ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಸುದ್ದಿಗಳ ವೀಕ್ಷಣೆ, ಹಂಚಿಕೆಗೆ ನಿರ್ಬಂಧ ಹೇರಿದ ಫೇಸ್‌ಬುಕ್‌

Last Updated 18 ಫೆಬ್ರುವರಿ 2021, 6:56 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ತನ್ನ ವೇದಿಕೆಯಲ್ಲಿ ಆಸ್ಟ್ರೇಲಿಯಾ ಸುದ್ದಿಗಳ ವೀಕ್ಷಣೆ, ಹಂಚಿಕೆಗೆ ಫೇಸ್‌ಬುಕ್‌ ಗುರುವಾರ ನಿರ್ಬಂಧ ಹೇರಿದೆ.

ಆಸ್ಟ್ರೇಲಿಯಾದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾನೂನಿನ ಪ್ರಕಾರ ಸುದ್ದಿ, ಲೇಖನ ಸೇರಿದಂತೆ ಇತರೆ ವಿಷಯಗಳನ್ನು ಬಳಸಿಕೊಳ್ಳಲು ಡಿಜಿಟಲ್‌ ದ್ಯತ್ಯ ಸಂಸ್ಥೆಗಳು, ಮಾಧ್ಯಮಗಳಿಗೆ ಹಣ ಪಾವತಿಸಬೇಕಾಗುತ್ತದೆ. ಈ ಕಾರಣದಿಂದ ಫೇಸ್‌ಬುಕ್‌ ಈ ಕ್ರಮ ತೆಗೆದುಕೊಂಡಿದೆ.

‘ಆಸ್ಟ್ರೇಲಿಯಾದ ಪ್ರಕಾಶಕರು ಫೇಸ್‌ಬುಕ್‌ನಲ್ಲಿ ಸುದ್ದಿ ಪ್ರಕಟಿಸುವುದನ್ನು ಮುಂದುವರಿಸಬಹುದು. ಆದರೆ ಅದರ ಲಿಂಕ್‌ಗಳು ಮತ್ತು ಪೋಸ್ಟ್‌ಗಳನ್ನು ಆಸ್ಟ್ರೇಲಿಯಾದವರು ವೀಕ್ಷಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಅಮೆರಿಕ ಮೂಲದ ಫೇಸ್‌ಬುಕ್‌ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದರಿಂದ ಆಸ್ಟ್ರೇಲಿಯಾದ ಬಳಕೆದಾರರು ಆಸ್ಟ್ರೇಲಿಯಾ ಅಥವಾ ಅಂತರರಾಷ್ಟ್ರೀಯ ಸುದ್ದಿಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಆಸ್ಟ್ರೇಲಿಯಾದ ಹೊರಗಿನ ಅಂತರರಾಷ್ಟ್ರೀಯ ಬಳಕೆದಾರರು ಆಸ್ಟ್ರೇಲಿಯಾದ ಸುದ್ದಿಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.

‘ಪ್ರಸ್ತಾವಿತ ಕಾನೂನು ನಮ್ಮ ವೇದಿಕೆ ಮತ್ತು ಸುದ್ದಿಯನ್ನು ಹಂಚಿಕೊಳ್ಳಲು ಬಳಸುವ ಪ್ರಕಾಶಕರ ನಡುವಿನ ಸಂಬಂಧವನ್ನು ತಪ್ಪಾಗಿ ಅರ್ಥೈಸುತ್ತದೆ’ ಎಂದು ಫೇಸ್‌ಬುಕ್ ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ವಿಲಿಯಂ ಈಸ್ಟನ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ಸಂಬಂಧಗಳ ನೈಜತೆಯನ್ನು ನಿರ್ಲಕ್ಷಿಸುವ ಕಾನೂನನ್ನು ಅನುಸರಿಸುವ ಅಥವಾ ಆಸ್ಟ್ರೇಲಿಯಾದಲ್ಲಿ ನಮ್ಮ ಸೇವೆಗಳಲ್ಲಿ ಸುದ್ದಿ ವೀಕ್ಷಣೆ ಮತ್ತು ಹಂಚಿಕೆಯನ್ನು ನಿಲ್ಲಿಸುವ ಎರಡು ಆಯ್ಕೆಗಳು ನಮ್ಮ ಮುಂದಿದ್ದವು. ಭಾರವಾದ ಮನಸ್ಸಿನಿಂದ ನಾವು ಎರಡನೆಯದ್ದನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಈಸ್ಟನ್‌ ತಿಳಿಸಿದ್ದಾರೆ.

ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಮತ್ತು ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಂದರ್‌ ಪಿಚೈ ಅವರೊಂದಿಗೆ ಕಳೆದ ವಾರ ಆಸ್ಟ್ರೇಲಿಯಾ ಸರ್ಕಾರ ಮಾತುಕತೆ ನಡೆಸಿತ್ತು. ಮಹತ್ವದ ವಾಣಿಜ್ಯ ಒಪ್ಪಂದ ನಡೆಯಲಿದೆ ಎಂಬ ಭರವಸೆ ಕೂಡ ಸರ್ಕಾರ ವ್ಯಕ್ತಪಡಿಸಿತ್ತು. ಆದರೆ ಈ ಮಾತುಕತೆ ಫಲಪ್ರದವಾಗಿಲ್ಲ.

ಇದರ ಬೆನ್ನಲ್ಲೆ ಸಂವಹನ ಸಚಿವ ಪಾಲ್ ಫ್ಲೆಚರ್ ಅವರು, ಸರ್ಕಾರವು ತನ್ನ ಈ ಕಾರ್ಯಸೂಚಿಯಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ಸಂಸತ್ತು ಪ್ರಸ್ತಾವಿತ ಕಾನೂನುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದು, ಇಲ್ಲಿನ ಜನಪ್ರತಿನಿಧಿಗಳ ಸಭೆಯು ಬುಧವಾರ ತಡರಾತ್ರಿ ಈ ಮಸೂದೆಗೆ ಅನುಮೋದನೆ ನೀಡಿದೆ. ಸೆನೆಟ್‌ನಲ್ಲಿ ಅದರ ಚರ್ಚೆ ನಡೆಯಬೇಕಿದೆ.

ಆದರೆ, ಈ ಎರಡೂ ಡಿಜಿಟಲ್‌ ವೇದಿಕೆಯ ದೈತ್ಯ ಸಂಸ್ಥೆಗಳು ಉದ್ದೇಶಿತ ಕಾನೂನುಗಳು ಕಾರ್ಯಸಾಧ್ಯವಲ್ಲ ಎಂದು ಟೀಕಿಸಿವೆ. ಅಲ್ಲದೆ, ಗೂಗಲ್ ತನ್ನ ಸರ್ಚ್ ಎಂಜಿನ್ ಅನ್ನು ದೇಶದಿಂದ ತೆಗೆದುಹಾಕುವ ಬೆದರಿಕೆಯನ್ನೂ ಹಾಕಿದೆ.

ಹೊಸ ಒಪ್ಪಂದ: ಆಸ್ಟ್ರೇಲಿಯಾದಲ್ಲಿ ಹೊಸ ನಿಯಮಗಳು ಬರುತ್ತಿರುವಂತೆಯೇ, ಗೂಗಲ್‌ ಸಂಸ್ಥೆಯು ದೇಶದ ಸುದ್ದಿ ಮಾಧ್ಯಮ ಕಂಪನಿಗಳೊಂದಿಗೆ ದೊಡ್ಡ ಮಟ್ಟಿನ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಸೆವೆನ್‌ ವೆಸ್ಟ್‌ ಮೀಡಿಯಾ ಸಂಸ್ಥೆಯು ಕಳೆದ ಸೋಮವಾರ ಗೂಗಲ್‌ ಜತೆಗೆ ಈ ಒಪ‍್ಪಂದ ಮಾಡಿಕೊಂಡಿದ್ದು, ಪತ್ರಕರ್ತರಿಂದಸುದ್ದಿ ಪಡೆದುದಕ್ಕಾಗಿ ಗೂಗಲ್‌ ಇದೀಗ ಕಂಪನಿಗೆ ಪಾವತಿ ಮಾಡಬೇಕಾಗುತ್ತದೆ. ರೂಪರ್ಟ್‌ ಮುರ್ಡೋಕ್‌ ಅವರ ನ್ಯೂಸ್‌ ಕಾರ್ಪೊರೇಷನ್‌ ಸಹ ವ್ಯಾಪಕವಾದ ಒಪ್ಪಂದ ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT