ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ 60 ಅಂಕ ಪಡೆದ ವಿದ್ಯಾರ್ಥಿಯ ತಾಯಿ ಸಂದೇಶ ವೈರಲ್!

‘ಅಂಕವಲ್ಲ, ನಿಮ್ಮ ಮಕ್ಕಳ ಸಾಮರ್ಥ್ಯದ ಬಗ್ಗೆ ಸಂಭ್ರಮಿಸಿ’
Last Updated 9 ಮೇ 2019, 5:52 IST
ಅಕ್ಷರ ಗಾತ್ರ

ನವದೆಹಲಿ:ಪರೀಕ್ಷೆಗಳಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದರೂ ಸಾಲದು ಎಂಬತಹ ಸ್ಪರ್ಧಾತ್ಮಕ ಪರಿಸ್ಥಿತಿಯಿರುವಾಗ ವಿದ್ಯಾರ್ಥಿಯೊಬ್ಬ ಶೇ 60 ಅಂಕ ಗಳಿಸಿದ್ದಕ್ಕೆ ಸಂಬಂಧಿಸಿದ ಫೇಸ್‌ಬುಕ್ ಸಂದೇಶವೊಂದು ವೈರಲ್ ಆಗಿದೆ ಎಂದರೆ ನೀವು ನಂಬಲೇ ಬೇಕು.

ಸಿಬಿಎಸ್‌ಇ ಪರೀಕ್ಷೆಯಲ್ಲಿ ಮಗ ಶೇ 60ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿದ್ದನ್ನು ಸಂಭ್ರಮಿಸಿ ದೆಹಲಿ ಮೂಲದ ವಂದನಾ ಕಟೋಚ್‌ ಎಂಬುವವರು ಮೇ 6ರಂದು ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ಅದು ಈವರೆಗೆ 5,000ಕ್ಕೂ ಹೆಚ್ಚು ಶೇರ್ ಆಗಿದ್ದು, ಸಾವಿರಕ್ಕೂ ಹೆಚ್ಚು ಜನ ಪ್ರತಿಕ್ರಿಯೆ ಬರೆದಿದ್ದಾರೆ.

ಸಂದೇಶವೇನು?:‘ಪರೀಕ್ಷೆಯಲ್ಲಿ ಶೇ 60ರಷ್ಟು ಅಂಕಗಳೊಂದಿಗೆ ತೇರ್ಡಗೆಯಾದ ನನ್ನ ಮಗನ ಬಗ್ಗೆ ಅತೀವ ಹೆಮ್ಮೆಯಿದೆ. ನಿಜ, ಇದು ಶೇ 90 ಅಲ್ಲ. ಆದರೆ ನನ್ನ ಭಾವನೆಯನ್ನು ಇದು ಬದಲಿಸಲಾರದು. ಯಾಕೆಂದರೆ, ಕೆಲವು ವಿಷಯಗಳಲ್ಲಿ ಹಿಂದಿದ್ದ ಆತ ಅವನ್ನು ಕೈಚೆಲ್ಲಿಬಿಡುವ ಸ್ಥಿತಿ ತಲುಪಿದ್ದನ್ನು ನಾನು ಗಮನಿಸಿದ್ದೆ. ಆದರೆ, ಕೊನೆಯ ಒಂದೂವರೆ ತಿಂಗಳು ಕಠಿಣ ಶ್ರಮವಹಿಸಿ ಅವುಗಳಲ್ಲಿ ಸಾಧನೆ ಮಾಡಿ ತೇರ್ಗಡೆಯಾದ.ಅಮರ್‌, ನಿನ್ನಂತಹ ಇತರರಿಗೆ ಇದು ಮೀನಿಗೆ ಮರ ಏರಲು ಹೇಳಿದಂತೆ. ನಿನ್ನದಾದ ಸಾಮರ್ಥ್ಯವನ್ನೇ ದೊಡ್ಡದಾಗಿ ಮಾಡಿಕೊ, ವಿಶಾಲವಾಗಿಸು. ನಿನ್ನ ಆಂತರಿಕ ಒಳ್ಳೆಯತನ, ಕೌತುಕತೆ, ಜ್ಞಾನವನ್ನು ಜೀವಂತವಾಗಿರಿಸು. ಹಾಗೆಯೇ ನಿನ್ನ ಹಾಸ್ಯಪ್ರಜ್ಞೆಯನ್ನೂ’ ಎಂದುವಂದನಾ ಕಟೋಚ್‌ ಬರೆದಿದ್ದಾರೆ.

ಈ ಸಂದೇಶಕ್ಕೆ ಸಾವಿರಾರು ಮಂದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಕ್ಕಳ ಸಾಮರ್ಥ್ಯಕ್ಕನುಗುಣವಾಗಿ ಅವರನ್ನು ಬೆಳೆಸುವ ತಾಯಂದಿರು ಹೆಚ್ಚಾಗಲಿ, ಎಲ್ಲ ತಾಯಂದಿರು ನಿಮ್ಮ ಹಾಗೆಯೇ ಆಗಲಿ, ಮಕ್ಕಳ ಮೇಲೆ ಅತಿಯಾಗಿ ಒತ್ತಡ ಹೇರುವುದು ಸಲ್ಲ... ಈ ರೀತಿಯ ನೂರಾರು ಪ್ರತಿಕ್ರಿಯೆಗಳು ವಂದನಾ ಅವರ ಫೇಸ್‌ಬುಕ್‌ ಬರಹಕ್ಕೆ ದೊರೆತಿವೆ.

ಮಗುವಿನ ಸಾಮರ್ಥ್ಯವನ್ನು ಅಂಕಪಟ್ಟಿ ನಿರ್ಧರಿಸದು ಎಂಬುದು ವಂದನಾ ಅವರ ಬಲವಾದ ನಂಬಿಕೆ. ಅಂಕದ ಆಧಾರದಲ್ಲಿ ಮಕ್ಕಳ ಸಾಮರ್ಥ್ಯ ಅಳೆಯುವುದನ್ನು ನಿಲ್ಲಿಸಿ ಅವರಲ್ಲಿ ನೈಜವಾಗಿ ಅಡಕವಾಗಿರುವ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕೊಡಬೇಕು. ಮಾನಸಿಕ ಒತ್ತಡ, ಅಡೆತಡೆಗಳಬನ್ನು ನಿವಾರಿಸಬೇಕು ಎಂಬುದು ಅವರ ಆಶಯ. ವಂದನಾ ಅವರ ಈ ನಿಲುವನ್ನು ಅನೇಕ ತಾಯಂದಿರು ಕೊಂಡಾಡಿದ್ದು, ಮೆಚ್ಚುಗೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

‘ಮಗನ ಸಾಮರ್ಥ್ಯದ ಮೇಲೆ ನನಗೆ ಅತೀವ ನಂಬಿಕೆಯಿದೆ. ಅಂಕಪಟ್ಟಿಯಲ್ಲಿ ತೋರುವುದಕ್ಕಿಂತಲೂ ಹೆಚ್ಚಿನದ್ದು ಮಗುವಿನಲ್ಲಿರುತ್ತದೆ. ಮಗ ಆತನದ್ದೇ ಆದ ಸಾಮರ್ಥ್ಯವನ್ನು ಅನ್ವಷಿಸುತ್ತಾ ಆತನ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬುದು ನನ್ನ ಬಯಕೆ’ ಎಂದು ಜಾಲತಾಣವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ವಂದನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT