ಸೋಮವಾರ, ಮೇ 25, 2020
27 °C

ವಾಟ್ಸ್ಆ್ಯಪ್ ಸ್ಟೇಟಸ್ ವಿಡಿಯೊ ಇನ್ನು 15 ಸೆಕೆಂಡಿಗೆ ಸೀಮಿತ!

ಪ್ರಜಾ­­ವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಪಿಡುಗು ಎಲ್ಲರನ್ನೂ ಮನೆಯೊಳಗೆ ಕಟ್ಟಿ ಹಾಕಿರುವ ಈ ಸಂದರ್ಭದಲ್ಲಿ ಅಂತರಜಾಲ ಜಾಲಾಡುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಆನ್‌ಲೈನ್ ಬಳಕೆದಾರರ ದಿಢೀರ್ ಏರಿಕೆಯಿಂದಾಗಿ ನೆಟ್‌ವರ್ಕ್ ಸಾಂದ್ರತೆಯೂ ಹೆಚ್ಚಾಗಿದ್ದು, ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಆನ್‌ಲೈನ್ ವಿಡಿಯೊ ದಿಗ್ಗಜ ಕಂಪನಿಗಳಾದ ನೆಟ್‌ಫ್ಲಿಕ್ಸ್, ಯೂಟ್ಯೂಬ್‌ಗಳು ಕೆಲವೊಂದು ಮಿತಿಗಳನ್ನು ವಿಧಿಸಿವೆ. ಅವೆಂದರೆ, ವಿಡಿಯೊದ ಬಿಟ್‌ರೇಟ್ ಕಡಿತಗೊಳಿಸುವುದು ಹಾಗೂ ಕಡಿಮೆ ರೆಸೊಲ್ಯುಶನ್ ವಿಡಿಯೊಗಳನ್ನು ಬಳಸುವಂತೆ ಮಾಡುವುದು.

ಇದೀಗ ವಾಟ್ಸ್ಆ್ಯಪ್ ಕೂಡ ಈ ರೀತಿಯಲ್ಲಿ ಇಂಟರ್ನೆಟ್ ಮಿತಿಗೊಳಿಸುವ ಪ್ರಕ್ರಿಯೆಗೆ ಮುಂದಾಗಿದೆ. ತನ್ನ ಬಳಕೆದಾರರ 'ಸ್ಟೇಟಸ್'ನಲ್ಲಿ ಹೆಚ್ಚಿನವರು ವಿಡಿಯೊಗಳನ್ನು ಅಪ್‌ಲೋಡ್ ಮಾಡಿರುತ್ತಾರೆ. ಭಾರತೀಯ ಬಳಕೆದಾರರು ಸ್ಟೇಟಸ್ ಸಂದೇಶಕ್ಕೆ ಅಪ್‌ಲೋಡ್ ಮಾಡುವ ವಿಡಿಯೊಗಳನ್ನು ಕೇವಲ 15 ಸೆಕೆಂಡುಗಳಿಗೆ ಸೀಮಿತಗೊಳಿಸಲು ವಾಟ್ಸ್ಆ್ಯಪ್ ನಿರ್ಧರಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ವಾಟ್ಸ್ಆ್ಯಪ್‌ನ ಪ್ರಾಯೋಗಿಕ ಬಿಲ್ಡ್‌ನಲ್ಲಿ ಈ ರೀತಿಯ ನಿಯಂತ್ರಣವೊಂದು ಕಂಡುಬಂದಿದ್ದು, ಶೀಘ್ರದಲ್ಲೇ ಪರೀಕ್ಷೆ ಮುಗಿಸಿದ ಬಳಿಕ ಎಲ್ಲ ಆಂಡ್ರಾಯ್ಡ್ ಹಾಗೂ ಐಒಎಸ್ ಸಾಧನಗಳ ವಾಟ್ಸ್ಆ್ಯಪ್‌ಗಳಿಗೆ ಬಿಡುಗಡೆಯಾಗಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ. 15 ಸೆಕೆಂಡಿಗಿಂತ ಜಾಸ್ತಿ ಇರುವ ವಿಡಿಯೊವನ್ನು ವಾಟ್ಸ್ಆ್ಯಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡುವಾಗಲೇ, 'ನೀವು ಮೈ ಸ್ಟೇಟಸ್‌ಗೆ ಕಳುಹಿಸಿದ ವಿಡಿಯೊವನ್ನು 15 ಸೆಕೆಂಡುಗಳಿಗೆ ಟ್ರಿಮ್ ಮಾಡಲಾಗುತ್ತದೆ' ಎಂಬ ಮಾಹಿತಿಯು ಗೋಚರಿಸಲಿದೆ.

ಇದರಲ್ಲಿ, ಪೂರ್ಣ ವಿಡಿಯೊದ ಯಾವ ಭಾಗವು ಈ 15 ಸೆಕೆಂಡುಗಳ ಅವಧಿಯಲ್ಲಿ ಕಾಣಿಸಬೇಕೆಂಬುದನ್ನು ಬಳಕೆದಾರರೇ ಹೊಂದಿಸಬಹುದಾಗಿದೆ. ಅದರಲ್ಲಿರುವ ಸ್ಲೈಡರ್ ಅನ್ನು ವಿಡಿಯೊದ ನಿರ್ದಿಷ್ಟ ಭಾಗಕ್ಕೆ ಸರಿಸಿದರೆ ಸಾಕು.

ಸರ್ವರ್‌ಗಾಗುತ್ತಿರುವ ಇಂಟರ್ನೆಟ್ ಟ್ರಾಫಿಕ್ ಒತ್ತಡ ನಿಭಾಯಿಸುವ ನಿಟ್ಟಿನಲ್ಲಿ 15 ಸೆಕೆಂಡುಗಳ ಮಿತಿಯು ನೆರವಾಗುತ್ತದೆ. ಪ್ರತಿಯೊಬ್ಬರ ವಾಟ್ಸ್ಆ್ಯಪ್ ಸ್ಟೇಟಸ್ 24 ಗಂಟೆಗಳ ಕಾಲ ಅವರ ಸಂಪರ್ಕ ಪಟ್ಟಿಯಲ್ಲಿರುವ ಎಲ್ಲರಿಗೂ ಗೋಚರಿಸುತ್ತದೆ. ಈ ಮಿತಿಯ ಕುರಿತು ವಾಟ್ಸ್ಆ್ಯಪ್ ಇದುವರೆಗೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಟೆಸ್ಟಿಂಗ್ ಮಾಹಿತಿಯ ಸೋರಿಕೆಯ ಆಧಾರದಲ್ಲಿ ಈ ಸುದ್ದಿ ತಂತ್ರಜ್ಞಾನ ಜಗತ್ತಿನಲ್ಲಿ ಸದ್ದು ಮಾಡಿದೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು