ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕ್ರಾಂತಿಕಾರಿ ಸಂಶೋಧನೆ: ಸಾವಿನ ಬಳಿಕವೂ ಅಂಗದಾನ

Last Updated 30 ಆಗಸ್ಟ್ 2022, 22:15 IST
ಅಕ್ಷರ ಗಾತ್ರ

ಅಮೆರಿಕದ ಯೇಲ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ವ್ಯಕ್ತಿಯ ಸಾವಿನ ಬಳಿಕವೂ ಅಂಗಗಳನ್ನು ಜೀವಂತವಾಗಿಡುವ ವಿಧಾನವನ್ನು ಕಂಡುಹಿಡಿದಿದ್ದಾರೆ. ಈ ವಿಧಾನ ಬಳಕೆಗೆ ಬಂದರೆ, ಕನಿಷ್ಠ ನಾಲ್ಕು ಗಂಟೆಗಳ ಕಾಲ ತೊಡಕಿಲ್ಲದೇ ಅಂಗ ಕಸಿ ಮಾಡುವ ಅವಕಾಶ ಸಿಗುತ್ತದೆ.

ಅಂಗಾಂಗ ಕಸಿಗೆ ವೈದ್ಯಕೀಯ ಲೋಕದಲ್ಲಿ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ವೈಜ್ಞಾನಿಕವಾಗಿ ಅದಕ್ಕೆ ಮನ್ನಣೆ ದೊರೆತಿರುವುದು ಈ ಕೆಲವು ದಶಕಗಳಲ್ಲಿ ಮಾತ್ರ. ವ್ಯಕ್ತಿಯೊಬ್ಬ ಅಪಘಾತಕ್ಕೆ ಈಡಾಗಿ ಮಿದುಳು ನಿಷ್ಕ್ರಿಯಗೊಂಡಲ್ಲಿ, ಅಂಗಗಳನ್ನು ಬದುಕಿರುವಾಗಲೇ ದೇಹದಿಂದ ತೆಗೆದು, ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲು ಈಗ ಭಾರತದಲ್ಲಿ ಕಾನೂನಿನಲ್ಲಿ ಅವಕಾಶವಿದೆ. ಆದರೆ, ವ್ಯಕ್ತಿ ಸತ್ತ ಬಳಿಕ ಅಂಗಗಳನ್ನು ತೆಗೆದು ಕಸಿ ಮಾಡುವುದು ಸಾಧ್ಯವಿಲ್ಲ. ಕಣ್ಣನ್ನು ಮಾತ್ರ ಈ ರೀತಿ ಕಸಿ ಮಾಡಲಾಗುತ್ತಿದೆ.

ಆದರೆ, ಅಮೆರಿಕದ ಯೇಲ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೊಸ ಕ್ರಾಂತಿಕಾರಿ ಸಂಶೋಧನೆಯೊಂದನ್ನು ಮಾಡಿದ್ದಾರೆ. ಸಾವಿನ ಬಳಿಕ ಕಣ್ಣನ್ನು ಕಸಿ ಮಾಡುವ ಹಿಂದಿನ ಜೀವವಿಜ್ಞಾನವನ್ನು ಅಧ್ಯಯನ ಮಾಡಿ, ದೇಹದ ಇತರ ಭಾಗಗಳನ್ನೂ ಕಸಿ ಮಾಡುವ ವಿಧಾನವನ್ನು ಕಂಡುಹಿಡಿದಿದ್ದಾರೆ. ಈ ವಿಧಾನವನ್ನು ಅನುಸರಿಸಿದರೆ, ವ್ಯಕ್ತಿ ನಿಧನವಾದ ನಾಲ್ಕು ಗಂಟೆಗಳವರೆಗೂ ಅಂಗಗಳನ್ನು ತೊಡಕಿಲ್ಲದೇ ಅಗತ್ಯವುಳ್ಳ ವ್ಯಕ್ತಿಗಳಿಗೆ ಕಸಿ ಮಾಡುವ ಅವಕಾಶ ಸಿಗುತ್ತದೆ.

ವ್ಯಕ್ತಿಯ ನಿಧನದ ಬಳಿಕ ಹೃದಯ ಬಡಿತ ನಿಲ್ಲುವ ಕಾರಣ, ದೇಹದ ಜೀವಕೋಶಗಳಿಗೆ ರಕ್ತದೊಂದಿಗೆ ಆಮ್ಲಜನಕ ಪೂರೈಕೆಯಾಗುವುದು ಸ್ಥಗಿತಗೊಂಡು ಅಂಗಗಳು ಸಾಯುತ್ತವೆ. ಆದರೆ, ಕೌತುಕದ ಸಂಗತಿಯೆಂದರೆ ಹೃದಯಬಡಿತ ನಿಂತ ಕ್ಷಣವೇ ದೇಹದ ಎಲ್ಲ ಅಂಗಾಂಗಳು ಸಾಯುವುದಿಲ್ಲ. ಅದಕ್ಕೆ ಹಲವು ನಿಮಿಷಗಳು ಬೇಕಾಗಬಹುದು. ಆ ಕೆಲವು ಅಂತಿಮ ನಿಮಿಷಗಳ ಕಾಲ ಜೀವಕೋಶಗಳು ಇನ್ನೂ ಬದುಕಿರುತ್ತವೆ. ಬಳಿಕ ದೇಹ ನಿಧಾನವಾಗಿ ಕೊಳೆಯಲು ಶುರುವಾಗುತ್ತದೆ. ಈ ವಿಚಾರ ಹೊಸತೇನಲ್ಲ. ಎಲ್ಲ ಜೀವವಿಜ್ಞಾನಿಗಳಿಗೂ ತಿಳಿದಿರುವ ಸಂಗತಿಯೇ. ಆದರೆ, ಯೇಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಕೊಳೆಯುವ ವೇಗವನ್ನು ಕಡಿಮೆ ಮಾಡುವ ವಿಧಾನವನ್ನು ಕಂಡುಹಿಡಿದಿದ್ದಾರೆ. ಈ ವಿಧಾನದಿಂದ ವ್ಯಕ್ತಿಯ ಸಾವಿನ ಬಳಿಕ ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ವೇಗ ಕಡಿಮೆಯಾಗುತ್ತದೆ. ಜೊತೆಗೆ, ಆಮ್ಲಜನಕದ ಪ್ರಮಾಣವೂ ಅಗತ್ಯ ಪ್ರಮಾಣದಲ್ಲೇ ಇರುತ್ತದೆ. ಹಾಗಾಗಿ, ಅಂಗಗಳು ಕೂಡಲೇ ಸಾಯದೇ ಜೀವಂತವಾಗಿರುತ್ತವೆ.

ಏನಿದು ಸಂಶೋಧನೆ?

ಯೇಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡೇವಿಡ್ ಆಂಡ್ರಿಜೆವಿಕ್, ನೆನಾಡ್ ಸೆಸ್ಟನ್, ಹಾರ್ವಿ, ಕೇಟ್ ಕುಷಿಂಗ್, ಸಾನಿಮಿರ್ ವರ್ಸಿಜಾ, ಟಾರಸ್ ಲಿಸ್ವಿ ಮತ್ತು ಶೂಪೈ ಜಾಂಗ್ ಅವರನ್ನೊಳಗೊಂಡ ತಂಡವು ‘ಬ್ರೈನ್ಎಕ್ಸ್‌’ ಹಾಗೂ ‘ಆರ್ಗನ್‌ಎಕ್ಸ್‌’ ಎಂಬ ದ್ರಾವಣಗಳನ್ನು ಸಂಶೋಧಿಸಿದ್ದಾರೆ. ವ್ಯಕ್ತಿ ಸಾಯುವ ಮುನ್ನ ‘ಬ್ರೈನ್ಎಕ್ಸ್‌’ ದ್ರಾವಣವನ್ನು ಮಿದುಳಿಗೂ ‘ಆರ್ಗನ್‌ಎಕ್ಸ್‌’ ದ್ರಾವಣವನ್ನೂ ಹೃದಯಕ್ಕೂ ಇಂಜೆಕ್ಷನ್‌ ಮೂಲಕ ಸೇರಿಸುತ್ತಾರೆ. ಈ ದ್ರಾವಣಗಳು ದೇಹದ ಒಳಗೆ ಒಮ್ಮೆ ಹೋದ ಬಳಿಕ, ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ದೇಹದಿಂದ ಅಂಗಗಳನ್ನು ಬದುಕಿರುವಂತೆಯೇ ತೆಗೆಯುವ ಅಗತ್ಯವಿಲ್ಲ. ವ್ಯಕ್ತಿಯ ಸಾವಿನ ಬಳಿಕ ಸುಮಾರು ನಾಲ್ಕು ಗಂಟೆಗಳ ಕಾಲ ಅಂಗಗಳು ಜೀವಂತವಾಗಿರುತ್ತವೆ.

ಅನುಕೂಲಗಳೇನು?

ಅಂಗಾಂಗ ಕಸಿಯ ಪ್ರಮುಖ ಸಮಸ್ಯೆಯೇ ಸಮಯ ಹಾಗೂ ಅಂಗಗಳ ಸಾಗಣೆ. ನೀವು ಗಮನಿಸಿರಬಹುದು, ‘ಹೃದಯ, ಇತರ ಅಂಗಗಳನ್ನು ವಿಮಾನದಲ್ಲಿ ತಂದು ಕಸಿ ಮಾಡಲಾಯಿತು’, ‘ಜೀರೋ ಟ್ರಾಫಿಕ್ ಮೂಲಕ ಅಂಗಗಳನ್ನು ಸಾಗಿಸಲಾಯಿತು’ – ಎಂಬಿತ್ಯಾದಿ ಸುದ್ದಿಗಳು ಆಗಾಗ ಬರುತ್ತಿರುತ್ತವೆ. ಈ ರೀತಿಯ ಕ್ರಮಕ್ಕೆ ಮುಖ್ಯ ಕಾರಣ, ಅಂಗಗಳು ಸಂಪೂರ್ಣ ಸಾಯುವುದರೊಳಗೆ ಕಸಿ ಮಾಡಬೇಕು ಎನ್ನುವುದು. ಈ ಹೊಸ ಶೋಧದಿಂದ ಈ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ. ಅಂಗಗಳನ್ನು ದೇಹದಿಂದ ಹೊರತೆಗೆಯದೇ, ಸಂಪೂರ್ಣ ದೇಹವನ್ನೇ ಸಾಗಿಸಬಹುದು ಅಥವಾ ಅಂಗಗಳನ್ನು ಸಾವಧಾನವಾಗಿ ಸಾಗಿಸಿ, ನಾಲ್ಕು ಗಂಟೆಗಳ ಸಮಯದಲ್ಲಿ ಕಸಿ ಮಾಡಬಹುದು.

‘ನಾಲ್ಕು ಗಂಟೆಗಳ ಸಮಯ ಸಿಗುವ ಕಾರಣ, ಇತರ ಸಿದ್ಧತೆಗಳನ್ನು ಆಸ್ಪತ್ರೆಗಳಲ್ಲಿ ಗಡಿಬಿಡಿಯಲ್ಲದೇ ಸಿದ್ಧಪಡಿಸಿಕೊಳ್ಳಬಹುದು. ಜೊತೆಗೆ, ಸಮಯ ಉಳಿಯುವ ಕಾರಣ, ಅಂಗ ಕಸಿ ಸಮಯದಲ್ಲಿ ಮಾಡಲಾಗುವ ಅತಿ ಕ್ಲಿಷ್ಟಕರ ‘ಇಮ್ಯುನಿಟಿ ಕಾಂಪ್ರಮೈಸ್’ (ಹೊಸ ಅಂಗವನ್ನು ತಿರಸ್ಕರಿಸದಂತೆ ಕೃತಕವಾಗಿ ರೋಗ ನಿರೋಧಕ ಶಕ್ತಿಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವುದು), ರಕ್ತಸಂಗ್ರಹ ಇತ್ಯಾದಿ ಕಾರ್ಯಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು’ ಎಂದು ಡೇವಿಡ್ ಆಂಡ್ರಿಜೆವಿಕ್ ವಿಶ್ಲೇಷಿಸಿದ್ದಾರೆ.

‘ಈಗಾಗಲೇ ಹಂದಿಗಳ ಮೇಲೆ ಈ ವಿಧಾನದ ಪ್ರಯೋಗ ಯಶಸ್ವಿಯಾಗಿ ಆಗಿದೆ. ಅಂಗ ಕಸಿಯನ್ನೂ ಮಾಡಲಾಗಿದೆ. ಅತಿ ಶೀಘ್ರವೇ ಈ ವಿಧಾನ ಮಾನವ ಬಳಕೆಗೆ ಲಭ್ಯವಾಗಲಿದೆ’ ಎಂದು ಡೇವಿಡ್ ಹೇಳಿದ್ದಾರೆ.

ನೇತ್ರದಾನದ ಸಮಯವೂ ವಿಸ್ತರಣೆ: ವ್ಯಕ್ತಿಯ ಸಾವಿನ ಬಳಿಕ ಆರು ಗಂಟೆಗಳ ಒಳಗೆ ನೇತ್ರದಾನ ಮಾಡಬೇಕು ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ಆದರೆ, ಈಗ ಸಂಶೋಧನೆಯಿಂದ ಗರಿಷ್ಠ 10 ಗಂಟೆಗಳವರೆಗೆ ನೇತ್ರದಾನ ಮಾಡಲು ಅವಕಾಶ ಸಿಗುತ್ತದೆ. ಇದರಿಂದ ಲಕ್ಷಾಂತರ ಮಂದಿಗೆ ದೃಷ್ಟಿ ದೊರೆಯುವ ಅವಕಾಶ ಸಿಕ್ಕಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT