ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾರ್ಟ್! ಇದು ಆತ್ಮಾಹುತಿ ರೋಬಾಟ್‌! ಕ್ಷುದ್ರಗ್ರಹಗಳಿಂದ ಭೂಮಿ ರಕ್ಷಿಸುತ್ತಾ?

Last Updated 21 ಸೆಪ್ಟೆಂಬರ್ 2022, 0:30 IST
ಅಕ್ಷರ ಗಾತ್ರ

ನಮ್ಮ ಭೂಮಿಯ ನಾನ್ನೂರೈವತ್ತು ಕೋಟಿ ವರ್ಷಗಳ ಇತಿಹಾಸದಲ್ಲಿ ಅನೇಕ ಬಾರಿ ಕ್ಷುದ್ರಗ್ರಹ (ಆಸ್ಟರಾಯ್ಡ್), ಧೂಮಕೇತು (ಕಾಮೆಟ್) ಹಾಗೂ ಅವುಗಳ ಚೂರುಗಳು ಬಂದಪ್ಪಳಿಸಿ ಡೈನೋಸಾರ್‌ಗಳೂ ಸೇರಿದಂತೆ ಸಾವಿರಾರು ಬಗೆಯ ಜೀವಿಗಳ ವಿನಾಶಕ್ಕೆ ಕಾರಣವಾಗಿವೆ ಎಂದು ವಿಜ್ಞಾನಿಗಳು ನುಡಿಯುತ್ತಾರೆ. ಆದರೆ ಬುದ್ಧಿಶಕ್ತಿಯನ್ನು ಹೊಂದಿರುವ ಭೂಜೀವಿಯಾದ ಮಾನವ ಇಂದು ಪುಟ್ಟ ಕ್ಷುದ್ರಗ್ರಹವೊಂದಕ್ಕೆ ತಾನು ನಿರ್ಮಿಸಿದ ಸಾಧನವೊಂದನ್ನು ಅಪ್ಪಳಿಸುವ ಕಷ್ಟಕರವಾದ ಸಾಹಸಕ್ಕೆ ಕೈಹಾಕಿದ್ದಾನೆ.

ಆ ಮೂಲಕ ಕ್ಷುದ್ರಗ್ರಹಗಳಿಂದ ಮುಂದೊಂದು ದಿನ ಒದಗಬಹುದಾದ ಅಪಾಯದಿಂದ ತನ್ನನ್ನು ರಕ್ಷಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದಾನೆ.

ಇಂದು ‘ಡಾರ್ಟ್’ ಎಂಬ ಹೆಸರಿನ ರೋಬಾಟ್ ಅಂತರಿಕ್ಷನೌಕೆಯೊಂದು ಇಲ್ಲಿಂದ ಸುಮಾರು ಒಂದು ಕೋಟಿ ಕಿಲೋಮೀಟರ್ ದೂರದಲ್ಲಿ ಶರವೇಗದಿಂದ ಧಾವಿಸುತ್ತಿರುವ ‘ಡೈಡಿಮೋಸ್-ಡೈಮಾರ್ಫೋಸ್’ ಕ್ಷುದ್ರಗ್ರಹ ಜೋಡಿಯನ್ನು ಸಮೀಪಿಸುತ್ತಿದೆ. ಕಳೆದ ವರ್ಷದ ನವೆಂಬರ್ ಅಂತ್ಯದಲ್ಲಿ ಅಮೆರಿಕದ ಅಂತರಿಕ್ಷ ಸಂಸ್ಥೆ ‘ನಾಸಾ’ ಉಡಾಯಿಸಿದ ಆ 600 ಕಿಲೋಗ್ರಾಂ ತೂಕದ ನೌಕೆ ಇದೇ ಸೆಪ್ಟೆಂಬರ್ 26(ಭಾರತೀಯ ಕಾಲಮಾನದ ಪ್ರಕಾರ ಸೆಪ್ಟೆಂಬರ್ 27ರ ಬೆಳಗಿನ ಜಾವ)ರಂದು ಡೈಡಿಮೋಸ್ ಅನ್ನು ಸುತ್ತುತ್ತಿರುವ ಡೈಮಾರ್ಫೋಸ್ಅನ್ನು ಶರವೇಗದಲ್ಲಿ ಅಪ್ಪಳಿಸಲಿದೆ.

ಆ ಮೂಲಕ ಪುಟ್ಟ ಡೈಮಾರ್ಫೋಸ್‌ನ ಕಕ್ಷೆಯಲ್ಲಿ ಅತ್ಯಲ್ಪ ಬದಲಾವಣೆಯನ್ನು ಆ ನೌಕೆ ಉಂಟುಮಾಡಲಿದೆ ಎಂದು ನಾಸಾ ವಿಜ್ಞಾನಿಗಳು ಅಂದಾಜುಮಾಡಿದ್ದಾರೆ. ಇದು ಯಶಸ್ವಿಯಾದಲ್ಲಿ ಭವಿಷ್ಯದಲ್ಲಿ ಇಂತಹುದೇ ವಿಧಾನವನ್ನು ಅನುಸರಿಸುವ ಮೂಲಕ ಭೂಮಿಯ ಸಮೀಪಕ್ಕೆ ಧಾವಿಸಿ ಇಲ್ಲಿನ ಜೀವಿಗಳಿಗೆ ಅಪಾಯವನ್ನುಂಟುಮಾಡುವ ಆಕಾಶಕಾಯಗಳ ಭೀತಿಯಿಂದ ಪಾರಾಗಬಹುದು ಎಂದವರು ಆಶಿಸಿದ್ದಾರೆ.

‘ಡಾರ್ಟ್’ ಎಂಬುದು ‘ಜೋಡಿ ಕ್ಷುದ್ರಗ್ರಹ ಪುನರ್ ನಿರ್ದೇಶನಾ ಪರೀಕ್ಷೆ’ ಎಂಬ ಇಂಗ್ಲಿಷ್‌ ಪದಗಳ ಹ್ರಸ್ವರೂಪದ ಕನ್ನಡಾನುವಾದ. ‘ಡಾರ್ಟ್’ ಎಂಬ ಪದಕ್ಕೆ ಇಂಗ್ಲಿಷಿನಲ್ಲಿ ‘ಬಾಣ’, ‘ಬರ್ಜಿ’. ಇಲ್ಲವೇ ‘ಈಟಿ’ ಎಂಬ ಅರ್ಥವೂ ಇದೆ.
ಸೌರವ್ಯೂಹದ ಕೇಂದ್ರವಾದ ಸೂರ್ಯನನ್ನು ಇಂದು ಎಂಟು ಗ್ರಹಗಳೊಂದಿಗೇ, ಅನೇಕ ಕುಬ್ಜಗ್ರಹಗಳು (ಡ್ವಾರ್ಫ಼್ ಪ್ಲ್ಯಾನೆಟ್ಸ್) ಹಾಗೂ ಕ್ಷುದ್ರಗ್ರಹ ಮತ್ತು ಧೂಮಕೇತುಗಳೆಂಬ ಪುಟ್ಟದಾದ ಹಾಗೂ ಸುಮಾರಾಗಿ ಅಲೂಗೆಡ್ಡೆಯಾಕಾರದ ಆಕಾಶಕಾಯಗಳು ಸುತ್ತುತ್ತಿವೆ. ಸೂರ್ಯನಿಂದ ದೂರವಿರುವಾಗ ಹಿಮ, ದೂಳು ಹಾಗೂ ಶಿಲೆಯ ‘ಉಂಡೆ’ಯಂತಿರುವ ಧೂಮಕೇತುವೊಂದು ತನ್ನ ಕೋಳಿಮೊಟ್ಟೆಯಾಕಾರದ ಕಕ್ಷೆಯಲ್ಲಿ ಸೂರ್ಯನನ್ನು ಸಮೀಪಿಸಿದಂತೆ ಅದರ ಮೇಲ್ಮೈಯಲ್ಲಿನ ಹಿಮ ಅನಿಲರೂಪಕ್ಕೆ ತಿರುಗಿ ಅದನ್ನು ಆವರಿಸುತ್ತದೆ.

ನಂತರ ಅದು ಸೂರ್ಯನಿಗೆ ವಿರುದ್ಧವಾದ ದಿಕ್ಕಿನಲ್ಲಿ ಲಕ್ಷಾಂತರ ಕಿಲೋಮೀಟರ್ ದೂರ ಬಾಲದಂತೆ ವ್ಯಾಪಿಸುತ್ತದೆ. ಧೂಮಕೇತುವೊಂದು ಪೊರಕೆಯಾಕಾರದ್ದಾಗಿ ನಮಗೆ ಕಾಣುವುದಕ್ಕೆ ಇದೇ ಕಾರಣ. ಆದರೆ ಸಾಮಾನ್ಯವಾಗಿ ಕ್ಷುದ್ರಗ್ರಹವೊಂದರ ಮೇಲೆ ಹಿಮವಿರುವುದಿಲ್ಲವಾಗಿ ಅದು ಧೂಮಕೇತುವೊಂದರಂತೆ ಬಾಲವನ್ನು ತಳೆದು ಬರಿಗಣ್ಣಿಗೆ ಕಾಣುವುದಿಲ್ಲ.

ಬಹುತೇಕ ಕ್ಷುದ್ರಗ್ರಹಗಳು ಮಂಗಳ (ಮಾರ್ಸ್) ಹಾಗೂ ಗುರು (ಜ್ಯೂಪಿಟರ್) ಗ್ರಹಗಳ ನಡುವೆ ಇರುವ ಒಂದು ‘ಪಟ್ಟಿ’ಯಲ್ಲಿ ಸೂರ್ಯನನ್ನು ಸುತ್ತುತ್ತವೆ. ಹಾಗಾದರೆ ಅವುಗಳು ಈ ಹಿಂದೆ ಭೂಮಿಗೆ ಬಂದು ಅಪ್ಪಳಿಸಿದ್ದಾದರೂ ಹೇಗೆ?

ಕ್ಷುದ್ರಗ್ರಹಗಳಲ್ಲಿ ಬಹುತೇಕವು ಭೂಮಿಯಿಂದ ದೂರವಿದ್ದರೂ ಕೆಲವು ಕ್ಷುದ್ರಗ್ರಹಗಳು ತಮ್ಮ ಕೋಳಿಮೊಟ್ಟೆಯಾಕಾರದ ಕಕ್ಷೆಗಳಲ್ಲಿ ಸೂರ್ಯನನ್ನು ಸುತ್ತುವ ನಡುವೆ ಭೂಮಿಯ ಸಮೀಪಕ್ಕೆ ಬರುತ್ತವೆ. ಇಂತಹ ಕ್ಷುದ್ರಗ್ರಹ (ಹಾಗೂ ಧೂಮಕೇತುಗಳಿಗೆ) ‘ಭೂಮಿಯ ಸಮೀಪದ ಆಕಾಶಕಾಯಗಳು (ನಿಯರ್ ಅರ್ಥ್‌ ಆಬ್ಜಕ್ಟ್ಸ್)’ ಎಂಬ ಹೆಸರಿದೆ. ಈ ಹಿಂದೆ ಭೂಮಿಗೆ ಬಂದಪ್ಪಳಿಸಿ ಇಲ್ಲಿನ ಇತಿಹಾಸದ ದಿಕ್ಕನ್ನೇ ಬದಲಿಸಿದ ಕಾಯಗಳು ಇಂತಹವೇ ಆಗಿವೆ.

ಇವುಗಳನ್ನು ಗುರುತಿಸುವುದೇ ಅಲ್ಲದೇ ಆ ಬಗೆಯ ಆಕಾಶಕಾಯಗಳ ಕಕ್ಷೆಯನ್ನು ನಿಖರವಾಗಿ ಲೆಕ್ಕಹಾಕುವ ಕಾರ್ಯದಲ್ಲಿ ಜಗತ್ತಿನಾದ್ಯಂತ ಕೆಲವು ಸಂಸ್ಥೆಗಳು ನಿರತವಾಗಿವೆ. ಆದರೆ ಆ ಆಕಾಶಕಾಯಗಳ ಪೈಕಿ ಶೇ 40ರಷ್ಟನ್ನು ಮಾತ್ರ ಗುರುತಿಸಲಾಗಿದೆ ಎಂದು ವಿಜ್ಞಾನಿಗಳು ಅಂದಾಜು ಮಾಡುತ್ತಾರೆ.

ಒಂದು ವೇಳೆ ಭೂಮಿಗೆ ಬಂದಪ್ಪಳಿಸುವ ಅಂತರಿಕ್ಷದ ಅದೃಶ್ಯ ಹಾದಿಯಲ್ಲಿ (ಪಥದಲ್ಲಿ) ಧಾವಿಸಿ ಬರುತ್ತಿರುವ ಕ್ಷುದ್ರಗ್ರಹವೇನಾದರೂ ಸಾಕಷ್ಟು ಮೊದಲೇ ಗುರುತಿಸಲ್ಪಟ್ಟರೆ ಆಗ ಏನು ಮಾಡಬಹುದು?

ಆಗ ಆ ಕ್ಷುದ್ರಗ್ರಹಕ್ಕೆ ಮಾನವನಿರ್ಮಿತ ಸಾಧನವೊಂದನ್ನು ಕಳುಹಿಸಿ ಆ ಸಾಧನ ಅದಕ್ಕೆ ಅಪ್ಪಳಿಸುವಂತೆ ಮಾಡಿ ಕ್ಷುದ್ರಗ್ರಹದ ಪಥವನ್ನು ಅಲ್ಪಪ್ರಮಾಣದಲ್ಲಿ ಬದಲಿಸಲು ಸಾಧ್ಯವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಮೊದಲಿಗೆ ಅದರ ಪಥ ಅಲ್ಪಪ್ರಮಾಣದಲ್ಲಿ ಬದಲಾದರೂ ಕಾಲ ಕಳೆದಂತೆ ಅದು ಭೂಮಿಯಿಂದ ದೂರ ಸರಿಯಲಾರಂಭಿಸುತ್ತದೆ. ಭೂಮಿಗಿರುವ ಭೀತಿ ದೂರವಾಗುತ್ತದೆ. ಡಾರ್ಟ್ ಅಂತರಿಕ್ಷನೌಕೆಯ ಅಭಿಯಾನ ಪರೀಕ್ಷಿಸಲು ಉದ್ದೇಶಿಸಿರುವುದು ಈ ವಿಧಾನವನ್ನೇ.

2021ರ ನವೆಂಬರ್ 24ರಂದು ಉಡಾಯಿಸಲಾದ ಡಾರ್ಟ್ ನೌಕೆ ಈಗಾಗಲೇ ಒಂದು ಕೋಟಿ ಕಿಲೋಮೀಟರ್‌ಗಿಂತ ಹೆಚ್ಚು ದೂರ ಅಂತರಿಕ್ಷದಲ್ಲಿ ಕ್ರಮಿಸಿ ಡೈಡಿಮೋಸ್-ಡೈಮಾರ್ಫೋಸ್ ಜೋಡಿಯನ್ನು ಸಮೀಪಿಸುತ್ತಿದೆ. ಆ ಪೈಕಿ ಡೈಡಿಮೋಸ್ ಸುಮಾರು 800 ಮೀಟರ್ ಅಗಲವಿದ್ದರೆ ಅದನ್ನು ಸುತ್ತುತ್ತಿರುವ ಡೈಮಾರ್ಫೋಸ್ ಕೇವಲ 170 ಮೀಟರ್‌ನಷ್ಟಿದೆ. ಈ ಕ್ಷುದ್ರಗ್ರಹ ಜೋಡಿ ಭೂಮಿಯನ್ನು ಅಪ್ಪಳಿಸುವ ಸಾಧ್ಯತೆ ಬಹು ಕಡಿಮೆ. ಹಾಗಾಗಿ ಭೂಮಿಯ ರಕ್ಷಣೆಗೆ ಸಂಬಂಧಿಸಿದ ಒಂದು ಕ್ರಾಂತಿಕಾರಕ ವಿಧಾನವನ್ನು ನಿರಾತಂಕವಾಗಿ ಪರೀಕ್ಷಿಸಲು ಈ ಜೋಡಿ ಸೂಕ್ತವಾಗಿದೆ.

ಒಂದು ಪುಟ್ಟ ಕಾರ್‌ನಷ್ಟಿರುವ ಡಾರ್ಟ್ ನೌಕೆಯಲ್ಲಿ ಅನೇಕ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಆ ಪೈಕಿ ಬಿಚ್ಚಿಕೊಳ್ಳುವ ಸುರಳಿಯೊಂದನ್ನು ಹೋಲುವ ದೊಡ್ಡ ಸೌರಫಲಕಗಳು, ದಕ್ಷವಾದ ಒಂದು ‘ಅಯಾನ್’ ರಾಕೆಟ್ ಯಂತ್ರ, ಸ್ವತಂತ್ರ ಯಾನ ನಿರ್ವಹಣಾ (ನ್ಯಾವಿಗೇಷನ್) ವ್ಯವಸ್ಥೆ, ಪುಟ್ಟದಾದ ಒಂದು ಮೈಕ್ರೋ ಉಪಗ್ರಹ, ಇವುಗಳನ್ನು ಉದಾಹರಿಸಬಹುದು.

ಉಡಾವಣೆಯ ವೇಳೆಯಲ್ಲಿ ಸುರುಳಿಯಂತೆ ಸುತ್ತಿಕೊಂಡಿದ್ದ ನೌಕೆಯ ಎರಡು ಸೌರಫಲಕಗಳ ಪೈಕಿ ಪ್ರತಿಯೊಂದೂ ಅಂತರಿಕ್ಷಕ್ಕೆ ತೆರಳಿದ ನಂತರ 28 ಅಡಿ ದೂರ ಹರಡಿಕೊಂಡು ನೌಕೆಯ ಕಾರ್ಯನಿರ್ವಹಣೆಗೆ ಅಗತ್ಯವಾದ ವಿದ್ಯುತ್ತನ್ನು ಉತ್ಪಾದಿಸುತ್ತಿವೆ. ಅದೇ ರೀತಿ ಅದರ ಅಯಾನ್ ರಾಕೆಟ್ ಯಂತ್ರನೌಕೆ ತನ್ನ ಗುರಿಯತ್ತ ದಕ್ಷವಾಗಿ ಸಾಗುವಲ್ಲಿ ನೆರವಿಗೆ ಬಂದಿದೆ. ಅಂತೆಯೇ ಅದರ ಸ್ವತಂತ್ರ ಯಾನ ನಿರ್ವಹಣಾ ವ್ಯವಸ್ಥೆ ಯಾನದ ಅಂತಿಮ ಹಂತದಲ್ಲಿ ನೌಕೆ ಸ್ವತಂತ್ರವಾದ ನಿರ್ಧಾರಗಳನ್ನು ಸ್ವತಃ ತಾನೇ ತೆಗೆದುಕೊಂಡು ಡೈಮಾರ್ಫೋಸ್‌ಗೆ ಅಪ್ಪಳಿಸುವುದನ್ನು ಸಾಧ್ಯ ಮಾಡಲಿದೆ.

ಭೂಮಿಯಿಂದ ಡಾರ್ಟ್ ನೌಕೆಯಲ್ಲಿ ಸವಾರಿಮಾಡಿದ ಹಾಗೂ ಈಗ ಅದರಿಂದ ಬೇರ್ಪಟ್ಟು ಸ್ವತಂತ್ರವಾಗಿ ವಿಹರಿಸುತ್ತಿರುವ ‘ಲಿಸಿಯಾ ಕ್ಯೂಬ್’ ಎಂಬ ಕೇವಲ 14 ಕಿಲೋಗ್ರಾಂ ತೂಕದ ಮೈಕ್ರೋ ಉಪಗ್ರಹ ಮೊದಲಿಗೆ ಡೈಮಾರ್ಫೋಸ್‌ನಿಂದ ಸುಮಾರು ಒಂದು ಸಾವಿರ ಕಿಲೋಮೀಟರ್ ದೂರದಲ್ಲಿರುವ ಸುರಕ್ಷಿತವಾದ ಸ್ಥಾನದಿಂದ ಡಾರ್ಟ್ ನೌಕೆಯ ಅಪ್ಪಳಿಸುವಿಕೆಯನ್ನು ವೀಕ್ಷಿಸಲಿದೆ. ಅದಾದ ಸುಮಾರು ಮೂರು ನಿಮಿಷಗಳ ನಂತರ ಡೈಮಾಫೋರ್ಸ್‌ ನಿಂದ ಕೇವಲ 55 ಕಿಲೋಮೀಟರ್‌ನಷ್ಟು ಸಮೀಪದಲ್ಲಿ ಹಾದುಹೋಗುವ ಮೂಲಕ ಅಪ್ಪಳಿಸುವಿಕೆಯಿಂದ ಅಲ್ಲಿ ಉಂಟಾದ ಕುಳಿಯನ್ನು, ಮೇಲೆ ಎಸೆಯಲ್ಪಟ್ಟ ವಸ್ತುಗಳನ್ನು ಹಾಗೂ ಇತರ ಪರಿಣಾಮಗಳನ್ನು ಅಭ್ಯಸಿಸಲಿದೆ.

ಡಾರ್ಟ್‌ನ ಅಪ್ಪಳಿಸುವಿಕೆ ಭೂಮಿಯ ಮೇಲಿನ ದೂರದರ್ಶಕಗಳಿಗೆ (ಟೆಲಿಸ್ಕೋಪ್ಸ್) ಕಾಣದಿದ್ದರೂ ಡೈಮಾರ್ಫೋಸ್‌ನ ಕಕ್ಷೆಯಲ್ಲಿ ಆಗಿರಬಹುದಾದ ಬದಲಾವಣೆಯನ್ನಾದರೂ ಗ್ರಹಿಸುವ ಸಾಮರ್ಥ್ಯ ಅವುಗಳಿಗಿದೆ. ಹೀಗಾಗಿ ಸರ್ವವಿಧದಲ್ಲೂ ಸಜ್ಜಾಗಿರುವ ನಾಸಾದ ಹಾಗೂ ಇತರ ಅನೇಕ ವಿಜ್ಞಾನಿಗಳು ಮಾನವನ ರೋಬಾಟ್ ಪ್ರತಿನಿಧಿಯಾದ ‘ಡಾರ್ಟ್’ನ ‘ಆತ್ಮಾಹುತಿ’ ಪಯಣದ ಯಶಸ್ಸನ್ನು ಕಾಯುತ್ತಾ ಕುಳಿತಿದ್ದಾರೆ. ದುಷ್ಟ ಅಲೆಮಾರಿ ಕ್ಷುದ್ರಗ್ರಹಗಳಿಂದ ಭೂಮಿಯ ರಕ್ಷಿಸುವಲ್ಲಿ ಡಾರ್ಟ್ ಮೊದಲ ಯಶಸ್ವಿ ಹೆಜ್ಜೆಯಾಗುವುದೇ? ಕಾದು ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT