ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಲಬ್‌ ಹೌಸ್‌: ಸೋಷಿಯಲ್‌ ಆಡಿಯೊ ಕಡೆಗೆ...

Last Updated 22 ಜೂನ್ 2021, 19:30 IST
ಅಕ್ಷರ ಗಾತ್ರ

ಈಗ ಕ್ಲಬ್‌ಹೌಸ್‌ ಮೇನಿಯಾ. ಈಗ ಇರುವ ಎಲ್ಲ ಸಾಮಾಜಿಕ ಮಾಧ್ಯಮಗಳೂ ಒಂದೋ ಬರವಣಿಗೆಗೆ ಅಥವಾ ವಿಡಿಯೊಗೆ ಮೀಸಲಾಗಿವೆ. ಆದರೆ, ಈಗ ಸೋಷಿಯಲ್‌ ಆಡಿಯೊ ಎನ್ನುವುದು ಹೊಸ ಸೇರ್ಪಡೆ. ಈ ಹೊಸ ಆ್ಯಪ್‌ನ ಬಳಕೆ ಹೇಗೆ? ಇದು ಸೃಷ್ಟಿಸಿರುವ ಮೇನಿಯಾ ಎಂಥದ್ದು ಎನ್ನುವುದರ ಕುರಿತ ಬರಹ ಇದು.

*

ಕಳೆದ ಒಂದು ತಿಂಗಳಿನಿಂದ ಜನರು ಸೋಷಿಯಲ್‌ ಮೀಡಿಯಾಗಿಂತ ಹೆಚ್ಚಾಗಿ ಸೋಷಿಯಲ್‌ ಆಡಿಯೊದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಒಂದು ತಿಂಗಳ ಹಳೆಯ ಕ್ಲಬ್‌ಹೌಸ್‌ ಎಂಬ ಆ್ಯಪ್‌ ಇಡೀ ಸೋಷಿಯಲ್ ಮೀಡಿಯಾ ಪ್ರಿಯರಲ್ಲಿ ಹೊಸ ಸಂಚಲನ ಮೂಡಿಸಿದೆ.

ಅಮೆರಿಕದ ಪಾಲ್‌ ಡೇವಿಸನ್‌ ಮತ್ತು ಭಾರತೀಯ ಮೂಲದ ರೋಹನ್‌ ಸೇಥ್‌ ಎಂಬ ಇಬ್ಬರು ತಂತ್ರಜ್ಞರು 2020ರಲ್ಲಿ ಆರಂಭಿಸಿದ ಕ್ಲಬ್‌ಹೌಸ್, ಮೊದಲು ಆಪಲ್‌ ಫೋನ್‌ಗಳಿಗೆ ಮಾತ್ರವೇ ಬಿಡುಗಡೆಯಾಗಿತ್ತು. ಆದರೆ, 2021 ಮಾರ್ಚ್ 21ರಂದು ಅಂದರೆ, ಬಿಡುಗಡೆಯಾಗಿ ಒಂದು ವರ್ಷದ ನಂತರ ಆಂಡ್ರಾಯ್ಡ್‌ ಫೋನ್‌ಗಳಲ್ಲೂ ಬಳಕೆಗೆ ಮುಕ್ತವಾಯಿತು. ಆಗಿನಿಂದ ಕ್ಲಬ್‌ಹೌಸ್‌ ಮೇನಿಯಾ ಶುರುವಾಗಿದೆ. ಇದರ ಬೆನ್ನಲ್ಲೇ ಈಗ ಇತರ ಸೋಷಿಯಲ್ ಮೀಡಿಯಾ ಮತ್ತು ಆಡಿಯೊ ಕಂಪನಿಗಳೂ ಈ ಥರದ್ದೇ ಸೇವೆಯನ್ನು ಆರಂಭಿಸುವ ಚಿಂತನೆ ನಡೆಸಿವೆ. ಸಂಗೀತ ಪ್ರಸಾರ ಮಾಡುವ ಜನಪ್ರಿಯ ಆ್ಯಪ್‌ ಸ್ಪಾಟಿಫೈ ತನ್ನದೇ ‘ಕ್ಲಾಸ್‌ರೂಮ್‌’ ಎಂಬ ಲೈವ್‌ ಪಾಡ್‌ಕಾಸ್ಟ್‌ ಆ್ಯಪ್‌ ಬಿಡುಗಡೆ ಮಾಡಿದೆ. ಟ್ವಿಟರ್‌ ಕೂಡ ಸ್ಪೇಸಸ್ ಅನ್ನು ಆರಂಭಿಸಿದೆ. ಫೇಸ್‌ಬುಕ್‌ ಕೂಡ ಇಂಥದ್ದೇ ಸೇವೆಯನ್ನು ಆರಂಭಿಸುವುದಾಗಿ ಹೇಳಲಾಗುತ್ತಿದೆ.

ಈ ಎಲ್ಲ ಆ್ಯಪ್‌ಗಳ ಮೂಲ ಉದ್ದೇಶವೊಂದೇ... ಮಾತನಾಡಲು ಅವಕಾಶ ಮಾಡಿಕೊಡುವುದು.

ಈಗ ಇರುವ ಎಲ್ಲ ಸಾಮಾಜಿಕ ಮಾಧ್ಯಮಗಳೂ ಒಂದೋ ಬರವಣಿಗೆಗೆ ಅಥವಾ ವಿಡಿಯೊಗೆ ಮೀಸಲಾಗಿವೆ. ಸದ್ಯ ಚಾಲ್ತಿಯಲ್ಲಿರುವ ಸೋಷಿಯಲ್‌ ಆಡಿಯೊ ಮಾಧ್ಯಮದ ಎಲ್ಲ ಆ್ಯಪ್‌ಗಳ ಮೂಲ ಧ್ಯೇಯವು ಜನರ ಮಾತನಾಡುವ ಹವ್ಯಾಸವನ್ನು ಬೆಳೆಸುವುದು; ಅದನ್ನು ಬಳಸಿಕೊಂಡು ಹೆಚ್ಚೆಚ್ಚು ಬಳಕೆದಾರರನ್ನು ಪಡೆಯುವುದಷ್ಟೇ ಆಗಿದೆ. ಉದ್ಯಮಿ ಎಲಾನ್‌ ಮಸ್ಕ್‌ ಮತ್ತು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ ಒಮ್ಮೆ ಕ್ಲಬ್‌ಹೌಸ್‌ನಲ್ಲಿ ಮಾತುಕತೆಗೆ ಆಗಮಿಸಿದ್ದರಿಂದ, ರಾತ್ರಿ ಬೆಳಗಾಗುವುದರೊಳಗೆ ಎಲ್ಲರಲ್ಲೂ ಕ್ಲಬ್‌ಹೌಸ್‌ ಮನೆಮಾತಾಯಿತು.

ಕ್ಲಬ್‌ಹೌಸ್‌ ಬಳಸುವುದು ಹೇಗೆ?
ಕ್ಲಬ್‌ಹೌಸ್‌ ಪ್ರವೇಶಿಸಲು ಸದ್ಯಕ್ಕೆ ಆಹ್ವಾನ ಬೇಕು. ಈಗಾಗಲೇ ಕ್ಲಬ್‌ಹೌಸ್‌ನಲ್ಲಿ ಖಾತೆ ಹೊಂದಿರುವವರು ಹೊಸದಾಗಿ ಕ್ಲಬ್‌ಹೌಸ್‌ಗೆ ಬರಲು ಇಚ್ಛಿಸುವವರಿಗೆ ಆಹ್ವಾನ ಕಳುಹಿಸಬೇಕು. ಅದಕ್ಕಾಗಿ ಇನ್ವೈಟ್ ಎಂಬ ಆಯ್ಕೆ ಕ್ಲಬ್‌ಹೌಸ್‌ ಆ್ಯಪ್‌ನಲ್ಲಿ ಇದೆ.

ಕ್ಲಬ್‌ಹೌಸ್‌ ಸೈನ್ ಅಪ್‌ ಮಾಡುವಾಗ, ನಿಮ್ಮ ಯೂಸರ್‌ನೇಮ್ ಸೆಟ್ ಮಾಡುವಂತೆ ಕೇಳುತ್ತದೆ. ಆ ಯೂಸರ್‌ನೇಮ್‌ ನಮ್ಮನ್ನು ಕ್ಲಬ್‌ಹೌಸ್‌ನಲ್ಲಿ ಹುಡುಕುವುದಕ್ಕೆ ಸಹಾಯ ಮಾಡುವ ವಿಶಿಷ್ಟ ಹೆಸರಾದ್ದರಿಂದ, ಅದನ್ನು ಸ್ವಲ್ಪ ಕಾಳಜಿಯಿಂದ ಸೆಟ್ ಮಾಡುವುದೊಳಿತು. ನಂತರ ನಿಮ್ಮ ಆಸಕ್ತಿಗಳನ್ನು ಆಯ್ಕೆ ಮಾಡುವಂತೆ ಕೇಳುತ್ತದೆ. ನಿಮ್ಮ ಆಸಕ್ತಿಯ ವಿಷಯಗಳನ್ನು ಆಧರಿಸಿ ಡ್ಯಾಶ್‌ಬೋರ್ಡ್‌ನಲ್ಲಿ ನಿಮಗೆ ಮೆಚ್ಚುಗೆಯಾಗಬಹುದಾದ ವಿಷಯದ ರೂಮ್‌ಗಳನ್ನು ನಿಮಗೆ ತೋರಿಸುತ್ತದೆ.

ಮಾತಾಡಲು ಕೈಯೆತ್ತಿ
ಯಾವುದೇ ಒಂದು ರೂಮ್‌ ಮೇಲೆ ಸುಮ್ಮನೆ ಒಮ್ಮೆ ಒತ್ತಿದರೆ ಸಾಕು. ನೀವು ಕೇಳುಗರಾಗಿ ಒಳಗೆ ಹೋಗುತ್ತೀರಿ. ಚರ್ಚೆ, ಮಾತುಕತೆಯನ್ನು ಕೇಳಿ ನಿಮಗೂ ಮಾತನಾಡಬೇಕು ಎಂಬ ಹುಕಿ ಬಂದರೆ, ಕೆಳ ಬಲ ಮೂಲೆಯಲ್ಲಿರುವ ಕೈಯೆತ್ತುವ ಚಿಹ್ನೆಯನ್ನು ಒತ್ತಿದರೆ, ‘ಇವರು ಮಾತನಾಡಲು ಬಯಸುತ್ತಿದ್ದಾರೆ. ಅನುಮತಿಸುತ್ತೀರಾ?’ ಎಂಬ ಸೂಚನೆ ನಿರೂಪಕರಿಗೆ ಹೋಗುತ್ತದೆ. ಅವರು ನಿಮಗೆ ಅನುಮತಿಸಿದರೆ, ನೀವು ಮಾತನಾಡಲು ವೇದಿಕೆಗೆ ಹೋಗುತ್ತೀರಿ. ನೀವು ಮಾತನಾಡದೇ ಇರಲು ಬಯಸಿದಾಗಲೆಲ್ಲ ನಿಮ್ಮ ಮೈಕ್ ಮ್ಯೂಟ್ ಮಾಡಿ, ಕಿವಿ ತೆರೆದು ಕುಳಿತರೆ ಆಯಿತು.

ಮುಗುಮ್ಮಾಗಿ ಹೊರಟುಬಿಡಿ
ಇಲ್ಲಿ ಯಾವುದೇ ವ್ಯಕ್ತಿ ದುಂಡಾವರ್ತನೆ ತೋರಿದರೆ, ಆತನನ್ನು ಬ್ಲಾಕ್ ಮಾಡಬಹುದು. ರೂಮ್‌ನಲ್ಲಿನ ಮಾತು ಆಸಕ್ತಿದಾಯಕವಾಗಿಲ್ಲದಿದ್ದರೆ, ‘ಲೀವ್‌ ಕ್ವೈಟ್ಲೀ’ (ಮುಗುಮ್ಮಾಗಿ ಹೊರಟುಬಿಡಿ) ಎಂಬ ಬಟನ್ ಒತ್ತಿದರೆ, ನೀವು ರೂಮ್‌ನಿಂದ ಹೊರಹೋಗುತ್ತೀರಿ.

ಕನ್ನಡವಿಲ್ಲ
ಸದ್ಯ ಅಪ್ಲಿಕೇಶನ್‌ನಲ್ಲಿ ಹಿಂದಿ ಭಾಷೆ ಸೌಲಭ್ಯವಷ್ಟೇ ಇದೆ. ಸಂಸ್ಥೆಗೆ ಭಾರತವೂ ಒಂದು ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಆ್ಯಪ್‌ಅನ್ನು ಭಾರತೀಯ ಭಾಷೆಯಲ್ಲೂ ಒದಗಿಸುವ ನಿರೀಕ್ಷೆ ಇದೆ.

ರೆಕಾರ್ಡ್‌ ಆಗದು, ಆದಾಯ ಬರದು
ಸದ್ಯ, ಈ ರೂಮ್‌ನಲ್ಲಿ ನಡೆಯುವ ಮಾತುಕತೆಗಳನ್ನು ರೆಕಾರ್ಡ್‌ ಮಾಡುವ ಸೌಲಭ್ಯವಿಲ್ಲ. ರೂಮ್‌ನಲ್ಲಿ ಭಾಗವಹಿಸಿದವರ ಅನುಮತಿ ಇಲ್ಲದೇ, ರೆಕಾರ್ಡ್‌ ಮಾಡಬಾರದು ಎಂದೂ ಸಂಸ್ಥೆ ಹೇಳಿದೆ. ಅಲ್ಲದೆ, ಬಳಸುವವರಿಗೆ ಇಲ್ಲಿ ಆದಾಯ ಗಳಿಸುವ ವಿಧಾನವೂ ಸದ್ಯಕ್ಕೆ ಇಲ್ಲ.

ಸೆಲೆಬ್ರಿಟಿಗಳ ಆಡುಂಬೊಲ
ಕ್ಲಬ್‌ಹೌಸ್‌ ಈಗಿರುವ ಮಾಧ್ಯಮಕ್ಕಿಂತ ಸ್ವಲ್ಪ ಭಿನ್ನವಾಗಿದ್ದು, ಇಲ್ಲಿ ವ್ಯಕ್ತಿ ಮುಖಾಮುಖಿಯಾಗುವುದರಿಂದ ಒಂದೇ ಸಮನೆ ಆಕ್ರಮಣಕಾರಿ ಪ್ರತಿಕ್ರಿಯೆ ಬರುವ ಸಾಧ್ಯತೆ ಕಡಿಮೆ. ಹೀಗಾಗಿ, ಸೆಲೆಬ್ರಿಟಿಗಳಿಗೆ ಇದೊಂದು ಮೆಚ್ಚಿನ ತಾಣವೂ ಆಗಿದೆ. ಅಲ್ಲದೆ, ಅಭಿಮಾನಿಗಳ ಜೊತೆಗೆ ನೇರ ಮಾತನಾಡುವ ಅವಕಾಶವೂ ಇದರಲ್ಲಿ ಸಿಗುವುದರಿಂದ ವ್ಯಾಪಕ ಅಭಿಮಾನಿಗಳನ್ನು ಹೊಂದಿರುವ ಎಲ್ಲರಿಗೂ ಒಂದು ಉತ್ತಮ ವೇದಿಕೆಯಾಗಿದೆ.

ಬದಲಾಗುವ ಐಕಾನ್‌
ಸಾಮಾನ್ಯವಾಗಿ ಆ್ಯಪ್‌ಗಳು ವಿಶಿಷ್ಟ ಐಕಾನ್‌ನಿಂದ ಗುರುತಿಸಿಕೊಳ್ಳುತ್ತವೆ. ಈ ಐಕಾನ್‌ ವಿನ್ಯಾಸ ಕಾಲಕಾಲಕ್ಕೆ ಬದಲಾದರೂ, ಅದರ ಮೂಲ ಸ್ವರೂಪ ಹಾಗೆಯೇ ಇರುತ್ತದೆ. ಆದರೆ, ಕ್ಲಬ್‌ಹೌಸ್‌ ಇದಕ್ಕಿಂತ ಸ್ವಲ್ಪ ವಿಭಿನ್ನವಾಗಿದೆ. ಕ್ಲಬ್‌ಹೌಸ್‌ನ ಐಕಾನ್‌ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಸಮಾಜದಲ್ಲಿ ಮಹತ್ವದ ಸಾಧನೆ ಮಾಡಿದ ವ್ಯಕ್ತಿಗಳನ್ನು ಐಕಾನ್ ಆಗಿ ಬಳಸುವ ವಿಶಿಷ್ಟ ಸಂಪ್ರದಾಯವನ್ನು ಕ್ಲಬ್‌ಹೌಸ್ ಬಳಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT