ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬ್ಯಾಟರಿ ಕಾವು ಇನ್ನಷ್ಟು ಹೆಚ್ಚು

Last Updated 5 ನವೆಂಬರ್ 2020, 4:37 IST
ಅಕ್ಷರ ಗಾತ್ರ

ಮೊಬೈಲ್‌ನಿಂದ ಕಾರಿನವರೆಗೂ ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ವ್ಯಾಪಕವಾಗಿರುವುದರಿಂದ 2028ರ ಹೊತ್ತಿಗೆ 1,956 ಗಿಗಾ ವ್ಯಾಟ್‌ನಷ್ಟು ಬ್ಯಾಟರಿಗಳು ಇಡೀ ಜಗತ್ತಿಗೆ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಒಂದೆಡೆ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ಕಚ್ಚಾ ಸಾಮಗ್ರಿಗಳ ಬೆಲೆಯೂ ಏರುಗತಿಯಲ್ಲಿರುವುದರಿಂದ ಇದರ ಬಿಸಿ ನೇರವಾಗಿ ಗ್ರಾಹಕರಿಗೆ ತಗುಲುತ್ತಿದೆ.

ಬ್ಯಾಟರಿ ಆಧಾರಿತ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾಗಿರುವುದು ಒಂದೆಡೆಯಾದರೆ, ಎಲೆಕ್ಟ್ರಾನಿಕ್, ಮೆಕ್ಯಾನಿಕಲ್ ಹಾಗೂ ಇನ್ನಿತರ ಸಾಧನಗಳಲ್ಲೂ ಬ್ಯಾಟರಿಗಳ ಬಳಕೆ ಗಣನೀಯವಾಗಿ ಏರಿಕೆಯಾಗಿರುವುದು ಈ ಬೇಡಿಕೆಗಿರುವ ಕಾರಣಗಳು. ಆದರೂ ಗಿಗಾ ವ್ಯಾಟ್ ಸಾಮರ್ಥ್ಯ ಹೊಂದಿರುವ ಜಗತ್ತಿನ ಕೆಲವೇ ಕಂಪನಿಗಳ ಹಿಡಿತದಲ್ಲಿ ಬ್ಯಾಟರಿ ತಯಾರಿಕಾ ಕ್ಷೇತ್ರ ಇರುವುದೂ ಬೆಲೆ ಹೆಚ್ಚಳಕ್ಕೆ ಮತ್ತೊಂದು ಕಾರಣ ಎಂದು ಪರಿಣಿತರು ಹೇಳುತ್ತಿದ್ದಾರೆ. ಇದರಿಂದಾಗಿ ಬ್ಯಾಟರಿ ಚಾಲಿತ ಕಾರುಗಳ ಬೆಲೆಯಲ್ಲೂ ಇಳಿಕೆಯಾಗಿಲ್ಲ. ಜತೆಗೆ ಬ್ಯಾಟರಿ ಬದಲಿಸುವುದೂ ಈಗಲೂ ಅಗ್ಗದ ವಸ್ತುವಲ್ಲ.

ವಿದ್ಯುತ್ ಚಾಲಿತ ವಾಹನಗಳ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಲಾಕ್‌ಡೌನ್ ಪೂರ್ವದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಹಾಗೂ ಕಾರುಗಳ ಅಬ್ಬರ ಹೆಚ್ಚಾಗಿತ್ತು. ಹೀಗಾಗಿ ಹಲವು ದ್ವಿಚಕ್ರ ವಾಹನಗಳು 2019ರ ಅಂತ್ಯದಲ್ಲಿ ರಸ್ತೆಗಿಳಿದವು. ವಿವಿಧ ಕಂಪನಿಗಳು ಬ್ಯಾಟರಿ ಚಾಲಿತ ಕಾರುಗಳನ್ನು ಮಾರುಕಟ್ಟೆಗಿಳಿಸಲು ಸಿದ್ಧತೆಯನ್ನೂ ಮಾಡಿಕೊಂಡಿದ್ದವು. ಆದರೆ ಕೋವಿಡ್–19ನಿಂದಾಗಿ ಸದ್ಯ ಎಲ್ಲವೂ ನಿಂತ ನೀರಾಗಿದೆ.

ಬ್ಯಾಟರಿ ಚಾಲಿತ ಕಾರುಗಳ ಖರೀದಿ ಒಂದೆಡೆಯಾದರೆ, ಇವುಗಳನ್ನು ಬದಲಿಸುವುದು ಎಷ್ಟು ಸರಳ ಮತ್ತು ಜೇಬಿಗೆ ಎಷ್ಟರ ಮಟ್ಟಿಗೆ ಹೊರೆ ಎಂಬ ಲೆಕ್ಕಾಚಾರವನ್ನು ಯಾವ ಕಂಪನಿಗಳೂ ಸ್ಪಷ್ಟವಾಗಿ ನೀಡದ ಕಾರಣ ಗ್ರಾಹಕರು ಈಗಲೂ ಗೊಂದಲ್ಲಿದ್ದಾರೆ. ಮೊಬೈಲ್‌ಗಳಲ್ಲಿ ಸ್ಥಿರ ಬ್ಯಾಟರಿ ಬಳಕೆ ಹೆಚ್ಚಾಗಿರುವ ಕಾರಣ, ಬಳಸಿ ಬಿಸಾಡುವುದು ಬ್ಯಾಟರಿಗಳನ್ನಲ್ಲ, ಬದಲಿಗೆ ಮೊಬೈಲ್‌ಗಳನ್ನೇ ಎಂಬ ಸೂತ್ರ ಈಗಿನದ್ದು.

ಜಗತ್ತಿನ ಐದು ಕಂಪನಿಗಳ ಕೈಯಲ್ಲಿ ಬ್ಯಾಟರಿ ಉದ್ದಿಮೆ

ಬ್ಯಾಟರಿ ಸಿದ್ಧಪಡಿಸುವುದರಲ್ಲಿ ಜಗತ್ತಿನ ಐದು ಪ್ರಮುಖ ಕಂಪನಿಗಳು ಸದ್ಯ ಲೀಥಿಯಂ ಅಯಾನ್ ಬ್ಯಾಟರಿಯ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. ಸದ್ಯ ಇವುಗಳು 1590 ಗಿಗಾವ್ಯಾಟ್ ಸಾಮರ್ಥ್ಯದಷ್ಟು ಬ್ಯಾಟರಿಗಳನ್ನು ಸಿದ್ಧಪಡಿಸುತ್ತಿವೆ.

ಇವುಗಳಲ್ಲಿ ದಕ್ಷಿಣ ಕೊರಿಯಾದ ಎಲ್‌ಜಿ ಕೆಮ್‌ ಅಗ್ರಸ್ಥಾನದಲ್ಲಿದೆ. ಫೋಕ್ಸ್‌ವ್ಯಾಗನ್, ಜನರಲ್ ಮೋಟಾರ್ಸ್, ಫೋರ್ಡ್‌, ವೊಲ್ವೊ, ರೆನೊ, ನಿಸ್ಸಾನ್, ಹ್ಯುಂಡೈ, ಕಿಯಾ ಹಾಗೂ ಇನ್ನಿತರ ವಾಹನ ತಯಾರಿಕಾ ಕಂಪನಿಯೊಂದಿಗೆ ಬ್ಯಾಟರಿ ಪೂರೈಕೆಗೆ ಕಂಪನಿ ಒಪ್ಪಂದ ಹೊಂದಿದೆ.

110 ಗಿಗಾ ವ್ಯಾಟ್ ಸಾಮರ್ಥ್ಯದ ಈ ಕಂಪನಿ ಮುಂದಿನ ನಾಲ್ಕು ವರ್ಷಗಳಲ್ಲಿ 60 ಗಿಗಾ ವ್ಯಾಟ್ ಸಮಾರ್ಥ್ಯ ಹೆಚ್ಚಿಸುವ ಗುರಿ ಹೊಂದಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಎರಡನೇ ಸ್ಥಾನದಲ್ಲಿರುವುದು ಚೀನಾದ ಕಂಟೆಂಪರರಿ ಆ್ಯಂಪೆರೆಕ್ಸ್ ಟೆಕ್ನಾಲಜಿ. ಚೀನಾದ ಅಗ್ರಗಣ್ಯ ಕಂಪನಿಗಳಲ್ಲಿ ಇದೂ ಒಂದು. ಬಿಎಂಡಬ್ಲೂ, ಡ್ಯಾಮ್ಲೆಯರ್, ಫೋಕ್ಸ್‌ವ್ಯಾಗನ್, ಟೊಯೊಟಾ, ಹೊಂಡಾ, ನಿಸ್ಸಾನ್ ಹಾಗೂ ಹಲವು ಚೀನಾ ಕಂಪನಿಯ ಕಾರುಗಳಿಗೆ ಬ್ಯಾಟರಿ ಪೂರೈಸುತ್ತದೆ.

ಮೂರನೇ ಸ್ಥಾನದಲ್ಲಿರುವುದು ಚೀನಾಕ್ಕೇ ಸೇರಿದ ಬಿವೈಡಿ ಕಂಪನಿ. ವಿದ್ಯುತ್ ಚಾಲಿತ ಬಸ್ಸುಗಳಿಗೆ ಈ ಕಂಪನಿಯ ಬ್ಯಾಟರಿಗಳು ಹೆಚ್ಚಾಗಿ ಬಳಕೆಯಾಗುತ್ತಿವೆ.

ನಾಲ್ಕನೇ ಸ್ಥಾನದಲ್ಲಿರುವ ಜಪಾನಿನ ಪ್ಯಾನಾಸೊನಿಕ್ ಅಮೆರಿಕದ ಟೆಸ್ಲಾ ಜತೆ ಉತ್ತಮ ಸಂಬಂಧ ಹೊಂದಿದೆ. ಜಪಾನಿನಲ್ಲಿರುವ ನಾಲ್ಕು ಪ್ರಮುಖ ಬ್ಯಾಟರಿ ಕಂಪನಿಗಳಲ್ಲಿ ಅಗ್ರ ಸ್ಥಾನದಲ್ಲಿರುವುದು ಮತ್ತು ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡುತ್ತಿರುವ ಕಂಪನಿ ಇದಾಗಿದೆ.
ಕೊನೆಯ ಸ್ಥಾನದಲ್ಲಿರುವುದು ಅಮೆರಿಕದ ಟೆಸ್ಲಾ. ಈಗಾಗಲೇ ಬ್ಯಾಟರಿ ಚಾಲಿಕ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ಈ ಕಂಪನಿ, ತನ್ನ ಕಾರುಗಳಿಗೆ ತಾನೇ ಬ್ಯಾಟರಿ ಸಿದ್ಧಪಡಿಸಿಕೊಳ್ಳುತ್ತಿದೆ. ಇದಕ್ಕೆ ಪ್ಯಾನಾಸೊನಿಕ್ ನೆರವನ್ನು ಪಡೆದಿದೆ.

ಸದ್ಯ ಚೀನಾ ಕಂಪನಿಯ ಬ್ಯಾಟರಿಗಳು ಹೆಚ್ಚು ಬಳಕೆಯಲ್ಲಿವೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಾರು ತಯಾರಿಕಾ ಕಂಪನಿಗಳು ತಮ್ಮದೇ ಆದ ಬ್ಯಾಟರಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ನಿರೀಕ್ಷೆಯನ್ನೂ ಮಾರುಕಟ್ಟೆ ಪಂಡಿತರು ನಿರೀಕ್ಷಿಸಿದ್ದಾರೆ.

ಲೀಥಿಯಂ ಅಯಾನ್‌ಗೆ ಪರ್ಯಾಯ

ಬ್ಯಾಟರಿಗಳ ಸಂಖ್ಯೆ ಭೂಮಿ ಮೇಲೆ ಏರುತ್ತಲೇ ಇದು. ಬ್ಯಾಟರಿ ತ್ಯಾಜ್ಯದಿಂದ ಪರಿಸರಕ್ಕೆ ಮಾರಕವಾಗುವ ಹಿನ್ನೆಲೆಯಲ್ಲಿ ಬ್ಯಾಟರಿ ಬಾಳಿಕೆಯನ್ನೇ ಹೆಚ್ಚಿಸುವ ತಂತ್ರಜ್ಞಾವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿದೆ.

ಈ ನಡುವೆ ಲೀಥಿಯಂ ಅಯಾನ್‌ಗೆ ಪರ್ಯಾಯವಾಗಿ ನಿಕ್ಕೆಲ್ ಸಲ್ಫೇಟ್‌ ಅನ್ನು ಬಳಸುವ ತಂತ್ರಜ್ಞಾನವನ್ನು ವಿಜ್ಞಾನಿಗಳು ನಡೆಸಿದ್ದಾರೆ.ಆಸ್ಟ್ರೇಲಿಯಾದ ಬಿಎಚ್‌ಪಿ ಕಂಪನಿ ಈಗಾಗಲೇ ಇದರ ತಯಾರಿಕೆಯನ್ನೂ ಆರಂಭಿಸಿದ್ದಾರೆ.

ನಿಕ್ಕೆಲ್ ಸಲ್ಫೇಟ್ ಇರುವ ಬ್ಯಾಟರಿಗಳು ದೀರ್ಘಕಾಲ ಬಾಳಿಕೆ ಬರುವುದರಿಂದ ಮತ್ತು ಚಾರ್ಜ್‌ ಅನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವುದರಿಂದ ಪರಿಸರ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಭವಿಷ್ಯದಲ್ಲಿ ಬ್ಯಾಟರಿ ಚಾಲಿತ ಉತ್ಪನ್ನಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಬ್ಯಾಟರಿ ಉತ್ಪಾದನೆಯಲ್ಲಿ ಇನ್ನಷ್ಟು ತಂತ್ರಜ್ಞಾನ ಅಭಿವೃದ್ಧಿ ಅಗತ್ಯ. ಬಹಳಾ ವರ್ಷಗಳ ಕಾಲ ಲೀಥಿಯಂ ಅಯಾನ್ ಬ್ಯಾಟರಿ ಬಳಸುತ್ತಿರುವ ನಮಗೆ, ನಿಕ್ಕೆಲ್ ಸಲ್ಫೇಟ್ ಹೊಸ ಸೇರ್ಪಡೆ. ಇದರಿಂದ ವಿದ್ಯುತ್ ತಯಾರಿಕಾ ಘಟಕಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಇದು ಪರಿಸರ ಸಂರಕ್ಷಣೆಗೂ ಕಾರಣವಾಗಲಿದೆ’ ಎಂದು ಟೆಸ್ಲಾ ಸಂಸ್ಥಾಪಕ ಇಲಾನ್ ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT