ಬೆಂಗಳೂರು: ರಕ್ಷಾ ಬಂಧನದ ಹಿನ್ನೆಲೆ ಹೇಳುವಾಗ ಸಂಸದೆ ಸುಧಾ ಮೂರ್ತಿ ಅವರು ನೀಡಿರುವ ದೃಷ್ಟಾಂತ ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ಬೆಳಿಗ್ಗೆ ಎಕ್ಸ್ ತಾಣದಲ್ಲಿ ಸುಧಾ ಮೂರ್ತಿ ಅವರು ರಕ್ಷಾ ಬಂಧನ ಪ್ರಯುಕ್ತ ವಿಡಿಯೊ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, 'ರಕ್ಷಾ ಬಂಧನ ಭಾರತೀಯರಿಗೆ ತುಂಬಾ ಮಹತ್ವದ್ದು ಹಾಗೂ ಸಾಂಪ್ರದಾಯಿಕ ಹಬ್ಬ. ರಾಣಿ ಕರ್ಣವತಿ ತಾನು ಕಷ್ಟದಲ್ಲಿದ್ದಾಗ ಮೊಘಲ್ ದೊರೆಗೆ ರಾಖಿ ಕಳುಹಿಸಿ ಸಹಾಯಯಾಚಿಸಿದ್ದಳು. ಆ ಹಿನ್ನೆಲೆಯಲ್ಲಿ ಈ ಹಬ್ಬ ನಡೆದುಕೊಂಡು ಬಂದಿದೆ ಎಂಬರ್ಥದಲ್ಲಿ ಹೇಳಿದ್ದರು.
ಆದರೆ, ಇದಕ್ಕೆ ಕೆಲ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಕ್ಷಾ ಬಂಧನವನ್ನು ಮೊಘಲ್ ದೊರೆಗೆ ಹೋಲಿಸಿರುವುದು ಸರಿಯಲ್ಲ. ರಕ್ಷಾ ಬಂಧನ ಭಾರತೀಯ ಸಂಪ್ರದಾಯದ ಪುರಾತನ ಸಂಸ್ಕೃತಿ. ರಾಮಾಯಣ, ಮಹಾಭಾರತದಲ್ಲೂ ಅದರ ಉಲ್ಲೇಖ ಇದೆ, ಸರಿಯಾಗಿ ತಿಳಿದುಕೊಳ್ಳಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಸೋಮವಾರ ಸಂಜೆ ಮತ್ತೊಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಸುಧಾ ಮೂರ್ತಿ ಅವರು, ನಾನು ಹೇಳಿರುವುದಕ್ಕೆ ಅಪಾರ್ಥ ಬೇಡ. ರಕ್ಷಾ ಬಂಧನದ ಬಗ್ಗೆ ನಾವು ಕೇಳಿಕೊಂಡು ಬಂದಿರುವ ಅನೇಕ ಕಥೆಗಳಲ್ಲಿ ಒಂದನ್ನು ಹೇಳಿದ್ದೇನೆ. ರಕ್ಷಾ ಬಂಧನ ಈ ನೆಲದ ಸಂಸ್ಕೃತಿ ಎಂಬುದನ್ನು ಅಲ್ಲಗಳೆಯುವುದಿಲ್ಲ ಎಂದಿದ್ದಾರೆ.