ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಜ್ಜಿತಲೆ’ಯೂ ಡ್ರೋನಿನ ಅಲೆಯೂ

Published 20 ಮಾರ್ಚ್ 2024, 0:30 IST
Last Updated 20 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ನಿಸರ್ಗದಲ್ಲಿರುವ ವಿನ್ಯಾಸಗಳನ್ನು ಇನ್ನಷ್ಟು ಉಪಯುಕ್ತವಾಗಿ ಬಳಸುವ ಡ್ರೋನು ತಯಾರಾಗಲಿದೆಯೇ?

ಚಿಕ್ಕಂದಿನಲ್ಲಿ ‘ಹೆಲಿಕಾಪ್ಟರ್ ಬೀಜ’ಗಳನ್ನು ಅವು ಕೆಳಗೆ ಬೀಳುತ್ತಿದ್ದಂತೆಯೇ ಹಿಡಿಯುವ ಆಟ ಅಡಿರಬೇಕು. ಇಲ್ಲವೇ ಕೆಳಗೆ ಬಿದ್ದ ಈ ಬೀಜಗಳನ್ನು ಬೊಗಸೆಯಲ್ಲಿ ಎತ್ತಿ ಮೇಲೆ ಬಿಸಾಡಿ, ಯಾರ ಬೀಜ ನಿಧಾನವಾಗಿ ನೆಲಕ್ಕೆ ಬೀಳುತ್ತದೆ ಎಂದು ಸ್ಪರ್ಧೆಯನ್ನೂ ಮಾಡಿರಬಹುದು. ಅಥವಾ ಎಕ್ಕದ ಗಿಡದ ಗಿಣಿಮೂತಿ ಕಾಯಿ ಒಡೆದಾಗ ಅದರಿಂದ ಹೊಮ್ಮಿದ ‘ಅಜ್ಜಿತಲೆ’ ಬೀಜಗಳನ್ನು ಅಟ್ಟಿಸಿಕೊಂಡು ಓಡಿದ್ದೂ ನೆನಪಿರಬೇಕು.

ಕನ್ಡಡದಲ್ಲಿ ಹೆಲಿಕಾಪ್ಟರು ಬೀಜದ ಮರವನ್ನು ‘ಕಾಡುಬೆಂಡೆ’ ಎನ್ನುತ್ತಾರೆ. ಇದರಂತೆಯೇ ಗಿರಗಿರನೆ ತಿರುಗುತ್ತಾ ನೆಲಕ್ಕೆ ಬೀಳುವ ಹಲವಾರು ಬೀಜಗಳಿವೆ. ಜಕರಾಂಡಾ ಹೆಲಿಕಾಪ್ಟರು ಬೀಜವನ್ನಾದರೂ ‘ಕ್ಯಾಚ್’ ಹಿಡಿಯಬಹುದು. ಆದರೆ ಹತ್ತಿಯ ಎಳೆಗಳಂತಹ ರೋಮಗಳನ್ನು ಅಂಟಿಸಿಕೊಂಡ ಅಜ್ಜಿಯತಲೆಯ ಮಾತ್ರ ಕೈಗೆ ಸಿಕ್ಕದೆ, ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಗಾಳಿಯಲ್ಲಿ ಓಡಿ ತಪ್ಪಿಸಿಕೊಂಡು ಬಿಡುತ್ತಿತ್ತು. ಇದೀಗ ಇವೆರಡೂ ಬೀಜಗಳ ವಿಭಿನ್ನ ಹಾರಾಟದ ವಿಧಾನವನ್ನು ಅನುಸರಿಸಿ ಡ್ರೋನುಗಳನ್ನು ಸೃಷ್ಟಿಸಬಹುದಂತೆ. ಕೊರಿಯದ ಕ್ಯುಂಗ್ ಹೀ ವಿವಿಯ ಯೂನಿಸಿಯೂ ಪಾರ್ಕ್, ಅಮೆರಿಕದ ನಾರ್ತ್ವೆಸ್ಟರ್ನ್ ವಿವಿಯ ಜಾನ್ ರೋಜರ್ಸ್ ಮತ್ತು ಕಾರ್ನೆಲ್ ವಿವಿಯ ಸಂಗ್ವಾನ್ ಜೆ ಮೊದಲಾದವರ ಜೊತೆಗೂಡಿ ಹಾಗೆಂದು ಪತ್ತೆ ಮಾಡಿದ್ದಾರಂತೆ.


ಅಜ್ಜಿತಲೆ ಹಾಗೂ ಹೆಲಿಕಾಪ್ಟರು ಬೀಜಗಳ ಹಾರಾಟದ ವಿಧಾನಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ಎರಡೂ ಗಾಳಿಯಲ್ಲೇ ತೇಲುತ್ತವಾದರೂ, ಅವುಗಳು ತೇಲಲು ಕಾರಣವಾಗುವ ಬಲಗಳು ಬೇರೆ, ಬೇರೆ. ಉದಾಹರಣೆಗೆ, ಅಜ್ಜಿತಲೆಯ ಹಾರಾಟವನ್ನು ಪ್ಯಾರಾಶೂಟಿಗೆ ಹೋಲಿಸಬಹುದು. ಬೀಜ ತಟಕ್ಕನೆ ನೆಲಕ್ಕೆ ಬೀಳದಂತೆ ಕೂದಲುಗಳು ತಡೆಯುತ್ತವೆ. ಆದರೆ ಅದೇ ಸಮಯದಲ್ಲಿ ಅವು ಗಾಳಿ ಬೀಸಿದ ಕಡೆ, ಅಡ್ಡಾದಿಡ್ಡಿ, ದಿಕ್ಕುದೆಸೆಯಿಲ್ಲದೆ ಹಾರುತ್ತವೆ.

ಹೆಲಿಕಾಪ್ಟರು ಬೀಜ ಹಾಗಲ್ಲ. ಬೀಜಕ್ಕೆ ಅಂಟಿಕೊಂಡಂತೆ ಇರುವ ಎರಡು ರೆಕ್ಕೆಗಳು ಅದನ್ನು ತೇಲಿಸುತ್ತವೆ. ಮರದಿಂದ ಉದುರಿದ ಕೂಡಲೇ ನಿಧಾನವಾಗಿ, ಗಿರ್ರನೆ ತಿರುಗುತ್ತಾ, ಯಾವುದೋ ಗಾಳಿಯ ಸುಳಿಯಲ್ಲಿ ಮುಳುಗುತ್ತಿರುವ ಹಾಗೆ ನೇರವಾಗಿ ಕೆಳಗೆ ಬೀಳುತ್ತದೆ. ಸ್ವಲ್ಪ ಗಾಳಿ ಬೀಸಿದರೆ ಅಡ್ಡಡ್ಡಲಾಗಿ ಹಾಗೆಯೇ ತೇಲುತ್ತಾ ಸಾಗುತ್ತದೆ. ನೋಡಲು ರೋಚಕವಾಗಿರುವ ಈ ಬೀಜಗಳ ಹಾರಾಟವನ್ನು ಅಣಕಿಸುವ ಸಾಧನಗಳನ್ನು ತಯಾರಿಸಿದರೆ, ಕಡಿಮೆ ಶಕ್ತಿಯನ್ನು ವ್ಯಯಿಸಿ ಹೆಚ್ಚು ದೂರ ಹಾರಬಹುದು ಎನ್ನುವುದು ವಿಜ್ಞಾನಿ, ಇಂಜಿನಿಯರುಗಳ ಆಸೆ.

ಅದಕ್ಕಾಗಿ ಈ ಹಿಂದೆಯೂ ಅಜ್ಜಿತಲೆ, ಹೆಲಿಕಾಪ್ಟರು ಬೀಜಗಳಂತಹ ಬೀಜಗಳ ಹಾರಾಟದ ವಿಧಾನ, ಅವುಗಳಲ್ಲಿ ಒಳಗೊಳ್ಳುವ ಬಲ ಮೊದಲಾದವನ್ನು ಅಧ್ಯಯನ ಮಾಡಲಾಗಿತ್ತು. ಕೆಲವು ಸಾಧನಗಳನ್ನು ತಯಾರಿಸಲೂ ಪ್ರಯತ್ನಗಳು ನಡೆದಿದ್ದುವು. ಆದರೆ ಅವೆಲ್ಲವೂ ಒಂದೋ ಹೆಲಿಕಾಪ್ಟರಿನ ಬೀಜ, ಇಲ್ಲವೇ ಅಜ್ಜಿತಲೆಯ ಬೀಜದ ವಿನ್ಯಾಸವನ್ನು ಅನುಸರಿಸುತ್ತಿದ್ದುವು. ಎರಡೂ ಬೀಜಗಳ ಚಲನೆಯ ವಿಧಾನವನ್ನು ಒಳಗೊಂಡ ಒಂದೇ ಸಾಧನ ಇರಲಿಲ್ಲ. ಇದೀಗ ಅದುವೂ ಸಾಧ್ಯ ಎಂದು ಪಾರ್ಕ್ ಮತ್ತು ಸಂಗಡಿಗರ ತರ್ಕ.

ಅಂದ ಹಾಗೆ, ಇದಕ್ಕಾಗಿ ಇವರು ಮಾದರಿಯಾಗಿ ಇಟ್ಟುಕೊಂಡಿದ್ದು ನಮ್ಮೂರ ಹೆಲಿಕಾಪ್ಟರು ಬೀಜಗಳನ್ನಲ್ಲ. ಕೆನಡಾದ ರಾಷ್ಟ್ರಮರ ಎನ್ನಿಸಿದ ಮೇಪಲ್ ಮರದ ಬೀಜಗಳನ್ನು ಹಾಗೂ ಅಜ್ಜಿತಲೆಯ ಬದಲಿಗೆ ಅಮೆರಿಕ ಹಾಗೂ ಇತರೆ ಶೀತಪ್ರದೇಶಗಳಲ್ಲಿ ಬೆಳೆಯುವ ಡಾಂಡೆಲಿಯಾನ್ ಗಿಡದ ಬೀಜಗಳನ್ನು ಮಾದರಿಯನ್ನಾಗಿ ಇಟ್ಟುಕೊಂಡಿದ್ದಾರೆ. ಮೇಪಲ್ ಬೀಜಗಳು ಚಲಿಸುವಾಗ, ಅವುಗಳ ರೆಕ್ಕೆಯ ತುದಿಯಲ್ಲಿ ಇಬ್ಬದಿಯಲ್ಲಿಯೂ ಗಾಳಿಯ ಸುಳಿಗಳುಂಟಾಗುತ್ತವೆ. ಇವು ಅದರ ಹೆಚ್ಚು ಭಾರದ ಬೀಜವನ್ನು ಎತ್ತಬಲ್ಲವು. ಆದರೆ ಡಾಂಡೆಲಿಯಾನಿನ ಬೀಜಗಳು ಬಲು ಹಗುರ. ಏಕೆಂದರೆ ಅಜ್ಜಿತಲೆಯಂತಹ ನವಿರಾದ ಕೂದಲುಗಳು ಬೀಜದ ಮುಂಭಾಗದಲ್ಲಿ ಗಾಳಿಯ ಸುಳಿಯನ್ನು ಉಂಟು ಮಾಡುತ್ತವೆ. ಹೀಗಾಗಿ ಇವು ತಮ್ಮಂತಾವೇ ಚಲಿಸುವುದಕ್ಕಿಂತಲೂ ಹೆಚ್ಚಾಗಿ ಗಾಳಿ ಬೀಸಿದ ಕಡೆಗೆ ಹಾರುತ್ತವೆ.

ಪಾರ್ಕ್ ತಂಡ ಪ್ರಯೋಗಕ್ಕೆಂದು ಇಲೆಕ್ಟ್ರಾನಿಕ್ ಚಿಪ್‌ಗಳನ್ನು ತಯಾರಿಸಲು ಬಳಸುವ ಪಾಲಿಮರು ‘ಪಾಲಿಲ್ಯಾಕ್ಟಿಕ್ ಕೋಗ್ಲೈಕೋಲಿಕ್’ ಆಮ್ಲ ಎನ್ನುವ ರಾಸಾಯನಿಕದಿಂದ ಹೆಲಿಕಾಪ್ಟರು ಬೀಜದ ರೆಕ್ಕೆಯಂತಹ ವಿವಿಧ ವಿನ್ಯಾಸಗಳನ್ನು ರೂಪಿಸಿದ್ದಾರೆ. ಮಕ್ಕಳಾಟಿಕೆಯ ಚಕ್ರದಂತೆ ಇವುಗಳ ನಡುವ ಒಂದು ರಂಧ್ರವಿರುತ್ತದೆ. ಈ ವಿನ್ಯಾಸಗಳಲ್ಲಿ ಎರಡು ಬಗೆಯಿವೆ. ಮೊದಲನೆಯದು ರಂಧ್ರದಿಂದ ಎಲ್ಲ ಕಡೆಗೂ ಸೈಕಲ್ ಚಕ್ರದ ಸ್ಪೋಕ್ಸುಗಳಂತೆ ಚಾಚಿಕೊಂಡಿರುವ ರೆಕ್ಕೆಗಳು. ಇನ್ನೊಂದು ಟೇಬಲ್ ಫ್ಯಾನಿನ ರೆಕ್ಕೆಗಳಂತೆ ಅಥವಾ ಸ್ವಾಸ್ತಿಕದ ಭುಜಗಳಂತೆ ವಕ್ರವಾಗಿರುವ ರೆಕ್ಕೆಗಳಿರುವ ವಿನ್ಯಾಸ.

ಇವನ್ನು ಒಂದಿನ್ನೊಂದರ ಮೇಲೆ ಜೋಡಿಸಿಟ್ಟು ಬಂಧಿಸಿದ್ದಾರೆ. ಅನಂತರ ವಿವಿಧ ಪ್ರಯೋಗಗಳನ್ನು ಕೈಗೊಂಡಿದ್ದಾರೆ. ಮೇಲಿನಿಂದ ಇವನ್ನು ಜಾರಬಿಟ್ಟು ಅವುಗಳ ಹಾರಾಟ ಹೇಗಿರುತ್ತದೆ ಎಂದು ಗಮನಿಸಿದ್ದಾರೆ. ಈ ಹಾರಾಟವನ್ನು ನಿಯಂತ್ರಿಸಬಹುದೋ ಎಂದು ರೆಕ್ಕೆಗಳ ವಿನ್ಯಾಸವನ್ನು, ಅಂದರೆ ಸ್ಪೋಕ್ಸುಗಳ ಸಂಖ್ಯೆಯನ್ನು ಇಲ್ಲವೇ ಫ್ಯಾನಿನೆ ರೆಕ್ಕೆಗಳ ಬಾಗುವಿಕೆಯನ್ನು ಬದಲಿಸಿ ಪ್ರಯೋಗಗಳನ್ನು ನಡೆಸಿದ್ದಾರೆ. ಲೆಕ್ಕ ಹಾಕಿದ್ದಾರೆ. ಎಷ್ಟು ಬೈಸಿಕಲ್ ಚಕ್ರಗಳ ಜೊತೆಗೆ ಎಷ್ಟು ಫ್ಯಾನಿನ ರೆಕ್ಕೆಗಳನ್ನು ಜೋಡಿಸಬಹುದೆಂದೂ ಗಣಿಸಿದ್ದಾರೆ.

ಇವೆಲ್ಲ ಲೆಕ್ಕಾಚಾರದ ಪ್ರಕಾರ ಹಗುರವಾದ ಕೆಲವೇ ನ್ಯಾನೋಮೀಟರುಗಳಿಂದ, ಹಲವಾರು ಸೆಂಟಿಮೀಟರುಗಳಷ್ಟು ಅಗಲವಿರುವ ಹಾರುವ ಚಕ್ರಗಳನ್ನು ತಯಾರಿಸಬಹುದಂತೆ. ಇವಕ್ಕೆ ಬೀಜದಂತೆ ಭಾರವಾದ ಸೆನ್ಸಾರುಗಳನ್ನು ಅಥವಾ ಇತರೆ ಇಲೆಕ್ಟ್ರಾನಿಕ್ಕುಗಳನ್ನು ಜೋಡಿಸಬಹುದು. ಈ ಸೂಕ್ಷ್ಮ ರೆಕ್ಕೆಗಳಿಗೆ ಅತಿ ಹೊರೆಯಾಗದಷ್ಟು ಹಗುರವಾದ ಸೆನ್ಸಾರುಗಳು ಈಗಾಗಲೇ ಸಿದ್ಧವಿವೆ. ಹೀಗೆ ಇವನ್ನು ಪುಟ್ಟ ಗುಪ್ತಚರ ಡ್ರೋನುಗಳನ್ನಾಗಿ ಬಳಸಬಹುದು. ಇಲ್ಲವೇ ಗಾಳಿಯ ಚಲನೆಯನ್ನು ಅಧ್ಯಯನ ಮಾಡುವ ಸಾಧನಗಳಾದರೂ ಆಗುತ್ತವೆ ಎನ್ನುವುದು ಇವರ ತರ್ಕ.

ಈ ಬಗ್ಗೆ ಇವರು ನಡೆಸಿರುವ ಪ್ರಯೋಗಗಳ ವಿವರಗಳನ್ನು ಪಿಎನ್ಎಎಸ್ ಪತ್ರಿಕೆ ಈ ವಾರ ಆನ್‌ಲೈನ್‌ನಲ್ಲಿ ಮುಂದಾಗಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT