ಮಂಗಳವಾರ, ಜನವರಿ 26, 2021
24 °C

ಮಹಿಳೆಯರ ಆರೋಗ್ಯ ಸಮಸ್ಯೆ: ನೆರವಿಗೆ ಬರುವ ಸಾಮಾಜಿಕ ಜಾಲತಾಣ

ಕೀರ್ತಿ ಟಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

‘ದೈಹಿಕ ತೊಂದರೆ, ಮಾನಸಿಕ ಒತ್ತಡ, ದಾಂಪತ್ಯ ಸಮಸ್ಯೆಯಿಂದ 3 ವರ್ಷಗಳಿಂದ ತೊಳಲಾಡುತ್ತಿದ್ದೆ. ಇದಕ್ಕೆಲ್ಲ ಕಾರಣ ನನಗಿರುವ ಪಿಸಿಓಎಸ್‌ (ಪಾಲಿಸಿಸ್ಟಿಕ್‌ ಓವೇರಿಯನ್‌ ಸಿಂಡ್ರೋಮ್‌) ಸಮಸ್ಯೆ’ ಎನ್ನುವ ನೀತು ಗೋರೆ, ‘ಈ ನೋವನ್ನು ಅನುಭವಿಸಿದವರಿಗೇ ಗೊತ್ತು. ಯಾರ ಬಳಿ ಹೇಳಿಕೊಂಡರೂ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಮೋರೆ ತಿರುವವರೇ. ಅಸಹಾಯಕತೆ, ಅದರಿಂದಾದ ದುಗುಡ, ನನ್ನ ಬಗ್ಗೆ ನನಗೇ ಕೋಪ.. ಎಲ್ಲವೂ ನನ್ನನ್ನು ಹೈರಾಣ ಮಾಡಿಬಿಟ್ಟಿತ್ತು’ ಎಂದು ನಿಟ್ಟುಸಿರು ಬಿಟ್ಟಾಗ ಅದರಲ್ಲಿ ಆಕೆ ಅನುಭವಿಸಿದ ಹತಾಶೆಯಿತ್ತು.

ಕುಟುಂಬದವರಿಂದಲೂ ಆಕೆಗೆ ಸರಿಯಾದ ಸಹಾಯ ಸಿಗಲಿಲ್ಲ, ವೈದ್ಯರ ಬಳಿ ಹೋಗುವಷ್ಟು ದೊಡ್ಡ ಕಾಯಿಲೆ ಏನಲ್ಲ ಎಂಬ ಉಪದೇಶ ಬೇರೆ. ನೀತು ಈ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಂಡಿದ್ದೇ ಬಂತು. ಕೊನೆಗೆ ಕಾಲೇಜಿನ ಹಳೆಯ ಗೆಳತಿಯೊಂದಿಗೆ ಇದನ್ನು ಹೇಳಿಕೊಂಡಾಗ ಇದಕ್ಕೆಂದೇ ಇರುವ ವಾಟ್ಸ್‌ಆ್ಯಪ್‌ ಗ್ರೂಪ್‌ ಬಗ್ಗೆ ಗೊತ್ತಾಯಿತು. ‘ಅದಕ್ಕೆ ಸೇರಿಕೊಂಡ ನಂತರ ನನ್ನ ಸಮಸ್ಯೆಗಳ ವಿವರ, ಅವುಗಳಿಗಿರುವ ವೈದ್ಯಕೀಯ ಪರಿಹಾರ, ಮಾನಸಿಕ ನೋವಿಗೆ ಆಪ್ತ ಸಮಾಲೋಚನೆ ಎಲ್ಲವೂ ಸಿಕ್ಕವು’ ಎನ್ನುವ ನೀತು ಈಗ ಒಂದೊಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಉತ್ತಮ ಜೀವನಶೈಲಿಯನ್ನೂ ರೂಢಿಸಿಕೊಂಡಿದ್ದಾಳೆ.

ಸಂಬಂಧಿಕರು, ಸ್ನೇಹಿತರು, ಕಾಲೇಜಿನ ಅಲುಮ್ನಿ ಎಂದೆಲ್ಲ ಗುಂಪು, ಸಂಘಟನೆಗಳನ್ನು ರಚಿಸಿಕೊಂಡು ಒಬ್ಬರಿಗೊಬ್ಬರು ನೆರವಾಗುವುದು ಹೊಸತೇನಲ್ಲ. ಇಂತಹ ಗುಂಪಿನವರು ಹೆಚ್ಚಾಗಿ ಸಮಾನ ಮನಸ್ಕರೇ ಇರುತ್ತಾರೆ. ಅಂತರ್ಜಾಲ, ಹೊಸ ತಂತ್ರಜ್ಞಾನ ಬಂದ ನಂತರ ಇಂತಹ ಗುಂಪುಗಳು ಕೆಲವೇ ಜನರಿಗೆ ಸೀಮಿತವಾಗಿರದೆ ಜಾಗತಿಕವಾಗಿ ವಿಸ್ತರಿಸಿದೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆ ಇರುವವರು ಬೇರೆಯವರ ಬಳಿ ಹೇಳಿಕೊಳ್ಳುವುದು ಕಡಿಮೆ. ಕಾರಣ ಇದಕ್ಕೆ ಅಂಟಿಕೊಂಡಿರುವ ಸಾಮಾಜಿಕ ಕಳಂಕ. ಆದರೆ ಅಂತರ್ಜಾಲ, ಸಾಮಾಜಿಕ ಜಾಲತಾಣ, ವಾಟ್ಸ್‌ಆ್ಯಪ್‌ನಂಥವು ಇದಕ್ಕೆ ವೇದಿಕೆ ಒದಗಿಸಿವೆ.

ಪರಿಹಾರ
ಸಾಮಾನ್ಯವಾಗಿ ಮಹಿಳೆಯರಿಗೆ ಇಂತಹ ವೇದಿಕೆಗಳು ತೀರಾ ಅಗತ್ಯ ಎನ್ನಬಹುದು. ಕೆಲವೊಂದು ದೀರ್ಘಕಾಲೀನ ಸಮಸ್ಯೆಗಳಿಗೆ ಎಲ್ಲಿ ಮತ್ತು ಹೇಗೆ ಪರಿಹಾರ ಸಿಗುತ್ತದೆ ಎಂದು ಗೊತ್ತಾಗದೇ ತೊಳಲಾಡುವವರಿಗೆ ಇದು ನೆರವಿಗೆ ಬರುತ್ತದೆ. ಉದಾಹರಣೆಗೆ ಪಿಸಿಓಎಸ್‌ ಅನ್ನೇ ತೆಗೆದುಕೊಂಡರೆ ಈ ಸಮಸ್ಯೆ ಏನು ಎನ್ನುವುದನ್ನು ತಿಳಿದುಕೊಳ್ಳಲೇ ವರ್ಷ ಹಿಡಿದುಬಿಡುತ್ತದೆ. ಅನಿಯಮಿತ ಮುಟ್ಟು, ಮುಖ, ಮೈಮೇಲೆ ದಟ್ಟ ರೋಮ ಕಾಣಿಸಿಕೊಳ್ಳುವುದು, ಗರ್ಭ ಧಾರಣೆಗೆ ವಿಳಂಬ, ಮಧುಮೇಹ ಬರುವ ಸಾಧ್ಯತೆ.. ಹೀಗೆ ಹತ್ತಾರು ಸಮಸ್ಯೆಗಳು ಇದಕ್ಕೆ ಜೋಡಣೆಯಾಗಿವೆ.

‘ಮುಖದ ಮೇಲೆ ರೋಮ ಕಾಣಿಸಿಕೊಂಡಾಗ ಕಂಗಾಲಾದೆ. ಬ್ಯೂಟಿ ಪಾರ್ಲರ್‌ಗೆ ಹೋದರೂ ಅದು ತಾತ್ಕಾಲಿಕ ಎಂದು ಗೊತ್ತಾಯಿತು. ಬಹಿರಂಗವಾಗಿ ಮುಖ ತೋರಿಸಲು ಅವಮಾನ. ಜೊತೆಗೆ ಅನಿಯಮಿತ ಮುಟ್ಟಿನಿಂದಾಗಿ ಪತಿಯ ಜೊತೆ ಸಂಬಂಧವೂ ಕೆಡಲಾರಂಭಿಸಿತು’ ಎನ್ನುವ ನೀತು, ‘ಸ್ನೇಹಿತೆಯರ ಬಳಿ ಹೇಳಿಕೊಂಡರೂ ಲಾಭವಾಗಲಿಲ್ಲ. ವೈದ್ಯರ ಬಳಿ ಹೋಗಲು ಜೊತೆಗೆ ಬರುವವರು ಯಾರು?’ ಎಂದು ಪ್ರಶ್ನಿಸುತ್ತಾರೆ.

ಆದರೆ ಕಳೆದ ಮೂರು ವರ್ಷಗಳ ಹಿಂದೆ ಇಂಥದ್ದೊಂದು ಗುಂಪಿನ ಪರಿಚಯವಾಗಿ ಆಕೆಗೆ ಬೇಕಾದಷ್ಟು ಮಾಹಿತಿ, ಸಲಹೆ, ಮಾರ್ಗದರ್ಶನಗಳು ದೊರೆತವು.

ಎಂಡೊ ಸಿಸ್ಟರ್‌
ಕೆಲವರಿಗೆ ಪಿಸಿಓಎಸ್‌ ಸಮಸ್ಯೆ ಎಂದು ಸರಿಯಾಗಿ ಗೊತ್ತಾಗಲು ಸುಮಾರು ಎರಡು ವರ್ಷಗಳೇ ಬೇಕು. ಎಂಡೊಮೆಟ್ರಿಯೋಸಿಸ್‌ಗೆ 4–5 ವರ್ಷಗಳು ಹಿಡಿಯುವುದೂ ಇದೆ. ಮಹಿಳೆಯರು ತಮ್ಮೊಳಗೇ ಇದನ್ನು ಬಚ್ಚಿಟ್ಟುಕೊಂಡು ನೋವನ್ನು ಅನುಭವಿಸುವುದು ಇದಕ್ಕೆ ಕಾರಣ.

ಎಂಡೊಮೆಟ್ರಿಯೋಸಿಸ್‌ಗೆ ‘ಎಂಡೊ ಸಿಸ್ಟರ್‌’ ಎಂಬ ಫೇಸ್‌ಬುಕ್‌ ಗ್ರೂಪ್‌ ಇದ್ದು, ಸಾಕಷ್ಟು ಸದಸ್ಯೆಯರಿದ್ದಾರೆ. ಒಬ್ಬ ಸದಸ್ಯೆ ತನ್ನ ಸಮಸ್ಯೆ ತೋಡಿಕೊಂಡರೆ ಸಾಕು, ಉಳಿದವರು ತಮ್ಮ ಅನುಭವದ ಮೇಲೆ ಸಲಹೆ ಕೊಡಲು ಆರಂಭಿಸುತ್ತಾರೆ.

ಇದೇ ರೀತಿ ಗರ್ಭಾಶಯದ ಗೆಡ್ಡೆ, ಇಡೀ ದೇಹವನ್ನೇ ಹಿಂಡಿ ಹಾಕುವ ಲುಪಸ್‌.. ಮೊದಲಾದ ಸಮಸ್ಯೆಗಳು ಇರುವವರೂ ಇಂತಹ ಗ್ರೂಪ್‌ ರಚಿಸಿಕೊಂಡಿದ್ದಾರೆ. ಈ ರೀತಿಯ ಗ್ರೂಪ್‌ಗಳಿಂದ ಪರಸ್ಪರ ಬೆಂಬಲ, ಸಹಾಯ ಸಿಗುವುದಲ್ಲದೇ, ತಕ್ಷಣದ ಸಮಸ್ಯೆಗೂ ಪರಿಹಾರ ಪಡೆದುಕೊಳ್ಳಬಹುದು. ಹಾಗೆಯೇ ಕಾಯಿಲೆಗಳ ಬಗ್ಗೆ ಹೆಚ್ಚಿನ ಸಂಶೋಧನೆಯ ಮೇಲೂ ಬೆಳಕು ಚೆಲ್ಲಲು ಸಾಧ್ಯ. ಅಂದರೆ ಗ್ರೂಪ್‌ನ ಸದಸ್ಯೆಯರು ಈ ಬಗ್ಗೆ ಸಂಬಂಧಪಟ್ಟವರಿಗೆ ಬೇಡಿಕೆ ಸಲ್ಲಿಸಬಹುದು.

(ಲೇಖಕಿ: ಮನಶ್ಶಾಸ್ತ್ರದಲ್ಲಿ ಸಂಶೋಧನ ವಿದ್ಯಾರ್ಥಿನಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು