ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆಗಳ ಮೊಟ್ಟೆಗಳು ಒಣಗಿದ ಮೇಲೂ ಜೀವಂತವಾಗಿರುವುದು ಹೇಗೆ? ಗುಟ್ಟು ರಟ್ಟು

Published 7 ನವೆಂಬರ್ 2023, 23:42 IST
Last Updated 7 ನವೆಂಬರ್ 2023, 23:42 IST
ಅಕ್ಷರ ಗಾತ್ರ

‘ಮಳೆ ಬಂದು ಹೋದ ಮೇಲೆ ಮಲೇರಿಯಾ’ ಎನ್ನುವ ಕಾಲ ಹೋಯಿತು. ಈಗ ಚಿಕುನ್‌ಗುನ್ಯ, ಡೆಂಗಿ ಜ್ವರಗಳ ಕಾಲ. ಡೆಂಗಿ, ಚಿಕುನ್‌ಗುನ್ಯದಂತಹ ರೋಗಗಳು ಕಾಣಿಸಿಕೊಳ್ಳುವಷ್ಟು ಆಗಾಗ್ಗೆ ಮಲೇರಿಯಾ ಕಾಣಿಸಿಕೊಳ್ಳುವುದಿಲ್ಲವಲ್ಲ ಎಂಬುದೇ ಅಚ್ಚರಿ. ಇದಕ್ಕೆ ಆ ಸೊಳ್ಳೆಯ ಮೊಟ್ಟೆ ಎಷ್ಟೇ ಒಣಗಿದರೂ ಬದುಕಿ ಉಳಿಯುವುದೂ ಕಾರಣವಿರಬಹುದು. ಡೆಂಗಿ, ಚಿಕುನ್‌ಗುನ್ಯ ಹರಡುವ ಈಡಿಸ್‌ ಈಜಿಪ್ಟಿ ಸೊಳ್ಳೆಯ ಮೊಟ್ಟೆಗಳು ಒಣಗಿದರೂ ಸಾಯುವುದಿಲ್ಲವೇಕೆ ಎನ್ನುವ ಗುಟ್ಟನ್ನು ಬೆಂಗಳೂರಿನ ‘ಇನ್‌ಸ್ಟಿಟ್ಯೂಟ್‌ ಆಫ್‌ ಸ್ಟೆಮ್‌ ಸೆಲ್‌ ಸೈನ್ಸ್‌ ಅಂಡ್‌ ರೀಜನರೇಟಿವ್‌ ಮೆಡಿಸಿನ್‌’ (‘ಇನ್‌ಸ್ಟೆಮ್‌’) ಸಂಸ್ಥೆಯ ವಿಜ್ಞಾನಿಗಳು ರಟ್ಟು ಮಾಡಿದ್ದಾರೆ. ಸಂಸ್ಥೆಯ ವಿಜ್ಞಾನಿ ಸುನಿಲ್‌ ಲಕ್ಷ್ಮಣ್‌ ಮತ್ತು ಸಂಗಡಿಗರ ಪ್ರಕಾರ ನೀರಿಲ್ಲದೆ ಒಣಗಿದ ಈಡಿಸ್‌ ಸೊಳ್ಳೆಯ ಲಾರ್ವಾಗಳಲ್ಲಿ ಜೈವಿಕ ಚಟುವಟಿಕೆಗಳು ಕಡಿಮೆಯಾಗುವುದಲ್ಲದೆ, ಮುಂದೊಮ್ಮೆ ನೀರು ಸಿಕ್ಕಾಗ ಮರಳಿ ಚೇತರಿಸಿಕೊಳ್ಳಲು ಬೇಕಾದ ಶಕ್ತಿಯೂ ಸಂಗ್ರಹವಾಗುತ್ತದಂತೆ.

ನೀರಿಲ್ಲದೆ ಬರಗೆಟ್ಟ ದಿನಗಳಲ್ಲಿ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳು ಎಲ್ಲ ಜೈವಿಕ ಚಟುವಟಿಕೆಗಳನ್ನೂ ನಿಲ್ಲಿಸಿ, ಬೀಜಗಳಂತೆ ಆಗುತ್ತವೆ. ಸಸ್ಯಗಳ ಬೀಜಗಳೂ ಇಂತಹ ಸ್ಥಿತಿಯಲ್ಲಿಯೇ ಇರುವಂಥವು. ಆದರೆ ಪ್ರಾಣಿಗಳಲ್ಲಿ ಈ ಸಾಮರ್ಥ್ಯವಿಲ್ಲ. ಒಣಗಿದ ಕೀಟಗಳ ಮೊಟ್ಟೆಗಳಿಂದ ಮರಿಗಳು ಹುಟ್ಟುವುದಿಲ್ಲ. ‘ಸೊಳ್ಳೆಗಳಲ್ಲಿಯೂ ಮಲೇರಿಯಾ ಹರಡುವ ಅನಾಫಿಲೀಸ್‌ ಸೊಳ್ಳೆಗಳ ಮೊಟ್ಟೆಗಳು ಒಣಗಿದರೆ ಬದುಕಲಾರವು. ಆನೆಕಾಲುರೋಗವನ್ನು ಹರಡುವ ಕ್ಯೂಲೆಕ್ಸ್‌ ಸೊಳ್ಳೆಗಳ ಮೊಟ್ಟೆಗಳು ಸ್ವಲ್ಪ ಮಟ್ಟಿಗೆ ಹೀಗೆ ಒಣಗಿದರೂ ತಾಳಿಕೊಳ್ಳುತ್ತವೆ. ಆದರೆ ಈಡಿಸ್‌ ಈಜಿಪ್ಟಿಯ ಮೊಟ್ಟೆಗಳು ಅತಿಯಾಗಿ ಒಣಗಿದರೂ ಬದುಕುಳಿಯುತ್ತವೆ’ ಎಂದು, ಈ ಸಂಶೋಧನೆಗೆ ಪ್ರೇರಣೆ ಏನೆಂದು ಸುನಿಲ್‌ ಲಕ್ಷ್ಮಣ್‌ ವಿವರಿಸಿದ್ದಾರೆ.

ಈಡಿಸ್‌ ಈಜಿಪ್ಟಿಯ ಮೊಟ್ಟೆಗಳಿಗೆ ಒಣಗಿದರೂ ಬದುಕಿ ಉಳಿಯುವ ಸಾಮರ್ಥ್ಯ ಬಂದಿದ್ದು ಹೇಗೆ ಎನ್ನುವುದನ್ನು ಪರೀಕ್ಷಿಸಲು ಇವರ ತಂಡ ಹಲವಾರು ಪ್ರಯೋಗಗಳನ್ನು ಮಾಡಿದೆ. ಈಡಿಸ್‌ ಹಾಗೂ ಅನಾಫಿಲೀಸ್‌ ಸೊಳ್ಳೆಗಳನ್ನು ಸಾಕಿ, ಮೊಟ್ಟೆಗಳನ್ನು ಇಡಿಸಿ, ಆ ಮೊಟ್ಟೆಗಳನ್ನು ಎರಡು ತಂಡಗಳನ್ನಾಗಿ ಮಾಡಿದೆ. ಮೊದಲನೆಯ ತಂಡದ ಮೊಟ್ಟೆಗಳನ್ನು ಸಾಧಾರಣವಾಗಿ ಬೆಳೆಯುವಂತೆಯೇ ಬಿಟ್ಟು, ಎರಡನೆಯ ತಂಡದ ಮೊಟ್ಟೆಗಳನ್ನು ಸೋಸುವ ಕಾಗದದ ಮೇಲಿಟ್ಟು ವಿವಿಧ ಅವಧಿಗೆ ಒಣಗಿಸಿದ್ದಾರೆ. ಅನಂತರ ಮತ್ತೆ ಅವುಗಳು ಬೆಳೆಯುವುವೋ ಎಂದು ಪರೀಕ್ಷಿಸಿದ್ದಾರೆ. ಅನಾಫಿಲೀಸ್‌ ಮೊಟ್ಟೆಗಳು ಒಣಗಲು ಆರಂಭಿಸಿದ ಮೂರನೆಯ ದಿನದಷ್ಟು ಹೊತ್ತಿಗೇ ಸತ್ತಿದ್ದುವು. ಅವುಗಳಿಂದ ಯಾವುದೇ ಲಾರ್ವ ಹುಟ್ಟಲಿಲ್ಲ. ಆದರೆ ಈಡಿಸ್‌ ಸೊಳ್ಳೆಯ ಮೊಟ್ಟೆಗಳನ್ನು ಇಪ್ಪತ್ತೊಂದು ದಿನಗಳ ಕಾಲ ಒಣಗಿಸಿದ ಮೇಲೂ ಅವುಗಳಿಂದ ಲಾರ್ವ ಜನಿಸಿದುವು.

‘ಕೆಲವೇ ಮೊಟ್ಟೆಗಳಿದ್ದರೂ, ಒಣಗಿದ ಮೇಲೂ ತಿಂಗಳುಗಳ ಕಾಲ ಅವು ಬದುಕಿ ಉಳಿಯುತ್ತವೆ. ಒಮ್ಮೆ ತೇವವಾದರೆ ಚೇತರಿಸಿಕೊಳ್ಳುತ್ತವೆ’ ಎನ್ನುತ್ತಾರೆ, ಸುನೀಲ್‌ ಲಕ್ಷ್ಮಣ್‌. ಈಡಿಸ್‌ಗಳು ಕೂಡ ಇತರೆ ಸೊಳ್ಳೆಗಳಂತೆಯೇ ನೀರಿನಲ್ಲಿಯೇ ಮೊಟ್ಟೆಗಳನ್ನು ಇಡುತ್ತವೆ. ಆದರೆ ಭಾರತದಂತಹ ಸಮಶೀತೋಷ್ಣ ವಲಯದಲ್ಲಿರುವ ಪ್ರದೇಶಗಳಲ್ಲಿ ಮಳೆಗಾಲದಲ್ಲಿಯೂ ನಡು, ನಡುವೆ ಬೇಗೆಯ ದಿನಗಳು ಇರುವುದರಿಂದ ಪುಟ್ಟ ಹಳ್ಳಗಳಲ್ಲಿರುವ ನೀರು ಒಣಗಿ ಹೋಗುವುದುಂಟು. ಹೀಗಾಗಿ ಸಂಪೂರ್ಣ ಒಣಗಿದರೂ, ಸುಪ್ತ ಸ್ಥಿತಿಯಲ್ಲಿರುವ ಈ ಸ್ಥಿತಿ ಅವಕ್ಕೆ ಉಳಿವಿನ ಹಾದಿಯಾಗುತ್ತದೆ.

ಸೊಳ್ಳೆಗಳು ಮೊಟ್ಟೆಗಳನ್ನು ಇಟ್ಟ ನಂತರ ಎಷ್ಟು ಹೊತ್ತಿಗೆ ಈ ಸಾಮರ್ಥ್ಯ ಬೆಳೆಯಬಹುದು ಎಂದೂ ಲಕ್ಷ್ಮಣರ ತಂಡ ಪರೀಕ್ಷಿಸಿದೆ. ಹತ್ತು ಗಂಟೆಗಳ ನಂತರ ಒಣಗಲು ಆರಂಭಿಸಿದ ಸೊಳ್ಳೆಮೊಟ್ಟೆಗಳು ದೀರ್ಘ ಕಾಲ ಒಣಗಿದ್ದರೂ ಹೆಚ್ಚು ಲಾರ್ವಗಳನ್ನು ಹುಟ್ಟಿಸಿದುವು. ಅರ್ಥಾತ್‌, ಸೊಳ್ಳೆಯ ಲಾರ್ವದ ಬೆಳೆವಣಿಗೆಯ ಕೆಲವು ಹಂತಗಳನ್ನು ದಾಟಿದ ಮೇಲಷ್ಟೆ ಒಣಗಿಸಿದರೂ ಬದುಕುತ್ತದೆ ಎಂದಾಯಿತು.

ಸಾಧಾರಣವಾಗಿ ಬೆಳೆದ ಸೊಳ್ಳೆಯ ಲಾರ್ವ ಹಾಗೂ ಒಣಗಿಸಿ, ಮರಿ ಮಾಡಿದ ಮೊಟ್ಟೆಗಳ ಲಾರ್ವಗಳಲ್ಲಿ ಏನೇನು ಬದಲಾವಣೆಗಳಾಗುತ್ತವೆ ಎಂದೂ ಅಧ್ಯಯನ ಮಾಡಿದ್ದಾರೆ. ಲಾರ್ವಗಳನ್ನು ಅರೆದು ಅವುಗಳಲ್ಲಿ ವಿವಿಧ ಸಮಯಗಳಲ್ಲಿ ಇರುವ ಪ್ರೊಟೀನ್‌, ಕಾರ್ಬೊಹೈಡ್ರೇಟ್‌, ಕೊಬ್ಬಿನ ಈ ಅಣುಗಳನ್ನು ಪರಿಶೀಲಿಸಿದ್ದಾರೆ. ಎರಡರಲ್ಲಿಯೂ ಹಲವು ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಉದಾಹರಣೆಗೆ, ಪಾಲಿ–ಅಮೈನುಗಳೆನ್ನುವ ರಾಸಾಯನಿಕಗಳ ಪ್ರಮಾಣ ಒಣಗಿದ ಮೊಟ್ಟೆಗಳಿಂದ ಬೆಳೆದ ಲಾರ್ವಗಳಲ್ಲಿ ಹೆಚ್ಚು. ಜೊತೆಗೆ ಉಸಿರಾಟದಲ್ಲಿ ಪಾಲ್ಗೊಳ್ಳುವ ಕೆಲವು ಕಿಣ್ವಗಳ ಪ್ರಮಾಣದಲ್ಲಿಯೂ ವ್ಯತ್ಯಾಸಗಳನ್ನು ಕಂಡಿದ್ದಾರೆ. ಈ ಕಿಣ್ವಗಳು ವಿಶೇಷವಾಗಿ ಕೊಬ್ಬನ್ನು ಒಡೆಯುವ ಅಂಶಗಳು. ಕೊಬ್ಬಿನ ಅಂಶ ಕಡಿಮೆಯಾಗಿ ಪಾಲಿ–ಅಮೈನುಗಳ ಅಂಶ ಒಣಗಿದ ಮೊಟ್ಟೆಗಳಿಂದ ಹುಟ್ಟಿದ ಲಾರ್ವಗಳಲ್ಲಿ ಹೆಚ್ಚು. ಹೀಗೆ ಅರಗಿದ ಕೊಬ್ಬು ಮೊಟ್ಟೆ ಮರಳಿ ಚೇತರಿಸಿಕೊಂಡಾಗ ಶಕ್ತಿಯನ್ನು ತಕ್ಷಣವೇ ಒದಗಿಸಲು ನೆರವಾಗುತ್ತಿರಬಹುದು ಎಂಬುದು ಇವರ ಊಹೆ.

ಈ ಊಹೆ ಸರಿಯೋ ತಪ್ಪೋ ಎನ್ನುವುದನ್ನು ಪರೀಕ್ಷಿಸಲು ಪಾಲಿ–ಅಮೈನುಗಳ ತಯಾರಿಕೆಯಲ್ಲಿ ಪಾಲ್ಗೊಳ್ಳುವ ‘ಆರ್ನಿಥಿನ್‌ ಡಿಕಾರ್ಬಾಕ್ಸಿಲೇಸ್‌’ ಎನ್ನುವ ರಾಸಾಯನಿಕದ ಚಟುವಟಿಕೆಯನ್ನು ನಿರ್ಬಂಧಿಸಿಯೂ ಪರೀಕ್ಷೆ ಮಾಡಲಾಗಿದೆ. ಈ ಕಿಣ್ವದ ಚಟುವಟಿಕೆಯನ್ನು ತಗ್ಗಿಸುವ ‘ಡೈಫ್ಲೂರೋಮೀಥೈಲ್‌–ಆರ್ನಿಥಿನ್‌’ ಎನ್ನುವ ರಾಸಾಯನಿಕವನ್ನು ಹೆಣ್ಣುಸೊಳ್ಳೆಗಳಿಗೆ ನೀಡಿ, ಅವುಗಳಿಗೆ ಹುಟ್ಟಿದ ಮೊಟ್ಟೆಗಳನ್ನು ಪರೀಕ್ಷಿಸಿದ್ದಾರೆ. ಈ ಮೊಟ್ಟೆಗಳಲ್ಲಿ ಪಾಲಿ–ಅಮೈನುಗಳ ಪ್ರಮಾಣ ಕಡಿಮೆ ಇತ್ತಷ್ಟೆ ಅಲ್ಲ, ಅವುಗಳಲ್ಲಿ ಒಣಗಿಸಿದ ನಂತರ ಚೇತರಿಸಿಕೊಳ್ಳುವ ಮೊಟ್ಟೆಗಳ ಪ್ರಮಾಣ ಕಡಿಮೆ ಇತ್ತು. ಕೊಬ್ಬಿನ ಸಂಶ್ಲೇಷಣೆಯನ್ನು ತಡೆಗಟ್ಟುವ ಔಷಧವನ್ನು ಬಳಸಿದಾಗಲೂ, ಮೊಟ್ಟೆಗಳು ಮರಿಯಾಗುವ ಪ್ರಮಾಣ ಕಡಿಮೆಯಾಗಿತ್ತು.

‘ನಮ್ಮ ಅಧ್ಯಯನಗಳ ಪ್ರಕಾರ ಈಡಿಸ್‌ ಸೊಳ್ಳೆಯ ಮೊಟ್ಟೆಗಳು ಸಂಪೂರ್ಣ ಒಣಗಿಸಿದರೂ ಬದುಕಿ ಉಳಿಯುವುದರಲ್ಲಿ ಚಾಂಪಿಯನ್ನುಗಳು’ ಎನ್ನುತ್ತಾರೆ. ಲಕ್ಷ್ಮಣ್‌. ಆದರೆ ಈ ಸಾಮರ್ಥ್ಯ ಪೂರ್ಣ ಪ್ರಮಾಣದಲ್ಲಿ ತೋರ್ಪಡಬೇಕಾದರೆ, ಮೊಟ್ಟೆಗಳು ಸ್ವಲ್ಪ ಮಟ್ಟಿಗೆ ಬಲಿತ ಮೇಲೆ, ಅಥವಾ ಒಳಗೆ ಲಾರ್ವಾದ ಬೆಳೆವಣಿಗೆ ತುಸು ಆರಂಭವಾದ ಮೇಲೆ ಸಂಪೂರ್ಣ ಒಣಗಿದರೂ ಬದುಕಿ ಉಳಿಯುತ್ತವೆ, ಇಲ್ಲದಿದ್ದರೆ ಇಲ್ಲ. ಬಹುಶಃ ಒಣಗುವುದನ್ನು ತಾಳಿಕೊಳ್ಳಲು ಬೇಕಾದ ರಾಸಾಯನಿಕಗಳನ್ನು ತಯಾರಿಸಿಕೊಳ್ಳಲು ಈ ಸಮಯ ಬೇಕೇನೋ?’ ಎಂದು ಲಕ್ಷ್ಮಣ್‌ ತರ್ಕಿಸಿದ್ದಾರೆ.

‘ಮೊಟ್ಟೆಗಳು ಒಣಗಿದರೂ ಹೇಗೆ ಬದುಕಿ ಉಳಿಯುತ್ತವೆ ಎನ್ನುವ ಈ ಸಂಶೋಧನೆ ಜೀವಪ್ರಪಂಚದಲ್ಲಿ ಕೆಲವು ಜೀವಿಗಳಿಗಷ್ಟೆ ಈ ಸಾಮರ್ಥ್ಯ ಇದೆಯೇಕೆ ಎಂದು ತಿಳಿಸುತ್ತದೆ. ಜೊತೆಗೆ ಮಧ್ಯಪ್ರಾಚ್ಯದಲ್ಲಿ ಜನಿಸಿದ ಈಡಿಸ್‌ ಈಜಿಪ್ಟಿ ಈಗ ಪ್ರಪಂಚದ ಎಲ್ಲೆಡೆಯೂ ಹರಡಿಕೊಂಡಿರುವುದಕ್ಕೆ ಕಾರಣ ಹಾಗೂ ಸೊಳ್ಳೆಯ ಕಾಟವನ್ನು ತಡೆಯುವ ಉಪಾಯವನ್ನೂ ಸೂಚಿಸಬಹುದು’ ಎನ್ನುತ್ತಾರೆ, ಸುನೀಲ್‌ ಲಕ್ಷ್ಮಣ್‌. ಹೆಣ್ಣುಸೊಳ್ಳೆಗಳಲ್ಲಿ ಈ ಸಾಮರ್ಥ್ಯವನ್ನು ತಡೆಗಟ್ಟುವಂತಹ ಸ್ಪ್ರೇಗಳು, ಮುಲಾಮುಗಳನ್ನು ತಯಾರಿಸಿದರೆ, ಮೊಟ್ಟೆಗಳು ಮರಿಯಾಗದಂತೆಯೇ ತಡೆಯಬಹುದು ಎನ್ನುವುದು ಈ ವಿಜ್ಞಾನಿಗಳ ಆಶಯ.


ಈಡಿಸ್‌ ಈಜಿಪ್ಟಿ ಸೊಳ್ಳೆಯ ಗಂಡು ಮತ್ತು ಹೆಣ್ಣುಗಳು

(ಚಿತ್ರಕೃಪೆ: ಅಂಜನಾ ಪ್ರಸಾದ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT