ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾ ಹೊಸ ಸಾಹಸ: ಮಂಗಳನ ಮೇಲೆ ಮೊದಲ ಹೆಲಿಕಾಪ್ಟರ್‌ ಹಾರಾಟ!

Last Updated 19 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಕೇಪ್ ಕೆನಾವೆರಲ್ (ಅಮೆರಿಕ): ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಮಂಗಳ ಗ್ರಹದಲ್ಲಿ ಸಣ್ಣ ಹೆಲಿಕಾಪ್ಟರ್‌ನ ಹಾರಾಟವನ್ನು ಸೋಮವಾರ ಯಶಸ್ವಿಯಾಗಿ ನಡೆಸಿದೆ. ಬೇರೆ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸಿದ ಮೊದಲ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ನಾಸಾ ಪಾತ್ರವಾಗಿದೆ.

1.8 ಕೆ.ಜಿ. ತೂಕದ ಈ ಹೆಲಿಕಾಪ್ಟರ್‌ಗೆ ಇಂಜೆನ್ಯುವಿಟಿ ಎಂದು ಹೆಸರಿಡಲಾಗಿದೆ. ನಾಸಾವು ಈಚೆಗೆ ಮಂಗಳ ಗ್ರಹಕ್ಕೆ ಕಳುಹಿಸಿದ್ದ ಪರ್ಸಿವಿಯರೆನ್ಸ್ ರೋವರ್‌ ನೌಕೆಯು, ಈ ಹೆಲಿಕಾಪ್ಟರ್‌ ಅನ್ನು ಹೊತ್ತೊಯ್ದಿತ್ತು. 15 ದಿನಗಳ ಹಿಂದೆಯೇ ಹೆಲಿಕಾಪ್ಟರ್‌ ಅನ್ನು ಕೆಳಗೆ ಇಳಿಸಿ, ಅದರಿಂದ 200 ಮೀಟರ್‌ ದೂರಕ್ಕೆ ರೋವರ್‌ ಸರಿದಿತ್ತು.

ಕ್ಯಾಲಿಫೋರ್ನಿಯಾದಲ್ಲಿ ಇರುವ ನಿಯಂತ್ರಣ ಕೇಂದ್ರದಿಂದ ಈ ಕಾರ್ಯಾಚರಣೆ ನಡೆಸಲಾಗಿತ್ತು. ಇದಕ್ಕಾಗಿ ನೂರು ಚದರ ಮೀಟರ್‌ನ ಜಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಪೂರ್ವನಿಗದಿಯಂತೆ ಏಪ್ರಿಲ್‌ ಮೊದಲ ವಾರದಲ್ಲೇ ಈ ಕಾರ್ಯಾಚರಣೆ ನಡೆಯಬೇಕಿತ್ತು. ಆದರೆ ಹೆಲಿಕಾಪ್ಟರ್‌ನ ರೆಕ್ಕೆಗಳು ಕೆಲಸ ಮಾಡದೇ ಇದ್ದುದ್ದರಿಂದ ಕಾರ್ಯಾಚರಣೆ ರದ್ದಾಗಿತ್ತು. ನಂತರ ತಂತ್ರಾಂಶದಲ್ಲಿನ ನ್ಯೂನತೆಯನ್ನು ವಿಜ್ಞಾನಿಗಳು ಸರಿಪಡಿಸಿದ್ದರು. ಹೀಗಾಗಿ ಸೋಮವಾರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ನಾಸಾ ಮಾಹಿತಿ ನೀಡಿದೆ.

ಪೂರ್ವ ನಿಗದಿಯಂತೆ ಹೆಲಿಕಾಪ್ಟರ್‌ 10 ಅಡಿ ಎತ್ತರದವರೆಗೂ ಏರಿದೆ. ಇದಕ್ಕೆ 5 ಸೆಕೆಂಡ್‌ ತೆಗೆದು ಕೊಂಡಿದೆ. ನಂತರ ಅದೇ ಎತ್ತರದಲ್ಲಿ 30 ಸೆಕೆಂಡ್ ಹಾರಾಟ ನಡೆಸಿದೆ. ನಂತರ 5 ಸೆಕೆಂಡ್‌ನಲ್ಲಿ ಕೆಳಕ್ಕೆ ಇಳಿದಿದೆ. ಒಟ್ಟು 40 ಸೆಕೆಂಡ್‌ಗಳ ಕಾರ್ಯಾಚರಣೆ ನಡೆಸಿದೆ. 1903ರಲ್ಲಿ ರೈಟ್ ಸೋದರರು ಹಾರಿಸಿದ್ದ ರೈಟ್‌ ಫ್ಲೈಯರ್‌ನ ರೆಕ್ಕೆಯ ತುಂಡನ್ನು ಈ ಹೆಲಿಕಾಪ್ಟರ್‌ನಲ್ಲಿ ಇಡಲಾಗಿತ್ತು. ಆ ತುಂಡನ್ನು ಹೊತ್ತು, ಹೆಲಿಕಾಪ್ಟರ್‌ ಮಂಗಳನ ವಾತಾವರಣದಲ್ಲಿ ಹಾರಾಟ ನಡೆಸಿದೆ.

ಕೇವಲ ಒಂದೂವರೆ ಅಡಿ ಉದ್ದವಿರುವ ಹೆಲಿಕಾಪ್ಟರ್‌ನ ದೇಹದಲ್ಲಿ ಬ್ಯಾಟರಿಗಳು ಮತ್ತು ಸೌರಫಲಕಗಳನ್ನು ಅಳವಡಿಸಲಾಗಿತ್ತು. 4 ಅಡಿ ಅಗಲದ ಎರಡು ಜತೆ ರೆಕ್ಕೆಗಳು ಇದ್ದವು.

ಮಂಗಳನ ವಾತಾವರಣವು ತೆಳುವಾಗಿರುವ ಕಾರಣ, ರೆಕ್ಕೆಗಳು ಅತ್ಯಂತ ವೇಗವಾಗಿ ತಿರುಗ ಬೇಕಿತ್ತು. ಅಲ್ಲದೆ, ಮಂಗಳನ ಮೇಲಿನ ಮಾರುತಗಳು ಮತ್ತು ಚಳಿಯನ್ನು ತಡೆದುಕೊಳ್ಳುವಷ್ಟು ಗಟ್ಟಿಯಾಗಿ ಇರಬೇಕಿತ್ತು. ಇಷ್ಟೇ ತೂಕದ ಹೆಲಿಕಾಪ್ಟರ್‌, ಭೂಮಿ ಯ ಮೇಲೆ ಹಾರಾಟ ನಡೆಸಲು ರೆಕ್ಕೆಗಳು ಪ್ರತಿ ನಿಮಿಷಕ್ಕೆ 500 ಬಾರಿ ತಿರುಗಿದರೆ ಸಾಕು. ಆದರೆ ಮಂಗಳ ಗ್ರಹದಲ್ಲಿ ರೆಕ್ಕೆಗಳು 2,500 ಬಾರಿ ತಿರುಗ ಬೇಕು. ಅಲ್ಲದೆ, 28.7 ಕೋಟಿ ಕಿ.ಮೀ. ದೂರದಿಂದ ಕಾರ್ಯಾಚರಣೆಯನ್ನು ನಿಯಂತ್ರಿಸಬೇಕಿತ್ತು. ಈ ಎಲ್ಲಾ ಸವಾಲುಗಳನ್ನು ಎದುರಿಸಿ, ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ನಾಸಾ ತಿಳಿಸಿದೆ.

ಹಾರಾಟದಿಂದ ಏನು ಪ್ರಯೋಜನ?

ಒಟ್ಟು ಐದು ಹಾರಾಟಗಳನ್ನು ಯೋಜಿಸಲಾಗಿದೆ. ಒಂದಕ್ಕಿಂತ ಒಂದು ಮಹತ್ವಾಕಾಂಕ್ಷೆಯದ್ದೇ ಆಗಿದೆ. ಈ ಪ್ರಯೋಗವು ಯಶಸ್ವಿಯಾದರೆ ಹಲವು ಪ್ರಯೋಜನಗಳಿವೆ. ಮಂಗಳನ ಮೇಲೆ ಡ್ರೋನ್‌ ಹಾರಾಟ ಸಾಧ್ಯವಾ ಗಬಹುದು. ಮಂಗಳನ ಪಕ್ಷಿನೋಟ, ವಸ್ತುಗಳ ಸಾಗಾಟ, ಗಗನಯಾನಿಗಳಿಗೆ ಮಾಹಿತಿ ರವಾನೆಯಂತಹ ಕೆಲಸ
ವನ್ನು ಈ ಡ್ರೋನ್‌ ಮಾಡಬಹುದು. ಮಂಗಳನ ಮೇಲಿನ ಹೆಲಿಕಾಪ್ಟರ್‌ ಹಾರಾಟವು ಭೂಮಿಯಲ್ಲಿ ಹಾರಾಟ ನಡೆಸುವ ಹೆಲಿಕಾಪ್ಟರ್‌ಗಳ ಸುಧಾರಣೆಗೂ ನೆರವು ನೀಡಲಿದೆ. ಹಿಮಾಲಯದಂತಹ ಎತ್ತರ ಪ್ರದೇಶದಲ್ಲಿ ಹಾರಾಟ ನಡೆಸುವ ಹೆಲಿಕಾಪ್ಟರ್‌ಗಳನ್ನು ಇನ್ನಷ್ಟು ಉತ್ತಮಪಡಿಸಲು ಸಹಾಯ ದೊರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT