ಮಂಗಳವಾರ, ಮಾರ್ಚ್ 31, 2020
19 °C

‘ಭಾರತದಲ್ಲಿ ನನಗೆ ಭವ್ಯ ಸ್ವಾಗತ’: ಅಮೆರಿಕದಿಂದ ಹೊರಡುವ ಮೊದಲು ಟ್ರಂಪ್ ಹೇಳಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್‌ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡು ದಿನಗಳ ಭೇಟಿಗಾಗಿ ಭಾನುವಾರ ಭಾರತಕ್ಕೆ ಪ್ರಯಾಣ ಬೆಳೆಸಿದರು. ‘ಈ ಹಿಂದೆ ಎಂದೂ ನಡೆಯದ ಅತಿದೊಡ್ಡ ಕಾರ್ಯಕ್ರಮವಾಗಲಿದೆ ನನ್ನ ಭಾರತ ಭೇಟಿ’ ಎಂದು ಟ್ರಂಪ್ ಹೊರಡುವ ಮೊದಲು ಹೇಳಿದರು.

ಪತ್ನಿ ಮೆಲಾನಿಯಾ ಟ್ರಂಪ್, ಅಧ್ಯಕ್ಷರ ಸಲಹೆಗಾರರೂ ಆಗಿರುವ ಪುತ್ರಿ ಇವಾಂಕಾ ಟ್ರಂಪ್ ಮತ್ತು ಅಳಿಯ ಜರೇದ್ ಕುಶ್ನೆರ್ ಜೊತೆಗೂಡಿ ಟ್ರಂಪ್ ವಿಮಾನ ಹತ್ತಿದರು. ಟ್ರಂಪ್ ಕುಟುಂಬದ ಜೊತೆಗೆ ಉನ್ನತ ಮಟ್ಟದ ನಿಯೋಗವೂ ಭಾರತಕ್ಕೆ ಭೇಟಿ ನೀಡುತ್ತಿದೆ.

 

‘ನಾನು ಭಾರತೀಯರೊಂದಿಗೆ ಬೆರೆಯುವುದನ್ನು ನಿರೀಕ್ಷಿಸುತ್ತಿದ್ದೇನೆ. ನನ್ನ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಬರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನನ್ನ ಗೆಳೆಯ. ಇದು ಭಾರತದಲ್ಲಿ ಹಿಂದೆಂದೂ ನಡೆಯದಂಥ ದೊಡ್ಡ ಕಾರ್ಯಕ್ರಮವಾಗಲಿದೆ ಎಂದು ಮೋದಿ ಹೇಳಿದ್ದಾರೆ’ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: Explainer | ನಮಸ್ತೆ ಟ್ರಂಪ್‌

ಹೊರಡುವುದಕ್ಕೆ ಮೊದಲು ‘ಬಾಹುಬಲಿ–2’ ಸಿನಿಮಾದ ಎಡಿಟೆಡ್ ವಿಡಿಯೊ ಪೋಸ್ಟ್ ಮಾಡಿದ್ದ ಟ್ರಂಪ್. ‘ಭಾರತದ ಗೆಳೆಯರನ್ನು ಭೇಟಿಯಾಗಲು ಕಾತರದಿಂದ್ದೇನೆ ಎಂದಿದ್ದರು.

‘ಎರಡು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೆ. ಈಗ ಮತ್ತೆ ಭಾರತಕ್ಕೆ ಹಿಂದಿರುಗುತ್ತಿದ್ದೇನೆ. ಎರಡು ದೊಡ್ಡ ಪ್ರಜಾಪ್ರಭುತ್ವ ದೇಶಗಳ ನಂಟು ಇನ್ನಷ್ಟು ವೃದ್ಧಿಸಲಿ’ ಎಂದು ಡೊನಾಲ್ಡ್‌ ಟ್ರಂಪ್ ಪುತ್ರಿ ಇವಾಂಕಾ ಟ್ವೀಟ್ ಮಾಡಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾಣಿ ಅವರು ಟ್ವೀಟ್ ಮಾಡಿದ್ದ ವಿಡಿಯೊ ಶೇರ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸಹ ಅಮೆರಿಕ ಅಧ್ಯಕ್ಷರಿಗೆ ಸ್ವಾಗತ ಸಂದೇಶ ನೀಡಿದ್ದಾರೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಕ್ಕೆ ಭಾರತ ಕಾತರದಿಂದ ಕಾಯುತ್ತಿದೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಐತಿಹಾಸಿ ಸಮಾರಂಭದಲ್ಲಿ ಅವರು ಪಾಲ್ಗೊಳ್ಳುತ್ತಿರುವುದು ನಮಗೆ ಸಂದ ಗೌರವ’ ಎಂದು ಮೋದಿ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಬೆಳಿಗ್ಗೆ 11.40ರ ಹೊತ್ತಿಗೆ ಅಹಮದಾಬಾದ್‌ಗೆ ಬರಲಿದ್ದಾರೆ. ಈ ಭೇಟಿಯ ಫಲಶ್ರುತಿಯ ಬಗ್ಗೆ ಎರಡೂ ದೇಶಗಳಲ್ಲಿ ಬಾರಿ ಕುತೂಹಲ ಇದೆ.

ಇದನ್ನೂ ಓದಿ: ಟ್ರಂಪ್‌–ಮೋದಿ ಜುಗಲ್‌ಬಂದಿ

ಮೊಟೆರಾದಲ್ಲಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದಲ್ಲಿ ಟ್ರಂಪ್‌ ಭಾಗಿಯಾಗಲಿದ್ದಾರೆ. ಇದು ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಟ್ರಂಪ್‌ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು