ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಬೃಹತ್ ಚಿತ್ರ ‘ಗಿಗಾಮೂನ್‌’

Published 26 ಮೇ 2023, 0:10 IST
Last Updated 26 ಮೇ 2023, 0:10 IST
ಅಕ್ಷರ ಗಾತ್ರ

ಪೂರ್ಣಚಂದ್ರನಾಗಲೀ, ಅರ್ಧಚಂದ್ರನಾಗಲಿ ಈವರೆಗೆ ಲಭ್ಯವಿರುವ ಚಿತ್ರಗಳಲ್ಲಿ ಚಂದ್ರ ಕಾಣುವುದು ಕಪ್ಪು–ಬಿಳುಪು ಬಣ್ಣದಲ್ಲಿ. ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಾದ ನಾಸಾ, ಇಸ್ರೊ ತೆಗೆದ ಕೆಲವು ಚಿತ್ರಗಳಲ್ಲಿ ಚಂದ್ರನ ಚಿತ್ರಗಳಲ್ಲಿ ಕಪ್ಪು–ಬಿಳುಪು ಹೊರತಾದ ಹಲವು ಕೆಲವು ಬಣ್ಣಗಳು ಗೋಚರಿಸುತ್ತವೆ. ಆದರೂ, ಆ ಬಣ್ಣಗಳು ಮತ್ತು ಚಂದ್ರನ ಮೇಲ್ಮೈನ ಚಿತ್ರಣ ಸ್ಪಷ್ಟವಾಗೇನೂ ಇಲ್ಲ. ಆದರೆ, ಚಂದ್ರನ ಮೇಲ್ಮೈನಲ್ಲಿ ಕಪ್ಪು–ಬಿಳುಪು ಹೊರತಾದ ಬಣ್ಣಗಳಿಂದ ಕೂಡಿರುವ ರಚನೆಗಳೂ ಇರುವುದನ್ನು ಸ್ಪಷ್ಟವಾಗಿ ತೋರಿಸುವ ಚಿತ್ರವನ್ನು (ಚಿತ್ರಗಳನ್ನು) ಸೆರೆಹಿಡಿಯಲಾಗಿದೆ. ಈ ಚಿತ್ರವನ್ನು ‘ಗಿಗಾಮೂನ್‌’ ಎಂದು ಕರೆಯಲಾಗಿದೆ.

ಅಮೆರಿಕದ ಖಗೋಳ ಛಾಯಾಗ್ರಾಹಕ ಆ್ಯಂಡ್ರೀವ್ ಮೆಕ್‌ಕಾರ್ತಿ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. ಇದನ್ನು ಬರಿಯ ಚಿತ್ರ ಎಂದರೆ ತಪ್ಪಾಗುತ್ತದೆ, ಬದಲಿಗೆ ಚಿತ್ರಗಳು ಎಂದರೆ ಸರಿಯಾದೀತು. ಏಕೆಂದರೆ, ಚಂದ್ರನ ಒಟ್ಟು 2.80 ಲಕ್ಷ ಚಿತ್ರಗಳನ್ನು ಸೆರೆಹಿಡಿದು ‘ಗಿಗಾಮೂನ್‌’ ಚಿತ್ರವನ್ನು ರೂಪಿಸಲಾಗಿದೆ. ಸಾಮಾನ್ಯವಾಗಿ ನಾವು ಸ್ಮಾರ್ಟ್‌ಫೋನ್‌ಗಳಲ್ಲಿ, ಡಿಎಸ್ಎಲ್‌ಆರ್‌ಗಳಲ್ಲಿ ಸೆರೆಹಿಡಿಯುವ ಚಿತ್ರಗಳ ಪಿಕ್ಸಲ್‌ ಗಾತ್ರವು, ಹತ್ತಾರು ಮೆಗಾಪಿಕ್ಸಲ್‌ಗಳಲ್ಲಿ ಇರುತ್ತವೆ. ಆದರೆ ಮೆಕ್‌ಕಾರ್ತಿ ಸೆರೆಹಿಡಿದಿರುವ ಈ ಚಿತ್ರದ ಪಿಕ್ಸಲ್‌ ಗಾತ್ರವು, ಗಿಗಾಪಿಕ್ಸಲ್‌ನದ್ದು. ಹೀಗಾಗಿಯೇ ಈ ಚಿತ್ರವನ್ನು ‘ಗಿಗಾಮೂನ್‌’ ಎಂದು ಕರೆಯಲಾಗಿದೆ.

2.80 ಲಕ್ಷ ಚಿತ್ರಗಳನ್ನು ಪ್ರತ್ಯೇಕವಾಗಿ ಸೆರೆಹಿಡಿಯಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪರಸ್ಪರ ಜೋಡಿಸುವಾಗ ತನ್ನ ಕಂಪ್ಯೂಟರ್‌ ಹಲವು ಬಾರಿ ಕ್ರ್ಯಾಶ್‌ ಆಗಿದೆ. ಆದರೆ, ಹಲವು ವರ್ಷಗಳ ಶ್ರಮ ಅಂತಿಮವಾಗಿ ಅದ್ಭುತವಾದ ಫಲ ನೀಡಿದೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಚಂದ್ರನ ಬೇರೆ ಬೇರೆ ಭಾಗಗಳಲ್ಲಿ ಇರುವ ಘನೀಕರಿಸಿದ ಮಿಥೇನ್‌ನ ಮೇಲ್ಮೈ ಈಚಿತ್ರದಲ್ಲಿ ಕಾಣುತ್ತದೆ. ಅದು ನೀಲಿ ಬಣ್ಣದಲ್ಲಿದೆ. ಅದೇ ರೀತಿ ಕೆಂಪು ಬಣ್ಣದ ಖನಿಜ ವಸ್ತುಗಳೂ ಕಾಣುತ್ತವೆ. ಚಂದ್ರನ ಕುಳಿಗಳು, ಕಣಿವೆ ಪ್ರದೇಶಗಳೂ ಈ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

‘ಈ ಚಿತ್ರವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲ. ಅತ್ಯಂತ ಶಕ್ತಿಯುತವಾದ ಕಂಪ್ಯೂಟರ್‌ಗಳಲ್ಲಿ ಡೌನ್‌ಲೋಡ್‌ ಮಾಡಿದರೂ, ಅದು ಕ್ರ್ಯಾಶ್‌ ಆಗುವ ಅಪಾಯವಿರುತ್ತದೆ’ ಎಂದು ಮೆಕ್‌ಕಾರ್ತಿ ತಮ್ಮ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಈ ಚಿತ್ರವನ್ನು ಒಳಗೊಂಡ ಸೀಮಿತ ಸಂಖ್ಯೆಯ ಕಲಾಕೃತಿಗಳನ್ನು ಮೆಕ್‌ಕಾರ್ತಿ ಈಚೆಗೆ ಮಾರಾಟಕ್ಕೆ ಇಟ್ಟಿದ್ದರು. ಆ ಎಲ್ಲಾ ಕಲಾಕೃತಿಗಳೂ ಮಾರಾಟವಾಗಿವೆ. ಆದರೆ, ಈ ‘ಗಿಗಾಮೂನ್‌’ನ ಕಂಪ್ರೆಸ್‌ ಮಾಡಲಾದ ಕಡತವನ್ನು ಅವರು ಟ್ವೀಟ್‌ ಮಾಡಿದ್ದಾರೆ. ಅದನ್ನು ಯಾರು ಬೇಕಾದರೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದಿದ್ದಾರೆ. 

ಆಧಾರ ಮತ್ತು ಚಿತ್ರಕೃಪೆ: ಕಾಸ್ಮಿಕ್‌ ಬ್ಯಾಕ್‌ಗ್ರೌಂಡ್‌.ಕಾಂ, ಆ್ಯಂಡ್ರೀವ್ ಮೆಕ್‌ಕಾರ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT