ಗುರುವಾರ , ಮೇ 26, 2022
22 °C

ವಿಜ್ಞಾನ: ಹೀಗೊಂದು ಲಸಿಕೆಯ ಕಥೆ

ಶರತ್ ಭಟ್ ಸೇರಾಜೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಎಂದು ಹೇಳಿದ ಕೂಡಲೇ, ‘ಮಹಾಮಾರಿ’, ‘ಹೆಮ್ಮಾರಿ’, ‘ಮೃತ್ಯುದೇವತೆ’, ‘ರಣಕೇಕೆ’, ’ಅಟ್ಟಹಾಸ’ ಮುಂತಾದ ಪದಗಳು ತಂತಾನೆ ಮನಸ್ಸಿಗೆ ಬರುತ್ತವೆ ಅನ್ನಿಸುವಷ್ಟು ಬಿರುದುಗಳನ್ನು ಟಿವಿ ವಾಹಿನಿಗಳು ಈ ರೋಗಕ್ಕೆ ದಿನಕ್ಕೆ ನಾಲ್ಕು ಸಲ ಎಂಬಂತೆ ಕೊಟ್ಟಿವೆ. ಆದರೆ ಲಸಿಕೆಗೆ ಮಾತ್ರ ಪಾಪ ಕದನತ್ರಿಣೇತ್ರನೆಂದೋ, ರಿಪು ಕುರಂಗ ಕಂಠೀರವನೆಂದೋ, ಜಗದೇಕಮಲ್ಲನೆಂದೋ, ಪಡೆಮೆಚ್ಚೆ ಗಂಡನೆಂದೋ ಯಾರೂ ಬಿರುದುಗಳನ್ನು ಕೊಟ್ಟಂತೆ ಕಾಣುವುದಿಲ್ಲ! ಅದಕ್ಕೆ ಬಿರುದು, ಪ್ರಶಸ್ತಿಗಳು ಸಿಗದಿದ್ದರೆ ಏನಂತೆ, ಅದರ ಜನ್ಮವೃತ್ತಾಂತವನ್ನಾದರೂ ಒಂದಿನಿತು ಅರಿತರೆ ಅಷ್ಟಾದರೂ ಸಾಕು.

ಈ ಲಸಿಕೆಗಳು ನಿಜವಾಗಿಯೂ ಬಂದದ್ದು ಭಯಾನಕ, ಬೀಭತ್ಸ ಮುಂತಾದ ವಿಶೇಷಣಗಳಿಂದ ವಿವರಿಸಬೇಕಾದ ಸಿಡುಬುರೋಗಕ್ಕೆ ಉತ್ತರವಾಗಿ. ‘ಗೌಳಿಗರು, ಹಾಲುವಿತರಕರು cowpox ಎಂದು ಕರೆಯಲ್ಪಟ್ಟ ರೋಗದ ಸಂಪರ್ಕಕ್ಕೆ ಬಂದವರಿಗೆ ಸಿಡುಬು ಬರುತ್ತಿಲ್ಲ – ಅಂತೊಬ್ಬ ಗಮನಿಸಿದ. ದನದ ಕೀವನ್ನು ತನ್ನ ಹೆಂಡತಿ ಮತ್ತು ಮಗುವಿನ ತೋಳಿಗೆ ಚುಚ್ಚುಮದ್ದಾಗಿ ಕೊಟ್ಟ, ಹಾಗೆ ಚುಚ್ಚಿದ ಮೇಲೆ ಅವರಿಗೆ ಸಿಡುಬು ಬರಲಿಲ್ಲ’ ಎಂದು ಹೇಳಿದರೆ ನಾನು ಹೇಳುತ್ತಿರುವುದು ಬ್ರಿಟಿಷ್ ವೈದ್ಯ ಎಡ್ವರ್ಡ್ ಜೆನ್ನರನ ಕಥೆ ಎಂದು ಯಾರಿಗಾದರೂ ಅನ್ನಿಸಬಹುದು. ಆದರೆ ಇದು ಬೆಂಜಮಿನ್ ಜೆಸ್ಟಿ ಎಂಬ ಬ್ರಿಟಿಷ್ ರೈತನೊಬ್ಬನ ಕಥೆ! ಜೆನ್ನರನ ಆವಿಷ್ಕಾರಕ್ಕಿಂತ ಇಪ್ಪತ್ತೆರಡು ವರ್ಷ ಹಿಂದಿನ ಘಟನೆಯಿದು.

ಜೆನ್ನರನು ಲಸಿಕೆಯನ್ನು ಕಂಡು ಹಿಡಿದ ವಿಧಾನವೂ ಹೆಚ್ಚು ಕಡಮೆ ಹೀಗೇ ಇರುವುದನ್ನು ನೋಡಿದರೆ ಇದು ಕಾಕತಾಳೀಯವೋ ಅವನಿಗೆ ಜೆಸ್ಟಿ ಕಂಡು ಹಿಡಿದದ್ದರ ಪರಿಚಯವಿತ್ತೋ ಹೇಳುವುದು ಕಷ್ಟ. ಏನೇ ಆದರೂ ಅದಕ್ಕೆ ಪ್ರಚಾರ ಕೊಟ್ಟು, ಲಸಿಕೆಯನ್ನು ಪೇಟೆಂಟ್ ಮಾಡಿಸದೇ, ಅದರಿಂದ ದುಡ್ಡು ಮಾಡದೇ ಅದನ್ನು ಜನರಿಗೆ ಉಪಕಾರವಾಗಲಿ ಎಂದು ತೀರ್ಮಾನಿಸಿದ ಸಜ್ಜನಿಕೆ ಜೆನ್ನರನದ್ದು. ಜೆಸ್ಟಿ ಹೀಗೆ ದನದ ಕೀವನ್ನು ಚುಚ್ಚಿದ್ದು ಸುತ್ತಮುತ್ತಲಿನವರ ಸಿಟ್ಟಿಗೆ ಕಾರಣವಾಯಿತು ಎಂದು ಕಾಣುತ್ತದೆ. ಮತ್ತು ಅದಕ್ಕೆ ಪ್ರಚಾರ ಕೊಡುವ ಕೆಲಸವನ್ನೂ ಜೆಸ್ಟಿ ಮಾಡದೇ ಹೋದದ್ದರಿಂದ ಈ ಪರಿಹಾರ ಜನಪ್ರಿಯವಾಗದೇ ಹೋಯಿತು. ಆಗಿನ ಕಾಲದಲ್ಲಿ ಸಿಡುಬಿನಿಂದ 400,000 ಯುರೋಪಿಯನ್ನರು ಸಾಯುತ್ತಿದ್ದರು; ಅಂದರೆ ಜೆಸ್ಟಿಯ ಮದ್ದಿಗೆ ಸಿಕ್ಕಿದ ಉಪೇಕ್ಷೆಗೆ ಅದೆಂಥ ಭಾರೀ ಬೆಲೆಯನ್ನೇ ತೆತ್ತಂತಾಯಿತು!

ಎಡ್ವರ್ಡ್ ಜೆನ್ನರ್ ಎಂಬವನು ಈ ಲಸಿಕೆಯ ಕ್ರಮವನ್ನು ಕಂಡು ಹಿಡಿದದ್ದು ಎಂದು ಈಗ ಸಾಧಾರಣವಾಗಿ ಹೇಳುತ್ತೇವಾದರೂ ವಿಷಯ ಅಷ್ಟು ಸರಳವಾಗಿಲ್ಲ, ಮತ್ತು ವಿಜ್ಞಾನದ ಆವಿಷ್ಕಾರಗಳು ಶೂನ್ಯದಿಂದ ಉದ್ಭವಿಸುವುದಿಲ್ಲ ಎಂಬ ಮಾತು ಲಸಿಕೆಯ ವಿಚಾರದಲ್ಲೂ ಸತ್ಯ ಅನ್ನಲಿಕ್ಕೆ ಇಷ್ಟು ಹೇಳಬೇಕಾಯಿತು. ‘ಹೊಸತು ಶೂನ್ಯದಿಂದ ಹುಟ್ಟುವುದಿಲ್ಲ’ ಎನ್ನುವುದು ಜೆಸ್ಟಿಯ ಆವಿಷ್ಕಾರಕ್ಕೂ ಅನ್ವಯಿಸುವ ಮಾತೇ.

ಈ ಲಸಿಕೆಗೂ ಮೊದಲು ಇದ್ದ variolation ಎಂಬ ಚಿಕಿತ್ಸೆಯೂ ಲಸಿಕೆಯ ಕ್ರಮಕ್ಕಿಂತ ಒರಟಾದ, ಆದರೆ ಒಂದು ಮಟ್ಟಕ್ಕೆ ಇದನ್ನು ಹೋಲುವ ಮದ್ದಿನ ಕ್ರಮವೇ. ರೋಗ ಇದ್ದವರ ದೇಹದಿಂದ ಕೀವು ತೆಗೆದು ತಮಗೇ ಸಣ್ಣಮಟ್ಟದಲ್ಲಿ ರೋಗ ಬರಿಸಿಕೊಳ್ಳುವ ಕ್ರಮ ಅದು. ಅದು ಎಲ್ಲಿಂದ ಬಂತು ಎಂದು ಹುಡುಕಿದರೆ ಟರ್ಕಿಯಿಂದ ಬ್ರಿಟನ್ನಿಗೆ ಬಂತು ಎಂಬುದು ಗೊತ್ತಾಗುತ್ತದೆ. ಆಗ ಟರ್ಕಿಯಲ್ಲಿ ರಾಯಭಾರಿಯಾಗಿದ್ದ ಲಾರ್ಡ್ ಮೊಂಟೆಗ್ಯೂ ಎಂಬವನ ಪತ್ನಿಯೇ ಇದನ್ನು ಪ್ರಚಾರ ಮಾಡಿದವಳು. ಅವಳಿಗೆ ಈ ಉಪಾಯ ಸಿಕ್ಕಿದ್ದು ಟರ್ಕಿಯ ಅವಳ ಗೆಳತಿಯರಿಂದ. ಟರ್ಕಿಗೆ ಇದು ಎಲ್ಲಿಂದ ಬಂತು ಎಂದು ಹುಡುಕಿದರೆ, ಚೀನಾ ಅಥವಾ ಭಾರತದಿಂದ ಇರಬಹುದು ಎಂಬ ಊಹೆಗಳು ಸಿಗುತ್ತವೆ!

ರಾಬರ್ಟ್ ಕೋಲ್ಟ್ ಎಂಬ ಸರ್ಜನ್‌ ಒಬ್ಬ ಒಲಿವರ್ ಕೋಲ್ಟ್ ಅನ್ನುವ ಇನ್ನೊಬ್ಬ ವೈದ್ಯನಿಗೆ 1731ರಲ್ಲಿ ಬರೆದ ಪತ್ರವೊಂದರಲ್ಲಿ ಭಾರತದ ಈ ತರದ ಚಿಕಿತ್ಸಾ ವಿಧಾನದ ಉಲ್ಲೇಖ ಸಿಗುತ್ತದೆಯಂತೆ. ರಾಬರ್ಟ್ ಕೋಲ್ಟ್ ಹೇಳುವ ಪ್ರಕಾರ ಭಾರತದಲ್ಲಿ ಅದಕ್ಕೂ 150 ವರ್ಷಗಳಷ್ಟು ಹಿಂದೆಯೇ ಇಂಥದ್ದೊಂದು ಚಿಕಿತ್ಸಾಪದ್ಧತಿ ಇತ್ತಂತೆ. ಕಬ್ಬಿಣದ ಸೂಜಿಯನ್ನು ರೋಗಿಯ ಬೊಕ್ಕೆಗೆ ಚುಚ್ಚಿ ತೆಗೆದು ಅನಂತರ ವೃತ್ತಾಕಾರವಾಗಿ ತೋಳಿಗೆ ಚುಚ್ಚುವುದು ಆ ಕಾಲದ ವ್ಯಾಕ್ಸಿನೇಷನ್ ಆಗಿದ್ದಂತೆ ತೋರುತ್ತದೆ. ಚುಚ್ಚುವುದಕ್ಕೆ ಬಳಸುವ ವಸ್ತುವನ್ನು ಒಂದೆರಡು ತಲೆಮಾರುಗಳಷ್ಟು ಕಾಲ ಸಂರಕ್ಷಿಸಿ ಬೇರೆ ಇಡುತ್ತಿದ್ದರಂತೆ. Charles Chais ಎಂಬ ಫ್ರೆಂಚ್ ಪಾದ್ರಿಯೊಬ್ಬ ಬರೆದ ಪುಸ್ತಕವೊಂದರಲ್ಲಿಯೂ ಭಾರತದಲ್ಲಿ ಬಹುಕಾಲದಿಂದಲೂ ಈ ಚಿಕಿತ್ಸಾವಿಧಾನ ಇದ್ದದ್ದರ ಉಲ್ಲೇಖ ಇರುವುದಾಗಿ ತಿಳಿಯುತ್ತದೆ.

ಮತ್ತೆ ಜೆನ್ನರನ ವಿಷಯಕ್ಕೇ ಬರುವುದಾದರೆ, 1802ರಲ್ಲಿ ಅವನ ಲಸಿಕೆಗೆ ಪ್ರಚಾರ ಸಿಕ್ಕಾಗ ಅದಕ್ಕೆ ಬಂದ ವಿರೋಧ ಒಂದೆರಡಲ್ಲ. ಜನ ದನಗಳಂತಾಗಿ ಹೋಗುತ್ತಾರೆ ಎಂಬಲ್ಲಿಂದ, ಲಸಿಕೆ ತೆಗೆದುಕೊಂಡವರ ದೇಹದಿಂದ ಯಾವುದೋ ವಿಚಿತ್ರ ದ್ರವ ಸುರಿಯುತ್ತದೆ ಅನ್ನುವುವರೆಗೆ ಅಪಪ್ರಚಾರಗಳು ಇದ್ದವಂತೆ (ಟಾಲಸ್ಟಾಯ್, ಬರ್ನಾರ್ಡ್ ಷಾ ತರದವರೂ ಆಮೇಲೆ ಲಸಿಕೆಗಳನ್ನು ವಿರೋಧಿಸಿದರು ಅಂದರೆ ಆಶ್ಚರ್ಯವೇ). ಒಬ್ಬ ವ್ಯಂಗ್ಯಚಿತ್ರಕಾರನಂತೂ ಲಸಿಕೆ ತೆಗೆದುಕೊಂಡು ಕಾಲಿನಲ್ಲಿ ಗೊರಸು ಬರಿಸಿಕೊಂಡಿರುವ, ತಲೆಯಲ್ಲಿ ಕೊಂಬು ಮೊಳೆತಿರುವ ಜನರ ಕಾರ್ಟೂನು ಬಿಡಿಸಿಬಿಟ್ಟಿದ್ದನಂತೆ! ಇಂಥ ಪೊಳ್ಳುಸುದ್ದಿಗಳಿಂದ ಇಲ್ಲಿನ ಜನ ಹೆದರಿಯಾರು ಅಂತಲೋ ಏನೋ, ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಅವರ ಕಿರಿಯ ರಾಣಿಯಾದ ದೇವಜಮ್ಮಣ್ಣಿ ಅವರಿಗೆ ಮೊದಲ ಲಸಿಕೆ ಕೊಡಿಸಿ, ಅದರ ವರ್ಣಚಿತ್ರವನ್ನೂ ಬರೆಸಿ ಜೆನ್ನರನ ಲಸಿಕೆಯ ಪರ ಪ್ರಚಾರ ಮಾಡಿದ್ದರಂತೆ. ಹೀಗಿದೆ ಲಸಿಕೆಯ ಕಥೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು