ಇನ್‌ಕ್ಯುಬೇಷನ್ ಸೆಂಟರ್ ಸ್ಥಾಪನೆ: ಇಸ್ರೊ, ಎನ್‌ಐಟಿ ರೂರ್ಕೆಲಾ ಒಪ್ಪಂದ

ಭುವನೇಶ್ವರ: ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಸಂಬಂಧ ‘ಸ್ಪೇಸ್ ಟೆಕ್ನಾಲಜಿ ಇನ್‌ಕ್ಯುಬೇಷನ್ ಸೆಂಟರ್’ (ಎಸ್–ಟಿಐಸಿ) ಸ್ಥಾಪನೆಗಾಗಿ ಇಸ್ರೊ ಹಾಗೂ ರೂರ್ಕೆಲಾದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ–ರೂರ್ಕೆಲಾ) ಒಪ್ಪಂದಕ್ಕೆ ಸಹಿ ಹಾಕಿವೆ.
‘ಎನ್‌ಐಟಿಯಲ್ಲಿ ಇನ್‌ಕ್ಯುಬೇಷನ್ ಸೆಂಟರ್ ಸ್ಥಾಪಿಸಲು ಇಸ್ರೊ ಸಮ್ಮತಿಸಿದೆ. ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಇದರಿಂದ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ’ ಎಂದು ಎನ್‌ಐಟಿ–ರೂರ್ಕೆಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಮುಂದೆ ಬರುವ ಉತ್ಸಾಹಿ ಯುವಕರಿಗೆ ಎನ್‌ಐಟಿಯಲ್ಲಿನ ಅತ್ಯಾಧುನಿಕ ಪ್ರಯೋಗಾಲಯಗಳು, ತಜ್ಞರ ಮಾರ್ಗದರ್ಶನ ಒದಗಿಸಲಾಗುವುದು’ ಎಂದೂ ಹೇಳಿದ್ದಾರೆ.
‘ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಒಳಗೊಂಡ ದೇಶದ ಪೂರ್ವಭಾಗದಲ್ಲಿ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನಾ ಚಟುವಟಿಕೆಗಳಿಗೆ ಎಸ್–ಟಿಐಸಿ ಸ್ಥಾಪನೆಯಿಂದ ಉತ್ತೇಜನ ಸಿಗಲಿದೆ’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಸಂಶೋಧಕರು, ತಜ್ಞರು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಉದ್ಯಮಗಳೊಂದಿಗೆ ಕೈಜೋಡಿಸಲು ಎಸ್–ಟಿಐಸಿ ವೇದಿಕೆ ಕಲ್ಪಿಸುವುದು. ಆ ಮೂಲಕ ಆತ್ಮನಿರ್ಭರ ಭಾರತ ಯೋಜನೆಯ ಯಶಸ್ಸಿಗೆ ಕೊಡುಗೆ ನೀಡಲು ಸಹ ಸಾಧ್ಯವಾಗಲಿದೆ’ ಎಂದೂ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.