ಶನಿವಾರ, ಡಿಸೆಂಬರ್ 3, 2022
25 °C

ವಾಟ್ಸ್‌ಆ್ಯಪ್ ಇಂಡಿಯಾ ಮುಖ್ಯಸ್ಥ ಹುದ್ದೆ ತೊರೆದ ಅಭಿಜಿತ್ ಬೋಸ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಮೆಟಾ ಒಡೆತನದ ವಾಟ್ಸ್‌ಆ್ಯಪ್‌ನ ಭಾರತ ವಿಭಾಗದ ಮುಖ್ಯಸ್ಥ ಅಭಿಜಿತ್ ಬೋಸ್ ಅವರು ಹುದ್ದೆ ತೊರೆದಿದ್ದಾರೆ. ಇವರೊಂದಿಗೆ ಮೆಟಾದ ಸಾರ್ವಜನಿಕ ನೀತಿ ನಿರೂಪಣೆ ವಿಭಾಗದ ಮುಖ್ಯಸ್ಥ ರಾಜೀವ್ ಅಗರ್‌ವಾಲ್ ಕೂಡ ಹುದ್ದೆ ತೊರೆದಿದ್ದಾರೆ.

ಮೆಟಾ ಶೀಘ್ರದಲ್ಲೇ 11 ಸಾವಿರ ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಹೇಳಿದ ಒಂದು ವಾರದಲ್ಲೇ ಕಂಪನಿಯ ಪ್ರಮುಖರಿಂದ ಈ ನಿರ್ಧಾರ ಹೊರ ಬಿದ್ದಿದೆ.

ಮೆಟಾದ ಸಾರ್ವಜನಿಕ ನೀತಿ ನಿರೂಪಣೆ ವಿಭಾಗದ ಮುಖ್ಯಸ್ಥರಾಗಿ ಶಿವನಾಥ್ ತುಕ್ರಾಲ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌‌ಪ್ರೆಸ್ ವರದಿ ಮಾಡಿದೆ.

ಕಳೆದ ವಾರವಷ್ಟೇ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನ ಮಾಲೀಕ ಸಂಸ್ಥೆ 'ಮೆಟಾ ಇಂಡಿಯಾ'ದ ಮುಖ್ಯಸ್ಥ ಅಜಿತ್ ಮೋಹನ್ ಅವರು ಕಂಪನಿ ತೊರೆದಿರುವುದಾಗಿ ಮೆಟಾ ಗ್ಲೋಬಲ್ ಬ್ಯುಸಿನೆಸ್ ಗ್ರೂಪ್‌ನ ಉಪಾಧ್ಯಕ್ಷ ನಿಕೋಲಾ ಮೆಂಡೆಲ್‌ಸೋನ್ ತಿಳಿಸಿದ್ದರು.

ಅಜಿತ್ ಮೋಹನ್ ಅವರು 2019 ಜನವರಿಯಲ್ಲಿ ಭಾರತೀಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿ ಮೆಟಾ ಸೇರಿದ್ದರು. ಅದಕ್ಕೂ ಹಿಂದೆ ಉಮಂಗ್‌ ಬೇಡಿ ಅವರು, ಈ ಸ್ಥಾನ ನಿಭಾಯಿಸಿದ್ದರು.

ಬಲ್ಲ ಮೂಲಗಳ ಮಾಹಿತಿ ಪ್ರಕಾರ ಅಜಿತ್ ಅವರು ಸಾಮಾಜಿಕ ಮಾಧ್ಯಮ ‘ಸ್ನ್ಯಾಪ್‌’ಗೆ ಸೇರಲಿದ್ದಾರೆ ಎನ್ನಲಾಗಿದೆ. ಅಲ್ಲಿ ಅವರು ಏಷ್ಯಾ–ಪೆಸಿಫಿಕ್‌ ವಿಭಾಗದ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಫೇಸ್‌ಬುಕ್‌ನ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯು 11 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುತ್ತಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮಾರ್ಕ್‌ ಝುಕರ್‌ಬರ್ಗ್‌ ಇತ್ತೀಚೆಗೆ ತಿಳಿಸಿದ್ದರು.

ಕೊರೊನಾ ಸಾಂಕ್ರಾಮಿಕ ಕೊನೆಗೊಂಡ ನಂತರದಲ್ಲಿಯೂ ತೀವ್ರಗತಿಯ ಬೆಳವಣಿಗೆ ಇರುತ್ತದೆ ಎಂಬ ನಿರೀಕ್ಷೆಯಲ್ಲಿ ದೊಡ್ಡ ಮಟ್ಟದಲ್ಲಿ ನೇಮಕಾತಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ದುರದೃಷ್ಟದ ಸಂಗತಿಯೆಂದರೆ, ನಿರೀಕ್ಷಿಸಿದ ರೀತಿಯಲ್ಲಿ ಅದು ಆಗಲಿಲ್ಲ ಎಂದು ಝುಕರ್‌ಬರ್ಗ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು