ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿಯ ಪ್ರಾಚೀನ ವಸ್ತುವಿನ ಅಧ್ಯಯನ ಯಾನ

Last Updated 28 ಜೂನ್ 2022, 19:30 IST
ಅಕ್ಷರ ಗಾತ್ರ

‘ಹಯಾಬುಸಾ’ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರನ್ನು ‘ಹಯಾಬುಸಾ 2’ ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ‘ರುಯ್ಗು’ (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ ಡಿಸೆಂಬರ್ 2014ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲವು ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020ಯಲ್ಲಿ ಯಶಸ್ವಿಯಾಗಿ ಹಿಂದಿರುಗಿತ್ತು.

ಬೇರೆ ಬೇರೆ ದೇಶದ ವಿಜ್ಞಾನಿಗಳು ಇದನ್ನು ವಿಸ್ತೃತವಾಗಿ ವಿಶ್ಲೇಷಿಸಿ ಇದರ ಬಗ್ಗೆ ‘ಸೈನ್ಸ್’ ಎಂಬ ಪ್ರತಿಷ್ಠಿತ ನಿಯತಕಾಲಿಕೆಯಲ್ಲಿ ಇತ್ತೀಚಿನ (ಜೂನ್ 9) ಸಂಚಿಕೆಯಲ್ಲಿ ವಿವರವಾದ ಲೇಖನವನ್ನು ಪ್ರಕಟಿಸಿದ್ದಾರೆ. ಇದನ್ನು ವಿಶ್ಲೇಷಿಸಲು ‘ಕಾಸ್ಮಿಕ್ ಕೆಮಿಸ್ಟ್ರಿ’ಯನ್ನು ಬಳಸಿಕೊಂಡಿದ್ದಾರೆ.

‘ಹಯಾಬುಸಾ 2’ 2018ರಲ್ಲಿ ಕ್ಷುದ್ರಗ್ರಹವನ್ನು ತಲುಪಿದಾಗ, ಅದರ ಮೇಲ್ಮೈಯಲ್ಲಿ ಎರಡು ರೋವರ್‌ಗಳನ್ನು ಇಳಿಸಲಾಗಿತ್ತು. ಈ ರೋವರ್‌ಗಳು ಕ್ಷುದ್ರಗ್ರಹದ ಮೇಲೆ ಓಡಾಡುವುದರ ಜೊತೆ ಸುಮಾರು ಹದಿನೈದು ಮೀಟರ್‌ನಷ್ಟು ಎತ್ತರ ಜಿಗಿಯುವ ಸಾಮರ್ಥ್ಯ ಹೊಂದಿತ್ತು. ಈ ರೋವರ್‌ಗಳಿಗೆ ಎರಡು ಕ್ಯಾಮೆರಾ ಅಳವಡಿಸಿತ್ತು ಮತ್ತು ಹಲವಾರು ಸೆನ್ಸಾರ್ (ಸಂವೇದಕ)ಗಳನ್ನು ಅಳವಡಿಸಿತ್ತು. ಹಾಗಾಗಿ ಇದರ ಮೇಲಿನ ತಾಪಮಾನ ಮತ್ತು ಇನ್ನಿತರೆ ಮಾಹಿತಿಯನ್ನು ಪಡೆಯಲು ಸಾಧ್ಯವಾಯಿತು. ಅದಲ್ಲದೆ ಈ ಕ್ಷುದ್ರಗ್ರಹದ ಮೇಲ್ಮೈ ವಸ್ತುಗಳನ್ನು ಮಾತ್ರವಲ್ಲದೆ ಅದರ ಮೇಲಿದ್ದ ಕೆಲವು ಕಲ್ಲು-ಬಂಡೆಗಳ ಒಳಗಿನ ವಸ್ತುಗಳನ್ನು ಸಂಗ್ರಹಿಸುವ ಸಲುವಾಗಿ ಕೊನೆಗೆ ಮೂರನೇ ವಾಹಕವಾದ ಒಂದು ಲ್ಯಾಂಡರ್ ಅನ್ನು ಕೂಡ ಅದರ ಮೇಲೆ ಇಳಿಸಲಾಗಿತ್ತು. ಇದರಿಂದ ಸ್ವಲ್ಪ ಪ್ರಮಾಣದಲ್ಲಿ ಮೇಲ್ಮೈಯ ಮೇಲೆ ಸಣ್ಣ ಪೆಲ್ಲೆಟ್‌ಗಳನ್ನು ಹಾರಿಸಿಲಾಗಿತ್ತು. ಪೆಲ್ಲೆಟ್‌ಗಳ ಅಪ್ಪಳಿಕೆಯಿಂದ ಛಿದ್ರಗೊಂಡ ಮಣ್ಣು ಮತ್ತು ಬಂಡೆಯ ತುಣುಕನ್ನು ಸಂಗ್ರಹಿಸಲಾಗಿತ್ತು.

‘ಹಯಾಬುಸಾ 2’ ಆರು ವರ್ಷಗಳ ಯಾನ ಮಾಡಿ ಮತ್ತು ಸುಮಾರು ಐನೂರು ಕೋಟಿ (ಐದು ಬಿಲಿಯನ್) ಕಿಲೋಮೀಟರ್ ಸಂಚರಿಸಿತ್ತು. ಡಿಸೆಂಬರ್ 2020ರಲ್ಲಿ ಭೂಮಿಗೆ ಮರಳಿದಾಗ ದಕ್ಷಿಣ ಆಸ್ಟ್ರೇಲಿಯಾದ ‘ವೂಮೆರಾ’ ಎಂಬ ಪ್ರದೇಶದಲ್ಲಿ ಸಂಗ್ರಹಿಸಿದ್ದ ವಸ್ತುಗಳ ಒಂದು ಕ್ಯಾಪ್ಸುಲ್ ಅನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿತ್ತು.

‘ಹಯಾಬುಸಾ 2’ ಸಂಗ್ರಹಿಸಿದ ವಸ್ತುವಿನ ಪ್ರಮಾಣ ಐದು ಗ್ರಾಂ ಮಾತ್ರ! ಕೇವಲ ಐದೇ ಗ್ರಾಂ ಅಷ್ಟೆಯೆ ಎನ್ನಬಹುದು. ಆದರೆ ಇದು ಜಪಾನಿನ ಬಾಹ್ಯಾಕಾಶ ಸಂಸ್ಥೆ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚು ಮತ್ತು ಸದ್ಯಕ್ಕೆ ಅಧ್ಯಯನ ನಡೆಸಲು ಸಾಕಷ್ಟು ಎಂದು ವಿಜ್ಞಾನಿಗಳು ಹೇಳುತ್ತಾರೆ. ‘ಹಯಾಬುಸಾ 2’ ಭೂಮಿಗೆ ಹಿಂದಿರುಗಿದ ನಂತರ ಸಂಗ್ರಹಿಸಿದ ವಸ್ತುವನ್ನು ವಿಜ್ಞಾನಿಗಳು ಬಹಳ ಕೌತುಕದಿಂದ ಅಧ್ಯಯನ ನಡೆಸಿದ್ದಾರೆ. ರುಯ್ಗು ಕ್ಷುದ್ರಗ್ರಹವು ಸುಮಾರು 4.5 ಶತಕೋಟಿ (ಬಿಲಿಯನ್) ವರ್ಷಗಳ ಹಿಂದೆ ಸೌರವ್ಯೂಹವು ಹುಟ್ಟಿದಾಗ ರೂಪುಗೊಂಡ ಕ್ಷುದ್ರಗ್ರಹವೆಂದು ಈ ಅಧ್ಯಯನದಿಂದ ತಿಳಿದುಬಂದಿದೆ. ಇದಲ್ಲದೇ ಈ ವಸ್ತುವು ಇಲ್ಲಿಯವರಗೆ ವಿಜ್ಞಾನಿಗಳು ಅಧ್ಯಯನ ಮಾಡಿರುವ ಅತ್ಯಂತ ಪ್ರಾಚೀನ ವಸ್ತುವಾಗಿದೆ. ಇದರ ಅಧ್ಯಯನದಿಂದ ಮೂಲಜೀವ ವಿಕಾಸನಗೊಂಡ ಬಗ್ಗೆ ಬೆಳಕು ಚೆಲ್ಲಬಹುದೆಂದು ವಿಜ್ಞಾನಿಗಳು ಅಂದಾಜಿಸುತ್ತಿದ್ದಾರೆ.

ರುಯ್ಗು ಕ್ಷುದ್ರಗ್ರಹದಿಂದ ಸಂಗ್ರಹಿಸಿದ್ದ ವಸ್ತುಗಳ ವಿಶ್ಲೇಷಣೆಯು ಸುಮಾರು 20 ‘ಅಮೈನೋ ಆ್ಯಸಿಡ್‌’ (ಆಮ್ಲ)ಗಳ ಇರುವಿಕೆಯನ್ನು ಸ್ಪಷ್ಟೀಕರಿಸಿದೆ. ಕಾರ್ಬಾಕ್ಸಿಲಿಕ್ ಮತ್ತು ಅಮೈನ್ ಗುಂಪುಗಳಿಂದ ರೂಪುಗೊಂಡ ಅಮೈನೋ ಆ್ಯಸಿಡ್‌ ಜೀವದ ಮೂಲಭೂತ ಅಂಶಗಳಲ್ಲಿ ಒಂದು ಪ್ರಮುಖ ಅಂಶ. ಇದರಿಂದ ಜೀವದ ಉಗಮ ಮತ್ತು ವಿಕಸನದ ಬಗ್ಗೆ ತಿಳಿಯಲು ಸಾಕಷ್ಟು ಪೂರಕವಾಗಿದೆ. ಅಮೈನೋ ಆ್ಯಸಿಡ್‌ಗಳು ಸೇರಿ ಪ್ರೊಟೀನ್‌ಗಳನ್ನೂ ತಯಾರಿಸುತ್ತವೆ. ಜೀವಂತ ಅಣುಗಳಿಗೆ ಅತ್ಯಾವಶ್ಯಕ. ಏಕೆಂದರೆ ಈ ಪ್ರೊಟೀನ್‌ಗಳಿಂದಲೇ ಜೀರ್ಣಕ್ರಿಯೆ, ಅಭಿವೃದ್ಧಿ, ಅಂಗಾಂಶ ದುರಸ್ತಿ ಮತ್ತು ಇತರ ವಿವಿಧ ದೈಹಿಕ ಚಟುವಟಿಕೆಗಳು ಸಾಧ್ಯವಾಗುವುದು. ಯಾವುದೇ ಜೀವಿ ಇವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.

ಈ ಹಿಂದೆ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹಗಳಲ್ಲಿ ಅಥವಾ ಉಲ್ಕಾಶಿಲೆಗಳಲ್ಲಿ ಅಮೈನೋ ಆ್ಯಸಿಡ್‌ಗಳ ಕುರುಹುಗಳು ಕಂಡುಬಂದಿವೆ. ಆದರೆ, ಅವುಗಳನ್ನು ಪ್ರಮಾಣೀಕರಿಸುವುದು ಸಾಧ್ಯವಾಗಿರಲಿಲ್ಲ. ಏಕೆಂದರೆ ಅವು ಭೂಮಿಯ ಕಡೆ ಬಂದಾಗ ಇಲ್ಲಿನ ವಾತಾವರಣಕ್ಕೆ ಹೊಂದದೆ, ವಾತಾವರಣದಲ್ಲಿನ ತೇವಾಂಶ ಕೂಡ ಇದರ ಮೂಲ ರಾಸಾಯನಿಕ ರಚನೆಯನ್ನು ಬದಲಾಯಿಸಿರುತ್ತದೆ. ಆದರೆ ‘ಹಯಾಬುಸಾ 2’ ಇಂದ ಸಂಗ್ರಹಿಸಿ ತಂದಿರುವ ವಸ್ತು ಈ ಹಿಂದೆ ಅಧ್ಯಯನ ನಡೆಸಿರುವ ಇಂತಹ ವಸ್ತುಗಳಿಗಿಂತ ಪರಿಶುದ್ಧವಾಗಿದೆ. ಏಕೆಂದರೆ ಇದನ್ನು ಇತರೆ ರಾಸಾಯನಿಕ ಅಂಶಗಳ ಸಂಯೋಜನೆಗೆ ಅವಕಾಶವಿಲ್ಲದಂತೆ ಸಂಗ್ರಹಿಸಿ ಭೂಮಿಗೆ ತರಲಾಗಿದೆ.

ರುಯ್ಗು ಕ್ಷುದ್ರಗ್ರಹವು ಎಂದಿಗೂ 100°Cಗಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸಿಲ್ಲ ಎಂಬ ಅಂಶವೂ ಗಮನೀಯ. ಏಕೆಂದರೆ ಜೀವನದ ಉಗಮ ಮತ್ತು ವಿಕಸನದ ಮೂಲಭೂತ ಅಂಶಗಳಲ್ಲಿ ಒಂದಾದ ಅಮೈನೋ ಆ್ಯಸಿಡ್‌ಗಳು ಮೂಲತಃ ಕ್ಷುದ್ರಗ್ರಹಗಳಿಂದ ಭೂಮಿಗೆ ಬಂದಿರಬೇಕು ಎಂದು ಕೆಲವರು ವಿಜ್ಞಾನಿಗಳು ನಂಬಿರುತ್ತಾರೆ. ಕ್ಷುದ್ರಗ್ರಹವನ್ನು 100°Cಗಿಂತ ಹೆಚ್ಚಿನ ತಾಪಮಾನಕ್ಕೆ ಒಡ್ಡಿದರೆ, ಕೆಲವು ಮೂಲಭೂತ ರಾಸಾಯನಿಕ ರಚನೆಗಳು ಇದರ ಪರಿಣಾಮವಾಗಿ ಕುದಿಸಿದಾಗ ಆವಿಯಾದಂತೆ ಇವು ಬಾಹ್ಯಾಕಾಶದಲ್ಲಿ ಲೀನವಾಗಿಹೋಗುತ್ತವೆ. ‘ಹಯಾಬುಸಾ 2’ ಇಂದ ಸಂಗ್ರಹಿಸಿದ ವಸ್ತುಗಳಲ್ಲಿ ಸೌರವ್ಯೂಹದ ರಚನೆಯಿಂದ ಇಲ್ಲಿಯವರೆಗೆ ಉಳಿದ ಸಾವಯವ ವಸ್ತುಗಳ ಇರುವಿಕೆಯನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ಸಾಧ್ಯವಾಗಿಸಿತು. ರುಯ್ಗು ಕ್ಷುದ್ರಗ್ರಹದಲ್ಲಿ ಇಂಗಾಲವು ಸಮೃದ್ಧವಾಗಿದೆ ಮತ್ತು ಇಲ್ಲಿನ ರಾಸಾಯನಿಕ ರಚನೆ ಸೂರ್ಯನಲ್ಲಿರುವ ರಾಸಾಯನಿಕ ರಚನೆಗೆ ಸಾಕಷ್ಟು ಹೋಲಿಕೆ ಇದೆ ಎಂದು ತಿಳಿದುಬಂದಿದೆ. ಸೌರವ್ಯೂಹವು ಅಸ್ತಿತ್ವಕ್ಕೆ ಬಂದ ಐವತ್ತು ಲಕ್ಷ (ಐದು ಮಿಲಿಯನ್) ವರ್ಷಗಳ ನಂತರ ರೂಪುಗೊಂಡಿದೆ ಎಂದು ವಿಜ್ಞಾನಿಗಳು ಕಂಡುಹಿಡಿದ್ದಾರೆ. ಇದರಿಂದ ಗ್ರಹಗಳು ಮತ್ತು ನಕ್ಷತ್ರಗಳ ಮೂಲವನ್ನು ಇನ್ನೂ ಹೆಚ್ಚು ತಿಳಿಯಾಲು ಮತ್ತು ಪ್ರಮುಖವಾಗಿ ಜೀವದ ಉಗಮದ ಬಗ್ಗೆ ತಿಳಿಯಲು ನೆರವಾಗುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ರುಯ್ಗುನಿಂದ ತಂದಿರುವ ವಸ್ತುವಿನ ರಾಸಾಯನಿಕ ರಚನೆ ಸೂರ್ಯನಲ್ಲಿರುವ ವಸ್ತುಗಳ ಮೂಲ ರಚನೆಯಂತೇ ಇದೆ. ಸೂರ್ಯನಲ್ಲಿ ಹೈಡ್ರೋಜನ್ ಮತ್ತು ಹೀಲಿಯಂ ಅನ್ನು ಬೇರ್ಪಡಿಸಿದರೆ, ಉಳಿದುಕೊಳ್ಳುವ ಇತರೆ ರಾಸಾಯನಿಕ ರಚನೆ ಮತ್ತು ಅಂಶಗಳು ರುಯ್ಗುನಲ್ಲಿ ಇರುವ ರಚನೆಯಂತೆ ಸುಮಾರು ಅದೇ ಅನುಪಾತದಲ್ಲಿ ಇದೆ ಎಂದು ತಿಳಿದುಬಂದಿದೆ. ಹಾಗಾಗಿ ಸೌರವ್ಯೂಹದ ಜೊತೆ ಸೂರ್ಯನಲ್ಲಿ ಇರುವ ಮೂಲ ರಾಸಾಯನಿಕ ರಚನೆಯ ಬಗ್ಗೆ ತಿಳಿದು ಕೊಳ್ಳಲು ಇದು ಸಹಾಯ ಮಾಡಬಲ್ಲದು.

ಒಟ್ಟಾರೆ ಈ ಅಧ್ಯಯನವು ಬಾಹ್ಯಾಕಾಶ, ಸೌರವ್ಯೂಹ ಮತ್ತು ನಮ್ಮ (ಎಂದರೆ, ಜೀವಿಗಳ) ಮೂಲದ ಬಗ್ಗೆ ಅರಿತುಕೊಳ್ಳಲು ಒಂದು ಮಹತ್ವದ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT