ಸೋಮವಾರ, ಮೇ 17, 2021
31 °C

ಅಮೆಜಾನ್‌ ಮುಖ್ಯಸ್ಥನ ಫೋನ್‌ ಹ್ಯಾಕ್‌ ಆಗಲು ಆ್ಯಪಲ್‌ ಐಒಎಸ್‌ ಕಾರಣ: ಫೇಸ್‌ಬುಕ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಅಮೆಜಾನ್‌ ಸಿಇಒ ಜೆಫ್‌ ಬೆಜೊಸ್‌

ಅಮೆಜಾನ್‌ ಸಂಸ್ಥಾಪಕ ಮತ್ತು ಸಿಇಒ ಜೆಫ್‌ ಬೆಜೊಸ್‌ ಮೊಬೈಲ್‌ ಫೋನ್‌ ಹ್ಯಾಕ್ ಆಗಲು ಆ್ಯಪಲ್‌ನ ಆಪರೇಟಿಂಗ್‌ ಸಿಸ್ಟಮ್‌ ಕಾರಣ ಎಂದು ಫೇಸ್‌ಬುಕ್‌ ಆರೋಪಿಸಿದೆ. 

ವಾಟ್ಸ್‌ಆ್ಯಪ್‌ನ ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಷನ್‌ ಹ್ಯಾಕ್‌ ಮಾಡಲು ಸಾಧ್ಯವೇ ಇಲ್ಲ ಎಂದಿರುವ ಫೇಸ್‌ಬುಕ್‌, ಬೆಜೊಸ್ ಫೋನ್‌ ಹ್ಯಾಕ್‌ ಅಗಲು ಆ್ಯಪಲ್‌ನ ಐಒಎಸ್‌ ಕಾರಣ ಎಂದಿದೆ. 2018ರಲ್ಲಿ ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಖಾತೆಯಿಂದ ಬಂದಿದೆ ಎನ್ನಲಾದ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಸುರಕ್ಷತಾ ಲೋಪ ಉಂಟಾಗಿ ಬೆಜೊಸ್‌ ಅವರ ಫೋನ್‌ ಹ್ಯಾಕ್‌ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹ್ಯಾಕ್‌ ಆದ ನಂತರ ಬೆಜೊಸ್‌ ಅವರು ಗೆಳತಿಯೊಂದಿಗೆ ಕಳೆದಿದ್ದ ಖಾಸಗಿ ಕ್ಷಣದ ಚಿತ್ರಗಳು ಬಹಿರಂಗಗೊಂಡಿದ್ದವು. 

ಜೆಫ್‌ ಬೆಜೊಸ್‌ ಅವರ ಖಾಸಗಿ ಕ್ಷಣಗಳ ಫೋಟೊಗಳು ಹಾಗೂ ಸಂದೇಶಗಳು ಅಮೆರಿಕದ 'ನ್ಯಾಷನಲ್‌ ಎನ್‌ಕ್ವೈರರ್‌' ಟ್ಯಾಬ್ಲಾಯ್ಡ್‌ ಪತ್ರಿಕೆಗೆ ದೊರೆತಿತ್ತು. ಬೆಜೊಸ್‌ ಅವರ ವಿವಾಹೇತರ ಸಂಬಂಧದ ಬಗ್ಗೆ ನ್ಯಾಷನಲ್‌ ಎನ್‌ಕ್ವೈರರ್ ವರದಿ ಮಾಡಿತ್ತು. ಅದರ ಪರಿಣಾಮ, ಬೆಜೊಸ್‌ ಮತ್ತು ಮ್ಯಾಕೆನ್ಜಿ ಬೆಜೊಸ್‌ ವಿಚ್ಛೇದನ ಪಡೆದುಕೊಂಡರು.

ಇದನ್ನೂ ಓದಿ: ಸೌದಿಯಿಂದ ಅಮೆಜಾನ್ ಮುಖ್ಯಸ್ಥನ ಫೋನ್ ಹ್ಯಾಕ್: ವಿಚ್ಛೇದನಕ್ಕೆ ಕಾರಣವಾಯ್ತೇ ಸಂದೇಶ?

ತನಿಖೆ ನಡೆಸಿದ ತಂತ್ರಜ್ಞಾನ ತಜ್ಞರ ಪ್ರಕಾರ, ಬೆಜೊಸ್‌ ಅವರ ಐಫೋನ್‌ಗೆ ಕುತಂತ್ರಾಂಶ ಒಳಗೊಂಡಿದ್ದ 4.4 ಎಂಬಿ ಗಾತ್ರದ ವಿಡಿಯೊ ಫೈಲ್‌ ವಾಟ್ಸ್‌ಆ್ಯಪ್‌ ಮೂಲಕ ರವಾನೆಯಾಗಿತ್ತು. ಇದೇ ರೀತಿಯಲ್ಲೇ ಇಸ್ರೇಲ್‌ ಮೂಲದ ಎನ್‌ಎಸ್ಒ ತಂಡ ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಿ 1,400 ಪತ್ರಕರ್ತರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ಫೋನ್‌ಗಳನ್ನು ಹ್ಯಾಕ್‌ ಮಾಡಲಾಗಿತ್ತು. 

ಫೇಸ್‌ಬುಕ್‌ನ ಉಪಾಧ್ಯಕ್ಷ ನಿಕ್‌ ಕ್ಲೆಗ್‌ ಕಳೆದ ವಾರ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ 'ಬೆಸೊಜ್‌ ಅವರ ಫೋನ್‌ ಹ್ಯಾಕ್‌ ಆಗಲು ವಾಟ್ಸ್‌ಆ್ಯಪ್‌ ಕಾರಣವಲ್ಲ. ಅದರ ಎನ್‌ಕ್ರಿಪ್ಷನ್‌ ಹ್ಯಾಕ್‌ ಮಾಡಲು ಸಾಧ್ಯವೇ ಇಲ್ಲ. ಇದಕ್ಕೆ ಆ್ಯಪಲ್‌ ಆಪರೇಟಿಂಗ್‌ ಸಿಸ್ಟಮ್‌ ಕಾರಣ' ಎಂದು ಆರೋಪಿಸಿದ್ದರು. 

ಬೆಜೊಸ್‌ ಫೋನ್‌ ಹ್ಯಾಕ್‌ ಆಗಿರುವುದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಹೇಳಿದೆ. ಎನ್‌ಎಸ್‌ಒ ಗ್ರೂಪ್‌ ಗುರಿಯಾಗಿಸಿಕೊಂಡವರ ವಾಟ್ಸ್‌ಆ್ಯಪ್‌ ಸಂಖ್ಯೆಗೆ ವಿಡಿಯೊ ಕಾಲ್‌ ಮೂಲಕ ಮಿಸ್ಡ್‌ ಕಾಲ್‌ ನೀಡಲಾಗುತ್ತಿತ್ತು. ವಿಡಿಯೊ ಕಾಲಿಂಗ್‌ ವ್ಯವಸ್ಥೆಯನ್ನು ಬಳಸಿ ಕುತಂತ್ರಾಂಶವನ್ನು ಹರಿಯಬಿಡುತ್ತಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು