ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರ ವಾಟ್ಸ್‌ಆ್ಯಪ್‌ ನಿಷೇಧಿಸಲಿದೆ ಎಂಬುದು ಸುಳ್ಳು ಸುದ್ದಿ

Last Updated 4 ಜುಲೈ 2019, 7:42 IST
ಅಕ್ಷರ ಗಾತ್ರ

ಬೆಂಗಳೂರು:ವಾಟ್ಸ್‌ಆ್ಯಪ್‌ನಲ್ಲಿ ಬುಧವಾರ ಸಂಜೆ ಫೊಟೊ ಮತ್ತು ವಿಡಿಯೊಡೌನ್‌ಲೋಡ್‌, ಅಪ್ಲೋಡ್‌ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ವಾಟ್ಸ್‌ಆ್ಯಪ್‌ ನಿಷೇಧವಾಗುವ ಕುರಿತು ಎರಡು ಸಂದೇಶಗಳು ವೈರಲ್‌ ಆದವು. ಆದರೆ, ವಾಟ್ಸ್‌ಆ್ಯಪ್‌ ಅನ್ನು ಭಾರತದಲ್ಲಿ ನಿಷೇಧ ಮಾಡುವ ಕುರಿತು ಕೇಂದ್ರ ಸರ್ಕಾರವಾಗಲಿ, ಗೂಗಲ್‌ ಆಗಲಿ ಸ್ವತಃ ವಾಟ್ಸ್‌ಆ್ಯಪ್‌ ಆಗಲಿ ಈವರೆಗೆ ಎಲ್ಲಿಯೂ ಹೇಳಿಲ್ಲ.

ಬುಧವಾರ ಸಂಜೆ 6.30ರಿಂದ 7 ಗಂಟೆಯ ಹೊತ್ತಿಗೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ಇನ್‌ಸ್ಟಾಗ್ರಾಂಗಳಲ್ಲಿ ತಾಂತ್ರಿಕ ದೋಷ ಕಾಣಿಕೊಂಡಿತು. ವಿಡಿಯೊ, ಫೋಟೊಗಳ ಡೌನ್‌ಲೋಡ್‌ ಮತ್ತು ಅಪ್‌ಲೋಡ್‌ನಲ್ಲಿ ಸಮಸ್ಯೆಯುಂಟಾಯಿತು. ಮೊದಲಿಗೆ ಇಂಟರ್‌ನೆಟ್‌ ಸಮಸ್ಯೆ ಎಂದು ಭಾವಿಸಿಕೊಂಡಿದ್ದ ಗ್ರಾಹಕರು ನಂತರ, ತಮ್ಮ ಫೋನ್‌ನಲ್ಲಿ ಸಮಸ್ಯೆ ಇರಬಹುದು ಎಂದುಕೊಂಡರು. ಆದರೆ, ಬಹುತೇಕಎಲ್ಲ ಬಳಕೆದಾರರಲ್ಲಿಯೂ ಸಮಸ್ಯೆ ಕಾಣಿಸಿಕೊಂಡಿತು. ಸ್ವಲ್ಪಹೊತ್ತಿನಲ್ಲೇ ಅದು ಜಾಗತಿಕ ಸಮಸ್ಯೆ ಎಂದೂ ಗೊತ್ತಾಯಿತು. ವಾಟ್ಸ್‌ಆ್ಯಪ್‌ ತೊಂದರೆಯಿಂದ ಬಳಕೆದಾರರೆಲ್ಲ ಬೇಸರದಲ್ಲಿರುವಾಗಲೇ, ವಾಟ್ಸ್‌ಆ್ಯಪ್‌ ಬಂದ್‌ ಆಗುವ ಕುರಿತು ಎರಡು ಸಂದೇಶಗಳು ಮೊಬೈಲ್‌ಗಳಿಗೆ ಬಂದು ಬಿದ್ದವು. ಈ ಸಂದೇಶಗಳು ಸಮೂಹ ಸನ್ನಿ ಸೃಷ್ಟಿ ಮಾಡಿ ವೈರಲ್‌ ಆದವು. ಜನರಲ್ಲಿ ಆತಂಕ ಸೃಷ್ಟಿಸಿದವು.

ಸಂದೇಶ–1

‘ಇನ್ನು ಮುಂದೆ ನಿತ್ಯ ರಾತ್ರಿ 11.30ರಿಂದ ಬೆಳಗ್ಗೆ 6.00ರ ವರೆಗೆ ವಾಟ್ಸ್‌ಆ್ಯಪ್‌ ಬಂದ್‌ ಮಾಡಲು ಮೋದಿ ಸರ್ಕಾರ ಆದೇಶ ಮಾಡಿದೆ. ಈ ಸಂದೇಶವನ್ನು ಎಲ್ಲರಿಗೂ ಫಾರ್ವಾರ್ಡ್‌ ಮಾಡಲು ಕೋರಲಾಗಿದೆ. ಫಾರ್ವಾರ್ಡ್‌ಮಾಡದೇ ಹೋದರೆ ನಿಮ್ಮ ವಾಟ್ಸ್‌ಆ್ಯಪ್‌ ಅಕೌಂಟ್‌ ಡಿಲೀಟ್‌ ಆಗಲಿದೆ. ಅಕೌಂಟ್‌ ಅನ್ನು ಮತ್ತೆಗೆ ಚಾಲ್ತಿಗೆ ತರಬೇಕಿದ್ದರೆ ₹499 ಪಾವತಿಸಬೇಕು. ಇದರ ಜತೆಗೆ ವಾಟ್ಸ್‌ಆ್ಯಪ್‌ನಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ನಾವು ಸರಿಪಡಿಸುತ್ತೇವೆ. ನೀವು ಈ ಸಂದೇಶವನ್ನು ಮುಂದಕ್ಕೆ ತಲುಪಿಸುತ್ತಾ ಹೋಗಬೇಕು. ಇಲ್ಲವಾದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಶನಿವಾರ ಬೆಳಗ್ಗೆಯಿಂದ ನಿಮ್ಮ ವಾಟ್ಸ್‌ಆ್ಯಪ್‌ ಬಂದ್‌ ಆಗಲಿದೆ ಅದನ್ನು ತಡೆಯಬೇಕಿದ್ದರೆ 10 ಜನಕ್ಕಾದರೂ ಈ ಸಂದೇಶ ಫಾರ್ವಾರ್ಡ್ಮಾಡಿ,’ ಎಂದು ಮೊದಲ ಸಂದೇಶದಲ್ಲಿ ಬರೆಯಲಾಗಿತ್ತು.

ವಿವಿಧ ವಾಟ್ಸಾಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶ
ವಿವಿಧ ವಾಟ್ಸಾಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶ

ಸಂದೇಶ –2

‘ಉಪಗ್ರಹ ಸಂಪರ್ಕದಲ್ಲಿಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ವಾರಗಳ ಕಾಲ ವಾಟ್ಸ್‌ಆ್ಯಪ್‌ ಭಾರತದಲ್ಲಿ ಬಂದ್‌ ಆಗಲಿದೆ. ಈ ಅವಧಿಯಲ್ಲಿ ಡೌನ್‌ಲೋಡ್‌, ಅಪ್‌ಲೋಡ್‌, ಚಾಟ್‌, ಸ್ಟೇಟಸ್‌ಗಳನ್ನು ಹಾಕಲು ಸಾಧ್ಯವಾಗುವುದಿಲ್ಲ. ಇದು ವಾಟ್ಸ್‌ಆ್ಯಪ್‌ನಲ್ಲಿನ ಸಮಸ್ಯೆ. ಬದಲಿಗೆ ಯಾವುದೇ ನೆಟ್‌ವರ್ಕ್‌ನ ಸಮಸ್ಯೆಯಲ್ಲ ಎಂದು ಎಲ್ಲರಿಗೂ ಫಾರ್ವಾರ್ಡ್ಮಾಡುವ ಮೂಲಕ ತಿಳಿಸಿ,’ ಎಂದು ಗೂಗಲ್‌ನ ಹೆಸರಿನಲ್ಲಿ ಸಂದೇಶವೊಂದು ಹರಿದಾಡಿತು.

ವಾಸ್ತವವೇನು?

ಬುಧವಾರ ಸಂಜೆ ವಾಟ್ಸ್‌ಆ್ಯಪ್‌ ಸೇರಿದಂತೆ ಬಹುತೇಕ ಸಾಮಾಜಿಕ ತಾಣಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ಸತ್ಯ. ಆದರೆ, ಅದು ತಾಂತ್ರಿಕ ಸಮಸ್ಯೆ ಎಂದು ತಾಣಗಳೇ ಟ್ವೀಟ್‌ ಮಾಡಿ ತಿಳಿಸಿವೆ. ಗುರುವಾರ ಬೆಳಗ್ಗೆ ಹೊತ್ತಿಗೆ ಸಮಸ್ಯೆಗಳೆಲ್ಲವೂ ನಿವಾರಣೆಯಾಗಿವೆ ಎಂದೂ ಸಾಮಾಜಿಕ ತಾಣಗಳು ತಿಳಿಸಿವೆ. ನಿನ್ನೆಯ ಸಮಸ್ಯೆ ಬಗ್ಗೆ ವಾಟ್ಸ್‌ಆ್ಯಪ್‌ ಈ ವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಾಗೆಯೇ ಭಾರತದಲ್ಲಿ ನಿರ್ಬಂಧವಾಗುವ ಕುರಿತೂ ಯಾವುದೇ ಮಾಹಿತಿ ನೀಡಿಲ್ಲ.

ಇನ್ನು ಮೇಲಿನ ಸಂದೇಶಗಳಲ್ಲಿ ಸ್ಪಷ್ಟತೆಯೂ ಇಲ್ಲ. ಮೊದಲ ಸಂದೇಶದಲ್ಲಿ ರಾತ್ರಿ 11.30ರಿಂದ ವಾಟ್ಸ್‌ಆ್ಯಪ್‌ ಬಂದ್‌ ಆಗಲಿದೆ ಎಂದು ಮೊದಲಿಗೆ ಹೇಳಲಾಗುತ್ತದೆ. ನಂತರ ಸಂದೇಶವನ್ನು ಫಾರ್ವಾರ್ಡ್‌ಮಾಡಿದರೆ ರದ್ದಾಗುವುದಿಲ್ಲ ಎನ್ನಲಾಗುತ್ತದೆ. ಕೊನೆಗೆ ಈ ಸಂದೇಶವನ್ನು ಹತ್ತು ಜನರಿಗಾದರೂ ಫಾರ್ವಾರ್ಡ್‌ ಮಾಡಿ ಎಂದು ಕೇಳಿಕೊಳ್ಳಲಾಗುತ್ತದೆ. ಹೀಗಾಗಿ, ವೈರಲ್‌ ಮಾಡಲೆಂದೇ ಕಿಡಿಗೇಡಿಗಳು ಸೃಷ್ಟಿ ಮಾಡಿದ ಸುಳ್ಳು ಸಂದೇಶಗಳಿವು ಎಂದು ಹೇಳಲು ಅಡ್ಡಿ ಇಲ್ಲ.

ಏರ್‌ಟೆಲ್ ತನ್ನ ಗ್ರಾಹಕರಿಗೆ ಕಳಿಸಿರುವ ಸ್ಪಷ್ಟನೆ
ಏರ್‌ಟೆಲ್ ತನ್ನ ಗ್ರಾಹಕರಿಗೆ ಕಳಿಸಿರುವ ಸ್ಪಷ್ಟನೆ

ಇನ್ನೊಂದೆಡೆ, ಬುಧವಾರ ಸಂಜೆ ಗ್ರಾಹಕರಿಗೆ ಆದ ಸಮಸ್ಯೆ ಬಗ್ಗೆ ಟೆಲಿಕಾಂ ಸಂಸ್ಥೆಗಳು ಸಂದೇಶ ರವಾನಿಸಿ ಸ್ಪಷ್ಟನೆ ನೀಡಿವೆ. ತಾಂತ್ರಿಕ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಸಮಸ್ಯೆಯುಂಟಾಗಿತ್ತು. ಅದನ್ನು ಪರಿಹರಿಸಲಾಗಿದೆ ಎಂದು ಫೇಸ್‌ಬುಕ್‌ ಮತ್ತು ವಾಟ್ಸ್‌ ಆ್ಯಪ್‌ ಸಂಸ್ಥೆಗಳು ನಮಗೆ ತಿಳಿಸಿವೆ,’ಎಂದು ಅವರು ಸಂದೇಶ ಕಳುಹಿಸಿವೆ.

ಇನ್ನು ವಾಟ್ಸ್‌ಆ್ಯಪ್‌ ನಿಷೇಧಗೊಳ್ಳುವ ಕುರಿತು ಹಲವು ಸುಳ್ಳುಸುದ್ದಿಗಳು ಈವರೆಗೆ ಅದೇ ವಾಟ್ಸ್‌ಆ್ಯಪ್‌ನಲ್ಲೇ ಹರಿದಾಡಿವೆ! ಆದರೆ, ಅವೆಲ್ಲವೂ ಸುಳ್ಳು ಎಂದೂ ಬಯಲಾಗಿದೆ.

ಜುಲೈ–3 ಸಮಸ್ಯೆ ಬಗ್ಗೆ ಸಾಮಾಜಿಕ ತಾಣಗಳ ಸ್ಪಷ್ಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT