ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Clubhouse: 'ಅತ್ಯಾಚಾರ ಖಂಡಿಸುವಾಗ ಜಾತಿ ತಾರತಮ್ಯ ಇದೆಯೆ?’

ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ ಕಾವ್ಯಾಸ್ವಾದದ ಮಧ್ಯೆ ಬಿಸಿ ಹುಟ್ಟಿಸಿದ ಚರ್ಚೆ
Last Updated 8 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರವನ್ನು ಖಂಡಿಸುವಾಗ ಕವಯತ್ರಿಯರು ಸಂತ್ರಸ್ತೆಯ ಜಾತಿ ನೋಡುತ್ತಾರೆಯೇ’ ಎನ್ನುವ ಪ್ರಶ್ನೆ ಭಾನುವಾರ ನಡೆದ ಪ್ರಜಾವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

‘ಕವಿತೆ ಬರೆಯುವ ಕಷ್ಟ- ಸುಖ’ ಕುರಿತು ಪ್ರಜಾವಾಣಿ ‘ಆಲದಮರ’ದಡಿ ನಡೆದ ಸಂವಾದದಲ್ಲಿ ಶಶಿಕಲಾ ವಸ್ತ್ರದ, ಎಂ.ಆರ್.ಕಮಲ, ಶ್ರೀದೇವಿ ಕೆರೆಮನೆ, ನಂದಿನಿ ಹೆದ್ದುರ್ಗ, ಸುಬ್ಬು ಹೊಲೆಯಾರ್ ಮತ್ತು ಆರಿಫ್ ರಾಜಾ ಭಾಗವಹಿಸಿದ್ದರು.

ಆರಂಭದಲ್ಲಿ ಕವಿತೆ ಕಟ್ಟುವಲ್ಲಿ ಕವಯತ್ರಿಯರು ಅನುಭವಿಸುತ್ತಿರುವ ಸಂಕಟಗಳ ಬಗ್ಗೆ ನಾಲ್ವರು ಕವಯತ್ರಿಯರೂ ಗಮನ ಸೆಳೆದರು. ‘ಸಾಂಸಾರಿಕ ಜಂಜಡದಲ್ಲಿ ಮುಳುಗಿರುವ ಮಹಿಳೆಯರ ಅಭಿವ್ಯಕ್ತಿ ಎಷ್ಟೋ ಸಲ ಪಾತ್ರೆ ತೊಳೆಯುವ ನೀರಿನಲ್ಲಿ ಸೋರಿಹೋಗುತ್ತದೆ’ ಎಂದು ಕಮಲ ಅವರು ಗಮನ ಸೆಳೆದರೆ, ‘ನನ್ನ ಮಟ್ಟಿಗೆ ಕವಿತೆ ಕಟ್ಟುವುದಲ್ಲ, ಹುಟ್ಟುವುದು’ ಎಂದು ನಂದಿನಿ ಹೇಳಿದರು.

ಆದರೆ ಬಳಿಕ ಮಾತನಾಡಿದ ಕವಿ ಸುಬ್ಬು ಹೊಲೆಯಾರ್ ಎತ್ತಿದ ದಲಿತತ್ವದ ಪ್ರಶ್ನೆ ಚರ್ಚೆಯ ದಿಕ್ಕನ್ನು ಬದಲಾಯಿಸಿತು.

‘ತಳಸಮುದಾಯದ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಇತರ ಸಮುದಾಯದ ಲೇಖಕಿಯರು ಏಕೆ ಗಟ್ಟಿಯಾಗಿ ಧ್ವನಿ ಎತ್ತುವುದಿಲ್ಲ? ಎಲ್ಲ ಹೆಣ್ಣುಮಕ್ಕಳ ಸಂವೇದನೆಯೂ ಒಂದೇ ಆಗುವುದಿಲ್ಲವೇಕೆ?’ ಎಂದು ಸುಬ್ಬು ಹೊಲೆಯಾರ್ ಪ್ರಶ್ನೆ ಎತ್ತಿದರು. ದೆಹಲಿಯ ನಿರ್ಭಯಾ ಪ್ರಕರಣ ಮತ್ತು ವಿಜಯಪುರದ ದಾನಮ್ಮ ಅತ್ಯಾಚಾರ ಪ್ರಕರಣದ ಕುರಿತ ಪ್ರತಿಭಟನೆಯಲ್ಲಿನ ತಾರತಮ್ಯವನ್ನು ಅವರು ಉಲ್ಲೇಖಿಸಿದರು. ಈ ಮಾತಿಗೆ ಕವಯತ್ರಿಯರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾದವು.

‘ದೇಶದಲ್ಲಿ ಎಲ್ಲೇ ಮಹಿಳೆಯ ಮೇಲೆ ಅತ್ಯಾಚಾರ ನಡೆದರೂ ಅದು ನಮ್ಮ ಮೇಲೆಯೇ ನಡೆದ ದೌರ್ಜನ್ಯದಂತೆ ನಡುಕ ಹುಟ್ಟಿಸುತ್ತದೆ.ನಾವೇ ಮರಗಟ್ಟಿ ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ. ಬಹುತೇಕ ಲೇಖಕಿಯರು ತಮ್ಮ ಸಾಹಿತ್ಯದಲ್ಲಿ ಇದನ್ನು ಖಂಡಿಸಿದ್ದಾರೆ’ ಎಂದು ಕಮಲ ಹೇಳಿದರೆ, ‘ಮಹಿಳೆಯರನ್ನು ಹೀಗೆ ಜಾತಿ, ವರ್ಗಗಳಲ್ಲಿ ಪ್ರತ್ಯೇಕಿಸಿ ನೋಡುವುದು ಸರಿಯಲ್ಲ. ಮಹಿಳೆಯರ ವಿರುದ್ಧ ದೌರ್ಜನ್ಯ ಎನ್ನುವುದೇ ಮುಖ್ಯವಾಗುತ್ತದೆ’ ಎಂದು ನಂದಿನಿ ಹೆದ್ದುರ್ಗ ಅಭಿಪ್ರಾಯಪಟ್ಟರು.

‘ಇಂತಹ ತಲ್ಲಣಗಳನ್ನು ಅಕ್ಷರ ರೂಪಕ್ಕೆ ಇಳಿಸುವುದು ಬಹಳ ಯಾತನಾಮಯ ಅನುಭವ. ದಲಿತ ಅಂತಲ್ಲ, ಇಲ್ಲಿ ಮಹಿಳೆಯರ ವಿರುದ್ಧ ಪುರುಷ ಸಮಾಜದ ಮನಃಸ್ಥಿತಿಯೇ ನಡುಕ ಹುಟ್ಟಿಸುತ್ತದೆ’ ಎಂದು ಶ್ರೀದೇವಿ ಕೆರೆಮನೆ ವಿವರಿಸಿದರು.

ಸಭಿಕರಾಗಿದ್ದ ಹಿರಿಯ ಕವಯತ್ರಿ ಲಲಿತಾ ಸಿದ್ದಬಸವಯ್ಯ, ‘ಎಲ್ಲ ಮಹಿಳೆಯರೂ ದಲಿತರೇ. ಆದರೆ ದಲಿತರಾಗಿ ಹುಟ್ಟಿದ ಮಹಿಳೆಯರು ಎರಡು ಪಟ್ಟು ದಲಿತರು’ ಎಂದರು. ‘ಲೇಖಕಿಯರ ವಿರುದ್ಧ ಈ ರೀತಿಯ ಆರೋಪ ಸರಿಯಲ್ಲ. ಬಂಡಾಯ ಮತ್ತು ದಲಿತ ಸಾಹಿತ್ಯ ಚಳವಳಿಯಲ್ಲಿ ಎಲ್ಲ ಲೇಖಕಿಯರೂ ಇಂತಹ ದೌರ್ಜನ್ಯಗಳನ್ನು ಕಟುವಾಗಿ ಖಂಡಿಸಿದ್ದಾರೆ’ ಎಂದು ಗಮನ ಸೆಳೆದರು.

ಮೊದಲು ಮಾತನಾಡಿದ ಶಶಿಕಲಾ ವಸ್ತ್ರದ, ‘ಆರಂಭದಲ್ಲಿ ನಾನೂ ಪ್ರೀತಿ ಪ್ರೇಮದ ಕುರಿತೇ ಕವಿತೆ ಬರೆದೆ. ಬಳಿಕ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಬರೆಯುತ್ತಾ ಸ್ತ್ರೀವಾದಿ ಆದೆ. ಕಾವ್ಯದಲ್ಲಿ ಮಾನವೀಯ ಪ್ರೇಮ ಇರಬೇಕು. ಎಲ್ಲ ಕೆಡುಕುಗಳನ್ನೂ ನಿವಾರಿಸಿ ಒಳಿತನ್ನು ಪೋಷಿಸುವ ಶಕ್ತಿ ಸ್ತ್ರೀಕಾವ್ಯಕ್ಕೆ ಇರಬೇಕು’ ಎಂದು ಹೇಳಿದರು.

‘ಕವಿತೆ ಎನ್ನುವುದು ಆ ಕ್ಷಣದ ಸ್ರಾವ. ಲಯ, ಚಡಪಡಿಕೆ ಎಲ್ಲವನ್ನೂ ಹಿಡಿದಿಟ್ಟುಕೊಳ್ಳಬೇಕು. ನಾನು ಬರೆಯುವ ಸಮಯಕ್ಕೆ ಕಾಯುವ ಬದಲು ಬಹಳ ಸಲ ಕವಿತೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತೇನೆ. ಕಾವ್ಯದ ಗುಂಗು ಮೂಲತಃ ವೈಯಕ್ತಿಕವಾದದ್ದು. ಇಲ್ಲಿ ಬಿರಿಯಾನಿಯ ಪ್ರಸ್ತಾಪ ಬಂದಾಕ್ಷಣ ಅದು ಧಾರ್ಮಿಕವಾಗುವುದಿಲ್ಲ’ ಎಂದು ಆರಿಫ್‌ ರಾಜಾ ಹೇಳಿದರು.

ಚರ್ಚೆಯಲ್ಲಿ ರವಿಕುಮಾರ್ ಟೆಲೆಕ್ಸ್, ಸಂಧ್ಯಾ ಹೊನಗುಂಟಿಕರ್, ಸಿಂಧುಚಂದ್ರ, ಸುಧಾ ಚಿದಾನಂದಗೌಡ, ನಳಿನಾ ಅವರೂ ಭಾಗವಹಿಸಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT