ಯೂರಿ ಗಗಾರಿನ್, ನೀಲ್ ಆರ್ಮ್ಸ್ಟ್ರಾಂಗ್, ಸುನೀತಾ ವಿಲಿಯಮ್ಸ್ ಮುಂತಾದ ಗಗನಯಾತ್ರಿಗಳು ಬಾಹ್ಯಾಕಾಶ ನೌಕೆಗಳಲ್ಲಿ ಪ್ರಯಾಣಿಸಿ ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಬಾಹ್ಯಾಕಾಶ ಸಂಶೋಧನೆ 1940ರ ದಶಕದಲ್ಲಿಯೇ ಆರಂಭವಾಯಿತಾದರೂ ಮಾನವರು ಮೊದಲು ಬಾಹ್ಯಾಕಾಶಯಾನಕ್ಕೆ ತಯಾರಾದುದು 1960ರ ದಶಕದಲ್ಲಿ. ಅದಕ್ಕೆ ಮೊದಲು ಮಾನವಸಹಿತ ಗಗನನೌಕೆಗಳನ್ನು ಆಗಸಕ್ಕೆ ಕಳಿಸಲು ಬಾಹ್ಯಾಕಾಶ ವಿಜ್ಞಾನಿಗಳಿಗೆ, ಮಾನವಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದರೆ ಅಲ್ಲಿ ಬದುಕಲು ಸಾಧ್ಯ ಎಂಬ ಭರವಸೆ ಹಾಗೂ ಧೈರ್ಯ ಬೇಕಿತ್ತು. ಈ ಭರವಸೆ ದೊರೆತ ನಂತರವೇ ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸಲು ವ್ಯವಸ್ಥೆ ಮಾಡಲಾಯಿತು. ಈ ಎಲ್ಲ ಗಗನಯಾತ್ರಿಗಳಿಗೆ ಭರವಸೆ ನೀಡಿದ ಜೀವಿ ಒಂದು ಚಿಕ್ಕ ಕೀಟ.

ಅದುವೇ ‘ಡ್ರೊಸಾಫಿಲಾ ಮೆಲನೊಗ್ಯಾಸ್ಟರ್’ ಎಂಬ ಪುಟ್ಟ ನೊಣ. ಅಡುಗೆಮನೆಯಲ್ಲಿಟ್ಟ ಕೊಳೆತ ಹಣ್ಣು–ತರಕಾರಿಗಳ ಮೇಲೆ ಕಾಣಿಸಿಕೊಳ್ಳುವ ಕೇವಲ ಮೂರು ಮಿ.ಮೀ. ಉದ್ದದ ಈ ಕೀಟ ಬಾಹ್ಯಾಕಾಶಯಾನ ಮಾಡಿದ ಮೊದಲ ಜೀವಿ.

ಅದು ಮೊದಲು ಬಾಹ್ಯಾಕಾಶಯಾನದಿಂದ ಬದುಕುಳಿದು ಹಿಂದಿರುಗಿದ ನಂತರವೇ ಜೀವಿಗಳು ಬಾಹ್ಯಾಕಾಶ ಪ್ರಯಾಣ ಮಾಡಲು ಸಾಧ್ಯ ಎಂದು ತಿಳಿದು ಬಂತು. ಅನಂತರ ನಾಯಿ, ಕೋತಿ, ಚಿಂಪಾಂಜಿಗಳನ್ನು ಆಗಸಕ್ಕೆ ಕಳಿಸಲಾಯಿತಾದರೂ, ಮೊದಲು ಬಾಹ್ಯಾಕಾಶಕ್ಕೆ ಕಳಿಸಲಾದ ಜೀವಂತಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಜೀವಿ ಈ ಚಿಕ್ಕ ಕೀಟ. ಅಂದಿನ ಆ ಪ್ರಯೋಗಗಳು ಡ್ರೊಸಾಫಿಲಾ ನೊಣವನ್ನು ಖಗೋಳ ಜೀವವಿಜ್ಞಾನದ ಸಂಶೋಧನೆಯ ಪ್ರವರ್ತಕವನ್ನಾಗಿಸಿದವು. ನಾಯಿ, ಕೋತಿ, ಚಿಂಪಾಂಜಿ ಹೀಗೆ ಹೆಚ್ಚು ಸಂಕೀರ್ಣ ಜೀವಿಗಳನ್ನು ಬಾಹ್ಯಾಕಾಶ ನೌಕೆಗಳಲ್ಲಿ ಕಳಿಸಲಾಯಿತಾದರೂ ಅವೆಲ್ಲವುಗಳಿಗಿಂತ ಹೆಚ್ಚು ಬಾರಿ ಬಾಹ್ಯಾಕಾಶಯಾನ ಮಾಡಿರುವ ಜೀವಿ ಡ್ರೊಸಾಫಿಲಾ ಕೀಟ. ಮೊದಲು ಅಮೆರಿಕ ತನ್ನ ಬಾಹ್ಯಾಕಾಶ ಯೋಜನೆಗಳಲ್ಲಿ ಡ್ರೊಸಾಫಿಲಾವನ್ನು ಸೇರಿಸಿತಾದರೂ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅನೇಕ ದೇಶಗಳು ತಮ್ಮ ಬಾಹ್ಯಾಕಾಶಯಾನದಲ್ಲಿ ಅದನ್ನು ಸೇರಿಸಿದವು.

ಬಾಹ್ಯಾಕಾಶಯಾನಕ್ಕೆ ಈ ಕೀಟವನ್ನೇ ಏಕೆ ಆಯ್ಕೆ ಮಾಡಲಾಯಿತು? ಈ ಆಯ್ಕೆಗೆ ಹಲವು ಕಾರಣಗಳಿವೆ. ಈ ನೊಣವು ಚಿಕ್ಕದಾಗಿದ್ದು ನಿಸರ್ಗದಲ್ಲಿ ಹಾಗೂ ಪ್ರಯೋಗಾಲಯದಲ್ಲಿ ಸುಲಭವಾಗಿ ಅವುಗಳನ್ನು ಬೆಳೆಸಬಹುದು. ಚಿಕ್ಕ ಬಾಟಲಿಯಲ್ಲಿ ನಾಲ್ಕೈದು ಗ್ರಾಂ ಕೊಳೆತ ಹಣ್ಣು ಅಥವಾ ರವೆ
ಪಾಯಸದಂತಹ ಆಹಾರವನ್ನು ಹಾಕಿ ಅದರಲ್ಲಿ ಈ ನೊಣಗಳನ್ನು ಸೇರಿಸಿದರೆ ಮುಗಿಯಿತು. ಅಲ್ಲಿ ಅವು ಸಂತಾನಾಭಿವೃದ್ಧಿ ಮಾಡಿ ಮೂರು ನಾಲ್ಕು ತಿಂಗಳವರೆಗೆ ಪೀಳಿಗೆಯನ್ನು ಮುಂದುವರಿಸುತ್ತವೆ. ಗಗನನೌಕೆಯಲ್ಲಿ ಇಂತಹ ಒಂದೆರಡು ಪ್ರನಾಳಗಳನ್ನು ಇರಿಸಿದರಾಯಿತು. ಅವುಗಳ ಅಲ್ಪಾವಧಿಯ ಜೀವನಚಕ್ರದಿಂದಾಗಿ (10ರಿಂದ 12 ದಿನ) ವಿಜ್ಞಾನಿಗಳಿಗೆ ಆಗಸದಲ್ಲಿ ಬೆಳೆವಣಿಗೆಯ ಸಾಧ್ಯತೆ ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.

ಈ ಕೀಟದ ಆನುವಂಶೀಯತೆಯ ಕುರಿತ ಸಾಕಷ್ಟು ಮಾಹಿತಿ ಲಭ್ಯವಿರುವುದರಿಂದ ಅವುಗಳ ಆನುವಂಶೀಯ ವಸ್ತುವಿನ (ಡಿಎನ್ಎ ಅಥವಾ ಆರ್ಎನ್ಎ) ಮೇಲೆ ಬಾಹ್ಯಾಕಾಶದಲ್ಲಿ ಹರಡಿರುವ ವಿಕಿರಣಗಳ ಪರಿಣಾಮಗಳ ಅಧ್ಯಯನ ಸಾಧ್ಯವಾಗುತ್ತದೆ. ಬಾಹ್ಯಾಕಾಶ ಪ್ರಯಾಣದಿಂದ ಗಗನಯಾತ್ರಿಗಳ ಶಾರೀರಿಕ ಕ್ರಿಯೆಗಳ ಮೇಲೆ ಉಂಟಾಗಬಹುದಾದ ಒತ್ತಡದಿಂದ ಚೇತರಿಸಿಕೊಳ್ಳುವ ಸಾಧ್ಯತೆಯ ಕುರಿತು ಅಧ್ಯಯನ ಮಾಡಬಹುದು.

ಮನುಷ್ಯ ಅಥವಾ ಇನ್ನಾವುದೇ ಜೀವಿಯನ್ನು ಬಾಹ್ಯಾಕಾಶಕ್ಕೆ ಕಳಿಸುವ ಮೊದಲು ಅಂದರೆ 1947ರ ಫೆಬ್ರುವರಿ 20ರಂದು ಅಮೆರಿಕದ ವಿ-2 ರಾಕೆಟ್ಟಿನಲ್ಲಿ ಡ್ರೊಸಾಫಿಲಾ ಕೀಟವನ್ನು ಬಾಹ್ಯಾಕಾಶಕ್ಕೆ ಕಳಿಸಲಾಯಿತು. ತಿಂಗಳ ನಂತರ ಗಗನನೌಕೆ ಹಿಂತಿರುಗಿದಾಗ ಅವು ಬದುಕುಳಿದಿದ್ದವು! ಈ ಪ್ರಯೋಗವು ಹೆಚ್ಚು ಸಂಕೀರ್ಣ ಜೀವಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವುದಕ್ಕೆ ಪ್ರೇರಣೆ ನೀಡಿತು. ಆ ಪ್ರಯೋಗಗಳು ಯಶಸ್ವಿಯಾದ ನಂತರ ಮುಂದಿನ ಪ್ರಯತ್ನ ನಡೆಸಲಾಯಿತು. ಮುಂದಿನ ಗಗನಯಾನಗಳಲ್ಲಿ ಗಗನಯಾತ್ರಿಗಳಿಗೆ ಅಗತ್ಯವಾದ ವಸ್ತುಗಳ ಜೊತೆಗೆ ಈ ನೊಣಗಳನ್ನೂ ಸೇರಿಸಲಾಯಿತು!.

ಅವುಗಳ ಮೊದಲ ಹಾರಾಟದ ನಂತರ ಈ ನೊಣಗಳನ್ನು ಪದೇ ಪದೇ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ನಾಸಾದ ಬಾಹ್ಯಾಕಾಶ ನೌಕೆಗಳಲ್ಲಿ, ರಷ್ಯಾದ ಸೂಯೇಜ್ ಯಾತ್ರೆಗಳಲ್ಲಿ ಡ್ರೊಸಾಫಿಲಾ ನೊಣಗಳ ಪ್ರಯಾಣಕ್ಕೆ ಸೀಟು ಸಿಕ್ಕಿತು! ಈ ಪ್ರಯಾಣದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸ್ನಾಯುಕ್ಷೀಣತೆ, ಬಾಹ್ಯಾಕಾಶದಲ್ಲಿ ಅಸ್ಥಿಸ್ನಾಯುಗಳ ನಷ್ಟ, ರೋಗನಿರೋಧಕಶಕ್ತಿಯ ಸಾಮರ್ಥ್ಯ, ವಿಕಿರಣದಿಂದ ಆನುವಂಶೀಯ ಬದಲಾವಣೆಗಳು ಮುಂತಾದ ವಿಷಯಗಳ ಕುರಿತು ಮಾಹಿತಿಯನ್ನು ಪಡೆಯಲಾಯಿತು. ಬಾಹ್ಯಾಕಾಶ ನಿಲ್ದಾಣಗಳಲ್ಲಿ ಇವು ಎಷ್ಟು ಕಾಲ ಬದುಕಬಹುದು, ಎಷ್ಟು ಕಾಲ ಪ್ರಜನನ ನಡೆಸಿ ತಮ್ಮ ಪೀಳಿಗೆಯನ್ನು ಮುಂದುವರಿಸಬಹುದು ಮುಂತಾದ ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು. ಇಂದಿಗೂ ಸಹ, ಬಾಹ್ಯಾಕಾಶ ಜೀವವಿಜ್ಞಾನ ಪ್ರಯೋಗಾಲಯಗಳಲ್ಲಿ ಅವು ಪ್ರಧಾನವಾಗಿದ್ದು ಹೊಸ ಹೊಸ ಮಾಹಿತಿ ನೀಡುತ್ತಿವೆ.

ಈಗ ನಾಸಾ ಈ ನೊಣಗಳಿಗಾಗಿಯೇ ಪ್ರಯೋಗಾಲಯವೊಂದನ್ನು (ಸ್ಪೇಸ್ ಎಕ್ಸ್ – 14) ಸ್ಥಾಪಿಸಿದೆ. ಅಲ್ಲಿ ಆ ಸಂಸ್ಥೆ ನಡೆಸುವ ಎಲ್ಲ ಬಾಹ್ಯಾಕಾಶ ಸಂಶೋಧನಾಯಾನಗಳಲ್ಲಿಯೂ ಈ ಕೀಟಗಳನ್ನು ಕಳಿಸಿ, ಈ ಪ್ರಯಾಣದಿಂದ ಅವುಗಳಲ್ಲಿ ಉಂಟಾಗುವ ಆನುವಂಶೀಯ ಪರಿಣಾಮಗಳು, ನಿರೋಧಕ ಶಕ್ತಿ, ಜೈವಿಕ ಕ್ರಿಯೆಗಳ ಮೇಲೆ ಪ್ರಯಾಣದ ಪರಿಣಾಮ – ಹೀಗೆ ಹಲವು ವಿಷಯಗಳ ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತದೆ. ಭಾರತದ ಇಸ್ರೊ ಕೂಡ ತನ್ನ ಗಗನಯಾನ ಯೋಜನೆಗಳಲ್ಲಿ ಈ ಕೀಟವನ್ನು ಸೇರಿಸಿದೆ. ಕೆಲವು ಖಾಸಗಿ ಕಂಪನಿಗಳು ಬಾಹ್ಯಾಕಾಶ ಟೂರಿಸಂ ಆರಂಭಿಸುವ ತವಕದಲ್ಲಿವೆ. ಡ್ರೊಸಾಫಿಲಾದ ಮೂಲಕ ನಡೆಯುವ ಶೋಧಗಳಿಂದ ಮುಂದೊಂದು ದಿನ ಯಾವುದಾದರೂ ಗ್ರಹ ಅಥವಾ ಆಕಾಶಕಾಯದಲ್ಲಿ ಹನಿಮೂನ್ನಂತಹ ಬಾಹ್ಯಾಕಾಶ ಪ್ರವಾಸ ಮತ್ತು ಮಾನವನ ವಸಾಹತನ್ನು ಸೃಷ್ಟಿಸುವುದು ಸಾಧ್ಯವೇ ಎಂದು ಪರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.