ಸೋಮವಾರ, ಜುಲೈ 26, 2021
21 °C

ಕ್ವಾರಂಟೈನ್ ಕೇಂದ್ರದಲ್ಲಿ ಕ್ರಿಕೆಟ್: ವಿಡಿಯೊ ವೈರಲ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ವಿಶಾಲವಾದ ಕ್ವಾರಂಟೈನ್‌ ಕೇಂದ್ರವೊಂದರಲ್ಲಿ ಕೊರೊನಾ ಶಂಕಿತರು ಬಿಂದಾಸ್‌ ಆಗಿ ಕ್ರಿಕೆಟ್‌ ಆಡುತ್ತು ಕಾಲ ಕಳೆಯುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕ್ವಾರಂಟೈನ್‌ ಕೇಂದ್ರಗಳಲ್ಲಿ ಕಾಲಹರಣ ಮಾಡಲು ಜನರು ಹಾಡು, ನೃತ್ಯಗಳಲ್ಲಿ ತೊಡಗಿದ್ದ ವಿಡಿಯೊ ಈ ಹಿಂದೆ ವೈರಲ್‌ ಆಗಿತ್ತು. ಈಗ ಅದಕ್ಕಿಂತ ಭಿನ್ನವಾಗಿ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಜನರು ಕ್ರಿಕೆಟ್‌ ಆಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಇದಕ್ಕೆ ‘ಕ್ವಾರಂಟೈನ್‌ ಕ್ರಿಕೆಟ್’ ಎಂಬ‌ ಹೊಸ ಪದವನ್ನೂ ನೆಟ್ಟಿಗರು ಹುಟ್ಟು ಹಾಕಿದ್ದಾರೆ. ಕೆಲವರು ಶಹಬ್ಬಾಸ್ ಎಂದು ಬೆನ್ನು ತಟ್ಟಿದರೆ, ಇನ್ನೂ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದು ನಿಖರವಾಗಿ ಎಲ್ಲಿಯ ಕ್ವಾರಂಟೈನ್‌ ಸೆಂಟರ್‌ ಎಂಬ ಮಾಹಿತಿ ಇಲ್ಲವಾದರೂ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರ ಎಂದು ಹೇಳಲಾಗುತ್ತಿದೆ. 

ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್‌ ಕಾನ್ಫರೆನ್ಸ್‌ ಮುಖಂಡ ಓಮರ್ ಅಬ್ದುಲ್ಲಾ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌ ಸೇರಿದಂತೆ ಹಲವರು ಈ ವಿಡಿಯೊ ಶೇರ್‌ ಮಾಡಿದ್ದಾರೆ.

‘ಸ್ವಲ್ಪ ಜಾಗ ಸಿಕ್ಕರೆ ಸಾಕು, ಕ್ರಿಕೆಟ್ ಆಡುತ್ತೇವೆ. ಕ್ವಾರಂಟೈನ್‌ ಟೈಂ ಪಾಸ್‌!!!’ ಎಂದು ಓಮರ್‌ ಟ್ವೀಟ್‌ ಮಾಡಿದ್ದಾರೆ.
‘ನಾನು ಭಾರತವನ್ನು ಏಕೆ ಅಷ್ಟೊಂದು ಪ್ರೀತಿಸುತ್ತೇನೆ ಎಂಬ ಕಾರಣ ಈಗಲಾದರೂ ತಿಳಿಯಿತೆ?’ ಎಂದು ಜಾಂಟಿ ರೋಡ್ಸ್‌ ಪ್ರಶ್ನಿಸಿದ್ದಾರೆ. ‘ನೀನು ಭಾರತವನ್ನು ಅಷ್ಟೊಂದು ಪ್ರೀತಿಸಲು ಕಾರಣ ಏನು’ ಎಂದು ಈಗಲೂ ಬಹಳಷ್ಟು ಜನರು ನನ್ನನ್ನು ಕೇಳುತ್ತಿರುತ್ತಾರೆ. ಅದಕ್ಕೆ ಈ ವಿಡಿಯೊ ನೋಡಿದರೆ ಉತ್ತರ ಸಿಗುತ್ತದೆ ಎಂದು ಜಾಂಟಿ ಕ್ರಿಕೆಟ್‌ ಮತ್ತು ಭಾರತದ ಜತೆಗಿನ ನಂಟನ್ನು ಹೇಳಿಕೊಂಡಿದ್ದಾರೆ.  

ವೈರಲ್ ಆದ ವಿಡಿಯೋದಲ್ಲಿ ಏನಿದೆ?

ವಿಶಾಲವಾದ ಮತ್ತು ಸುಜಜ್ಜಿತ ಕ್ರೀಡಾಂಗಣವನ್ನು ಕ್ವಾರಂಟೈನ್‌ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ರಾತ್ರಿ ಹೊತ್ತು ಫ್ಲಡ್‌ ಲೈಟ್‌ ಬದಲು ಹಾಲ್ನೊರೆಯಂತಹ ಬೆಳಕು ನೀಡುವ ವಿದ್ಯುತ್‌ ದೀಪಗಳಿವೆ. ಫೋರ್‌ ಮತ್ತು ಸಿಕ್ಸ್‌ಗಳಿಗೆ ಬರಲವಿಲ್ಲದ ಪಂದ್ಯ ಒಳ್ಳೆಯ ಡೇ ಆ್ಯಂಡ್‌ ನೈಟ್‌ ಮ್ಯಾಚ್‌ನಂತೆ ಕಾಣುತ್ತದೆ.  

ಗ್ಲೋವ್ಸ್‌ ಮತ್ತು ಪ್ಯಾಡ್‌ ಬದಲು ಈ ಆಟಗಾರರು ಮುಖಕ್ಕೆ ಮಾಸ್ಕ್‌ ಧರಿಸಿದ್ದಾರೆ. ಕೆಂಪು ಪ್ಲಾಸ್ಟಿಕ್‌ ಕುರ್ಚಿಗಳು ಸ್ಟಂಪ್‌ಗಳಾಗಿವೆ.  ಅಲ್ಲಿ ವೀಕ್ಷಕರು ಗ್ಯಾಲರಿಯಲ್ಲಿ ಕುಳಿತರೆ, ಇಲ್ಲಿ ಮೈದಾನದ ನಡುವೆ ಹಾಕಿದ ಮಂಚದ ಮೇಲೆ ಹಾಯಾಗಿ ಮಲಗಿ ಪಂದ್ಯ ವೀಕ್ಷಿಸುತ್ತಿದ್ದಾರೆ. ಇದಷ್ಟೇ ವ್ಯತ್ಯಾಸ!!! 

ವಯಸ್ಸಾದವರು ಬೆಡ್‌ ಮೇಲೆ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರೆ, ಯುವಕರ ಗುಂಪು ಪಕ್ಕದ ಖಾಲಿ ಜಾಗದಲ್ಲಿಯೇ ಬಿಂದಾಸ್‌ ಆಗಿ ಕ್ರಿಕೆಟ್‌ ಆಡುತ್ತಿದೆ. ಬ್ಯಾಟ್ಸ್‌ಮನ್‌ ಹೊಡೆದ ಚೆಂಡು ಬೆಡ್‌ಗಳ ಮೇಲಿಂದ ಬೌಂಡರಿ ಲೈನ್‌ ಮುಟ್ಟಿದರೆ, ಉಳಿದವರು ಬಾಲ್‌ ಹಿಡಿಯಲು ಬೆಡ್‌ಗಳ ನಡುವೆ ನುಗ್ಗುತ್ತಾರೆ.

ಪಕ್ಕದಲ್ಲಿಯೇ ಹುಡುಗರ ಗಲಾಟೆ, ಕ್ರಿಕೆಟ್ ನಡೆಯುತ್ತಿದ್ದರೂ, ಅದಕ್ಕೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಮಂಚದಲ್ಲಿ ಪುಸ್ತಕ ಹಿಡಿದು ಮಲಗಿರುವ ಚಾಚಾವೊಬ್ಬರು ತಮ್ಮದೇ ಪ್ರಪಂಚದಲ್ಲಿ ಮುಳುಗಿದ್ದಾರೆ.‌  

ಕ್ವಾರಂಟೈನ್ ಕೇಂದ್ರದಲ್ಲಿ 14 ದಿನ ಕಳೆಯುವುದೆಂದರೆ 14 ವರ್ಷ ವನವಾಸ ಅನುಭವಿಸದಂತೆ. ಆ ನರಕಯಾತನೆ ಯಾರಿಗೆ ಬೇಕು ಎನ್ನುವ ಭಾವನೆ ಜನರಲ್ಲಿ ಮನೆಮಾಡಿದೆ. ಇಂಥ ಅಭಿಪ್ರಾಯವನ್ನು ಈ ವಿಡಿಯೊ ಸುಳ್ಳು ಮಾಡಿ ತೋರಿಸಿದೆ. 

ಈ ವಿಡಿಯೊ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ, ಸಾವಿರಾರು ಜನರ ಲೈಕ್ ಪಡೆದಿದೆ. ಈಗ ಕ್ವಾರಂಟೈನ್‌ ಕ್ರಿಕೆಟ್‌ ಆಯ್ತು, ಮುಂದೇನು ಕಾಯ್ದಿದೆಯೋ? ಕ್ವಾರಂಟೈನ್‌ ಕೇಂದ್ರದಲ್ಲಿ ಫುಟ್‌ಬಾಲ್‌, ಟೆನಿಸ್‌, ವಾಲಿಬಾಲ್, ಹಾಕಿ...ಆಡಿದರೆ ವೈರಸ್‌ ಸುಮ್ಮನೇ ಬಿಟ್ಟೀತಾ! ಎಂದು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.  ಲಿಂಕ್: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು