ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ನೆಲ ಸ್ಪರ್ಶದ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ಲ್ಯಾಂಡರ್‌ ವಿಕ್ರಮ್

ಚರಿತ್ರಾರ್ಹ ಚಂದ್ರಯಾನ–2ರ ವಿಕ್ರಮ್‌ ‘ಲ್ಯಾಂಡರ್‌’ ಇಳಿಯಬೇಕಿದ್ದ ಐತಿಹಾಸಿಕ ಕ್ಷಣಗಳು
Last Updated 7 ಸೆಪ್ಟೆಂಬರ್ 2019, 18:20 IST
ಅಕ್ಷರ ಗಾತ್ರ

ಬೆಂಗಳೂರು: ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಲ್ಯಾಂಡರ್ 'ವಿಕ್ರಮ್' ಶನಿವಾರ ಬೆಳಗಿನಜಾವ 1.55ಕ್ಕೆ ಚಂದ್ರನ ನೆಲ ಸ್ಪರ್ಶ ಮಾಡುವಾಗ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು.

ಇದರಿಂದ ಈ ಯೋಜನೆ ಯಶಸ್ವಿ ಆಯಿತೇ ಇಲ್ಲವೇ ಎಂಬ ಬಗ್ಗೆ ವಿಕ್ರಮ್ ಲ್ಯಾಂಡರ್‌ನಿಂದ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಕೊನೆ ಹಂತದಲ್ಲಿ ಲ್ಯಾಂಡರ್ ಪಥ ಬಿಟ್ಟು ಇಳಿಯಲಾರಂಭಿಸಿತು. ಬಳಿಕ ಏನಾಯಿತು ಎಂಬುದು ಮಿಷನ್ ಕಂಟ್ರೋಲ್‌ಗೆ ಮಾಹಿತಿ ಸಿಗಲಿಲ್ಲ. ಇದರಿಂದ ಇಸ್ರೊ ವಿಜ್ಞಾನಿಗಳು ಆತಂಕಕ್ಕೆ ಒಳಗಾದರು.

ವಿಕ್ರಮ್ ನಿಂದ ಮಾಹಿತಿಗಾಗಿ ಬಹಳ ಹೊತ್ತು ಕಾಯಲಾಯಿತು. ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಪ್ರಧಾನಿ ಮೋದಿ ಬಳಿಗೆ ಬಂದು ಮಾಹಿತಿ ನೀಡಿದ ಬಳಿಕ ಅಲ್ಲಿಂದ ತೆರಳಿದರು.

ವಿಜ್ಞಾನಿಗಳ ಮುಖ ಕಳಾಹೀನವಾಗಿತ್ತು. ಪ್ರಧಾನಿ ಮೋದಿ ವಿಜ್ಞಾನಿಗಳಲ್ಲಿ ವಿಶ್ವಾಸ ತುಂಬುವ ಮಾತುಗಳನ್ನು ಹೇಳಿದರು.

2.1 ಕಿ.ಮೀ. ಎತ್ತರದಲ್ಲಿರಬೇಕಾದರೆ ಸಂಪರ್ಕ ಕಡಿತ

1.38ಕ್ಕೆ ಲ್ಯಾಂಡರ್‌ ಚಂದ್ರನ ಮೇಲ್ಮೈಯತ್ತ ಇಳಿಯಲು ಪ್ರಾರಂಭಿಸಿತು.1.48 ಗಂಟೆಗೆ ಮೇಲ್ಮೈಯಿಂದ 6 ಕಿ.ಮೀ. ಎತ್ತರದಲ್ಲಿತ್ತು.ಕೊನೆಯ ಹಂತದಲ್ಲಿ ಲ್ಯಾಂಡರ್ ವೇಗೋತ್ಕರ್ಷ ಕಳೆದಿಕೊಂಡಿತು. ಆದರೆ 1.50ರ ವೇಳೆಗೆ ಚಂದ್ರನ ಮೇಲ್ಮೈಯಿಂದ 2.1 ಕಿ.ಮೀ. ಎತ್ತರದಲ್ಲಿರಬೇಕಾದರೆ, ನೌಕೆಯೊಂದಿಗಿನ ಸಂಪರ್ಕ ಕಡಿತಗೊಂಡಿತು.ಟ್ರಾಜೆಕ್ಟರಿಯ ತನ್ನ ರೇಖೆ ಬಿಟ್ಟು ಹೊರ ಹೋದ ತಕ್ಷಣ ವಿಜ್ಞಾನಿಗಳ ಆತಂಕಕ್ಕೆ ಒಳಗಾದರು. ಆಗ 1.55 ನಿಮಿಷ ಆಗಿತ್ತು. ಇದನ್ನು 2.17 ಗಂಟೆಗೆ ಶಿವನ್‌ ಪ್ರಕಟಿಸಿದರು.ಅಲ್ಲಿವರೆಗೆ ಪ್ರತಿ ಹಂತದ ಯಶಸ್ಸನ್ನು ಅವರು ಸಂಭ್ರಮಿಸಿದರು.

ಟ್ರಾಜೆಕ್ಟರಿಯ ತನ್ನ ರೇಖೆ ಬಿಟ್ಟು ಹೊರ ಹೋದ ಕ್ಷಣ
ಟ್ರಾಜೆಕ್ಟರಿಯ ತನ್ನ ರೇಖೆ ಬಿಟ್ಟು ಹೊರ ಹೋದ ಕ್ಷಣ

ವಿಕ್ರಮ್‌ಗೆ ಏನಾಯಿತು ಎಂಬ ಮಾಹಿತಿ ತಕ್ಷಣ ಲಭ್ಯವಿಲ್ಲದ ಕಾರಣ ಅದರ ಕಥೆ ಏನು ಎಂಬುದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಅದು ಎಲ್ಲಿ ಲ್ಯಾಂಡ್ ಆಗಬೇಕು ಎಂಬ ಗುರಿ ಇತ್ತೋ ಅಲ್ಲಿ ಇಳಿಯಲಿಲ್ಲ. ಆದರೆ, ಆರ್ಬಿಟರ್ ಉತ್ತಮವಾಗಿ ಪರಿಭ್ರಮಣ ನಡೆಸುತ್ತಿದೆ.

ಲ್ಯಾಂಡರ್ ಅಥವಾ ಆರ್ಬಿಟರ್‌ನಿಂದ ಮಾಹಿತಿ ಬಂದ ನಂತರ ಅದನ್ನು ವಿಶ್ಲೇಷಣೆ ಮಾಡಿದ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ.

ವಿಕ್ರಮ್ ಅವರೋಹಣದ ಕೊನೆಯ 15 ನಿಮಿಷ ತೀವ್ರ ಆತಂಕ ಹುಟ್ಟಿಸಿತ್ತು, ಲ್ಯಾಂಡರ್ ಟ್ರಾಜೆಕ್ಟರಿಯಿಂದ ಹೊರಗೆ ಸರಿದ ತಕ್ಷಣವೇ ನಿಯಂತ್ರಣ ಕೇಂದ್ರದಲ್ಲಿ ಗಾಢ ಮೌನ ನೆಲೆಸಿತ್ತು.

ವಿಕ್ರಮ್‌ನಿಂದ ಸಂದೇಶ ಬರದಾದ ಬಳಿಕ ತಮ್ಮ ಬಳಿಗೆ ಬಂದ ಇಸ್ರೊ ಅಧ್ಯಕ್ಷ ಕೆ.ಶಿವನ್‌ ಅವರನ್ನು ಪ್ರಧಾನಿ ನರೇಂದ್ರ ಮೊದಿ ಬೆನ್ನು ತಟ್ಟಿ ಪ್ರೋತ್ಸಾಹದ ಮಾತುಗಳನ್ನಾಡಿದರು.
ವಿಕ್ರಮ್‌ನಿಂದ ಸಂದೇಶ ಬರದಾದ ಬಳಿಕ ತಮ್ಮ ಬಳಿಗೆ ಬಂದ ಇಸ್ರೊ ಅಧ್ಯಕ್ಷ ಕೆ.ಶಿವನ್‌ ಅವರನ್ನು ಪ್ರಧಾನಿ ನರೇಂದ್ರ ಮೊದಿ ಬೆನ್ನು ತಟ್ಟಿ ಪ್ರೋತ್ಸಾಹದ ಮಾತುಗಳನ್ನಾಡಿದರು.

ಅಧ್ಯಯನ ನಡೆಸಲಾಗುತ್ತಿದೆ: ಕೆ.ಶಿವನ್‌

"2.1 ಕಿ.ಮೀ.ವರೆಗೆ ಲ್ಯಾಂಡರ್ ಇಸ್ರೊ ಸಂಪರ್ಕದಲ್ಲೇ ಇತ್ತು. ಬಳಿಕ ಅದರ ಸಂಪರ್ಕ ತಪ್ಪಿದೆ. ಏನು ನಡೆದಿದೆ ಎಂಬುದನ್ನು ಅಧ್ಯಯನ ನಡೆಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ 2 ಗಂಟೆ 17 ನಿಮಿಷಕ್ಕೆ ಪ್ರಕಟಿಸಿದರು.

ಧೈರ್ಯದಿಂದ ಮುನ್ನುಗ್ಗೋಣ: ಮೋದಿ

ವಿಜ್ಞಾನ ಮತ್ತು ಮಾನವ ಜನಾಂಗದ ಅಭ್ಯುಧಯಕ್ಕೆ ನೀವು ಉತ್ತಮ ಸೇವೆ ಸಲ್ಲಿಸಿದ್ದೀರಿ. ನಾವು ಕಲಿಯುತ್ತಿದ್ದೇವೆ. ನಮ್ಮ ಪ್ರಯತ್ನ ಮುಂದುವರಿಸೋಣ. ಧೈರ್ಯದಿಂದ ಮುನ್ನುಗ್ಗೋಣ. ನಾನು ಸದಾ ನಿಮ್ಮ ಜತೆಗಿದ್ದೇನೆ. ಸಂಪರ್ಕ ಸದ್ಯ ಸಾಧ್ಯವಾಗಿಲ್ಲ, ಆದರೆ ಭರವಸೆಯಿಂದ ನಿರೀಕ್ಷಿಸೋಣ.

–ನರೇಂದ್ರ ಮೋದಿ, ಪ್ರಧಾನಿ

ವಿಕ್ರಮ್‌ ಲ್ಯಾಂಡರ್ ಇಳಿದ ಬಗೆ

* 1.38: ಲ್ಯಾಂಡಿಂಗ್‌ ಪ್ರಕ್ರಿಯೆ ಪ್ರಾರಂಭ

* ಪ್ರತಿ ಸೆಕೆಂಡ್‌ಗೆ 74 ಮೀ. ವೇಗ

* 1.48: ಚಂದ್ರನ ಮೇಲ್ಮೈಯಿಂದ 7 ಕಿ.ಮೀ. ಎತ್ತರದಲ್ಲಿ ಲ್ಯಾಂಡರ್‌

* 1.50: ಲ್ಯಾಂಡರ್‌ ಜತೆ ಸಂಪರ್ಕ ಕಡಿತ

* 2.1 ಕಿ.ಮೀ: ಸಂಪರ್ಕ ಕಳೆದುಕೊಂಡಾಗ ಲ್ಯಾಂಡರ್‌ ಇದ್ದ ಎತ್ತರ

ಬೆಂಗಳೂರಿನಲ್ಲಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಚಂದ್ರನ ಅಂಗಳದಲ್ಲಿ ‘ವಿಕ್ರಮ್‌’ ಲ್ಯಾಂಡರ್‌ ಮತ್ತು ‘ಪ್ರಜ್ಞಾನ್‌’ ರೋವರ್‌ಅನ್ನು ಸುರಕ್ಷಿತವಾಗಿ ಇಳಿಸಲು ಶನಿವಾರ ಮುಂಜಾನೆ 1.55ರ ಸಮಯವನ್ನು ನಿಗದಿ ಮಾಡಿತ್ತು. ಇದು ಚರಿತ್ರಾರ್ಹ ಕ್ಷಣವಾಗಲಿದೆ ಎಂದು ಎಲ್ಲರೂ ಕಾದಿದ್ದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಯಾವುದೇ ದೇಶ ಈವರೆಗೆ ಯಾವುದೇ ನೌಕೆಯನ್ನು ಸುರಕ್ಷಿತವಾಗಿ ಇಳಿಸಿಲ್ಲ. ಹಾಗಾಗಿ ಇದು ಐತಿಹಾಸಿಕವಾಗಬೇಕಿತ್ತು.

ವೀಕ್ಷಣೆಗೆ ಬಂದಿದ್ದ ವಿದ್ಯಾರ್ಥಿಗಳು
ವೀಕ್ಷಣೆಗೆ ಬಂದಿದ್ದ ವಿದ್ಯಾರ್ಥಿಗಳು

ಉಸಿರು ಬಿಗಿ ಹಿಡಿದು ನಿಲ್ಲಿಸಿದ ಕೊನೆಯ ನಿಮಿಷಗಳು

ಇನ್ನೇನು ಕಾರ್ಯಾಚರಣೆ ಯಶಸ್ವಿಯಾಯಿತು ಎನ್ನುವ ಹಂತದಲ್ಲಿದ್ದಾಗ ಕೊನೆಯ ನಿಮಿಷದಲ್ಲಿ ಯಾವುದೇ ಖಚಿತ ಸಂದೇಶಗಳು ರವಾನೆಯಾಗಲಿಲ್ಲ. ಈ ವೇಳೆ ಎಲ್ಲಾ ವಿಜ್ಞಾನಿಗಳು ಉಸಿರು ಬಿಗಿಹಿಡಿದು ನಿಂತಿದ್ದರು.

ಒಂದು ಹಂತದಲ್ಲಿ ಇಸ್ರೋ ಅಧ್ಯಕ್ಷ ಸೇರಿದಂತೆ ಹಲವು ವಿಜ್ಞಾನಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಬಂದು, ಮಾತನಾಡಿದರು. ಉತ್ಸಾಹ ಇಲ್ಲದ ಭಾವನೆ ಮುಖದಲ್ಲಿ ಕಾಣುತ್ತಿತ್ತು.

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿದಿರುವ ಬಗ್ಗೆ ಅಂತಿಮ ಪ್ರಕಟಣೆಗೆ ಕಾಯುತ್ತಿದ್ದ ಇಸ್ರೊ ಕೇಂದ್ರದ ವಿಜ್ಞಾನಿಗಳ ಮುಖದಲ್ಲೂ ಆತಂಕದ ಛಾಯೆ ಇತ್ತು. ಇದೇ ವೇಳೆ ಇಸ್ರೊ ಆಧ್ಯಕ್ಷ ಕೆ.ಶಿವನ್‌ ಅವರು ಪ್ರಧಾನಿಗೆ ಮಾಹಿತಿ ನೀಡಿದರು. ಆದರೆ, ಮುಖದಲ್ಲಿ ಉತ್ಸಾಹ ಇರಲಿಲ್ಲ. ಏನಾಗುತ್ತಿದೆ ಎಂಬ ಬಗ್ಗೆ ಗೊಂದಲ ಇತ್ತು. ಮಾಹಿತಿ ಬರುವುದು ವಿಳಂಬವಾಗಿದ್ದರಿಂದ ಆತಂಕದ ಛಾಯೆ ಮೂಡಿಸಿತ್ತು. ಈ ಬಗ್ಗೆ ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಗಂಭೀರ ಚಿಂತನೆ ನಡೆಸಿದರು.

ಕತೂಹಲದಿಂದ ಕಾಯುತ್ತಿದ್ದ ವಿಜ್ಞಾನಿಗಳು
ಕತೂಹಲದಿಂದ ಕಾಯುತ್ತಿದ್ದ ವಿಜ್ಞಾನಿಗಳು

ಜಗತ್ತಿನ ಗಮನ ಪೀಣ್ಯದತ್ತ

ಬೆಂಗಳೂರಿನ ಪೀಣ್ಯದಲ್ಲಿ(ಜಾಲಹಳ್ಳಿ ಕ್ರಾ ಸ್ ಸಮೀಪ) ಇಸ್ರೊದ ಟೆಲಿಮೆಟ್ರಿ ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್ ವರ್ಕ್ ಕೇಂದ್ರ ಇದೆ. ಬ್ಯಾಲಾಳುವಿನಲ್ಲಿರುವ ಬೃಹತ್ ಆಂಟೆನಾ ಮೂಲಕ ಚಂದ್ರಯಾನ ವ್ಯೋಮ ನೌಕೆಯನ್ನು ನಿಯಂತ್ರಿಸಲಾಯಿತು. ಹೀಗಾಗಿ ಜಗತ್ತಿನ ಗಮನ ಪೀಣ್ಯದತ್ತ ನೆಟ್ಟಿತ್ತು.

ಇಸ್ರೊ ಕೇಂದ್ರದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ರಾಧಾಕೃಷ್ಣನ್ ಸಹಿತ ಹಲವಾರು ಹಿರಿಯ ವಿಜ್ಞಾನಿಗಳಿದ್ದರು. ಇನ್ನು 22 ನಿಮಿಷದಲ್ಲಿ ವಿಕ್ರಂ ಲ್ಯಾಂಡರ್‌ಅನ್ನು ಚಂದ್ರನ ಮೇಲೆ ಇಳಿಸಲಾಗುವುದು ಎಂದು ಇಸ್ರೊ ಕೇಂದ್ರ ದಿಂದ ಪ್ರಕಟಿಸಿತು. ಹೀಗೆ ಪ್ರತಿ ನಿಮಿಷವನ್ನೂ ಕಾತರದಿಂದ ಕಾಯುತ್ತಲೇ ಹೋದರು.

ಪ್ರಧಾನಿಗೆ ಸ್ವಾಗತ

ಪ್ರಧಾನಿ ನರೇಂದ್ರ ಮೊದಿ ಅವರು, ಇಸ್ರೋ ಕೇಂದ್ರಕ್ಕೆ ಶನಿವಾರ ಬೆಳಿಗ್ಗೆ 1.15ಕ್ಕೆ ಬಂದರು. ಮೋದಿ ಅವರನ್ನು ಇಸ್ರೋ ಅಧ್ಯಕ್ಷ ಸೇರಿದಂತೆ ಹಲವು ವಿಜ್ಞಾನಿಗಳು ಸ್ವಾಗತಿಸಿದರು.

ಮೋದಿ ಬಂದು ಕೂರುತ್ತಿದ್ದಂತೆ ಉಪಗ್ರಹ ಉಡಾವಣೆ ಮಾಡಿದ ವಿಡಿಯೊವನ್ನು ತೋರಿಸಲಾಯಿತು. ವಿಜ್ಞಾನಿಗಳು ಯಾನದಕುರಿತು ಮಾಹಿತಿಯನ್ನು ಮೋದಿ ಅವರಿಗೆ ವಿವರಿಸಿದರು.

***

ಭಾರತದ ಮಟ್ಟಿಗೆ ಇದು ಚೊಚ್ಚಲ ಪ್ರಯತ್ನ

ಚಂದ್ರನ ದಕ್ಷಿಣ ಧ್ರುವದಲ್ಲಿ ಯಾವುದೇ ದೇಶ ಈವರೆಗೆ ಯಾವುದೇ ನೌಕೆಯನ್ನು ಸುರಕ್ಷಿತವಾಗಿ ಇಳಿಸಿಲ್ಲ. ಹಾಗಾಗಿ ಇದು ಐತಿಹಾಸಿಕ. ಅಷ್ಟೇ ಅಲ್ಲ, ಯಾವುದೇ ಗ್ರಹದ ಮೇಲೆ ನೌಕೆಯೊಂದನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿರುವ ದೇಶಗಳೆಂದರೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ. ಭಾರತದ ಮಟ್ಟಿಗೆ ಇದು ಚೊಚ್ಚಲ ಪ್ರಯತ್ನ. ಹಾಗಾಗಿಯೂ ವಿಕ್ರಮ್‌ನ ಸುರಕ್ಷಿತ ಇಳಿಸುವುದುಇಸ್ರೊ ಮಟ್ಟಿಗೆ ಚರಿತ್ರಾರ್ಹ ಸಂಗತಿಯಾಗಿತ್ತು.

ಅನ್ಯಗ್ರಹಗಳಲ್ಲಿ ಲ್ಯಾಂಡರ್‌ನ ಸುರಕ್ಷಿತ ಇಳಿಕೆ ಪ್ರಕ್ರಿಯೆ ಅತ್ಯಂತ ನಾಜೂಕಿನ ಮತ್ತು ತಲ್ಲಣ ಹುಟ್ಟಿಸುವ ಪ್ರಕ್ರಿಯೆ. ಇಸ್ರೊ ಇದೇ ಮೊದಲ ಬಾರಿಗೆ ಇಂತಹ ಸಾಹಸಕ್ಕೆ ಕೈ ಹಾಕಿದೆ. ಚಂದ್ರಯಾನ–1 ಮತ್ತು ಮಂಗಳಯಾನ–1 ರಲ್ಲಿ ಬಾಹ್ಯಾಕಾಶ ನೌಕೆಗಳನ್ನು ಆಯಾ ಗ್ರಹಗಳ ಕಕ್ಷೆಗೆ ಸೇರಿಸಿತ್ತು.ಆದರೆ, ಬಾಹ್ಯಾಕಾಶ ಕಾಯವೊಂದರ ಮೇಲ್ಮೈಯಲ್ಲಿ ನೌಕೆ ಇಳಿಸುವ ಪ್ರಕ್ರಿಯೆ ಇದೇ ಮೊದಲು.

ಚಂದ್ರ ಬರಡಲ್ಲ, ಅಲ್ಲೂ ನೀರಿದೆ ಎಂಬ ಅಂಶವನ್ನು ಮೊದಲು (ಚಂದ್ರಯಾನ–1) ಪತ್ತೆ ಮಾಡಿದ್ದೇ ಭಾರತ. ಅದನ್ನು ಖಚಿತ ಪಡಿಸುವುದು ಚಂದ್ರಯಾನ–2 ರ ಮುಖ್ಯ ಉದ್ದೇಶ. ದಕ್ಷಿಣ ಧ್ರುವದ ನೆಲದ ಆಳದಲ್ಲಿ ಹೆಪ್ಪುಗಟ್ಟಿರುವ ನೀರಿನ ಅಸ್ತಿತ್ವ ಜಗತ್ತಿಗೆ ತೋರಿಸಿದರೆ. ಅದೊಂದು ಮಹತ್ವದ ಸಾಧನೆ ಆಗಲಿದೆ. ಕೋಟಿಗಟ್ಟಲೆ ವರ್ಷಗಳಿಂದ ನೆರಳಿನಿಂದ ಕೂಡಿದ ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಹೆಪ್ಪುಗಟ್ಟಿರುವ ನೀರು ಮತ್ತು ಖನಿಜಗಳನ್ನು ಪತ್ತೆ ಮಾಡಿಯೇ ತೀರುವ ವಿಶ್ವಾಸ ಇಸ್ರೊ ವಿಜ್ಞಾನಿಗಳಿಗಿದೆ.

ಭೂಮಿಯ 14 ದಿನಗಳಷ್ಟು ಕಾಲ ಕಾರ್ಯ ನಿರ್ವಹಿಸುವ ರೋವರ್‌ ನೀರು ಮಾತ್ರವಲ್ಲದೆ, ಜಲಜನಕ, ಸೋಡಿಯಂ, ಪಾದರಸ ಹಾಗೂ ಇತರ ಖನಿಜಗಳನ್ನು ಪತ್ತೆಗೆ ಕಾರ್ಯಾಚರಣೆ ನಡೆಸಲಿದೆ. ಮುಖ್ಯವಾಗಿ ಹೀಲಿಯಂ–3 ಬಗ್ಗೆಯೂ ವಿಶೇಷ ಅಧ್ಯಯನ ನಡೆಸಲಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಇಲ್ಲಿರುವ ಹೀಲಿಯಂ ಗಣಿಗಾರಿಕೆ ಮಾಡಿ ಭೂಮಿಗೆ ತರುವ ಬಗ್ಗೆ ಚಿಂತನೆ ನಡೆಸಿವೆ. ಹೀಲಿಯಂ–3 ಇಡೀ ಜಗತ್ತಿನ ವಿದ್ಯುತ್‌ ಕ್ಷಾಮವನ್ನು ನೀಗಬಲ್ಲದು. ಭಾರತದ ವಿಜ್ಞಾನಿಗಳೂ ಇದರಲ್ಲಿ ಹಿಂದೆ ಬಿದ್ದಿಲ್ಲ.

ಮಕ್ಕಳೊಂದಿಗೆ ಲ್ಯಾಂಡಿಂಗ್‌ ವೀಕ್ಷಿಸಿದ ಮೋದಿ

ಚಂದ್ರಯಾನ–2 ರ ಕುರಿತು ಇಸ್ರೊ ನಡೆಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಸುಮಾರು 60 ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರಮೋದಿ ಬೆಂಗಳೂರಿನಲ್ಲಿ ಲ್ಯಾಂಡಿಂಗ್‌ ಪ್ರಕ್ರಿಯೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳ ಜತೆ ಮಾತಕತೆ ನಡೆಸಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಅವರಲ್ಲಿ ಪ್ರಶ್ನೆಗಳನ್ನು ಕೇಳಿದರು.

ಸೌರ ಮಂಡಲದ ಉಗಮದ ಅಧ್ಯಯನ

ದಕ್ಷಿಣ ಧ್ರುವದಲ್ಲಿ ಈವರೆಗೆ ಯಾವುದೇ ದೇಶ ವಿಸ್ತೃತ ಅಧ್ಯಯನ ನಡೆಸಿಲ್ಲ. ಇಸ್ರೊ ಆ ಸಾಹಸಕ್ಕೆ ಕೈಹಾಕಿದೆ. ಈ ಪ್ರದೇಶದಲ್ಲಿ ಕೋಟಿಗಟ್ಟಲೆ ವರ್ಷಗಳಿಂದ ಸೂರ್ಯನ ಕಿರಣಗಳು ಬಿದ್ದಿಲ್ಲ. ಆದ್ದರಿಂದ, ಸೌರ ಮಂಡಲದ ಉಗಮದ ಕಾಲದ ಸನ್ನಿವೇಶಗಳನ್ನು ಅಧ್ಯಯನ ನಡೆಸಲಾಗುತ್ತದೆ. ಈ ಪ್ರದೇಶದಲ್ಲಿ ನೀರು ಮತ್ತು ಬಾಷ್ಪದ ರೂಪದಲ್ಲಿರುವ ರಾಸಾಯನಿಗಳು ಸೌರಮಂಡಲ ವ್ಯವಸ್ಥೆಯ ಒಳಗಿನ ರಾಸಾಯನಿಕ ಧಾತುಗಳ ಇತಿಹಾಸವನ್ನೂ ಅಡಗಿಸಿಕೊಂಡಿದೆ.

ಔಟ್‌ಪೋಸ್ಟ್‌ಗೆ ಚಿಂತನೆ

ಚಂದ್ರನಲ್ಲಿ ಹೋಗಿ ಮಾನವರೇ ಅನ್ವೇಷಣೆ ಮತ್ತು ಅಧ್ಯಯನ ನಡೆಸಲು ಅನುಕೂಲವಾಗಲು ದಕ್ಷಿಣ ಧ್ರುವವನ್ನು ಔಟ್‌ಪೋಸ್ಟ್‌ ಅಥವಾ ತಂಗುದಾಣವಾಗಿ ಬಳಸಿಕೊಳ್ಳಬಹುದು. ಈ ಉದ್ದೇಶ ಇಸ್ರೊ ಅಲ್ಲದೆ, ನಾಸಾ, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ, ಜಪಾನ್‌ನ ಕಗ್ಯುಯಾ ಮತ್ತು ಚೀನಾದ ಬಾಹ್ಯಾಕಾಶ ಸಂಸ್ಥೆಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಿವೆ. ಭಾರತವೂ ಸೇರಿ ಈ ಎಲ್ಲ ರಾಷ್ಟ್ರಗಳು ಚಂದ್ರನ ಕಕ್ಷೆಯಿಂದ ಉಪಗ್ರಹಗಳ ಮೂಲಕ ದಕ್ಷಿಣ ಧ್ರುವವನ್ನು ಅಧ್ಯಯನ ಮಾಡಿವೆ.

ದಕ್ಷಿಣ ದೃವದತ್ತ...

ಇಲ್ಲಿನ ಕುಳಿಗಳು ಕಾಯಂ ಆಗಿ ಕತ್ತಲಿನಲ್ಲೇ ಉಳಿದಿರುವುದರಿಂದ, ಅಲ್ಲಿ ಅಪಾರ ಪ್ರಮಾಣದಲ್ಲಿ ನೀರು ಮಂಜುಗಡ್ಡೆಯ ರೂಪದಲ್ಲಿ ಇರಬಹುದು ಎಂದು ಅಂದಾಜು ಮಾಡಲಾಗಿದೆ

ಕೋಟಿಗಟ್ಟಲೆ ವರ್ಷದಿಂದ ನೆರಳಿನಿಂದ ಕೂಡಿದ ಪ್ರದೇಶವಾದ ಕಾರಣ, ಅಲ್ಲಿ ಉಷ್ಣಾಂಶ ಕನಿಷ್ಠ ಮಟ್ಟದಲ್ಲಿದೆ

ದಕ್ಷಿಣಧ್ರುವದಲ್ಲಿ ಸಮತಟ್ಟಾದ ಪ್ರದೇಶವನ್ನು ಲ್ಯಾಂಡರ್‌ ತಾನೇ ಹುಡುಕಿಕೊಂಡು ಇಳಿಯಲಿದೆ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT