಅದರ ಮುಖಾಂತರ ತಾನು ಎಷ್ಟು ಹೆಜ್ಜೆಗಳನ್ನು ಹಾಕಿದ ಎಂಬುದೂ ಸೇರಿದಂತೆ ಹಲವು ದಾಖಲೆಗಳನ್ನಿಡುತ್ತಾನೆ. ತನ್ನ ಮನೆಯ ಬಾಲ್ಕನಿಯಲ್ಲಿ ಪ್ರತಿದಿನ ಹಲವು ಗಂಟೆಗಳವರೆಗೆ ಮೊಬೈಲು ಫೋನನ್ನು ಮುಟ್ಟದೆಯೇ ವಾಕಿಂಗ್‌ ಮಾಡುತ್ತಾನೆ. ಸಂಜೆಯ ಹೊತ್ತಿಗೆಲ್ಲಾ ರಾತ್ರಿಯ ಊಟವನ್ನೂ ಮುಗಿಸಿಬಿಡುತ್ತಾನೆ. ರಾತ್ರಿ ಮಲಗುವಾಗ ಯಾವುದೇ ಬಲ್ಬುಗಳನ್ನು ಉರಿಸುವುದಿಲ್ಲ. ಕಾರಣ ತನ್ನ ಮೆದುಳಿಗೆ ಇದು ರಾತ್ರಿ ಎಂಬುದು ಮನದಟ್ಟಾಗಲಿ ಎಂಬ ಕಾರಣಕ್ಕಾಗಿ. ತಾನು ಆರೋಗ್ಯವಾಗಿರಲು ಈ ಅಭ್ಯಾಸಗಳು ಅನಿವಾರ್ಯ ಎಂಬುದು ಪಿಂಟೊನ ಅಭಿಮತ.

ಈ ಇಬ್ಬರ ದಿನಚರಿಗಳು ನಮಗೆ ಸ್ವಲ್ಪ ವಿಚಿತ್ರ ಹಾಗೂ ವಿಭಿನ್ನವಾಗಿ ಕಂಡರೂ ಸದ್ಯ ಜನಪ್ರಿಯವಾಗುತ್ತಿರುವ ವಿಶಿಷ್ಟವಾದ ಅಭ್ಯಾಸವೊಂದು ಇದಾಗಿದ್ದು ಇದನ್ನು ಶಾಸ್ತ್ರೀಯವಾಗಿ ಬಯೋ ಹ್ಯಾಕಿಂಗ್‌ ಅಥವಾ ಡು ಇಟ್‌ ಯುವರ್‌ ಸೆಲ್ಫ್‌ ಬಯಾಲಜಿ ಅಥವಾ ಗ್ಯಾರೇಜ್‌ ಬಯಾಲಜಿ ಎಂದು ಕರೆಯಲಾಗುತ್ತದೆ. ವಿದೇಶಗಳಲ್ಲಿ ಇತ್ತೀಚೆಗೆ ಬಹಳ ವೇಗವಾಗಿ ಜನಪ್ರಿಯಗೊಳ್ಳುತ್ತಿರುವ ಈ ಪ್ರಯೋಗ ಸಾವಕಾಶವಾಗಿ ಭಾರತದಲ್ಲಿಯೂ ಪ್ರಚಾರ ಪಡೆಯುತ್ತಿದೆ. ಜೈವಿಕ ತಂತ್ರಜ್ಞಾನದ ಪ್ರಯೋಗಗಳನ್ನು ಸಾಧಾರಣವಾಗಿ ಪ್ರಯೋಗಾಲಯಗಳಲ್ಲಿ ಮಾಡಲಾಗುತ್ತದೆ. ಆದರೆ, ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ತಮ್ಮ ಮೇಲೆಯೇ ಪ್ರಯೋಗಿಸಿಕೊಳ್ಳುತ್ತಾ ಅದರಿಂದ ತಮ್ಮ ಜೀವನವನ್ನು ಆರೋಗ್ಯಯುತವಾಗಿ ಇರುವಂತೆ ಹಸನುಗೊಳಿಸಿಕೊಳ್ಳುವ ವ್ಯವಸ್ಥೆಯೇ ಈ ಬಯೋ ಹ್ಯಾಕಿಂಗ್. ನಮ್ಮ ದೇಹವನ್ನು ಆರೋಗ್ಯವಾಗಿಡಲು ಸದ್ಯ ಲಭ್ಯವಿರುವ ತಂತ್ರಜ್ಞಾನಕ್ಕಿಂತಲೂ ಕಾರ್ಯಕ್ಷಮತೆಯುಳ್ಳ ನವೀನವಾದ ಯಾವುದಾದದರೂ ತಂತ್ರಜ್ಞಾನವನ್ನು ಹುಡುಕುತ್ತಾ‌ ಸಾಗುವ ಈ ವಿಧಾನ ಇತ್ತೀಚೆಗೆ ನಮ್ಮ ವಂಶವಾಹಿಯ ಬದಲಾವಣೆ ತಂದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದೆ.

ಶಾಸ್ತ್ರೀಯವಾದ ಸಂಶೋಧನೆಗಳಿಗೆ ಹಲವಾರು ತೊಡಕುಗಳಿರುತ್ತವೆ. ಆದರೆ, ಈ ಬಯೋ ಹ್ಯಾಕಿಂಗ್‌ ವಿಚಾರದಲ್ಲಿ ಆ ಸಮಸ್ಯೆ ಇರುವುದಿಲ್ಲ. ಇಲ್ಲಿ ವ್ಯಕ್ತಿಯೊಬ್ಬ ಸ್ವಯಂ ತನ್ನ ದೇಹದ ಮೇಲೆ ವಿವಿಧ ಪ್ರಯೋಗಗಳನ್ನು ಮಾಡುವ ಮುಖಾಂತರ ತನ್ನ ದೇಹಕ್ಕೆ ಯಾವ ಪ್ರಮಾಣದಲ್ಲಿ ಏನನ್ನು ನೀಡಬೇಕು, ಯಾವಾಗ ನೀಡಬೇಕು, ಹೇಗೆ ಹತೋಟಿಯಲ್ಲಿಟ್ಟರೆ ತಾನು ಆರೋಗ್ಯವಂತನಾಗಿರಬಹುದು ಇತ್ಯಾದಿ ವಿಚಾರಗಳ ಬಗ್ಗೆ ಸ್ವತಃ ಅಧ್ಯಯನ ಮಾಡಿ, ಕಂಡುಕೊಂಡ ಮಾರ್ಗವನ್ನು ನಂತರ ತನ್ನ ಮೇಲೆಯೇ ಪ್ರಯೋಗಿಸಿಕೊಳ್ಳುತ್ತಾನೆ.

ಬಯೋ ಹ್ಯಾಕಿಂಗ್‌ ಎಂದರೇನು?

ಏನಿದು ಬಯೋ ಹ್ಯಾಕಿಂಗ್‌ ಎಂಬುದನ್ನು ಮೊದಲಿಗೆ ತಿಳಿದುಕೊಳ್ಳೋಣ. ಗಣಕಯಂತ್ರಗಳಿಗೆ ಯಾವುದೇ ಆದೇಶವನ್ನು ನೀಡಬೇಕಾದರೆ ಅದಕ್ಕೆ ಅದರದ್ದೇ ಆದ ಭಾಷೆಯೊಂದರ ಮುಖಾಂತರ ನಿರ್ದೇಶನಗಳನ್ನು ನೀಡಬೇಕಾಗುತ್ತದೆ, ಇದನ್ನು ಪ್ರೋಗ್ರಾಮಿಂಗ್‌ ಎಂದು ಕರೆಯಲಾಗುತ್ತದೆ. ಇಂತಹ ಪ್ರೋಗ್ರಾಮುಗಳ ಮಧ್ಯೆ ನುಗ್ಗಿ ಅದರ ಅಂತರಾಳವನ್ನು ತಿಳಿದಕೊಳ್ಳುವುದನ್ನೇ ಹ್ಯಾಕಿಂಗ್‌ ಎಂದು ಕರೆಯಲಾಗುತ್ತದೆ. ಹೀಗೆಯೇ ಮನುಷ್ಯನ ದೇಹವನ್ನೇ ಒಂದು ಕಂಪ್ಯೂಟರ್‌ ಪ್ರೋಗ್ರಾಮಿನಂತೆ ಭಾವಿಸಿ ಅದರ ಅಂತರಾಳವನ್ನು ಹೊಕ್ಕಿ ಅದನ್ನು ಸರಿಪಡಿಸಲು ಸಾಧ್ಯವಿರುವ ಪ್ರಾಚೀನವಾದ ವಿಧಾನಗಳಿಂದ ಹಿಡಿದು ಇತ್ತೀಚಿನ ಡಿಎನ್‌ಎ ತಂತ್ರಜ್ಞಾನದವರೆಗೂ ಯಾವುದಾದರೂ ಸರಿಯೇ, ಅದನ್ನು ಬಳಸಿಕೊಂಡು ದೇಹವನ್ನು ಆರೋಗ್ಯವಾಗಿಡುವುದಕ್ಕೆ ಪ್ರಯತ್ನಿಸುವುದನ್ನೇ ಬಯೋ ಹ್ಯಾಕಿಂಗ್‌ ಅಥವಾ ಡು ಇಟ್‌ ಯುವರ್‌ ಸೆಲ್ಫ್‌ ಬಯಾಲಜಿ ಎಂದು ಕರೆಯಲಾಗುತ್ತದೆ.

ಬಯೋ ಹ್ಯಾಕಿಂಗ್‌ ವಿಧಾನಗಳೇನು?

ಭಾರತದಲ್ಲಿ ಬಹಳ ಪ್ರಾಚೀನಕಾಲದಿಂದಲೂ ಉಪವಾಸ ಒಂದು ಪದ್ಧತಿಯಂತೆಯೇ ನಮ್ಮ ಜನಜೀವನದೊಳಗೆ ಸೇರಿಹೋಗಿದೆ. ಹೀಗೆ ನಿಯಮಿತವಾಗಿ ಉಪವಾಸ ಮಾಡುವುದೂ ಸೇರಿದಂತೆ ಹಲವಾರು ಬಗೆಯ ವಿಧಾನಗಳನ್ನು ಬಯೋ ಹ್ಯಾಕಿಂಗ್‌ ಒಳಗೊಂಡಿದೆ. ಆಹಾರವನ್ನು ಅಳತೆಮಾಡಿ ತಿನ್ನುವುದು, ತಮ್ಮ ದೇಹ ಪ್ರಕೃತಿಗೆ ಹೊಂದುವಂತಹ ಆಹಾರವನ್ನೇ ಅಭಿವೃದ್ಧಿಪಡಿಸಿಕೊಂಡು ಸೇವಿಸುವುದು, ನಡೆದಾಡುವಾಗ ಹೆಜ್ಜೆಗಳನ್ನು ಲೆಕ್ಕ ಹಾಕುವುದು, ನಿದ್ದೆ ಎಷ್ಟುಹೊತ್ತು ಮಾಡಿದೆ ಎಂಬುದರ ಬಗ್ಗೆ ನಿಗಾ ಇಡುವುದು, ರಕ್ತದ ಸಕ್ಕರೆ ಅಂಶವನ್ನು ಸದಾ ಗಮನಿಸುತ್ತಿರುವುದು, ನಿತ್ಯ ಪ್ರಾಣಾಯಾಮ, ನಿಗದಿತ ವ್ಯಾಯಾಮ ನಡೆಸುವುದು, ಮಂಜುಗೆಡ್ಡೆಯಿಂದ ಸ್ನಾನ ಮಾಡುವುದು ಅಥವಾ ಮೂಳೆಯವರೆಗೆ ಕೊರೆಯಬಲ್ಲ ಥಂಡಿ ದ್ರಾವಕವಿರುವ ಡಬ್ಬಿಯೊಳಗೆ ಕೂರುವುದು, ಅತಿನೇರಳೆ ಕಿರಣಗಳಿಗೆ ಮೈಯೊಡ್ಡುವುದು, ಸ್ಟೆಮ್‌ ಸೆಲ್‌ ಥೆರಪಿಗೆ ಒಳಗಾಗುವುದು, ವೃದ್ಧಾಪ್ಯವನ್ನು ತಡೆಗಟ್ಟಲು ಯುವಕರ ರಕ್ತವನ್ನು ತಮ್ಮ ದೇಹಕ್ಕೆ ಹರಿಸಿಕೊಳ್ಳುವುದು, ಡಿಎನ್‌ಎಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಕ್ರಿಸ್ಪರ್‌ ತಂತ್ರಜ್ಞಾನದ ಮುಖಾಂತರ ಅದನ್ನು ಸರಿಪಡಿಸಿಕೊಳ್ಳಲು ಯತ್ನಿಸುವುದು ಹೀಗೆ ಹತ್ತು ಹಲವಾರು ವಿಧಾನಗಳನ್ನು ಬಯೋ ಹ್ಯಾಕಿಂಗ್‌ ಒಳಗೊಂಡಿದೆ.

ಡಿಎನ್‌ಎ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ದೇಹದಲ್ಲಿ ಬದಲಾವಣೆ ತಂದು ವಂಶವಾಹಿ ಸಂಬಂಧಿತ ಕಾಯಿಲೆಗಳು ಇಲ್ಲವೆ ವೃದ್ಧಾಪ್ಯದಂತಹ ಸಮಸ್ಯೆಗಳು ಸುಳಿಯದಂತೆ ನೋಡಿಕೊಳ್ಳಲು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಅಥವಾ ವೈರಾಣುಗಳ ಭೀತಿಯಿಂದ ಪಾರಾಗಲು ಹವಣಿಸುವ ಪರಿಪಾಟ ಇತ್ತೀಚಿಗೆ ತೀವ್ರಗತಿಯಲ್ಲಿ ಜನಪ್ರಿಯಗೊಳ್ಳುತ್ತಿದೆ.

ಬಹಳ ಮುಖ್ಯವಾಗಿ ಯುವಜನರು ಹಾಗೂ ಸೆಲೆಬ್ರಿಟಿಗಳು ಈ ಬಯೋ ಹ್ಯಾಕಿಂಗ್‌ ವಿಧಾನಗಳ ಬಗ್ಗೆ ತೀವ್ರ ಕುತೂಹಲಿಗಳೂ ಅದನ್ನು ಬಳಸುವಲ್ಲಿ ಅತ್ಯಂತ ಕಾತರರರೂ ಆಗಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಟ್ರಿಸ್ಟಾನ್‌ ರಾಬರ್ಟ್ಸ್‌ ಎಂಬ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬ ಎಚ್‌ಐವಿ ವಿರುದ್ದ ಸಿದ್ಧಪಡಿಸುದುದೆಂದು ಹೇಳಲಾದ ಇನ್ನೂ ವೈಜ್ಞಾನಿಕವಾಗಿ ಸಾಬೀತಾಗದ ಜೀನ್‌ ಥೆರಪಿ ಔಷಧ ಪ್ರಯೋಗವನ್ನು ತನ್ನ ದೇಹದ ಮೇಲೆಯೇ ಮಾಡಿಕೊಂಡು ಸುದ್ದಿಯಾದರೆ, ಜೋಸಿಯಾಹ್‌ ಝೇಯ್ಮರ್‌ ಎಂಬ ನಾಸಾದ ವಿಜ್ಞಾನಿಯೊಬ್ಬ ಮಾಂಸಖಂಡಗಳ ಬೆಳವಣಿಗೆಯನ್ನು ವೃದ್ಧಿಸುತ್ತದೆಂದು ಹೇಳಲಾದ ಕ್ರಿಸ್ಪರ್‌ ಸಿಎಎಸ್‌ ತಂತ್ರಜ್ಞಾನವನ್ನು ಉಪಯೋಗಿಸಿ ತನ್ನ ವಂಶವಾಹಿಯಲ್ಲಿ ಬದಲಾವಣೆಯನ್ನು ತರಲು ಹೊರಟ. ಅಲ್ಲದೇ ಈ ಔಷಧವನ್ನು ತನ್ನ ದೇಹಕ್ಕೆ ಚುಚ್ಚಿಕೊಳ್ಳುವುದನ್ನು ಯು ಟ್ಯೂಬಿನಲ್ಲಿ ನೇರಪ್ರಸಾರವನ್ನೂ ಮಾಡಿದ. ಹಿಂದಿ ನಟ ಜಾನ್‌ ಅಬ್ರಹಾಂ ಕೂಡ ಸಂದರ್ಶನವೊಂದರಲ್ಲಿ ತಾನು ತಿನ್ನುವ ಪ್ರತಿ ಅಗುಳನ್ನೂ ತೂಕಮಾಡಿ ತಿನ್ನುತ್ತೇನೆ ಎಂದು ಹೇಳಿರುವುದನ್ನೂ ನಾವಿಲ್ಲಿ ಸ್ಮರಿಸಬಹುದು. ಇವು ನಿಜವಾಗಿಯೂ ಅವರ ದೇಹಾರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾದವೋ ಇಲ್ಲವೋ ಹೇಳುವುದು ಕಷ್ಟವಾದರೂ ಜಗತ್ತಿನಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ಜನಮಾನಸದಲ್ಲಿ ಬಯೋ ಹ್ಯಾಕಿಂಗ್‌ ಬಗ್ಗೆ ಇರುವ ಕುತೂಹಲವು ಅಗಾಧವಾದುದೆಂದು ನಾವು ತಿಳಿಯಬಹುದು.

ಹೇಗೆ ಕೆಲಸ ಮಾಡುತ್ತದೆ?

ಒಂದು ಸಣ್ಣ ಉದಾಹರಣೆಯನ್ನು ನಾವು ಗಮನಿಸೋಣ. ರಾತ್ರಿ ಕೆಲಸ ಮಾಡುವ ಅನಿವಾರ್ಯತೆಯಿದ್ದರೆ ನಿದ್ದೆಯಿಂದ ತಪ್ಪಿಸಿಕೊಳ್ಳಲು ನಾವು ಕಾಫಿ ಕುಡಿಯುವುದು ಸಹಜವಲ್ಲವೇ? ಕಾಫಿ ಕುಡಿಯುವ ಮೊದಲು ನಿದ್ದೆಯ ಮಂಪರು ನಮ್ಮನ್ನು ಕಾಡುತ್ತಿರುತ್ತದೆ. ಆದರೆ, ಕಾಫಿ ಕುಡಿಯುತ್ತಿದ್ದಂತೆಯೇ ನಿದ್ರೆ ಮಾಯವಾಗಿ ನಾವು ಚುರುಕಾಗುತ್ತೇವೆ. ಹಾಗೆಯೇ ಮಧುರವಾದ ಸಂಗೀತ ಕೇಳುವಾಗ ನಮ್ಮ ದೇಹದಲ್ಲಾಗುವ ಅನುಭೂತಿಯೇ ಬೇರೆ, ಜಾಝ್‌ ಸಂಗೀತ ಕೇಳುವಾಗ ಆಗುವ ಅನುಭೂತಿಯೇ ಬೇರೆ. ಇದರ ಅರ್ಥ ನಾವು ದೇಹಕ್ಕೆ ಏನನ್ನು ನೀಡುತ್ತೇವೆ ಎಂಬುದರ ಮೇಲೆ ಅದರ ಭಾವನೆಗಳು, ವರ್ತನೆಗಳು ನಿಂತಿರುತ್ತವೆ ಎಂದಲ್ಲವೇ? ಆದುದರಿಂದ ನಮ್ಮ ದೇಹಕ್ಕೆ ಏನನ್ನು ನೀಡಬೇಕು ಎಂಬುದರ ಬಗ್ಗೆ ನಾವು ಆಲೋಚಿಸಿ ನಮ್ಮ ದೇಹಕ್ಕೆ ಯಾವುದು ಹಿತ ಎಂಬುದನ್ನು ಗ್ರಹಿಸಿ, ಜಾಗ್ರತೆಯಾಗಿ ನಮಗೆ ಒಳಿತಾಗುವ ಅಂಶಗಳನ್ನಷ್ಟೇ ನೀಡಬೇಕು.

ಮಾನವನ ದೇಹ ಅತ್ಯಂತ ಸಂಕೀರ್ಣವಾದ ವ್ಯವಸ್ಥೆಯಾಗಿದ್ದು ಅದನ್ನು ಬಹಳ ಸೂಕ್ಷ್ಮವಾಗಿ ಕಾಪಾಡಬೇಕಾಗುತ್ತದೆ. ನಾವೇನು ತಿನ್ನುತ್ತೇವೆ ಎಂಬುದಷ್ಟೇ ಅಲ್ಲ, ಬದಲಾಗಿ ನಮ್ಮ ದೇಹವು ದೈಹಿಕವಾಗಿ, ಮಾನಸಿಕವಾಗಿ ಹಾಗೂ ರೋಗರಹಿತವಾಗಿ ಪರಿಪೂರ್ಣವಾಗಿರಬೇಕಾದರೆ ಏನು ಮಾಡಬೇಕು ಎಂಬುದನ್ನು ನಾವು ಬಹಳ ನಿಖರವಾಗಿ ಗಮನಿಸಿ ಅದರಂತೆ ಪೋಷಿಸಬೇಕು. ಬಯೋ ಹ್ಯಾಕರ್‌ಗಳು ಹೀಗೆ ದೇಹದ ವರ್ತನೆಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ದೇಹವು ತಮ್ಮ ಇಚ್ಛೆಯಂತೆಯೇ ನಡೆದುಕೊಳ್ಳುವಂತೆ ನೋಡಿಕೊಳ್ಳುತ್ತಾರೆ.

ಬಯೋ ಹ್ಯಾಕಿಂಗ್‌ ಪ್ರಸ್ತುತ ಸಂಘಟಿತವಾಗಿ ನಡೆಯುತ್ತಿರುವ ಪ್ರಕ್ರಿಯೆಯೇನಲ್ಲ. ಅದಕ್ಕೆಂದು ಯಾವುದೇ ಅಧಿಕೃತ ಕಂಪನಿಗಳಾಗಲೀ, ವೇದಿಕೆಗಳಾಗಲೀ ಇಲ್ಲ. ಅಲ್ಲಲ್ಲಿ ಕೆಲವರು ಸೇರಿಕೊಂಡು ಚರ್ಚಾ ವೇದಿಕೆಗಳನ್ನು ಸೃಜಿಸಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲವಾದರೂ ಇದೊಂದು ಅಧಿಕೃತ ವ್ಯವಸ್ಥೆಯಾಗಿ ಬೆಳೆದಿಲ್ಲ. ಸದ್ಯ ಬಯೋ ಹ್ಯಾಕಿಂಗ್‌ ಅನ್ನು ಅಭ್ಯಾಸ ಮಾಡುತ್ತಿರುವವರು ಹೆಚ್ಚಾಗಿ ವ್ಯಕ್ತಿಗತವಾಗಿ ಮಾಡುತ್ತಿರುವವರೇ ಹೊರತು ಸಂಘಟಿತರಾಗಿ ಅಲ್ಲ.

ಕಾನೂನಿನ ಸಮಸ್ಯೆಗಳೇನು?

ಬಯೋ ಹ್ಯಾಕಿಂಗ್‌ ನಡೆಸಲು ಕಾನೂನಿನ ತೊಡಕುಗಳೇನಾದರೂ ಇವೆಯೇ ಎಂದು ಗಮನಿಸಿದರೆ ಸುಮಾರು 2009ರಷ್ಟು ಹಿಂದೆಯೇ ಅಮೆರಿಕದ ಗುಪ್ತಚರ ಸಂಸ್ಥೆಯಾದ ಎಫ್‌ಬಿಐ ಆಗಾಗ ನಡೆಯುವ ಇಂತಹ ಬಯೋ ಹ್ಯಾಕರ್‌ಗಳ ಸಮ್ಮೇಳನಗಳ ಮೇಲೊಂದು ಕಣ್ಣಿಟ್ಟಿತ್ತು. ಇತ್ತೀಚೆಗಂತೂ ಕ್ರಿಸ್ಪರ್‌ನಂತಹ ವಂಶವಾಹಿಗಳನ್ನು ಕತ್ತರಿಸಿ ಜೋಡಿಸುವ ತಂತ್ರಜ್ಞಾನದ ದುರ್ಬಳಕೆ ಅತಿರೇಕಕ್ಕೆ ಹೋಗುತ್ತಿರುವುದರಿಂದ ಅದನ್ನು ಅಮೆರಿಕದ ಫುಡ್‌ ಅಂಡ್‌ ಡ್ರಗ್‌ ಕಂಟ್ರೋಲ್‌ ಅಥಾರಿಟಿ (ಎಫ್‌ಡಿಎ) ಗಂಭೀರವಾಗಿ ಪರಿಗಣಿಸಿ, ಹೀಗೆ ಯಾವುದೇ ಸಂಶೋಧನೆ ಇಲ್ಲದೇ ಸೂಕ್ತವಾದ ಪರವಾನಗಿ ಇಲ್ಲದೇ ಸಾರಸಗಟಾಗಿ ಬಳಸಲಾಗುವ ಇಂತಹ ಔಷಧಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದೆ. ಆದರೂ ಅಲ್ಲೊಂದು ಇಲ್ಲೊಂದು ಪ್ರಕರಣ ಇಂದಿಗೂ ವರದಿಯಾಗುತ್ತಲೇ ಇದೆ, ಮುಂದೆಯೂ ವರದಿಯಾಗಬಹುದು. ಏಕೆಂದರೆ, ಒಬ್ಬ ವ್ಯಕ್ತಿಯು ತನ್ನದೇ ದೇಹವನ್ನು ಬಯೋ ಹ್ಯಾಕಿಂಗ್‌ ಮಾಡದಂತೆ ತಡೆಯುವುದು ಅಸಾಧ್ಯವಾದ ಮಾತೇ ಸರಿ.

ಅಂತಿಮವಾಗಿ ಮನುಕುಲಕ್ಕೆ ಒಳಿತಾಗುವ ಪ್ರತೀ ತಂತ್ರಜ್ಞಾನವನ್ನೂ ನಾವು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕೆಂಬುದೇನೋ ನಿಜ. ಆದರೆ, ಇಂತಹ ಅಭ್ಯಾಸಗಳನ್ನು ಮನಸೋಇಚ್ಛೆ ಮುಂದುವರಿಸಿದರೆ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುದನ್ನೂ ನಾವು ಸೂಕ್ಷ್ಮವಾಗಿ ಗಮನಿಸಬೇಕು. ವೈದ್ಯರ ಸೂಕ್ತ ಸಲಹೆಯನ್ನು ಪಡೆದ ನಂತರವೇ ಇದನ್ನು ಕಾರ್ಯಗತಗೊಳಿಸುವುದು ಅತ್ಯಂತ ಸೂಕ್ತವಾದ ಮಾರ್ಗ. ತಜ್ಞರ ಸಲಹೆಯೂ ಈ ನಿಟ್ಟಿನಲ್ಲಿ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT