ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆದುಳಿಗೆ ಮಾತು ಕೊಟ್ಟ ಚಿಪ್‌: ಕಣ್ಣೆವೆ ಮಿಟುಕಿಸಲಾಗದವರಿಗೂ ಮಾತು ಕಲಿಸಬಹುದು!

Last Updated 30 ಮಾರ್ಚ್ 2022, 2:46 IST
ಅಕ್ಷರ ಗಾತ್ರ

ಮಾತು ಮನುಷ್ಯನ ಆಸ್ತಿ. ತನಗೆ ಅನಿಸಿದ್ದನ್ನು, ಕಂಡದ್ದನ್ನು, ತಿಳಿದಿದ್ದನ್ನು, ಕೇಳಿದ್ದನ್ನು ಸಮರ್ಥವಾಗಿ ತನ್ನವರಿಗೆ ತಿಳಿಸುವ ಸಾಮರ್ಥ್ಯ ಇರುವುದರಿಂದಲೇ ದೈಹಿಕವಾಗಿ ಅತ್ಯಂತ ದುರ್ಬಲನಾಗಿರುವ ಪ್ರಾಣಿಯಾಗಿದ್ದರೂ, ಅತ್ಯಂತ ಬಲಿಷ್ಠ ಪ್ರಾಣಿಗಳನ್ನೂ ಮೀರಿಸಿ ಮಾನವ ಬೆಳೆದು ನಿಂತಿದ್ದಾನೆ ಎನ್ನುತ್ತದೆ ವಿಜ್ಞಾನ. ಈ ಸಂವಹನ ಸಾಮರ್ಥ್ಯವನ್ನೇ ಕಳೆದುಕೊಂಡರೆ ಹೇಗಿರಬಹುದು ಊಹಿಸಿ.

ಮಾತನಾಡಲು ಆಗದವರೂ ಕೂಡ ಸಂಜ್ಞೆಗಳಿಂದ ತಿಳಿಸಲು ಪ್ರಯತ್ನಿಸುತ್ತಾರಷ್ಟೆ. ಅದುವೂ ಸಾಧ್ಯವಿಲ್ಲದ ಪರಿಸ್ಥಿತಿಯೂ ಬರಬಹುದು. ಅಪರೂಪವೆಂದರೆ ಅಪರೂಪಕ್ಕೆ ಪಾರ್ಶ್ವವಾಯುವಿಗೆ ತುತ್ತಾಗುವ ಕೆಲವು ರೋಗಿಗಳಿಗೆ ನಾಲಗೆಯನ್ನೂ ಆಡಿಸಲು ಆಗದಂತಹ ಪರಿಸ್ಥಿತಿ ಬರಬಹುದು. ಅಂತಹವರು ಕೈ–ಕಾಲು ಆಡಿಸುವುದಿರಲಿ, ಕಣ್ಣನ್ನೂ ಮಿಟುಕಿಸಲಾರರು. ಹಾಗಿರುವವರಿಗೆ ಮಾತು ಕೂಡ ಸ್ತಬ್ಧವಾಗುತ್ತದೆ. ಇಂತಹ ‘ತಮ್ಮೊಳಗೇ ಬಂಧಿತ’ರಾದ ವ್ಯಕ್ತಿಗಳನ್ನೂ ಆಧುನಿಕ ಎಲೆಕ್ಟ್ರಾನಿಕ್‌ ಸಾಧನಗಳು ಹಾಗೂ ಮಾಹಿತಿ ತಂತ್ರಜ್ಞಾನಗಳ ನೆರವಿನಿಂದ ಮಾತನಾಡಿಸುವುದು ಸಾಧ್ಯವಂತೆ. ಹೀಗೆ ಹಲವು ವರ್ಷಗಳಿಂದ ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಆಗದಿದ್ದ ವ್ಯಕ್ತಿಯೊಬ್ಬ ತನ್ನ ಮಗನಿಗೆ ‘ನನ್ನ ಮುದ್ದಿನ ಮಗನನ್ನು ಪ್ರೀತಿಸುತ್ತೇನೆ,’ ಎಂದು ಹೇಳಲು ಸಾಧ್ಯವಾಯಿತು ಎಂದು ‘ನೇಚರ್‌ ಕಮ್ಯುನಿಕೇಶನ್ಸ್‌’ ಪತ್ರಿಕೆ ವರದಿ ಮಾಡಿದೆ. ಸ್ವಿಟ್ಜರ್ಲೆಂಡ್‌ನ ‘ವಿಸ್‌ ಸೆಂಟರ್‌ ಫಾರ್‌ ಬಯೋ ಅಂಡ್‌ ನ್ಯೂರೋ ಎಂಜಿನಿಯರಿಂಗ್‌’ ಸಂಶೋಧನಾಲಯದ ನರವಿಜ್ಞಾನಿ ಅಯೊನಿಸ್‌ ಬ್ಲಾಕಸ್‌ ಮತ್ತು ಜರ್ಮನಿಯ ‘ಎಎಲ್‌ಎಸ್‌ ವಾಯ್ಸ್‌’ ಎನ್ನುವ ಕಂಪನಿಯ ವಿಜ್ಞಾನಿ ಉಜ್ವಲ್‌ ಚೌಧರಿ ಮತ್ತು ಸಂಗಡಿಗರು ಈ ಸಾಧನೆಯನ್ನು ಮಾಡಿದ್ದಾರೆ.

ಎಮಯೋಟ್ರೋಪಿಕ್‌ ಲ್ಯಾಟೆರಲ್‌ ಸ್ಕ್ಲೀರೋಸಿಸ್‌ ಅಥವಾ ಎ.ಎಲ್‌.ಎಸ್‌. ಎನ್ನುವುದು ಈ ದುರದೃಷ್ಟದ ರೋಗಕ್ಕೆ ವೈದ್ಯರು ಕೊಟ್ಟಿರುವ ಹೆಸರು. ಸ್ನಾಯುಗಳನ್ನು ನಿಯಂತ್ರಿಸುವ ಮಿದುಳಿನ ಭಾಗಕ್ಕೆ ರಕ್ತ ಹರಿಯುವುದು ನಿಂತ ಕಾರಣ ಸ್ನಾಯುಗಳನ್ನು ನಿರ್ದೇಶಿಸುವ ಶಕ್ತಿಯನ್ನು ಮಿದುಳು ಕಳೆದುಕೊಳ್ಳುತ್ತದೆ. ಇದು ಕೆಲವೇ ಸ್ನಾಯುಗಳನ್ನು ಬಾಧಿಸಬಹುದು. ಹೀಗಾದಾಗ ಆಯಾ ಸ್ನಾಯುಗಳಿರುವ ಭಾಗಗಳನ್ನು ಚಲಿಸಲಾಗದು. ಅಪರೂಪಕ್ಕೆ ಎ.ಎಲ್‌.ಎಸ್‌. ರೋಗಿಗಳಲ್ಲಿ ಆಗುವಂತೆ ಮಿದುಳಿನಲ್ಲಿ ಎಲ್ಲ ಸ್ನಾಯುಗಳನ್ನೂ ನಿಯಂತ್ರಿಸುವ ಭಾಗಕ್ಕೇ ಘಾಸಿಯಾಗಿ, ಯಾವುದೇ ಸ್ನಾಯುವನ್ನೂ ಚಲಿಸುವುದು ಅಸಾಧ್ಯವಾಗಬಹುದು. ಇಂತಹವರಿಗೆ ಗಾಲಿಕುರ್ಚಿಯೇ ಗತಿ. ಜೊತೆಗೆ ಅವರೇನು ಹೇಳುತ್ತಾರೆ ಎನ್ನುವುದೂ ತಿಳಿಯದ ಸ್ಥಿತಿಯಲ್ಲಿ ಆರೈಕೆಯೂ ಬಹಳ ಕಷ್ಟವೆನ್ನಿಸುತ್ತದೆ.

ಎ.ಎಲ್‌.ಎಸ್‌. ಬಾಧಿತರಿಗೆ ಭಾವನೆಗಳಿರುತ್ತವೆ. ಆದರೆ ಅವನ್ನು ಪ್ರಕಟಗೊಳಿಸಲು ಸಾಧ್ಯವಾಗುವುದಿಲ್ಲ ಅಷ್ಟೆ. ಅದನ್ನು ಸಾಧ್ಯಗೊಳಿಸಲು ಹಲವಾರು ಪ್ರಯತ್ನಗಳು ನಡೆಯುತ್ತಲೇ ಇವೆ. ಚೌಧರಿ ಅವರ ತಂಡವೇ ಹಲವಾರು ರೋಗಿಗಳ ಮೇಲೆ ವಿವಿಧ ಪ್ರಯೋಗಗಳನ್ನು ನಡೆಸಿದ್ದಾರೆ. ಕೆಲವು ವರ್ಷಗಳ ಹಿಂದೆ ಇಂತಹುದೇ ಒಬ್ಬ ಬಾಧಿತೆಯ ಮಿದುಳಿನಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಸಂಕೇತಗಳನ್ನು ಗುರುತಿಸಿ, ಆಕೆ ‘ಸರಿ’ ಎನ್ನುತ್ತಿದ್ದಾಳೆಯೋ, ‘ಇಲ್ಲ/ತಪ್ಪು’ ಎನ್ನುತ್ತಿದ್ದಾಳೆಯೋ ಎಂದು ತಿಳಿಯಲು ಪ್ರಯತ್ನಿಸಿದ್ದರು. ತನ್ನ ಮುಂದೆ ತೋರಿಸಿದ ವಸ್ತು ಇಲ್ಲವೇ ವಾಕ್ಯಗಳು ಸರಿಯಾಗಿದ್ದಾಗ ‘ಹೌದು’ ಎನ್ನಲು ಕಣ್ಣನ್ನು ಮಿಟುಕಿಸುತ್ತಿದ್ದಳು. ‘ಇಲ್ಲ’, ಎನ್ನಲು ಇನ್ನೊಂದು ರೀತಿಯಲ್ಲಿ ಕಣ್ಣು ಮಿಟುಕಿಸಬೇಕಿತ್ತು. ಹೀಗೆ ಸ್ವಲ್ಪ ಮಟ್ಟಿಗೆ ತಮ್ಮ ಭಾವನೆಗಳನ್ನು ಅವರು ಪ್ರಕಟಿಸಬಹುದಿತ್ತು. ಆದರೆ ಕಣ್ಣನ್ನು ಮಿಟುಕಿಸಲಾಗದವರ ಗತಿ ಏನು?

ಇದಕ್ಕಾಗಿಯೂ ಹಲವು ಪ್ರಯೋಗಗಳು ನಡೆಯುತ್ತಿದ್ದುವು. ತಲೆಯ ಮೇಲೊಂದು ಟೊಪ್ಪಿಗೆಯಂಥ ಎಲೆಕ್ಟ್ರಾನಿಕ್‌ ಸಾಧನವನ್ನು ಹೊದಿಸಿ, ರೋಗಿಗಳ ಎದುರಿನಲ್ಲಿ ಪರದೆಯ ಮೇಲೆ ವಿವಿಧ ಅಕ್ಷರಗಳನ್ನು ಮೂಡಿಸಲಾಗುತ್ತಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಮಿದುಳಿನಲ್ಲಿ ಸೃಷ್ಟಿಯಾಗುವ ವಿದ್ಯುತ್‌ ಸಂಕೇತಗಳ ವಿನ್ಯಾಸದಲ್ಲಿ, ‘ಹೌದು-ಇಲ್ಲ’ಗಳಿಗೆ ಹೊಂದುವ ವಿನ್ಯಾಸವಿದೆಯೋ ಎಂದು ಗುರುತಿಸಲು ಯೋಚಿಸಲಾಗಿತ್ತು. ಈ ಪ್ರಯತ್ನ ಶೇ.70ರಷ್ಟು ಮಾತ್ರ ಸಫಲವಾಗಿತ್ತು. ಅರ್ಥಾತ್‌, ನೂರರಲ್ಲಿ ಎಪ್ಪತ್ತು ಪ್ರಯತ್ನಗಳಲ್ಲಿಯಷ್ಟೆ ರೋಗಿಗಳು ಸರಿ ಎಂದದ್ದನ್ನು ವಿಜ್ಞಾನಿಗಳು ಸರಿ ಎಂದು ಗುರುತಿಸಬಹುದಿತ್ತು.

ಚೌಧರಿ ಅವರ ತಂಡ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಎ.ಎಲ್‌.ಎಸ್‌. ರೋಗಿಗಳು ಅಕ್ಷರಗಳನ್ನು ಜೋಡಿಸಿ ವಾಕ್ಯಗಳನ್ನು ತಿಳಿಸುವ ತಂತ್ರವೊಂದನ್ನು ರೂಪಿಸಿದ್ದಾರೆ. ಇದು ಎಲೆಕ್ಟ್ರಾನಿಕ್‌ ಸಾಧನ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಹಾಗೂ ಕಂಪ್ಯೂಟರ್‌ ವಿಶ್ಲೇಷಣೆಗಳ ಫಲ. ಸತತವಾಗಿ ಮೂರು ವರ್ಷಗಳ ಪ್ರಯತ್ನದ ನಂತರ, ಕಣ್ಣನ್ನು ಮಿಟುಕಿಸುವುದೂ ಅಸಾಧ್ಯವಾದೊಬ್ಬ ಎ.ಎಲ್‌.ಎಸ್‌. ವ್ಯಕ್ತಿಯೊಬ್ಬ ಹೇಳುವ ವಾಕ್ಯಗಳನ್ನು ಗುರುತಿಸಲು ಕಲಿತಿದ್ದಾರೆ. ಇದು ಸಾಧ್ಯವಾಗಿದ್ದು ಹೀಗೆ. ರೋಗಿಯ ಮಿದುಳಿನಲ್ಲಿ ಸ್ನಾಯುಗಳನ್ನು ನಿಯಂತ್ರಿಸುವ ಭಾಗವಿದೆಯಷ್ಟೆ. ಅಲ್ಲಿ ಎಲೆಕ್ಟ್ರಾನಿಕ್‌ ಚಿಪ್‌ ಒಂದನ್ನು ಹುದುಗಿಸಿದ್ದಾರೆ. ಈ ಚಿಪ್‌ ಮಿದುಳಿನಲ್ಲಿ ಹುಟ್ಟುವ ವಿದ್ಯುತ್‌ ಸಂಕೇತಗಳು ಎಷ್ಟು ಪ್ರಬಲ ಎನ್ನುವುದನ್ನು ಗುರುತಿಸಬಲ್ಲುದು. ರೋಗಿಗೆ ಕಿವಿ ಕೇಳುವುದರಿಂದ ವಿವಿಧ ಅಕ್ಷರಗಳನ್ನು ತೋರಿಸಿ, ಅದರ ಜೊತೆಗೆ ಶಬ್ದವೊಂದನ್ನೂ ಕೇಳಿಸಲಾಗುತ್ತಿತ್ತು. ರೋಗಿಗಳು ತಮಗೆ ಇಷ್ಟವಾದ ಅಕ್ಷರವನ್ನು ಗುರುತಿಸಿದಾಗ, ಅದಕ್ಕೆ ತಕ್ಕಂತೆ ಮಿದುಳಿನ ಆ ಭಾಗದಲ್ಲಿ ವಿದ್ಯುತ್‌ ಸಂಕೇತ ಹೆಚ್ಚುವಂತೆ, ಅಥವಾ ತಪ್ಪು ಅಕ್ಷರ ಬಂದಾಗ ಕಡಿಮೆ ಮಾಡುವಂತೆ ತರಬೇತಿ ನೀಡಲಾಯಿತು. ರೋಗಿ ಬೆರಳನ್ನು ಅಲುಗಿಸಬಹುದಾದ್ದರಿಂದ, ಮಿದುಳಿನಲ್ಲಿ ವಿದ್ಯುತ್‌ ಸಂಕೇತಗಳನ್ನು ಸೃಷ್ಟಿಸಬಹುದಾಗಿತ್ತು. ಹೀಗೆ ಅಕ್ಷರಗಳನ್ನು ಗುರುತಿಸಿ, ಬೇಕಿದ್ದನ್ನು ಜೋಡಿಸುವಂತೆ ಕಲಿಸಿದ ಮೇಲೆ, ರೋಗಿ ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಲು ಪ್ರಯತ್ನಿಸಿದ. ‘ನನ್ನ ಮುದ್ದಿನ ಮಗನನ್ನು ಪ್ರೀತಿಸುತ್ತೇನೆ’ ಎಂದು ಹೇಳಿದ.

ಆದರೆ ನಿತ್ಯ ನಾವು ಹೇಳುವ ಇಂತಹ ವಾಕ್ಯವನ್ನು 259 ದಿನಗಳ ಸತತ ಪ್ರಯತ್ನದ ನಂತರ ಆತ ಹೇಳಬಹುದಾಯಿತು. ಇದಕ್ಕೆ ವೆಚ್ಚವಾದ ಹಣ: ಐದು ಲಕ್ಷ ಡಾಲರುಗಳು. ಇಂತಹ ಪ್ರಯತ್ನಗಳೂ ಸಾಧ್ಯ ಎನ್ನುವುದನ್ನು ನಿರೂಪಿಸುವುದಷ್ಟೆ ಈಗ ಸಾಧ್ಯವಾಗಿದೆ. ‘ಎ.ಎಲ್‌.ಎಸ್‌. ರೋಗಿಗಳಿಗೆ ಸರಾಗವಾಗಿ ಮಾತನಾಡುವಂತೆ ಮಾಡುವ ಸಾಧನ ಇನ್ನೂ ಬಹಳ ದೂರವಿದೆ. ಜೊತೆಗೆ ಈ ತಂತ್ರದಲ್ಲಿ ರೋಗಿಯ ಚರ್ಮದಡಿಯಲ್ಲಿ ತಂತಿಗಳನ್ನು ಕೂಡಿಸುವುದರಿಂದ ಸೋಂಕಾಗಬಹುದು. ಇವು ಯಾವ ತೊಂದರೆಯೂ ಇಲ್ಲದ ದಿನಗಳೂ ಬರಬಹುದು. ಆ ದಿಕ್ಕಿನಲ್ಲಿ ಇದು ಮೊದಲ ಹೆಜ್ಜೆ ಅಷ್ಟೆ,’ ಎನ್ನುತ್ತಾರೆ ಚೌಧರಿ.

ಸಂಶೋಧನೆಗೆ ಸಂಪೂರ್ಣ ಸರ್ಕಾರಿ ಅನುದಾನವನ್ನೇ ನಂಬಿಕೊಂಡಿರುವ ನಮ್ಮ ದೇಶದಲ್ಲಿ ಇಂತಹ ದುಬಾರಿ ವೆಚ್ಚದ ಪ್ರಯೋಗಗಳನ್ನು ನಡೆಸುವುದೂ ಕಷ್ಟವೇ! ಇತ್ತೀಚೆಗೆ ಖಾಸಗಿ ದತ್ತಿಗಳಿಂದ ಸ್ಥಾಪನೆಯಾಗುತ್ತಿರುವ ಸಂಶೋಧನಾಲಯಗಳು ಈ ನಿಟ್ಟಿನಲ್ಲಿ ನೆರವಾಗಬಹುದೋ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT