ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣೋ? ಗಂಡೋ? ಬೇಕಾದ ಲಿಂಗ ಹುಟ್ಟಿಸುವ ತಂತ್ರಜ್ಞಾನವಿದು

ಹೆಣ್ಣು ಬೇಕೆಂದರೆ ಹೆಣ್ಣು ಇಲಿಗಳನ್ನಷ್ಟೆ ಹುಟ್ಟಿಸುವ ತಳಿ ಅಭಿವೃದ್ಧಿ ತಂತ್ರವೊಂದನ್ನು ರೂಪಿಸಿದ್ದಾರೆ.
Last Updated 21 ಡಿಸೆಂಬರ್ 2021, 23:45 IST
ಅಕ್ಷರ ಗಾತ್ರ

ಗಂಡು-ಹೆಣ್ಣು ಎನ್ನುವ ಲಿಂಗಗಳಿರುವ ಪ್ರಾಣಿಗಳಲ್ಲಿ, ಹುಟ್ಟುವಾಗ ಯಾವ ಲಿಂಗದ ಮರಿಯಾಗುತ್ತದೆಂದು ಊಹಿಸುವುದು ಲಾಟರಿಯಲ್ಲಿ ಬಹುಮಾನ ಬರುತ್ತದೆಂದು ಊಹಿಸಿದಷ್ಟೆ ಸುಲಭ!

ತನಗಿಂತಲೂ ಮುನ್ನವೇ ಕುಂತಿ ಪಾಂಡವರಿಗೆ ಜನ್ಮವಿತ್ತಾಗ ಹಳಹಳಿಸಿ ಬಸುರಾದ ಹೊಟ್ಟೆಗೆ ಹೊಡೆದುಕೊಂಡಿದ್ದಳಂತೆ ಗಾಂಧಾರಿ. ಆಗ ಇಂದಿನ ಸಿ-ಸೆಕ್ಷನ್‌ ಹೆರಿಗೆಯಂತೆ ಆಗದೆ ಮಾಂಸದ ಮುದ್ದೆ ಹುಟ್ಟಿತಂತೆ. ಅನಂತರ ವ್ಯಾಸಮಹರ್ಷಿ ಅದನ್ನು ನೂರಾಗಿ ತುಂಡರಿಸಿ, ತುಪ್ಪದ ಗಡಿಗೆಯಲ್ಲಿಟ್ಟು ಮಕ್ಕಳಾಗಿಸಿದನಂತೆ. ನೂರು ಮಕ್ಕಳೂ ಗಂಡಾದರೂ ಅವಳು ತನಗೊಂದು ಹೆಣ್ಣುಮಗು ಬೇಕು ಎಂದು ಬೇಡಿಕೊಂಡಾಗ, ವ್ಯಾಸ ನೂರರ ಜೊತೆಗೆ ಇನ್ನೊಂದು ತುಣುಕು ಗರ್ಭವನ್ನು ಬೇರೊಂದು ಗಡಿಗೆಯಲ್ಲಿಟ್ಟು ಬೆಳೆಸಿದ; ಅವಳೇ ದುಶ್ಶಲೆ – ಎನ್ನುತ್ತದೆ, ಮಹಾಭಾರತದ ಕಥೆ. ಹೀಗೆ ಗಂಡೋ ಹೆಣ್ಣೋ – ಒಂದೇ ಲಿಂಗದ ಮಕ್ಕಳನ್ನು ಬೇಕಾದಷ್ಟು, ಬೇಕಿದ್ದ ಹಾಗೆ ಹುಟ್ಟಿಸುವುದು ಸಾಧ್ಯವಾಗಿದ್ದರೆ ನಮ್ಮ ಪಶುವಿಜ್ಞಾನಿಗಳು ಬಹಳ ಖುಷಿ ಪಡುತ್ತಿದ್ದರು. ಅದಿರಲಿ. ಇದೀಗ ಗಾಂಧಾರಿಯ ಸಂತಾನದಂತೆ ನೂರಕ್ಕೆ ನೂರು ಗಂಡುಸಂತಾನವನ್ನು ಹುಟ್ಟಿಸುವ ತಳಿ ಅಭಿವೃದ್ಧಿ ವಿಧಾನವೊಂದು ಸಿದ್ಧವಾಗಿದೆಯಂತೆ. ಬ್ರಿಟನ್ನಿನ ಫ್ರಾನ್ಸಿಸ್‌ ಕ್ರಿಕ್‌ ಸಂಶೋಧನಾಲಯದ ಜೇಮ್ಸ್‌ ಟರ್ನರ್‌ ಹಾಗೂ ಕೆಂಟ್‌ ವಿಶ್ವವಿದ್ಯಾನಿಲಯದ ಪೀಟರ್‌ ಎಲ್ಲಿಸ್‌ ಮತ್ತು ಸಂಗಡಿಗರು ಜೊತೆಯಾಗಿ ಗಂಡು ಬೇಕೆಂದರೆ ಗಂಡು, ಹೆಣ್ಣು ಬೇಕೆಂದರೆ ಹೆಣ್ಣು ಇಲಿಗಳನ್ನಷ್ಟೆ ಹುಟ್ಟಿಸುವ ತಳಿ ಅಭಿವೃದ್ಧಿ ತಂತ್ರವೊಂದನ್ನು ರೂಪಿಸಿದ್ದಾರೆ.

ಗಂಡು-ಹೆಣ್ಣು ಎನ್ನುವ ಲಿಂಗಗಳಿರುವ ಪ್ರಾಣಿಗಳಲ್ಲಿ, ಹುಟ್ಟುವಾಗ ಯಾವ ಲಿಂಗದ ಮರಿಯಾಗುತ್ತದೆಂದು ಊಹಿಸುವುದು ಲಾಟರಿಯಲ್ಲಿ ಬಹುಮಾನ ಬರುತ್ತದೆಂದು ಊಹಿಸಿದಷ್ಟೆ ಸುಲಭ. ಇದಕ್ಕೆ ಕಾರಣವಿಷ್ಟೆ. ನಿಸರ್ಗ ಎರಡೂ ಲಿಂಗಗಳಲ್ಲಿ ಯಾವುದನ್ನೂ ವಿಶೇಷವೆಂದು ಪರಿಗಣಿಸುವುದಿಲ್ಲ. ಅದು ಏನಿದ್ದರೂ ಮನುಷ್ಯರ ಗೋಳು ಅಷ್ಟೆ. ಹೀಗಾಗಿ ಗೋಪಾಲಕರಿಗೆ ಕಷ್ಟವೆನ್ನಿಸಿದರೂ ಎತ್ತು, ಗೂಳಿಗಳನ್ನು ಸಾಕಬೇಕು. ಕೇವಲ ಹಾಲು, ಮೊಸರು ನೀಡುವ ಹಸುವಷ್ಟೆ ಹುಟ್ಟಲಿ ಎಂದು ಗೋವಿಂದನನ್ನು ಪ್ರಾರ್ಥಿಸಿದರೂ ಫಲವಿಲ್ಲ. ಬಸಿರು ಕಳೆದು ಕರು ಹಡೆಯುವವರೆಗೂ ಅದು ಯಾವ ಲಿಂಗ ಎಂದು ಪತ್ತೆ ಮಾಡುವುದು ಕಷ್ಟ. ಗೋಪಾಲಕರಿಗೆ ಗಂಡು ಬೇಡ. ಮಾಂಸಕ್ಕಾಗಿ ಹಂದಿಗಳನ್ನು ಸಾಕುವವರಿಗೆ ಹೆಣ್ಣಿಗಿಂತಲೂ ಭಾರಿಯಾಗಿ ಕೊಬ್ಬುವ ಗಂಡುಮರಿಗಳೇ ಹೆಚ್ಚಿದ್ದರೆ ಚೆನ್ನ. ಮೊಟ್ಟೆ ತಯಾರಕರಿಗೆ, ‘ಹೆಣ್ಣುಕೋಳಿ’ ಬೇಕು. ಮಾಂಸದ ಕೋಳಿ ಬೆಳೆಸುವವರಿಗೆ ಹುಂಜಗಳೆಂದರೆ ಲಾಭ. ಹೀಗಾಗಿ ನಿರ್ದಿಷ್ಟ ಲಿಂಗಗಳನ್ನಷ್ಟೆ ಹುಟ್ಟಿಸುವ ತಂತ್ರಗಳಿಗಾಗಿ ಹುಡುಕಾಟ ಅನಾದಿಕಾಲದಿಂದಲೂ ನಡೆದಿದೆ.

ಮೀನು, ಹಲ್ಲಿ ಮೊದಲಾದ ಜೀವಿಗಳಲ್ಲಿ ಸ್ವಲ್ಪ ಮಟ್ಟಿಗೆ ಇದು ಸಾಧ್ಯವಾಗಿದೆ ಎನ್ನಬಹುದು. ಇವುಗಳಲ್ಲಿ ಭ್ರೂಣಗಳು ಬೆಳೆಯುತ್ತಿರುವ ಪರಿಸರವನ್ನು ಅಷ್ಟಿಷ್ಟು ಬದಲಿಸಿ, ಹುಟ್ಟುವ ಮರಿಗಳ ಲಿಂಗವನ್ನು ಬದಲಿಸಿಬಿಡಬಹುದು. ಉದಾಹರಣೆಗೆ, ಮೀನು ಸಾಕಣೆಯ ವೇಳೆ ಮೊಟ್ಟೆಗಳನ್ನು ಬೆಳೆಸುವಾಗ ಕೆಲವು ಹಾರ್ಮೋನುಗಳನ್ನು ಬಳಸಿದರೆ, ಗಂಡುಗಳ ಉತ್ಪಾದನೆ ಹೆಚ್ಚಿಸಬಹುದು. ಹೆಣ್ಣಾಗಿ ಹುಟ್ಟಬೇಕಾದಂಥವೂ ಅಂಡಾಶಯಗಳನ್ನು ಬೆಳೆಸಿಕೊಳ್ಳದೆ ಹೆಣ್ಣಾಗುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಕೃತಕ ವೀರ್ಯಧಾರಣೆಯ ಪದ್ಧತಿ ಬಂದಮೇಲೆ, ಗಂಡಿನ ವೀರ್ಯದಲ್ಲಿ ಹೆಣ್ಣನ್ನು ಹುಟ್ಟಿಸುವಂತಹ ವೀರ್ಯಾಣುಗಳನ್ನು ಪ್ರತ್ಯೇಕಿಸಿ, ಕೇವಲ ಗಂಡನ್ನಷ್ಟೆ ಹುಟ್ಟಿಸಬಹುದೇ ಎಂದೂ ಪ್ರಯತ್ನಿಸಲಾಗಿದೆ. ಇವೆಲ್ಲ ಪ್ರಯತ್ನಗಳು ನಡೆದರೂ, ನೂರಕ್ಕೆ ನೂರು ಬೇಕೆಂದ ಲಿಂಗದ ಮರಿಗಳನ್ನಷ್ಟೆ ಹುಟ್ಟಿಸುವುದು ಅಸಾಧ್ಯವೆನ್ನಿಸಿತ್ತು. ಇದೀಗ ಟರ್ನರ್‌ ಮತ್ತು ಎಲ್ಲಿಸ್‌ ಅವರ ತಂಡ ಜೀನ್‌ ಸಂಪಾದನೆಯ ತಂತ್ರವನ್ನು ಉಪಯೋಗಿಸಿಕೊಂಡು, ಇದನ್ನು ಸಾಧ್ಯವಾಗಿಸಿದೆ. ಇಲಿಗಳಲ್ಲಿ ಇವರು ನಡೆಸಿದ ಪ್ರಯೋಗಗಳಲ್ಲಿ ಹುಟ್ಟಿದ ನೂರಾಮೂರು ಮರಿಗಳಲ್ಲಿ ನೂರೆರಡು ಮರಿಗಳು ಕೇವಲ ಗಂಡಾಗಿದ್ದುವು. ಹುಟ್ಟಿದ ಒಂದೇ ಒಂದು ಹೆಣ್ಣು ಕೂಡ ಆಕಸ್ಮಿಕವಾಗಿ ಹೆಣ್ಣಾದ ದೋಷಪೂರ್ಣ ಲಿಂಗಿಯಾಗಿತ್ತು!

ಗಾಂಧಾರೀಸಂತಾನವನ್ನು ಸೃಷ್ಟಿಸಲು ಟರ್ನರ್‌-ಎಲ್ಲಿಸ್‌ ತಂಡ ಜೀವಕೋಶಗಳಲ್ಲಿ ಇರುವ ಡಿಎನ್‌ಎಯಲ್ಲಿರುವ ದೋಷಗಳನ್ನು ಸರಿಪಡಿಸುವ ಟೋಪೋಐಸೋಮರೇಸ್‌-1 ಎನ್ನುವ ಜೀನನ್ನು ತಿದ್ದಿದೆ. ಕ್ರಿಸ್ಪರ್‌ ಎನ್ನುವ ಜೀನ್‌ ತಿದ್ದುವ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಸಾಧಿಸಿದೆ. ಗಂಡು ಹಾಗೂ ಹೆಣ್ಣುಗಳಲ್ಲಿ ಇರುವ ವ್ಯತ್ಯಾಸಕ್ಕೆ ಅವುಗಳ ಜೀವಕೋಶಗಳಲ್ಲಿ ಇರುವ ಲಿಂಗವರ್ಣತಂತುಗಳೂ ವಿಭಿನ್ನವಾಗಿರುವುದು ಕಾರಣ. ಹೆಣ್ಣಿನಲ್ಲಿ ಒಂದೇ ತೆರನಾದ ಜೋಡಿ ಲಿಂಗವರ್ಣತಂತುಗಳಿರುತ್ತವೆ. ಗಂಡಿನಲ್ಲಿ ಈ ಜೋಡಿಯಲ್ಲಿ ತುಸು ವ್ಯತ್ಯಾಸ ಇರುತ್ತದೆ. ಗಂಡೋ ಹೆಣ್ಣೋ – ಒಟ್ಟಾರೆ ಲಿಂಗವರ್ಣತಂತುಗಳ ಜೋಡಿಯಲ್ಲಿ ಒಂದು ತಾಯಿಯಿಂದಲೂ, ಇನ್ನೊಂದು ತಂದೆಯಿಂದಲೂ ಬಂದ ಬಳುವಳಿ. ಹೀಗಾಗಿ, ತಂದೆಯ ಲಿಂಗವರ್ಣತಂತುವಿನಲ್ಲಿ ಟೋಪೋಐಸೋಮರೇಸ್‌-1 ಜೀನನ್ನು ನಿಷ್ಕ್ರಿಯಗೊಳಿಸುವಂತೆ ಮಾಡಲು ಬೇಕಾದ ಕ್ರಿಸ್ಪರ್‌ ಕಿಣ್ವವನ್ನು ತಾಯಿಯ ಲಿಂಗವರ್ಣತಂತುವಿನಲ್ಲಿ ಸೇರಿಸಿದರೆ, ಹುಟ್ಟಬೇಕಾದ ಗಂಡುಗಳೆಲ್ಲವೂ ಟೋಪೋಐಸೋಮರೇಸಿನಲ್ಲಿರುವ ದೋಷದಿಂದಾಗಿ ಹುಟ್ಟುವ ಮುನ್ನವೇ ಸತ್ತು ಹೋಗುತ್ತವೆ. ಆದರೆ ಹೆಣ್ಣುಗಳಲ್ಲಿ ತಾಯಿಯಿಂದ ಬಂದ ಇನ್ನೊಂದು ಜೀನ್‌ ಇರುವುದರಿಂದ ಅದು ಹಾಗೆ ಸಾಯುವುದಿಲ್ಲ. ಇದೇ ರೀತಿಯಲ್ಲಿ ಹೆಣ್ಣಿನ ಲಿಂಗವರ್ಣತಂತುಗಳಲ್ಲಿ ಟೋಪೋಐಸೋಮರೇಸ್‌-1 ಜೀನನ್ನೂ, ಗಂಡಿನಲ್ಲಿ ಕ್ರಿಸ್ಪರ್‌ ಜೀನನ್ನೂ ಸೇರಿಸಿದರೆ, ಗಂಡಿನ ಬದಲಿಗೆ ಹೆಣ್ಣುಭ್ರೂಣಗಳು ಸಾಯುತ್ತವೆ ಎಂದು ಇವರು ಕಂಡುಕೊಂಡಿದ್ದಾರೆ.

ಭ್ರೂಣವಾಗುವುದಕ್ಕೂ ಮೊದಲೇ ಮೊಟ್ಟೆಗಳನ್ನು ತಿದ್ದುವ, ತಿದ್ದಿದ ಮೊಟ್ಟೆಗಳನ್ನು ಇಲಿಗಳ ಗರ್ಭದೊಳಗೆ ಇಟ್ಟು ಮರಿ ಮಾಡುವ ತಂತ್ರಗಳು ಈಗ ನಿತ್ಯದ ಕೆಲಸ ಎನ್ನಿಸುವಂತೆ ಆಗಿರುವಾಗ, ಈ ರೀತಿಯಲ್ಲಿ ಜೀನ್‌ ತಿದ್ದಿದ ಇಲಿತಳಿಗಳನ್ನು ಹುಟ್ಟಿಸುವುದು ಕಷ್ಟವಲ್ಲ. ಆಗ ಬೇಕೆಂದ ಲಿಂಗವನ್ನಷ್ಟೆ ಹುಟ್ಟುವಂತೆ ಮಾಡಬಹುದು ಎನ್ನುವುದು ಟರ್ನರ್‌-ಎಲ್ಲಿಸ್‌ ತಂಡದ ಉಪಾಯ. ಎರಡು ವರ್ಷಗಳ ಹಿಂದೆ ಇಸ್ರೇಲಿನ ವಿಜ್ಞಾನಿಗಳು ಇದೇ ರೀತಿಯಲ್ಲಿ ಕ್ರಿಸ್ಪರ್‌ ತಂತ್ರಜ್ಞಾನ ಬಳಸಿ ಒಂದೇ ಲಿಂಗದ ಸಂತಾನಗಳನ್ನು ಹುಟ್ಟಿಸಲು ಪ್ರಯತ್ನಿಸಿದ್ದರು. ಆದರೆ ಆಗ ಅವರು ಹುಟ್ಟಿಸಿದ ಹೆಣ್ಣುಗಳ ಮಧ್ಯೆ ಒಂದೋ ಎರಡೋ ಹೆಣ್ಣುಗಳು ಇರುತ್ತಿದ್ದುವು. ಹುಟ್ಟಿ ಸ್ವಲ್ಪ ಕಾಲದ ನಂತರ ಸಾಯುತ್ತಿದ್ದುವು. ಆದರೆ ಟರ್ನರ್‌-ಎಲ್ಲಿಸ್‌ ತಂತ್ರದಲ್ಲಿ ಇಂತಹ ದೋಷಪೂರ್ಣ ಹುಟ್ಟುಗಳು ಇರಲೇ ಇಲ್ಲವಂತೆ. ನೂರಕ್ಕೆ ನೂರು ಪಕ್ಕಾ ಗಂಡುಗಳೋ ಹೆಣ್ಣುಗಳೋ ಹುಟ್ಟುತ್ತವೆ. ಅಷ್ಟೇ ಅಲ್ಲ. ಸಾಮಾನ್ಯವಾಗಿ ಹುಟ್ಟುವ ಮರಿಗಳಲ್ಲಿ ಇರಬಹುದಾದ ಹೆಣ್ಣುಮರಿಗಳ ಸಂಖ್ಯೆಗಿಂತಲೂ ಹೆಚ್ಚು ಹೆಣ್ಣುಮರಿಗಳು ಹುಟ್ಟಿದ್ದುವಂತೆ. ಹೀಗೆಂದು ‘ನೇಚರ್‌ ಕಮ್ಯೂನಿಕೇಶನ್ಸ್‌’ ಪತ್ರಿಕೆಯಲ್ಲಿ ಟರ್ನರ್‌-ಎಲ್ಲಿಸ್‌ ತಂಡ ಪ್ರಕಟಿಸಿದೆ.

ಈ ತಂತ್ರವನ್ನು ಉಪಯೋಗಿಸಿಕೊಂಡು ಪ್ರಯೋಗಗಳಲ್ಲಿ ಬಳಸುವ ಇಲಿಗಳಲ್ಲಿ ಬೇಕೆಂದ ಲಿಂಗವನ್ನಷ್ಟೆ ಹುಟ್ಟಿಸಬಹುದು. ಹಂದಿ ಹಾಗೂ ಗೋವಿನ ಸಂತಾನಗಳನ್ನೂ ಇದೇ ರೀತಿಯಲ್ಲಿ ಬೆಳೆಸಬಹುದು ಎನ್ನುವ ಆಸೆಯೂ ಇದೆ. ಆದರೆ ಟೋಪೋಐಸೋಮರೇಸ್‌ ಜೀನ್‌ ತಿದ್ದಿದ ತಳಿ ಕುಲಾಂತರಿಯಲ್ಲವೇ? ಅದರ ಹಾಲನ್ನೋ ಮಾಂಸವನ್ನೋ ತಿನ್ನಬಹುದೇ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹಾಗೆಯೇ ಈ ಗಾಂಧಾರಿ ಸಂತಾನ ತಂತ್ರವನ್ನು ಮನುಷ್ಯರಲ್ಲಿ ಬೇಕೆಂದ ಲಿಂಗವನ್ನು ಹುಟ್ಟಿಸಲು ಬಳಸಿದರೆ ಈಗಾಗಲೇ ಎರ‍್ರಾಬಿರ‍್ರಿಯಾಗಿರುವ ಗಂಡು-ಹೆಣ್ಣುಗಳ ಪರಿಮಾಣ ಇನ್ನೂ ಹೆಚ್ಚಾಗಬಹುದೇ ಎನ್ನುವ ಆತಂಕವೂ ಇದೆ. ಸದ್ಯ! ಇಂತಹ ತಂತ್ರಗಳನ್ನು ಮನುಷ್ಯ ಭ್ರೂಣಗಳ ಮೇಲೆ ಪ್ರಯೋಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎನ್ನುವುದೊಂದು ಸಮಾಧಾನದ ವಿಷಯ. ಆದರೆ ಕಾನೂನು, ನಿಯಮಗಳನ್ನು ಪಾಲಿಸದವರಿಗೆ ಇದು ತಿಳಿಯಬೇಕಲ್ಲ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT