ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಟೋಪಸ್‌ ರೋಬಾಟ್‌ ಕೆಲಸಕ್ಕೆ ಸಿದ್ಧ!

Published 23 ಏಪ್ರಿಲ್ 2024, 21:58 IST
Last Updated 23 ಏಪ್ರಿಲ್ 2024, 21:58 IST
ಅಕ್ಷರ ಗಾತ್ರ

ಆಕ್ಟೋಪಸ್‌ಗಳು ಪ್ರಕೃತಿಯ ಅದ್ಭುತ ಸೃಷ್ಟಿ ಎಂದೇ ಹೇಳಬಹುದು. ಅವುಗಳ ಕರಾಳಬಾಹುಗಳಿಗೆ ಸಿಲುಕಿದ ಜೀವಿಗಳು ಜೀವಸಹಿತ ಬದುಕಿ ಬರುವುದು ಅಸಾಧ್ಯವೇ ಸರಿ. ಆಕ್ಟೋಪಸ್‌ಗಳ ಬಾಹುಗಳಲ್ಲಿರುವ ವೃತ್ತಾಕಾರದ ಬಟ್ಟಲುಗಳಿಗೆ ನಿರ್ವಾತ ಸೃಷ್ಟಿಸಬಲ್ಲ ಸಾಮರ್ಥ್ಯವಿದ್ದು, ಅವು ಹಿಡಿದುಕೊಳ್ಳುವ ಪ್ರಾಣಿಯ ದೇಹದಿಂದ ರಕ್ತ, ಮಾಂಸ, ರಸಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತವೆ. ಈ ಗುಣವನ್ನು ಸ್ಫೂರ್ತಿಯಾಗಿ ಸ್ವೀಕರಿಸಿರುವ ವಿಜ್ಞಾನಿಗಳು ಈಗ ಕೈಗಾರಿಕೆಗಳಲ್ಲಿ ಬಳಕೆಯಾಗುವ ಆಕ್ಟೋಪಸ್‌ನ್ನೇ ಹೋಲುವ ರೋಬಾಟ್‌ಗಳನ್ನು ಕಂಡುಹಿಡಿದಿದ್ದಾರೆ!

ಅಮೆರಿಕದ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಟಿಪ್ಪಣಿ (‘ಪಿಎನ್‌ಎಎಸ್’) ನಿಯತಕಾಲಿಕೆಯಲ್ಲಿ ಇಂಗ್ಲೆಂಡ್‌ನ ಬ್ರಿಸ್ಟಲ್‌ ರೊಬಾಟಿಕ್ಸ್‌ ಲ್ಯಾಬೊರೇಟರಿಯ ತಂಡವು ಸಂಶೋಧನಾ ಲೇಖನವನ್ನು ಪ್ರಕಟಿಸಿದೆ. ಈ ಲೇಖನದ ಪ್ರಕಾರ, ‘ಆಕ್ಟೋಪಸ್‌ಗಳ ಬಾಹುಗಳಲ್ಲಿರುವ ಬಟ್ಟಲುಗಳಂತೆಯೇ ಕೃತಕವಾದ ಯಾಂತ್ರಿಕ ಬಟ್ಟಲುಗಳನ್ನು ಸೃಷ್ಟಿಸಿ ಅವುಗಳನ್ನು ರೋಬಾಟ್‌ಗಳಿಗೆ ಅಳವಡಿಸಬಹುದು. ಅವುಗಳ ಮೂಲಕ ಕೈಗಾರಿಕೆಗಳಲ್ಲಿ ವಿವಿಧ ಬಗೆಯ ಕ್ಲಿಷ್ಟಕರ ಕೆಲಸಗಳನ್ನು ಮಾಡಿಸಬಹುದು’.

‘ಜೈವಿಕ ನಕಲು’ ಎನ್ನುವುದು ಸಂಶೋಧನೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ನಿಸರ್ಗದಲ್ಲಿ ಈಗಾಗಲೇ ಇರುವ ಪ್ರಾಣಿ, ಪಕ್ಷಿ, ಕೀಟಗಳ ದೇಹರಚನೆ, ಗುಣಲಕ್ಷಣಗಳನ್ನು ನಕಲು ಮಾಡಿ ಸಂಶೋಧನೆಯನ್ನು ಮಾಡುವ ವಿಧಾನವಿದು. ಉದಾಹರಣೆಗೆ ‘ಏರೋಪ್ಲೇನ್‌ ಚಿಟ್ಟೆ’ಯನ್ನು ನೋಡಿಯೇ ಹೆಲಿ‍ಕಾಪ್ಟರ್‌ ಅನ್ನು ರಚಿಸಿರುವುದು. ಇದೀಗ ಆಕ್ಟೋಪಸ್‌ನ ಸರದಿ. ಕೈಗಾರಿಕೆಗಳಲ್ಲಿ ಈಗಾಗಲೇ ನಿರ್ವಾತ ಬಟ್ಟಲುಗಳ ಮೂಲಕ ದ್ರಾವಣಗಳನ್ನು ಹೀರುವ ವಿಧಾನ ಇದೆಯಾದರೂ, ಅದನ್ನು ಆಕ್ಟೋ‍ಪಸ್‌ನ ಮಾದರಿಯಲ್ಲಿ ರೋಬಾಟ್‌ ಒಂದಕ್ಕೆ ಅಳವಡಿಸಿ ಅದರ ಮೂಲಕ ಕೆಲಸ ಮಾಡಿಸುತ್ತಿರುವುದು ಇದೇ ಮೊದಲು ಎನ್ನಬಹುದು.

ಬ್ರಿಸ್ಟಲ್‌ ರೊಬಾಟಿಕ್ಸ್‌ ಲ್ಯಾಬೊರೇಟರಿಯ ಮುಖ್ಯ ಸಂಶೋಧಕ ಟಿಯಾಂಕಿ ಯೂ ಅವರು, ‘ರೋಬಾಟ್‌ಗಳಿಗೆ ಚಲನೆ ಅತಿ ಮುಖ್ಯವಾದ ಕೆಲಸ. ರೋಬಾಟ್‌ಗಳು ನಿಂತಲ್ಲೇ ಕಾರ್ಯನಿರ್ವಹಿಸುವುದು ಅವುಗಳ ಸಾಮರ್ಥ್ಯಕ್ಕೆ ವಿರುದ್ಧವಾದುದು ಎಂದೇ ವ್ಯಾಖ್ಯಾನಿಸಲ್ಪಡುತ್ತದೆ. ಕೈಗಾರಿಕೆಗಳಲ್ಲಿ ರೋಬಾಟ್‌ಗಳು ಚುರುಕಾಗಿ ಓಡಾಡುತ್ತ, ಮಾನವನು ಹೋಗಲಾರದ ಕಡೆ, ಅತಿ ವೇಗವಾಗಿ ಸಂಚರಿಸುತ್ತ, ಅತಿ ಬೇಗನೇ ಕೆಲಸ ಮಾಡಿ ಮುಗಿಸಬಲ್ಲ ಪಾತ್ರವನ್ನು ವಹಿಸಬೇಕು. ಉದಾಹರಣೆಗೆ, ಕಚ್ಚಾ ತೈಲದ ಬೃಹದಾಕಾರದ ಟ್ಯಾಂಕರ್‌ಗಳಿದ್ದಲ್ಲಿ ಅದರಿಂದ ತೈಲವನ್ನು ಹೀರಿ ಮತ್ತೊಂದೆಡಗೆ ಸಾಗಿಸಲು ಈಗ ಪಂಪ್‌ ಹಾಗೂ ಪೈಪ್‌ಲೈನ್‌ಗಳ ಬಳಕೆ ಇದೆ. ಅವುಗಳ ಅಳವಡಿಕೆ ಹಾಗೂ ನಿರ್ವಹಣೆ ಅತಿ ದುಬಾರಿ. ಇದರ ಬದಲು ಈ ಟ್ಯಾಂಕರುಗಳ ಒಳಗೇ ಹೋಗಿ ತೈಲವನ್ನು ಹೀರಿ, ನಿಗದಿತ ಜಾಗಕ್ಕೆ ತಲುಪಿ ಅಲ್ಲಿ ತೈಲವನ್ನು ತುಂಬುವ ಕೆಲಸವನ್ನು ಈ ಬಗೆಯ ರೋಬಾಟ್‌ಗಳಿಂದ ಮಾಡಿಸಬಹುದು’ ಎಂದು ವ್ಯಾಖ್ಯಾನಿಸಿದ್ದಾರೆ.

ಅಲ್ಲದೇ, ಆಕ್ಟೋಪಸ್‌ಗಳು ಬದುಕುವುದು ನೀರಿನ ಒಳಗೆ ತಾನೇ. ಅಂತೆಯೇ, ದ್ರಾವಣಗಳಿರುವ ಟ್ಯಾಂಕರ್‌ಗಳ ಒಳಗೇ ಶಾಶ್ವತವಾಗಿ ಆಕ್ಟೋಪಸ್‌ ಮಾದರಿಯ ರೋಬಾಟ್‌ಗಳನ್ನು ಇರಿಸಿ ಅಲ್ಲಿಯೇ ಅವು ಕಾರ್ಯ ನಿರ್ವಹಿಸುವಂತೆ ಮಾಡುವ ಅವಕಾಶವಿದೆ. ರೋಬಾಟ್‌ಗಳ ಕಾರ್ಯನಿರ್ವಹಣೆಗೆ ಬೇಕಾದ ವಿದ್ಯುತ್‌, ಬ್ಯಾಟರಿ ಇತ್ಯಾದಿ ನಿರ್ವಹಣೆ ಇರುತ್ತದೆ. ಆದರೆ, ಕಾಲಾಂತರದಲ್ಲಿ ಸುಸ್ಥಿರತೆ ಸಾಧಿಸಬಲ್ಲ, ತಮ್ಮನ್ನು ತಾವೇ ನಿರ್ವಹಿಸಿಕೊಳ್ಳಬಲ್ಲ ರೋಬಾಟ್‌ಗಳನ್ನೂ ನಿರ್ಮಿಸುವುದು ಸಾಧ್ಯ ಎಂದು ಟಿಯಾಂಕಿ ಅಭಿಪ್ರಾಯಪಟ್ಟಿದ್ದಾರೆ.

ತೈಲ ಸಂಸ್ಕರಣ ಘಟಕಗಳು, ಅಪಾಯಕಾರಿ ಅನಿಲ ಅಥವಾ ದ್ರಾವಣ ಸಂಸ್ಕರಣಾ ಘಟಕಗಳಲ್ಲಿ ಕಾರ್ಮಿಕರು ಬಹು ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೋಬಾಟ್‌ಗಳು ಈ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಯೋಜನಕಾರಿಯಾಗಲಿವೆ. ವಿಷಗಾಳಿ, ವಿಷ ನೀರು ಮುಂತಾದ ಅಪಾಯಕಾರಿ ವಾತಾವರಣದಲ್ಲಿ ರೋಬಾಟ್‌ಗಳು ಯಾವುದೇ ರೀತಿಯ ತೊಂದರೆಗೆ ಒಳಗಾಗದಂತೆ ಕಾರ್ಯನಿರ್ವಹಿಸುತ್ತದೆ. ಕಾರ್ಮಿಕರು ಈ ಯಂತ್ರಗಳನ್ನು ನಿರ್ವಹಣೆ ಅಥವಾ ಉಸ್ತುವಾರಿ ಮಾಡಿದರಷ್ಟೇ ಸಾಕು ಎಂದು ವಿಶ್ಲೇಷಿಸಿದ್ದಾರೆ.

ಇದು ಕೇವಲ ದ್ರಾವಣ ನಿರ್ವಹಣೆಗಷ್ಟೇ ಸಹಾಯಕಾರಿಯಲ್ಲ. ಅತಿ ತೂಕದ ವಸ್ತುಗಳನ್ನು ಎತ್ತಬಲ್ಲ ಕಾರ್ಯಾಚರಣೆಗಳಲ್ಲೂ ಇದು ಕೆಲಸಕ್ಕೆ ಬರಲಿದೆ. ನಿರ್ವಾತ ಬಟ್ಟಲುಗಳನ್ನು ಬಳಸಿಕೊಂಡು, ಭಾರದ ವಸ್ತುಗಳನ್ನು ಎತ್ತುವ ತಂತ್ರಜ್ಞಾನವನ್ನು ಈಗಾಗಲೇ ಬಳಕೆಯಲ್ಲಿದೆ. ಆದರೆ, ಇಲ್ಲಿನ ಆಕ್ಟೋಪಸ್‌ ರೋಬಾಟ್‌ನ ಬಾಹುಗಳಲ್ಲಿ ಬಹುಸಂಖ್ಯೆಯಲ್ಲಿ ಈ ನಿರ್ವಾತ ಬಟ್ಟಲುಗಳು ಇರುವ ಕಾರಣ ತೂಕ ಎತ್ತುವ ಸಾಮರ್ಥ್ಯ ಹೆಚ್ಚುತ್ತದೆ. ಅಲ್ಲದೇ, ಆಕಸ್ಮಿಕವಾಗಿ ಅವಘಡಗಳು ಆಗುವ ಸಾಧ್ಯತೆಗಳೂ ಕಡಿಮೆ ಇರಲಿವೆ ಎಂದು ಈ ರೋಬಾಟ್‌ನ ವಿಶೇಷಣವನ್ನು ಸಂಶೋಧಕರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT