ಗುರುವಾರ , ಮೇ 26, 2022
26 °C
ಟಿಜಿಓ ಎಂಬ ಆರ್ಬಿಟರ್ (ExoMars Trace Gas Orbiter) ನಿಂದ ಚಿತ್ರಗಳ ಸೆರೆ

‘ಮಂಗಳ’ನಲ್ಲಿ ಭೂಕುಸಿತದ ದೃಶ್ಯಗಳನ್ನು ಸೆರೆ ಹಿಡಿದ ಯೂರೋಪಿಯನ್ ಸ್ಪೇಸ್ ಏಜೆನ್ಸಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂ ಕುಸಿತ ಭೂಮಿಯ ಮೇಲೆ ಸಾಮಾನ್ಯ. ಅದರಲ್ಲೂ ಮಳೆಗಾಲದಲ್ಲಿ ಬೆಟ್ಟ ಗುಡ್ಡಗಳಲ್ಲಿ ಸಂಭವಿಸುವ ಭೂಕುಸಿತಗಳು ಪ್ರಳಯ ಸ್ವರೂಪಿಯಾಗಿರುತ್ತವೆ.

ಇಂತಹ ಭೂಕುಸಿತಗಳು ಭೂಮಿಯ ಮೇಲಷ್ಟೇ ಅಲ್ಲ, ಅನ್ಯ ಗ್ರಹಗಳಲ್ಲೂ ಸಂಭವಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಭೂಮಿಯ ಪಕ್ಕದ ಕೆಂಪು ಗ್ರಹ ಮಂಗಳ ಗ್ರಹದಲ್ಲಿ ಇಂತಹ ವಿದ್ಯಮಾನಗಳು ನಡೆದಿರುವುದು ಗೊತ್ತಾಗಿದೆ.

ಹೌದು, ಯೂರೋಪಿಯನ್ ಸ್ಪೇಸ್ ಏಜೆನ್ಸಿ (ESA) 2016 ರಲ್ಲಿ ಕಳಿಸಿರುವ ಟಿಜಿಓ ಎಂಬ ಆರ್ಬಿಟರ್ (ExoMars Trace Gas Orbiter) ಮಂಗಳನ ವಾತಾವರಣವನ್ನು ಅಧ್ಯಯನ ಮಾಡುತ್ತಿದ್ದು ಅಲ್ಲಿ ನಡೆಯುವ ಸೂಕ್ಷ್ಮ ಸಂಗತಿಗಳ ಬಗ್ಗೆ ಮಾಹಿತಿಯನ್ನು ಭೂಮಿಗೆ ರವಾನಿಸುತ್ತಿದೆ.

ಇದನ್ನೂ ಓದಿ: ಮಂಗಳ ಗ್ರಹದ ಮೇಲೆ 90 ದಿನ ಪೂರೈಸಿದ ರೋವರ್‌ ಅತ್ಯುತ್ತಮ ಸ್ಥಿತಿಯಲ್ಲಿದೆ: ಚೀನಾ

ಇತ್ತೀಚೆಗೆ ಈ ಟಿಜಿಓ ಕಳಿಸಿರುವ ಮಂಗಳನ ಕೆಲವು ಫೋಟೊಗಳು ಮಂಗಳನಲ್ಲಿ ಕೂಡ ಭೂಕುಸಿತ ಸಂಭವಿಸುತ್ತವೆ ಎಂಬುದಕ್ಕೆ ಸಾಕ್ಷ್ಯಗಳನ್ನು ಒದಗಿಸಿದೆ. ಮಂಗಳನ ಅಯೋಲಿಸ್ ಪ್ರದೇಶದಲ್ಲಿ 35 ಕಿಮೀ ಅಗಲದ ಕುಳಿಯ ಅಂಚಿನಲ್ಲಿ 5 ಕಿಮೀ ಉದ್ದದ ಭೂಕುಸಿತವನ್ನು ಈ ಫೋಟೊಗಳಲ್ಲಿ ನೋಡಬಹುದು.

‘ಭೂ ಕುಸಿತಗಳು ಒಂದು ನಿರ್ಧಿಷ್ಟ ಪರಿಸರದಲ್ಲಿ ಸಂಭವಿಸುತ್ತವೆ. ಇಲ್ಲಿ ಸಂಭವಿಸಿರುವ ಭೂಕುಸಿತ ಯಾವಾಗ ಸಂಭವಿಸಿದ್ದು ಎಂಬುದು ತಿಳಿಯುತ್ತಿಲ್ಲ. ಅದನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ‘ ಎಂದು ಇಎಸ್‌ಎ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದೆ.

ಟಿಜಿಓ ನೌಕೆಯನ್ನು ಇಎಸ್‌ಎ ಮಾರ್ಚ್ 2016 ರಲ್ಲಿ  Proton-M/Briz-M ಎಂಬ ರಾಕೆಟ್ ಮೂಲಕ ಉಡಾವಣೆ ಮಾಡಿತ್ತು. ಅದು 2016 ಅಕ್ಟೋಬರ್‌ನಲ್ಲಿ ಮಂಗಳನ ಕಕ್ಷೆ ಸೇರಿತ್ತು.

ಇನ್ನು ಅಂಗಾರಕನ ಬಗ್ಗೆ ಅಧ್ಯಯನ ನಡೆಸುವಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ನವೆಂಬರ್ 5, 2013 ರಂದು ಮಂಗಳಯಾನ ಯೋಜನೆಯ ಅಂಗವಾಗಿ ಇಸ್ರೋ ಮಾರ್ಸ್‌ ಆರ್ಬಿಟರ್ ಮಿಷನ್‌ (MOM) ನ್ನು ಕಳಿಸಿತ್ತು. ಅದು ಯಶಸ್ವಿಯಾಗಿ 2014 ಸೆಪ್ಟೆಂಬರ್ 24 ರಂದು ಮಂಗಳನ ಕಕ್ಷೆ ಸೇರಿತ್ತು. ಇಂದಿಗೂ ಕೂಡ ಅದು ಕೆಲಸ ಮಾಡುತ್ತಿದ್ದು ಮಂಗಳನ ವಾತಾವರಣದ ಬಗ್ಗೆ ಇಸ್ರೋಕ್ಕೆ ಅದ್ಭುತ ಮಾಹಿತಿ ಕೊಡುತ್ತಿದೆ.‌

 

ಇದನ್ನೂ ಓದಿ: ಇನ್ನೆರಡು ವಾರದಲ್ಲಿ ಮಂಗಳನ ಅಂಗಳದಿಂದ ಭೂಮಿಗೆ ಬರಲಿದೆ ಮಣ್ಣು, ಕಲ್ಲು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು