ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವಸಹಿತ ಗಗನಯಾನ ಯೋಜನೆ: ಗಗನಯಾನಿಗಳ ತರಬೇತಿ ಪೂರ್ಣ

Last Updated 23 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಗೆ ಆಯ್ಕೆಯಾಗಿರುವ ನಾಲ್ವರು ಗಗನಯಾನಿಗಳು ರಷ್ಯಾದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ರಷ್ಯಾದ ಸ್ಟಾರ್‌ ಸಿಟಿಯಲ್ಲಿ ಇರುವ ಜಿಸಿಟಿಸಿ ಕೇಂದ್ರದಲ್ಲಿ 2020ರ ಫೆಬ್ರುವರಿಯಿಂದ ನಡೆಯುತ್ತಿದ್ದ ತರಬೇತಿಯು ಈಗ ಪೂರ್ಣಗೊಂಡಿದೆ.

ಭಾರತೀಯ ವಾಯುಪಡೆಯ ನಾಲ್ವರು ಪೈಲಟ್‌ಗಳನ್ನು ಈ ಯೋಜನೆಗೆ ಗಗನಯಾನಿಗಳಾಗಲು ಆಯ್ಕೆ ಮಾಡಲಾಗಿತ್ತು. ಈ ಗಗನಯಾನಿಗಳ ತರಬೇತಿ ಪೂರ್ಣಗೊಂಡಿರುವ ಮಾಹಿತಿಯನ್ನು ರಷ್ಯನ್ ಸ್ಟೇಟ್ ಸ್ಪೇಸ್ ಕೊಆಪರೇಷನ್-ರಾಸ್ಕೋಸ್ಮೋಸ್‌ ಬಹಿರಂಗಪಡಿಸಿದೆ. ‘ಗಗನಯಾನ ತರಬೇತಿಯನ್ನು ಪೂರ್ಣಗೊಳಿಸಿದ ಭಾರತದ ಗಗನಯಾನಿಗಳನ್ನು ಭೇಟಿಯಾಗಿದ್ದೆ. ಜತೆಗೆ ಜಂಟಿ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಭಾರತದ ರಾಯಭಾರಿಯ ಜತೆ ಚರ್ಚಿಸಿದೆ’ ಎಂದು ರಾಸ್ಕೋಸ್ಮೋಸ್ ಪ್ರಧಾನ ನಿರ್ದೇಶಕ ಡಿಮಿಟ್ರಿ ರೊಗೋಝಿನ್ ಟ್ವೀಟ್ ಮಾಡಿದ್ದಾರೆ.

2020ರ ಫೆಬ್ರುವರಿ 10ರಂದು ತರಬೇತಿ ಆರಂಭವಾಗಿತ್ತು. ಆದರೆ, ಕೋವಿಡ್‌ನ ಕಾರಣದಿಂದ ತರಬೇತಿ ಸ್ಥಗಿತವಾಗಿತ್ತು. ಮತ್ತೆ ಮೇ ತಿಂಗಳಿನಲ್ಲಿ ತರಬೇತಿ ಆರಂಭವಾಗಿತ್ತು. ಬಾಹ್ಯಾಕಾಶ ಕ್ಯಾಪ್ಸೂಲ್‌ಗಳಲ್ಲಿ ಲ್ಯಾಂಡಿಂಗ್ ಆಗುವ ತರಬೇತಿಯನ್ನು ಈ ಗಗನಯಾನಿಗಳಿಗೆ ನೀಡಲಾಗಿದೆ. ಭಿನ್ನ ವಾತಾವರಣ ಮತ್ತು ಭಿನ್ನ ಮೇಲ್ಮೈನಲ್ಲಿ ಲ್ಯಾಂಡಿಂಗ್ ತರಬೇತಿ ಕೊಡಲಾಗಿದೆ.

ಜತೆಗೆ, ಬಾಹ್ಯಾಕಾಶದಲ್ಲಿನ ಶೂನ್ಯ ಗುರುತ್ವ ಸ್ಥಿತಿಯಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗಿದೆ. ಇದಕ್ಕಾಗಿ, ವಿಶೇಷ ವಿಮಾನದಲ್ಲಿ ಹಾರಾಟದ ವೇಳೆ ಶೂನ್ಯ ಗುರುತ್ವ ಸ್ಥಿತಿ ನಿರ್ಮಾಣ ಮಾಡಲಾಗಿತ್ತು. ಅಲ್ಲದೆ, ತುರ್ತು ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬುದರ ತರಬೇತಿ ನೀಡಲಾಗಿದೆ. ಈ ತರಬೇತಿಯ ಭಾಗವಾಗಿ ಭಾರತದ ಗಗನಯಾನಿಗಳು ರಷ್ಯನ್ ಭಾಷೆ ಕಲಿತಿದ್ದಾರೆ, ಸೋಯುಜ್ ಮಾನವಸಹಿತ ಬಾಹ್ಯಾಕಾಶ ನೌಕೆಯ ವಿನ್ಯಾಸ ಮತ್ತು ವ್ಯವಸ್ಥೆಗಳನ್ನು
ಅಧ್ಯಯನ ಮಾಡಿದ್ದಾರೆ.

ಈ ಗಗನಯಾನಿಗಳು ಭಾರತಕ್ಕೆ ವಾಪಸಾದ ನಂತರ, ಬೆಂಗಳೂರಿನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಏವಿಯೇಷನ್ ಮೆಡಿಸಿನ್, ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ಮತ್ತು ಮುಂಬೈನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ನೇವಲ್ ಮೆಡಿಸಿನ್‌ನಲ್ಲಿ ತರಬೇತಿ ಪಡೆಯಲಿದ್ದಾರೆ.

ಮಾನವಸಹಿತ ಗಗನಯಾನಕ್ಕೆ ಪೂರ್ವಬಾವಿಯಾಗಿ, ಇಸ್ರೊ ಎರಡು ಮಾನವರಹಿತ ಗಗನಯಾನ ನಡೆಸಲಿದೆ. ಈ ಎರಡೂ ಕಾರ್ಯಾಚರಣೆಗಳಲ್ಲಿ ಮನುಷ್ಯನ ಪ್ರತಿಕೃತಿ ‘ವ್ಯೋಮಮಿತ್ರ’ವನ್ನು ಬಳಸಲಾಗುತ್ತದೆ. ಗಗನಯಾನಿಗಳು ಬಾಹ್ಯಾಕಾಶದಲ್ಲಿ 7 ದಿನಗಳನ್ನು ಕಳೆಯಲಿದ್ದಾರೆ. ₹10,000 ಕೋಟಿ ಮೊತ್ತದ ಈ ಯೋಜನೆಯು 2022ರಲ್ಲಿ ನಡೆಯುವ ಸಾಧ್ಯತೆ ಇದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುವ ಮುನ್ನವೇ ಈ ಕಾರ್ಯಾಚರಣೆಯನ್ನು ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT