ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಹಾಗಿದ್ದರೆ ಲಸಿಕೆ ಯಾರಿಗೆ ಬೇಕು? ಯಾರಿಗೆ ಬೇಡ?

ಲಸಿಕೆಯ ಅಗತ್ಯವೇ ಇಲ್ಲವೆಂದ ವಿಜ್ಞಾನಿ
Last Updated 3 ಡಿಸೆಂಬರ್ 2020, 7:36 IST
ಅಕ್ಷರ ಗಾತ್ರ

ಇಡೀ ಜಗತ್ತನ್ನೇ ಸಾಕಷ್ಟು ಕಾಡಿರುವ ಕೋವಿಡ್–19 ಸೋಂಕು 2020 ಎಂಬ ವರ್ಷವನ್ನೇ ನುಂಗಿ ಹಾಕಿದೆ. ಸದ್ಯ ಲಸಿಕೆಯ ನಿರೀಕ್ಷೆಯಲ್ಲಿ ಜನರಿದ್ದರೆ, ಫೈಜರ್‌ ಕಂಪನಿಯ ಮುಖ್ಯ ವಿಜ್ಞಾನಿ ಹಾಗೂ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕನ ಹೇಳಿಕೆಯಿಂದ ಜನರು ಇನ್ನಷ್ಟು ಗೊಂದಲಕ್ಕೀಡಾಗಿದ್ದಾರೆ. ಹಾಗಿದ್ದರೆ ಲಸಿಕೆ ಯಾರಿಗೆ ಬೇಕು, ಯಾರಿಗೆ ಬೇಡ ಎಂಬ ಪ್ರಶ್ನೆ ಕಾಡುತ್ತಿದೆ.

2019ರ ಅಂತ್ಯದಲ್ಲಿ ಆರಂಭವಾದ ಕೋವಿಡ್–19 ಪಿಡುಗು ವಿಶ್ವವ್ಯಾಪಿ ಹಬ್ಬಿತು. ಇಡೀ ಒಂದು ವರ್ಷ ಶಾಲೆಗಳು ಬಾಗಿಲು ಮುಚ್ಚಿದವು. ಮನೆಯಿಂದಲೇ ಕೆಲಸ ಮಾಡುವ ಅನುಮತಿಯನ್ನು ಬಹಳಷ್ಟು ಕಚೇರಿಗಳು ನೀಡಿದವು, ಪ್ರವಾಸಗಳು ರದ್ದಾದವು. ಲಕ್ಷಾಂತರ ಜನರು ಸಾವಿಗೀಡಾದರು. ಮುಖಗವಸು ತೊಡುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ಗಳ ಬಳಕೆ ಜೀವನದ ಭಾಗವಾದವು. ಲಸಿಕೆಯ ಹಾದಿಯನ್ನೇ ಎದುರು ನೋಡುತ್ತ, ಸೋಂಕಿನಿಂದ ಹೊರಬರುವ ಬೆಳಕಿಂಡಿಯನ್ನು ಜಗತ್ತಿನ ಪ್ರತಿಯೊಬ್ಬರೂ ಅರಸುತ್ತಿದ್ದಾರೆ.

ವಿಶ್ವ ಸಂಸ್ಥೆ ಅಂದಾಜಿನ ಪ್ರಕಾರ ಜಗತ್ತಿನ ನೂರಕ್ಕೂ ಅಧಿಕ ಕಂಪನಿಗಳು ಈಗ ಲಸಿಕೆ ಸಂಶೋಧನೆಯಲ್ಲಿ ಹಗಲಿರುಳು ಶ್ರಮ ಹಾಕಿವೆ. ಯಾರು ಮೊದಲು, ಯಾರದ್ದು ಪರಿಣಾಮಕಾರಿ ಎಂಬ ಯುದ್ಧಗಳು ಪರಸ್ಪರ ಮೇಳೈಸಿವೆ. ಇಂಥ ಸಂದರ್ಭದಲ್ಲಿ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬಹುರಾಷ್ಟ್ರೀಯ ಫಾರ್ಮಾ ಕಂಪನಿ ಫೈಜರ್‌ನ ಮಾಜಿ ಉಪಾಧ್ಯಕ್ಷ ಹಾಗೂ ಮುಖ್ಯ ವಿಜ್ಞಾನಿ ಡಾ. ಮೈಕಲ್ ಯಡಾನ್‌ ಅವರ ಹೇಳಿಕೆ ಸೋಂಕು ಹಾಗೂ ಅದರ ನಂತರದಲ್ಲಿ ಲಸಿಕೆಗಳ ಉತ್ಪಾದನೆ ಕುರಿತು ಮರುಚಿಂತನೆಗೆ ಒಳಪಡಿಸುವಂತೆ ಮಾಡಿದೆ.

‘ಕೋವಿಡ್–19 ಸಾಂಕ್ರಾಮಿಕ ಮುಗಿದ ಅಧ್ಯಾಯ. ಸೋಂಕಿನ ಈಗ ಸ್ಥಿತಿಯನ್ನು ಅವಲೋಕಿಸಿದರೆ ಯಾರಿಗೂ ಲಸಿಕೆಯೇ ಬೇಡ. ಆದರೆ ಇಂಥ ಸಂದರ್ಭದಲ್ಲೂ ಲಸಿಕೆ ಕುರಿತು ಮಾತನಾಡುತ್ತಿರುವುದು ಮೂರ್ಖತನ. ಸೋಂಕಿನ ಸಮಸ್ಯೆಯ ಸುಳಿಗೆ ಸಿಲುಕದವರಿಗೆ ಲಸಿಕೆ ನೀಡಬೇಡಿ. ಮನುಷ್ಯರ ಮೇಲೆ ಸಮರ್ಪಕವಾಗಿ ಪರೀಕ್ಷೆಗೆ ಒಳಪಡದ ಲಸಿಕೆಗಳನ್ನು ಜಗತ್ತಿನ ಕೋಟ್ಯಂತರ ಜನರಿಗೆ ಒಟ್ಟಿಗೆ ನೀಡುವ ಯಾವ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳಬೇಡಿ’ ಎಂದು ವಿಜ್ಞಾನಿಯೊಬ್ಬರು ಅಲವತ್ತುಕೊಂಡಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೀಗೆ ಹೇಳುತ್ತಿರುವುದು ಇವರೊಬ್ಬರೇ ಅಲ್ಲ. ಭಾರತೀಯ ಔಷಧ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಅವರೂ ಇದೇ ರೀತಿಯಾದ ಹೇಳಿಕೆ ನೀಡಿದ್ದಾರೆ. ‘ಲಸಿಕೆ ಎಲ್ಲರಿಗೂ ಅಗತ್ಯವಿಲ್ಲ. ಎಲ್ಲರಿಗೂ ಕೊಡಲಾಗುವುದು ಎಂದು ಎಲ್ಲಿಯೂ ಹೇಳಿಲ್ಲ. ನಮ್ಮ ಮೊದಲ ಆದ್ಯತೆ ಸೋಂಕು ಹರಡುವ ಸರಪಳಿಯನ್ನು ತುಂಡರಿಸುವುದು’ ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದಾರೆ.

ಹಾಗಿದ್ದರೆ ಲಸಿಕೆ ಬೇಕಿರುವುದು ಯಾರಿಗೆ ಎಂಬ ಬಲವಾದ ಪ್ರಶ್ನೆ ಈಗ ಕಾಡಲಾರಂಭಿಸಿದೆ.

‘ತುರ್ತು ಸಂದರ್ಭದಲ್ಲಿ ವೈಜ್ಞಾನಿಕ ಸಲಹಾ ಸಮೂಹ’ (ಸೇಜ್) ಎಂಬ ಸಂಸ್ಥೆ ಹೊರಡಿಸಿರುವ ಅಂಕಿಸಂಖ್ಯೆಗೆ ಡಾ. ಯಡಾನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಸೇಜ್ ಪ್ರಕಾರ ಶೇ 7ರಷ್ಟು ಸೋಂಕಿತರಿದ್ದ ಸಂದರ್ಭದಲ್ಲಿ ಉಳಿದ ಶೇ 93ರಷ್ಟು ಮಂದಿಗೆ ಸೋಂಕು ತಗುಲಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ ವಾಸ್ತವದಲ್ಲಿ ಕೆಲವೊಂದು ಸಾಂದರ್ಭಿಕ ಸಾಕ್ಷಿ ಸಮೇತ ನಡೆಸಿದ ಅಧ್ಯಯನದ ಅನ್ವಯ, ಶೇ 32ರಷ್ಟು ಜನರಿಗೆ ಸೋಂಕು ತಗುಲಿದ್ದರೆ, ಶೇ 30ರಷ್ಟು ಜನರಲ್ಲಿ ಮೊದಲೇ ರೋಗ ನಿರೋಧಶಕ್ತಿ ಬೆಳವಣಿಗೆಯಾಗಿತ್ತು. ಶೇ 10ರಷ್ಟು ಮಕ್ಕಳಿದ್ದರು. ಉಳಿದ ಶೇ 28ರಷ್ಟು ಮಂದಿಗೆ ಮಾತ್ರ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿತ್ತು.

‘ಸೇಜ್ ಪ್ರಕಾರ ಶೇ 93ರಷ್ಟು ಜನ ಸೋಂಕಿಗೆ ತುತ್ತಾಗಬಹುದು ಎಂಬ ಹೇಳಿಕೆ ನಿಜಕ್ಕೂ ನಂಬಲು ಸಾಧ್ಯವಿಲ್ಲ. ಹಾಗಿದ್ದರೆ ಶ್ವಾಸಕೋಶ ಸಂಬಂಧಿತ ವೈರಾಣುಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯ ಪ್ರಭಾವಳಿಯ ನೈಸರ್ಗಿಕ ಬೆಳವಣಿಗೆಯನ್ನು ಸೇಜ್‌ನ ತಜ್ಞರು ಮರೆತಂತಿದೆ. ವಾಸ್ತವದಲ್ಲಿ ಶೇ 30ರಷ್ಟು ಮಂದಿಗೆ ಮೊದಲೇ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದ್ದನ್ನು ಜಗತ್ತಿನ ಬಹಳಷ್ಟು ಇಮ್ಯೂನಾಲಜಿಸ್ಟ್‌ಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು’ ಎಂಡು ಡಾ. ಯಡಾನ್ ಹೇಳಿದ್ದಾರೆ.

‘ಜಗತ್ತಿನಲ್ಲಿ ಯಾವ ಮೂಲೆಯಲ್ಲೂ ಮಕ್ಕಳನ್ನು ಈ ಸೋಂಕು ಕಾಡಿದ್ದು ತೀರಾ ಕಡಿಮೆ. ಮಕ್ಕಳ ದೇಹದಲ್ಲಿರುವ ಜೀವಕೋಶಗಳು ಸೋಂಕಿನ ಪ್ರೊಟೀನ್‌ ಹಿಡಿದುಕೊಳ್ಳುವುದು ಕಡಿಮೆ. ಇಂಥ ಸಂದರ್ಭದಲ್ಲಿ ಸೋಂಕು ಹರಡುವಲ್ಲಿ ಎಲ್ಲಾ ಮಕ್ಕಳೂ ಭಾಗಿ ಎಂಬುದನ್ನು ನಾನು ನಂಬುವುದಿಲ್ಲ’ ಎಂಬ ಡಾ. ಯಡಾನ್ ಅವರ ಹೇಳಿಕೆ ಕೊರೊನಾ ಕುರಿತ ಆಲೋಚನೆಯನ್ನು ಮರುಚಿಂತನೆಗೆ ಒಳಪಡಿಸುವಂತೆ ಮಾಡಿದೆ.

ಎಲ್ಲೆಡೆ ಕೇಳಿ ಬರುತ್ತಿರುವ ‘ಹರ್ಡ್ ಇಮ್ಯುನಿಟಿ’ ವ್ಯಾಪಿಸಿರುವುದರಿಂದ ವೈರಾಣು ಸೋಂಕಿಗೆ ಒಳಗಾಗುವರ ಸಂಖ್ಯೆ ಶೇ 28ರಿಂದ 35ರೊಳಗಿದೆ. ಹೀಗಾಗಿ ಬಹುಸಂಖ್ಯೆಯ ಜನರು ಸೋಂಕು ಹರಡುವ ಗುಂಪಿಗೆ ಸೇರುವುದಿಲ್ಲ. ಸೋಂಕಿನ ಗ್ರಹಣ ಮುಗಿದಿದೆ. ಈಗಿರುವ ಪರಿಸ್ಥಿತಿಯನ್ನು ರಾಷ್ಟ್ರೀಯ ಆರೋಗ್ಯ ಸೇವೆ ಮೂಲಕವೇ ಪರಿಹರಿಸಿಕೊಳ್ಳಬಹುದಾದಷ್ಟರ ಮಟ್ಟಿಗೆ ಕುಸಿದಿದೆ. ಹೀಗಾಗಿ ಜನಜೀವನ ಸಹಜ ಸ್ಥಿತಿಗೆ ಮರಳುವ ಕಡೆ ರಾಷ್ಟ್ರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಅಡ್ಡಪರಿಣಾಮಗಳ ಭಯ

ವೈರಾಣು ಸೋಂಕಿಗೆ ತಕ್ಷಣ ಪರಿಹಾರ ಒದಗಿಸುವ ಲಸಿಕೆ ತಯಾರಿಕೆಯಲ್ಲಿ ಜಗತ್ತಿನ ಬಹಳಷ್ಟು ಕಂಪನಿಗಳು ಮುಂಚೂಣಿಯಲ್ಲಿವೆ. ಆದರೆ ಯಾರೊಬ್ಬರೂ ಈವರೆಗೂ ಶೇ 100ರಷ್ಟು ಪರಿಣಾಮಕಾರಿ ಎಂದು ಭರವಸೆ ನೀಡಿಲ್ಲ. ಈ ನಡುವೆ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸುವುದಕ್ಕಿಂತಲೂ ಪೂರ್ವದಲ್ಲಿ ಪ್ರಾಣಿಗಳ ಮೇಲೆ ನಡೆಯುವ ಪರೀಕ್ಷೆಯ ಹಂತಕ್ಕೆ ಆಹಾರ ಮತ್ತು ಔಷಧ ನಿಯಂತ್ರಣಾಲಯ (ಎಫ್‌ಡಿಎ) ವಿನಾಯಿತಿ ನೀಡಿದೆ.

ಈ ನಡುವೆ ಮನುಷ್ಯರ ಮೇಲೆ ಜಗತ್ತಿನ ಅಲ್ಲಲ್ಲಿ ನಡೆದ ಪ್ರಯೋಗಗಳಲ್ಲಿ ಹಲವರಿಗೆ ಲಸಿಕೆ ತದ್ವಿರುದ್ಧ ಪರಿಣಾಮಗಳನ್ನು ಉಂಟು ಮಾಡಿರುವುದು ನಿತ್ಯ ವರದಿಯಾಗುತ್ತಲೇ ಇದೆ. ಇವುಗಳಲ್ಲಿ ತಲೆನೋವು, ಜ್ವರ, ಮೈಕೈ ನೋವು, ಸದಾ ತಲೆ ಹಿಡಿದಂತಾಗಿರುವುದು ಸೇರಿದಂತೆ ಕೆಲವೊಂದು ದೈಹಿಕ ಸಮಸ್ಯೆಗಳು ಕಾಡಿವೆ. ಹಾಗಿದ್ದರೆ ಇಂಥ ಲಸಿಕೆ ಸಂಪೂರ್ಣ ಸುರಕ್ಷಿತವೇ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಮಾತ್ರವಲ್ಲ, ವಿಜ್ಞಾನಿಗಳನ್ನೂ ಕಾಡುತ್ತಿದೆ.

ಹಾಗಿದ್ದರೆ ಕೋವಿಡ್‌ನ ಎರಡನೇ ಅಲೆಯ ಮರ್ಮವೇನು? ಕೋವಿಡ್ ಲಸಿಕೆ ಇಡಲು ಅತ್ಯಂತ ಕಡಿಮೆ ತಾಪಮಾನ ಕಾಪಾಡುವ ಕೋಲ್ಡ್‌ ಸ್ಟೋರೇಜ್‌ಗಳ ಅಗತ್ಯದ ಹಿಂದಿನ ಸತ್ಯವೇನು ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT