ಭಾನುವಾರ, ಆಗಸ್ಟ್ 18, 2019
24 °C

ಭೂ ಕಕ್ಷೆ ತೊರೆದು ಚಂದ್ರನತ್ತ ಪ್ರಯಾಣಿಸಿದ ಚಂದ್ರಯಾನ–2

Published:
Updated:

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ–2 ಬುಧವಾರ ನಸುಕಿನಲ್ಲಿ ಭೂ ಕಕ್ಷೆ ತೊರೆದು ಚಂದ್ರನತ್ತ ಪ್ರಯಾಣಿಸಿತು.

ಜುಲೈ 22 ರಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ಚಂದ್ರಯಾನ–2 ಯಶಸ್ವಿಯಾಗಿ ಭೂ ಕಕ್ಷೆಗೆ ಸೇರಿತ್ತು. ಈ ವರೆಗೆ ಭೂ ಪ್ರದಕ್ಷಣೆಯಲ್ಲಿದ್ದ ಉಪಗ್ರಹವನ್ನು ನಿಗದಿತ ಸಮಯದಂತೆ ಬುಧವಾರ ನಸುಕಿನ 2.21ರಲ್ಲಿ ಚಂದ್ರನತ್ತ ತಿರುಗಿಸುವ ನಿರ್ಣಾಯಕ ಕೆಲಸವನ್ನು ಇಸ್ರೋದ ವಿಜ್ಞಾನಿಗಳ ತಂಡ ನೆರವೇರಿಸಿದೆ. ಇದರೊಂದಿಗೆ ಉಪಗ್ರಹವು ಚಂದ್ರನತ್ತ ಯಶಸ್ವಿಯಾಗಿ ಪ್ರಯಾಣ ಆರಂಭಿಸಿದೆ.

‘ಉಪಗ್ರಹವನ್ನು ಚಂದ್ರನತ್ತ ತಿರುಗಿಸುವ ಅತ್ಯಂತ ಸೂಕ್ಷ್ಮ ಕಾರ್ಯವನ್ನು ಇಸ್ರೋ ಯಶಸ್ವಿಯಾಗಿ ನಿರ್ವಹಿಸಿದೆ. ಚಂದ್ರಯಾನ–2ನ ಗಗನ ನೌಕೆಯ ಎಂಜಿನ್‌ ಅನ್ನು ಚಾಲೂ ಮಾಡಲಾಯಿತು. ಅದರ ಇಂಧನವನ್ನು 1203 ಸೆಕೆಂಡ್‌ಗಳ ಕಾಲ ಉರಿಸಲಾಯಿತು. ಅದರೊಂದಿಗೆ ಉಪಗ್ರಹವು ಚಂದ್ರನ ಪಥದತ್ತ ಯಶಸ್ವಿಯಾಗಿ ಸಾಗಿತು. ಸದ್ಯ ಉಪಗ್ರಹವು ಚಂದ್ರನಿಗೆ ಮತ್ತಷ್ಟು ಹತ್ತಿರವಾಗುತ್ತಿದೆ,’ ಎಂದು ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಇಸ್ರೋ ಹೇಳಿಕೊಂಡಿದೆ.

ಆಗಸ್ಟ್‌ 20ರಂದು ಚಂದ್ರಯಾನ–2 ಉಪಗ್ರಹವನ್ನು ಹೊತ್ತ ನೌಕೆ ಚಂದ್ರನನ್ನು ಸಮೀಪಿಸಲಿದೆ. ಆಗ ಮತ್ತೊಮ್ಮೆ ಎಂಜಿನ್‌ ಅನ್ನು ಚಾಲೂ ಮಾಡಿ ಚಂದ್ರನ ಕಕ್ಷೆಯಲ್ಲಿ ಸೇರಿಸುವ ಕಾರ್ಯಾಚರಣೆ ನಡೆಸಲಾಗುತ್ತದೆ. 

ಇತರ ಗ್ರಹದತ್ತ ರವಾನಿಸಲಾಗುವ ಯಾವುದೇ ಉಪಗ್ರಗಳು ಮೊದಲಿಗೆ ಭೂ ಕಕ್ಷೆ ಸೇರುತ್ತವೆ ಮತ್ತು ಭೂಮಿಯ ಪ್ರದಕ್ಷಿಣೆಯಲ್ಲಿ ತೊಡಗುತ್ತವೆ. ಅವುಗಳನ್ನು ನಿರ್ದಿಷ್ಟ ಗ್ರಹದ ಕಕ್ಷೆಯತ್ತ ತಿರುಗಿಸುವುದು ಅತ್ಯಂತ ನಿರ್ಣಾಯಕ, ಸಂಕೀರ್ಣ ಮತ್ತು ಸೂಕ್ಷ್ಮ ಕಾರ್ಯವೇ ಸರಿ. ಈ ಕೆಲಸನ್ನು ಇಸ್ರೋ ಯಶಸ್ವಿಯಾಗಿ ಮಾಡಿ ಮುಗಿಸಿದೆ. ಇದರೊಂದಿಗೆ ಚಂದ್ರಯಾನ ಯೋಜನೆಯಲ್ಲಿ ಇಸ್ರೋ ಮತ್ತೊಂದು ಯಶಸ್ಸು ಸಿಕ್ಕಿದೆ.

Post Comments (+)