ಗುರುವಾರ , ನವೆಂಬರ್ 14, 2019
19 °C

#ಮಿಡ್ಲ್‌ಕ್ಲಾಸ್‌ | ಲೂಸ್ ಬಟ್ಟೆ, ಹೈಬ್ರಿಡ್ ಸೋಪು, ಸಂಭ್ರಮದ ಬದುಕು

Published:
Updated:

ಬೆಂಗಳೂರು: ಟ್ವಿಟರ್‌ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ #MiddleClassThings ಮತ್ತು #MiddleClassProblems ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ಸಾಕಷ್ಟು ಜನರು ತಮ್ಮ ‘ಸಂಶೋಧನೆ’ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆರ್ಥಿಕ ಹಿಂಜರಿತದ ಈ ಕಾಲದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಮಧ್ಯಮ ವರ್ಗದ ಬದುಕಿನ ತವಕ, ತಲ್ಲಣಗಳ ಜೊತೆಗೆ ಬದುಕು ಸಂಭ್ರಮಿಸುವ ಉತ್ಸಾಹವನ್ನೂ ಈ ಪೋಸ್ಟ್‌ಗಳು ಹಂಚಿಕೊಳ್ಳುತ್ತಿವೆ. ವಿವಿಧ ಉತ್ಪನ್ನಗಳ ಸಂಪೂರ್ಣ ಬಳಕೆಗಾಗಿ ಜನರು ಅನುಸರಿಸುತ್ತಿರುವ ವಿಧಾನಗಳನ್ನು ಕಂಡು ಕಂಪನಿಗಳು ದಂಗಾಗಿರಬಹುದು.

ತ್ಯಾಗ, ಪುನರ್‌ಬಳಕೆ, ಹೋರಾಟ ಮತ್ತು ಸಣ್ಣಪುಟ್ಟ ಸಮಸ್ಯೆಗಳನ್ನು ಅಡ್ಡದಾರಿಯಲ್ಲಿ ಸರಿಪಡಿಸುವ ವಿಶಿಷ್ಟ ತಂತ್ರಗಳು ಟ್ವಿಟರ್‌ನಲ್ಲಿ ಪುಂಖಾನುಪುಂಖವಾಗಿ ತೇಲಿಬರುತ್ತಿವೆ. ಬಹುತೇಕ ಎಲ್ಲರ ಮನೆಗಳಲ್ಲೂ ದಿನದಿನದ ವಿದ್ಯಮಾನ ಎನಿಸಿದ್ದ ವಿಚಾರಗಳು ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದು ಹಲವರ ಗಮನ ಸೆಳೆದಿವೆ.

ಕೆಲವರು ದುಡ್ಡು ಉಳಿಸುವ ನಾನಾ ಮಾರ್ಗಗಳನ್ನು ಹೇಳಿ ‘ಉಳಿತಾಯದ ಪಂಡಿತ’ ಎನಿಸಿಕೊಂಡರೆ, ಇನ್ನೂ ಕೆಲವರು ಮನೆಗೆ ತಂದ ಉತ್ಪನ್ನವನ್ನು ಸಂಪೂರ್ಣ ಬಳಸುವ, ಉತ್ಪನ್ನ ಮುಗಿದ ಮೇಲೆ ಅದರ ಪ್ಯಾಕಿಂಗ್‌ ಬಳಸುವ ವಸ್ತುಗಳ ಪುನರ್‌ಬಳಕೆ ತಂತ್ರಗಳನ್ನು ಮನಗಾಣಿಸಿ ‘ಸೂಪರ್‌’ ಎನಿಸಿಕೊಂಡಿದ್ದಾರೆ.

ಟಿಪ್ಸುಗಳ ಸ್ಯಾಂಪಲ್ ಇಲ್ಲಿದೆ ನೋಡಿ...

* ಮನೆಗೆ ಬಂದ ಪತ್ರಿಕೆಯನ್ನು ಅಷ್ಟೇ ಅಲ್ಲ, ಬಸ್ಸು ಅಥವಾ ರೈಲಿನಲ್ಲಿ ಸಿಕ್ಕ ಪತ್ರಿಕೆಗಳನ್ನೂ ಶ್ರದ್ಧೆಯಿಂದ ಎತ್ತಿಡ್ತೀನಿ. ರದ್ದಿಗೆ ಹಾಕಿದ್ರೆ ದುಡ್ಡು ಸಿಗುತ್ತೆ.

* ಮನೆಯಲ್ಲಿ ನಾವುನಾವೇ ಇದ್ದಾಗ ಹಾಸಿಗೆ ಮೇಲೆ ಹಳೆಯ, ಹರಿದ, ತೇಪೆ ಹಾಕಿದ ಬೆಡ್‌ಶೀಟ್‌ ಹಾಕಿರ್ತೀವಿ. ಆದ್ರೆ ಯಾರಾದ್ರೂ ನೆಂಟರು ಬರ್ತಾರೆ ಆಂತ ಗೊತ್ತಾದ್ರೆ ಹೊಸದು, ಒಗೆದದ್ದು ಹಾಸ್ತೀವಿ.

* ಪ್ಲಾಸ್ಟಿಕ್‌ ಕವರ್‌ಗಳನ್ನು ಹಾಳು ಮಾಡುವುದಿಲ್ಲ. ಕಿಟಿಕಿಯ ಹುಕ್ಸ್‌ಗೆ ಸಿಕ್ಕಿಸಿದ ದೊಡ್ಡ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಎಲ್ಲ ಸಣ್ಣ ಕವರ್‌ಗಳನ್ನೂ ಹಾಕಿಟ್ಟಿರ್ತೀವಿ. ಸಮಯ ಅಂದ್ರೆ ಬೇಕಾಗುತ್ತೆ.

* ನಮ್ಮನೆ ಬಚ್ಚಲಲ್ಲಿ ಸೋಪು ಚೂರುಗಳು ಎಂದಿಗೂ ವ್ಯರ್ಥವಾಗಲ್ಲ. ಹೊಸ ಸೋಪಿನ ಅಡಿಗೆ ಹಳೆಯ ಸೋಪಿನ ಚೂರುಗಳು ಅಂಟಿಕೊಂಡಿರುತ್ವೆ.

* ನನಗೆ ಕಾರು ಕೊಳ್ಳೋಕೆ ಆಗಲ್ಲ ಅಂತ ನಾನೆಂದೂ ಬೇಜಾರು ಮಾಡಿಕೊಳ್ಳಲ್ಲ. ಇಂಥ ಟ್ರಾಫಿಕ್ ಇರೋ ಊರಿನಲ್ಲಿ ಕಾರು ಇದ್ದವರು ಅನುಭವಿಸೋ ಸುಖ ನನಗೆ ಚೆನ್ನಾಗಿ ಗೊತ್ತು ಅಂತ ಸಮಾಮಾಧ ಮಾಡಿಕೊಳ್ತೀನಿ.

* ನನ್ನಮ್ಮ ನನಗೆ ಎಂದೂ ಸರಿಯಾದ ಅಳತೆಯ ಬಟ್ಟೆ ತರೋದೇ ಇಲ್ಲ. ಸದಾ ಸಡಿಲ ಬಟ್ಟೇನೇ ತರ್ತಾಳೆ. ಕೇಳಿದ್ರೆ, ಬೆಳೆಯೋ ಹುಡುಗ ನೀನು, ಇದೇ ಬಟ್ಟೆ ಮುಂದಿನ ವರ್ಷಕ್ಕೂ ಆಗಬೇಕು ಅಲ್ವಾ ಅಂತಾಳೆ.

* ತಮ್ಮನಾಗಿ ಹುಟ್ಟೋದೇ ತಪ್ಪು ಅಂತ ನನಗೆ ಎಷ್ಟೋ ಸಲ ಅನ್ನಿಸಿದೆ. ಅಣ್ಣನಿಗೆ ಹೊಸ ಬಟ್ಟೆ ಬಂದಾಗಲೆಲ್ಲಾ ನನಗೆ ಅವನ ಹಳೇ ಬಟ್ಟೆ ಕೊಡ್ತಾರೆ. ಆದ್ರೆ ಎಲ್ರೂ ನನ್ನ ಅವನಿಗಿಂತ ಜಾಸ್ತೀನೆ ಮುದ್ದು ಮಾಡ್ತಾರೆ ಅನ್ನಿ.

* ಹಳೇ ಬನಿಯನ್, ಶಾರ್ಟ್‌ಗಳು ನೆಲ ಒರೆಸುವ ಬಟ್ಟೆಗಳಾಗ್ತವೆ.

* ಹಳೆ ಪ್ಯಾಂಟ್‌ಗಳು ಬ್ಯಾಗ್‌ಗಳಾಗ್ತವೆ, ಹಳೇ ಲುಂಗಿ–ಸೀರೆಗಳು ದಿಂಬು–ಹಾಸಿಗೆ ಕವರ್‌ಗಳಾಗ್ತವೆ.

* ‘ಬಳಸಿದ ನಂತರ ಅಪ್ಪಚ್ಚಿ ಮಾಡಿ’ ಅಂತ ಈ ಪೆಪ್ಸಿ, ಬಿಸ್ಲೇರಿ ಕಂಪನಿಗಳವರು ಬೇಕಾದಂತೆ ಬರ್ಕೊಂಡಿರಬಹುದು. ಯಾರು ಕೇರ್ ಮಾಡ್ತಾರೆ. ನಮ್ಮನೆಯಲ್ಲಂತೂ ಒಂದು ಲೀಟರ್‌ ಪೆಪ್ಸಿ ಬಾಟಲಿ ಒಂದು ವರ್ಷವಾದರೂ ಬಳಕೆ ಆಗಿರುತ್ತೆ.

* ಮಕ್ಕಳಿಗೆ ಸ್ಕೂಲ್‌ನವರು ವಂಶವೃಕ್ಷದ ಹೋಂ ಪ್ರಾಜೆಕ್ಟ್‌ ಕೊಟ್ಟಾಗ ಮಾತ್ರ ಫ್ಯಾಮಿಲಿ ಫೋಟೊ ತೆಗೆಸ್ತೀವಿ. ಅದಕ್ಕೂ ಮೊದಲು ಇರಲ್ಲ, ಆಮೇಲೂ ತೆಗೆಸಲ್ಲ.

* ಟೂತ್‌ಪೇಸ್ಟ್‌ ಮುಗೀತು ಅಂತ ಬಿಸಾಕ್ತೀರಾ? ಅಯ್ಯೋ ತಾಳ್ರೀ. ಅದರ ಹೊಟ್ಟೆ ಕಟ್ ಮಾಡಿ ಒಂದು ದಿನಕ್ಕೆ ಆಗುವಷ್ಟು ಸಿಗುತ್ತೆ. ತಲೆ ಕತ್ತರಿಸಿ ಇನ್ನೆರೆಡು ದಿನ ಮೇಂಟೇನ್‌ ಮಾಡಬಹುದು.

* ಯಾರಾದ್ರೂ ಮನೆಗೆ ಬರ್ತಾರೆ ಅಂದ್ರೆ ಅಟ್ಟದ ಮೇಲಿನ ರಟ್ಟಿನ ಡಬ್ಬಗಳಲ್ಲಿದ್ದ ಪಾತ್ರೆಗಳೆಲ್ಲಾ ಅಡುಗೆಮನೆ ಶೆಲ್ಫಿಗೆ ಬಂದುಬಿಡ್ತಾವೆ.

* ಇನ್ನೇನು ನೆಂಟರು ಮನೆಗೆ ಬರ್ತಾರೆ ಅಂದಾಗ ಮಾತ್ರ ಸೋಫಾ ಕವರ್‌ ಬದಲಿಸ್ತೀವಿ.

* ‘ದೊಡ್ಡೋನಾದ ಮೇಲೆ ಅಮೆರಿಕದಲ್ಲಿ ಕೆಲಸ ಮಾಡ್ಕೊಂಡು ಸುಖವಾಗಿ ಇರಪ್ಪಾ’ – ಮಕ್ಕಳಿಗೆ ಮಿಡ್ಲ್‌ಕ್ಲಾಸ್‌ ಅಪ್ಪಅಮ್ಮಂದಿರ ನಿತ್ಯದ ಆಶೀರ್ವಾದ.

* ಮಕ್ಕಳ ಬಟ್ಟೆಯನ್ನು ರಾತ್ರಿಯೇ ಐರನ್ ಮಾಡಿಡ್ತೀವಿ. ಬೆಳಿಗ್ಗೆ ಕರೆಂಟ್ ಹೋಗಿಬಿಟ್ರೆ ಕಷ್ಟ.

* ದೀಪಾವಳಿ ಯಾವಾಗ ಬರುತ್ತೋ ಅಂತ ಕಾಯ್ತಾ ಇರ್ತೀವಿ. ಅವತ್ತಷ್ಟೇ ಹೊಸ ಬಟ್ಟೆ ತರೋದು. ಹೋಳಿ ಹಬ್ಬ ಯಾವಾಗ ಬರುತ್ತೋ ಅಂತ ಕಾಯ್ತಾ ಇರ್ತೀವಿ. ವಾರ್ಡ್‌ರೋಬ್ ಮೂಲೆಯಲ್ಲಿರೋ ಹಳೇ ಬಟ್ಟೆಗಳನ್ನು ಅಮ್ಮ ಅವತ್ತೇ ಹಾಕ್ಕೊಳೋಳೆ ಕೊಡೋದು.

* ಗಣೇಶನ ಹಬ್ಬದ ದಿನ ಮಾಡಿದ ಕಡುಬು, ಯುಗಾದಿಯ ಒಬ್ಬಟ್ಟು, ಶಿವರಾತ್ರಿಯ ಕಜ್ಜಾಯ... ಕಡಿಮೆ ಅಂದ್ರೂ ಮೂರು ದಿನ ತಿಂತೀವಿ.

* ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಲೈಟ್–ಫ್ಯಾನ್ ಆಫ್ ಮಾಡ್ತೀವಿ. ಮನೆಗೆ ಬಂದವರು ಎಷ್ಟೊತ್ತಾದ್ರೂ ಎದ್ದು ಹೋಗದಿದ್ರೂ ಅದೇ ಕೆಲಸ ಮಾಡ್ತೀವಿ.

* ಗೋಬಿ ಮಂಚೂರಿ ತಿನ್ನೋಕೆ ಹೋದಾಗ ಅರ್ಧ ಪ್ಲೇಟ್ ಕೊಡು ಗುರು, ದೊಡ್ಡದೊಡ್ಡ ಪೀಸ್ ಹಾಕು ಅಂತ ಕೇಳ್ತೀವಿ.

* ವಿಮಾನ ನಿಲ್ದಾಣದಲ್ಲೂ ಪಾರ್ಲೆ–ಜಿ ಹುಡುಕ್ತೀವಿ.

ನಿಮ್ಮನೆ ಕಥೆ ಏನು? ಕಾಮೆಂಟ್‌ ಮಾಡಿ...

ಆರ್ಥಿಕ ಹಿಂಜರಿತದ ಈ ಕಾಲದಲ್ಲಿ ಮಧ್ಯಮ ವರ್ಗದ ಜನ ಕಾಸು ಉಳಿಸೋಕೆ ಮಾಡೋ ಸರ್ಕಸ್‌ಗಳನ್ನು ಈ ಪೋಸ್ಟ್‌ಗಳು ಹಂಚಿಕೊಳ್ಳುತ್ತಿವೆ. ಕಾಸು ಉಳಿಸೋಕೆ ನೀವು ಕಂಡುಕೊಂಡಿರುವ ದಾರಿಗಳು ಎಂಥವು? ಕಾಮೆಂಟ್‌ ಮಾಡಿ. ಓದುಗರೊಂದಿಗೆ ಹಂಚಿಕೊಳ್ಳಿ.

ಪ್ರತಿಕ್ರಿಯಿಸಿ (+)