ಶಿಲೀಂಧ್ರಗಳು ವಿಶಿಷ್ಟ ಜೀವಿಗಳು. ಭೂಮಿಯಲ್ಲಿನ ಜೈವಿಕ ಭೂರಸಾಯನ ಚಕ್ರವನ್ನು ನಿರ್ವಹಿಸುವಲ್ಲಿ ಶಿಲೀಂಧ್ರಗಳ ಪಾತ್ರ ಮಹತ್ವದ್ದು. ಪರಿಸರದಲ್ಲಿ ಉತ್ಪಾದನೆಯಾಗುವ ಸಾವಯವ ವಸ್ತುಗಳನ್ನು ಅಂದರೆ ನೆಲದಲ್ಲಿರುವ ಎಲೆಯಾಗಲಿ ಅಥವಾ ಸತ್ತ ಪ್ರಾಣಿಯ ಕಳೇಬರವನ್ನಾಗಲಿ ಸಂಪೂರ್ಣವಾಗಿ ಜೀರ್ಣಿಸುವ ಕೆಲಸ ಶಿಲೀಂಧ್ರಗಳದ್ದು. ಇವುಗಳನ್ನು ಪೂತಿ ಜೀವಿಗಳು (Saprophytes), ಸಸ್ಯ-ಪ್ರಾಣಿಗಳಿಗೆ ರೋಗಕಾರಕಗಳು (Pathogens) ಮತ್ತು ಸಹಜೀವಿಗಳಾಗಿ (Symbionts) ವಿಂಗಡಿಸಲಾಗಿದೆ. ಮಾನವ ಶಿಲೀಂಧ್ರಗಳನ್ನು ಮದ್ಯ, ಬ್ರೆಡ್, ಚೀಸ್. ಕಿಣ್ವಗಳು, ಪ್ರತಿಜೀವಕ (Antibiotics) ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಿದ್ದಾನೆ. ಆದರೆ ಕೀಟಭಕ್ಷಕ ಶಿಲೀಂಧ್ರಗಳಿವೆ ಎಂದರೆ ಆಶ್ಯ್ಚರ್ಯವಾಗಬಹುದಲ್ಲವೇ?
ಕೀಟಭಕ್ಷಕ ಶಿಲೀಂಧ್ರಗಳು
ಈ ರೀತಿಯ ಶಿಲೀಂಧ್ರಗಳು ದುಂಬಿ, ಮಿಡತೆ, ಚಿಟ್ಟೆ, ಪತಂಗ, ಸೊಳ್ಳೆ, ಕಣಜ, ಜೇಡ ಮುಂತಾದ ಕೀಟಗಳ ದೇಹವನ್ನು ಪ್ರವೇಶಿಸಿ ಸಂತಾನಾಭಿವೃದ್ಧಿ ಮಾಡಿ ಅವುಗಳ ಸಾವಿಗೆ ಕಾರಣಾಗುವುವು. ಕೀಟಗಳ ಸಂಖ್ಯೆಯನ್ನು ಹತೋಟಿಯಲ್ಲಿಡಲು ಇದೊಂದು ಜೈವಿಕ ನಿಯಂತ್ರಣ ಕ್ರಮ. ಇಂತಹ ಶಿಲೀಂಧ್ರಗಳನ್ನು ಕೀಟರೋಗಕಾರಕ ಶಿಲೀಂಧ್ರಗಳೆಂದು (Entomopathogenic fungi) ವಿಗಂಡಿಸಲಾಗಿದೆ. ಈ ಶಿಲೀಂಧ್ರಗಳನ್ನು ಮಾನವ ಜೈವಿಕ ಕೀಟನಾಶಕವಾಗಿ (Biopesticide) ಕೃಷಿಯಲ್ಲಿ ಬಳಸಿಕೊಳ್ಳುತ್ತಿದ್ದಾನೆ. ಇದರಿಂದ ರಾಸಾಯನಿಕ ಕೀಟನಾಶಕಗಳಿಂದಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು.
ಈ ಗುಂಪಿಗೆ ಸೇರಿರುವ ಒಂದು ಸದಸ್ಯನೆಂದರೆ ಕಾರ್ಡಿಸೆಪ್ಸ್ (Cordyceps). ಹಿಮಾಲಯ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಭಾರತ, ನೇಪಾಳ, ಟಿಬೆಟ್, ಚೀನಾ, ಭೂತಾನ್ ಮುಂತಾದ ದೇಶಗಳಲ್ಲಿ ಕಂಡು ಬರುವ ಈ ವಿಶೇಷ ಅಣಬೆಯನ್ನು ಈಗ ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ. ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿಯೂ ಈ ಅಣಬೆಗಳು ಇರುವ ಬಗ್ಗೆ ಮಾಹಿತಿಯಿದೆ. ಗಾಳಿಯಿಂದ ಬರುವ ಕಾರ್ಡಿಸೆಪ್ಸ್ ಬೀಜಕಣಗಳು ತಮ್ಮ ಅತಿಥೇಯ ಕೀಟಗಳ ಮೇಲೆ ಬಿದ್ದು ಮೊಳಕೆಯೊಡೆಯುತ್ತವೆ. ಇಂತಹ ಸೋಂಕು ತಗುಲಿದ ಕೀಟಗಳು ಚಳಿಗಾಲದಲ್ಲಿ ಶಿಶಿರಸುಪ್ತಿ ಅಥವಾ ಚಳಿನಿದ್ದೆ (Hibernation) ಗೊಳಗಾಗುತ್ತವೆ. ಸೋಂಕಿತ ಕೀಟದ ದೇಹದಲ್ಲಿ ಶಿಲೀಂಧ್ರದ ಎಳೆಗಳು ಬೆಳೆದು ಕೀಟದ ದೇಹವನ್ನು ಮಮ್ಮಿಯಾಗಿಸುತ್ತವೆ (ಚಿತ್ರ 1 a). ನಂತರ 15 ರಿಂದ 20 ದಿನಗಳಲ್ಲಿ ಸೋಂಕಿತ ಕೀಟವನ್ನು ಸಂಪೂರ್ಣವಾಗಿ ಆವರಿಸುವ ಶಿಲೀಂಧ್ರವು ಅದರ ಮೆದುಳನ್ನು ನಿಯಂತ್ರಿಸುತ್ತದೆ. ನಡೆಯಲಾಗದ ಕೀಟಗಳ ದೇಹದಿಂದ ಅಣಬೆ ಹುಟ್ಟುತ್ತದೆ (ಚಿತ್ರ-1 b).
(ಮಾಹಿತಿ ಮೂಲ: ವಿವಿಧ ಸಂಶೋಧನಾ ಲೇಖನಗಳಿಂದ)
ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.