ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂ ನಮ್ಮ ಹೆಮ್ಮೆ: ಕೇಂದ್ರ ಸಚಿವ ರವಿಶಂಕರ್ ಹೇಳಿಕೆ

ಕೇಂದ್ರ ಸಚಿವ ರವಿಶಂಕರ್ ಹೇಳಿಕೆ
Last Updated 11 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಕೂ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಪ್ಲಿಕೇಷನ್. ಅದರ ಬಗ್ಗೆ ನಾವು ಹಮ್ಮೆ ಪಡಬೇಕು’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ಮಾತನಾಡಿದ ರವಿಶಂಕರ್ ಅವರು, ‘ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೂ, ಇಂದು ಯಶಸ್ಸು ಕಂಡಿದೆ. ಭಾರತೀಯರು ಇಂತಹ ತಂತ್ರಜ್ಞಾನ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ ಎಂಬುದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಚಾರ. ನಮ್ಮ ನವೋದ್ಯಮಗಳ ಈ ಸಾಹಸವನ್ನು ನಾವು ಮೆಚ್ಚಿಕೊಳ್ಳಬೇಕು’ ಎಂದು ಹೇಳಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಪ್ರಧಾನಿ, ನೀವು (ವೆಂಕಯ್ಯ ನಾಯ್ಡು), ರಾಜನಾಥ್ ಸಿಂಗ್, ಪ್ರಕಾಶ್ ಜಾವಡೇಕರ್ ಮತ್ತು ನಾನು ಸೇರಿದಂತೆ ವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ, ಸ್ವತಂತ್ರ ನ್ಯಾಯಾಂಗಕ್ಕಾಗಿ ಹೋರಾಡಿದಂತಹ ನಾಯಕರು ಈ ಸರ್ಕಾರವನ್ನು ಮುನ್ನಡೆಸುತ್ತಿದ್ದೇವೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ನಮ್ಮ ಸರ್ಕಾರ ಎಷ್ಟು ಬದ್ಧವಾಗಿದೆಯೋ, ದೇಶದ ಭದ್ರತೆ ಮತ್ತು ಸಾರ್ವಭೌಮತೆಯ ರಕ್ಷಣೆಗೂ ಅಷ್ಟೇ ಬದ್ಧವಾಗಿದೆ’ ಎಂದು ರವಿಶಂಕರ್ ಅವರು ಹೇಳಿದರು.

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಟ್ವಿಟರ್‌ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ನೀಡಿದ್ದ ಆದೇಶವನ್ನು ಜಾರಿಗೆ ತರುವಲ್ಲಿ ಟ್ವಿಟರ್ ವಿಳಂಬ ಮಾಡಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗದು ಎಂದು ಟ್ವಿಟರ್ ಹೇಳಿತ್ತು. ಟ್ವಿಟರ್‌ನ ಈ ಧೋರಣೆಯನ್ನು ಸರ್ಕಾರ ಖಂಡಿಸಿತ್ತು. ಇದರ ಬೆನ್ನಲ್ಲೇ ಟ್ವಿಟರ್‌ಗೆ ಪರ್ಯಾಯ ಅಪ್ಲಿಕೇಷನ್‌ಗಳನ್ನು ಬಳಸುವ ಬಗೆಗಿನ ಚರ್ಚೆ ಮುನ್ನೆಲೆಗೆ ಬಂದಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೂ ಅನ್ನು ಟ್ವಿಟರ್‌ಗೆ ಪರ್ಯಾಯ ವಾಗಿ ಬಳಸುವ ಅಭಿಯಾನವೂ ಆರಂಭವಾಗಿದೆ. ಕೇಂದ್ರ ಸರ್ಕಾರದ ಹಲವು ಸಚಿವಾಲಯಗಳು ಮತ್ತು ವಿಭಾಗಗಳು ಈಗಾಗಲೇ ಕೂ ಖಾತೆಗಳನ್ನು ತೆರೆದಿವೆ.

ಮಾಹಿತಿ ಸೋರಿಕೆ

‘ಕೂ ಅಪ್ಲಿಕೇಷನ್‌ನಿಂದ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತಿದೆ’ ಎಂದು ಫ್ರಾನ್ಸ್‌ನ ಸೈಬರ್ ಭದ್ರತಾ ತಜ್ಞ ರಾಬರ್ಟ್ ಬ್ಯಾಪ್ಟಿಸ್ಟ್ ಅವರು ಹೇಳಿದ್ದಾರೆ. ಈ ಸಂಬಂಧ ಅವರು ಟ್ವೀಟ್‌ನಲ್ಲಿ(@Elliot Alderson) ಮಾಹಿತಿ ಹಂಚಿಕೊಂಡಿದ್ದಾರೆ.

'ಬಳಕೆದಾರರ ಇ-ಮೇಲ್ ವಿಳಾಸ, ಜನ್ಮದಿನಾಂಕ, ಹೆಸರು, ಲಿಂಗ, ವೈವಾಹಿಕ ಮಾಹಿತಿ ಮತ್ತಿತರ ವಿವರಗಳು ಸೋರಿಕೆಯಾಗಿವೆ. ಈ ವಿವರ ಗಳನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದು' ಎಂದು ರಾಬರ್ಟ್ ಹೇಳಿದ್ದಾರೆ. ಅವರ ಟ್ವೀಟ್‌ಗೆ ಹಲವು ಭಾರತೀಯರು ಪ್ರತಿಕ್ರಿಯೆ ನೀಡಿದ್ದಾರೆ. ಮಾಹಿತಿ ಸೋರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಆಧಾರ್ ಸರ್ವರ್‌ನಿಂದ ಮತ್ತು ಆರೋಗ್ಯಸೇತು ಅಪ್ಲಿಕೇಷನ್‌ನಿಂದಲೂ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ರಾಬರ್ಟ್ ವರದಿ ಪ್ರಕಟಿಸಿದ್ದರು.

ವೈಯಕ್ತಿಕ ಮಾಹಿತಿ ಹಂಚಿಕೆ: ‘ನಮ್ಮ ವ್ಯವಹಾರಿಕ ಪಾಲುದಾರರು ಅಥವಾ ಥರ್ಡ್‌ಪಾರ್ಟಿ ಜಾಲತಾಣ ಗಳಿಗೆ ನಾವು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ನೀಡುತ್ತೇವೆ.ಆದರೆ ನಿಮ್ಮ ಒಪ್ಪಿಗೆ ಇಲ್ಲದೆ ಈ ಮಾಹಿತಿ ನೀಡುವುದಿಲ್ಲ ಈ ಪಾಲುದಾರರು ಅಥವಾ ಥರ್ಡ್‌ಪಾರ್ಟಿ ಜಾಲತಾಣಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ನಿಮಗೆ ಮಾರಾಟ ಮಾಡಬಹುದು.

ಆಯಾ ವಹಿವಾಟು ಮತ್ತು ಸೇವೆಗೆ ಅಗತ್ಯವಿರುವಷ್ಟು ಮಾಹಿತಿಯನ್ನು ಮಾತ್ರ ನಾವು ನೀಡುತ್ತೇವೆ. ವ್ಯವಹಾರಿಕ ಪಾಲುದಾರರು ಅಥವಾ ಥರ್ಡ್‌ಪಾರ್ಟಿ ಜಾಲತಾಣಗಳ ಖಾಸಗಿತನ ನೀತಿಗಳ ಮೇಲೆ ನಮಗೆ ನಿಯಂತ್ರಣವಿಲ್ಲ’ ಎಂದು ಕೂ ಅಪ್ಲಿಕೇಷನ್‌ನ ಜಾಲತಾಣದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT