ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಎಸ್‌ಎಲ್‌ವಿ ತಯಾರಿಕೆಗೆ 10ಕ್ಕೂ ಹೆಚ್ಚು ಕಂಪನಿಗಳ ಆಸಕ್ತಿ: ಸೋಮನಾಥ್‌

ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್‌ ಹೇಳಿಕೆ
Published : 20 ಆಗಸ್ಟ್ 2024, 13:22 IST
Last Updated : 20 ಆಗಸ್ಟ್ 2024, 13:22 IST
ಫಾಲೋ ಮಾಡಿ
Comments

ನವದೆಹಲಿ: ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ) ತಯಾರಿಕೆಯಲ್ಲಿ 10ಕ್ಕೂ ಹೆಚ್ಚು ಕಂಪನಿಗಳು ಮತ್ತು ಸಮೂಹ ಸಂಸ್ಥೆಗಳು ಆಸಕ್ತಿ ತೋರಿವೆ. ಇದರಲ್ಲಿ ಕೆಲವನ್ನು ತಂತ್ರಜ್ಞಾನ ವರ್ಗಾವಣೆಗೆ ಸಂಭಾವ್ಯ ಪಾಲುದಾರರನ್ನಾಗಿ ಪರಿಗಣಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್‌. ಸೋಮನಾಥ್‌ ಮಂಗಳವಾರ ತಿಳಿಸಿದ್ದಾರೆ.

ಕೆಳಮಟ್ಟದ ಭೂಕಕ್ಷೆಗಳಲ್ಲಿ ಸಣ್ಣ ಉಪಗ್ರಹಗಳನ್ನು ಇರಿಸಲು, ಸ್ವಂತವಾಗಿ ರಾಕೆಟ್‌ಗಳನ್ನು ನಿರ್ಮಿಸುವ ಸಲುವಾಗಿ ಆಯ್ದ ಉದ್ಯಮ ಪಾಲುದಾರರು ಮೊದಲು ಎರಡು ವರ್ಷಗಳ ಅವಧಿಯಲ್ಲಿ ಇಸ್ರೊ ನೆರವಿನಲ್ಲಿ ಎರಡು ಎಸ್‌ಎಸ್‌ಎಲ್‌ವಿಗಳನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂದು ಅವರು ಹೇಳಿದರು.

ಎಐಸಿಟಿಇ ಮತ್ತು ಇಸ್ರೊ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 100ಕ್ಕೂ ಹೆಚ್ಚು ಕಂಪನಿಗಳು/ ಸಮೂಹಸಂಸ್ಥೆಗಳು ಎಸ್‌ಎಸ್‌ಎಲ್‌ವಿಗಾಗಿ ತಂತ್ರಜ್ಞಾನ ವರ್ಗಾವಣೆಗೆ ಆಸಕ್ತಿ ತೋರಿಸಿವೆ ಎಂದು ಹೇಳಿದರು.

ತಂತ್ರಜ್ಞಾನ ವರ್ಗಾವಣೆ ಮತ್ತು ಅದನ್ನು ಹೇಗೆ ಮಾಡುವುದು ಹಾಗೂ ಇಸ್ರೊದಿಂದ ಅವರ ನಿರೀಕ್ಷೆಗಳೇನು ಎನ್ನುವ ಬಗ್ಗೆ ಉದ್ಯಮದ ಪ್ರಮುಖರೊಂದಿಗೆ ಇಸ್ರೊ ಒಂದು ದಿನದ ಸಂವಾದ ಕಾರ್ಯಕ್ರಮ ಕೂಡ ಆಯೋಜಿಸಿದೆ ಎಂದು ಸೋಮನಾಥ್‌ ಹೇಳಿದರು.

ಎಸ್‌ಎಸ್‌ಎಲ್‌ವಿ ತಂತ್ರಜ್ಞಾನದ ವರ್ಗಾವಣೆಗಾಗಿ ಕೆಲವು ಕಂಪನಿಗಳು/ಸಮೂಹಗಳು ಆರ್‌ಎಫ್‌ಪಿ (ಪ್ರಸ್ತಾವನೆಯ ಕೋರಿಕೆ) ದಾಖಲೆಗಳನ್ನು ಪಡೆದಿವೆ ಎಂದು ಅವರು ಹೇಳಿದರು.

ಎಸ್‌ಎಸ್‌ಎಲ್‌ವಿಗಾಗಿ ತಂತ್ರಜ್ಞಾನವನ್ನು ವರ್ಗಾಯಿಸಲು ಗುರುತಿಸಲಾದ ಕಂಪನಿ ಅಥವಾ ಸಮೂಹವು ಉಡಾವಣಾ ವಾಹನಗಳನ್ನು ತಯಾರಿಸಲು ತನ್ನದೇ ಆದ ಕ್ಯಾಂಪಸ್ ಅಭಿವೃದ್ಧಿಪಡಿಸುವವರೆಗೆ ಇಸ್ರೊದ ಸೌಲಭ್ಯಗಳಲ್ಲೇ ರಾಕೆಟ್ ನಿರ್ಮಾಣ ಮುಂದುವರಿಸಬಹುದಾಗಿದೆ. ಕಂಪನಿಗಳ ಉತ್ಪಾದನೆ, ಸೌಲಭ್ಯಗಳು ಮತ್ತು ಆರ್ಥಿಕ ಸಾಮರ್ಥ್ಯ ಸೇರಿದಂತೆ ವಿವಿಧ ಮಾನದಂಡಗಳನ್ನು ನಾವು ಗಮನಿಸುತ್ತೇವೆ. ತಂತ್ರಜ್ಞಾನ ವರ್ಗಾವಣೆ ಶುಲ್ಕವನ್ನು ಅವರು ಪಾವತಿಸಬೇಕು ಎಂದು ಅವರು ಹೇಳಿದರು.

‘ನಾವು ವರ್ಗಾವಣೆ ಮಾಡುತ್ತಿರುವುದು ಕೇವಲ ಉತ್ಪಾದನಾ ತಂತ್ರಜ್ಞಾನವಲ್ಲ. ಕೆಲಸಗಳನ್ನು ಹೇಗೆ ಮಾಡಬೇಕೆಂಬ ಜ್ಞಾನವನ್ನು ಸಹ ವರ್ಗಾಯಿಸುತ್ತಿದ್ದೇವೆ. ಅವರು ಇಸ್ರೊ ಒಳಗಡೆ ಬಂದು ನಮ್ಮೊಂದಿಗೆ ಕೆಲಸ ಮಾಡಬೇಕು. ತಂತ್ರಗಳನ್ನು ಕಲಿಯಬೇಕು. ನಾವು ಅವರಿಗೆ ರಾಕೆಟ್ ಅನ್ನು ಹೇಗೆ ನಿರ್ಮಿಸಬೇಕೆಂದು ಕಲಿಸುತ್ತೇವೆ’ ಎಂದು ಅವರು ಹೇಳಿದರು.

ಎಸ್‌ಎಸ್‌ಎಲ್‌ವಿಯ ಉಡಾವಣಾ ವಾಹನದ ಅಭಿವೃದ್ಧಿ ಪೂರ್ಣಗೊಂಡಿದೆ. ಬೃಹತ್ ಉತ್ಪಾದನೆಗಾಗಿ ರಾಕೆಟ್ ಅನ್ನು ಉದ್ಯಮಕ್ಕೆ ವರ್ಗಾಯಿಸಲು ಸಿದ್ಧವಾಗಿದೆ
–ಎಸ್‌. ಸೋಮನಾಥ್‌ ಇಸ್ರೊ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT