ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಟ್‌ಜಿಪಿಟಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಆಸೀಸ್ ಮೇಯರ್

Last Updated 6 ಏಪ್ರಿಲ್ 2023, 11:36 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾ : ಚಾಟ್‌ಜಿಪಿಟಿಯು ತಮ್ಮನ್ನು ‘ಅಪರಾಧಿ‘ ಎಂದು ಕರೆದಿರುವುದರ ವಿರುದ್ಧ ಆಕ್ರೋಶಗೊಂಡ ಆಸ್ಟ್ರೇಲಿಯಾದ ಮೇಯರ್‌ ಒಬ್ಬರು ಚಾಟ್‌ಜಿಪಿಟಿ ತಂತ್ರಾಂಶವನ್ನು ರೂಪಿಸಿದ 'ಓಪನ್‌ ಎಐ' ಕಂಪೆನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.

ಆಸ್ಟ್ರೇಲಿಯಾದ ಹೆಪ್ಬರ್ನ್ ಶೈರ್‌ನ ಮೇಯರ್‌ ಆಗಿರುವ ಬ್ರಿಯಾನ್‌ ಹುಡ್‌ ಚಾಟ್‌ಜಿಪಿಟಿ (ಎಐ ಆಧಾರಿತ ಚಾಟಿಂಗ್ ವ್ಯವಸ್ಥೆ) ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬ್ರಿಯಾನ್‌ ಹುಡ್‌ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾಗಿ ಚಾಟ್‌ಜಿಪಿಟಿ ಸುಳ್ಳು ಮಾಹಿತಿ ನೀಡಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ. ತಕ್ಷಣ ಮಾಹಿತಿ ಸರಿಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಈಗಾಗಲೇ ಬ್ರಿಯಾನ್‌ ‘ಓಪನ್‌ ಎಐ‘ಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮೊಕದ್ದಮೆ ಹೂಡಿದ್ದೇ ಆದರೆ, ವಿಶ್ವದಲ್ಲಿಯೇ ವ್ಯಕ್ತಿಯೊಬ್ಬರು ಕೃತಕ ಬುದ್ದಿಮತ್ತೆ (ಎಐ) ವಿರುದ್ಧ ಹೂಡಿದ ಮೊದಲ ಮಾನನಷ್ಟ ಮೊಕದ್ದಮೆ ಇದಾಗಲಿದೆ.

ಚಾಟ್‌ಜಿಪಿಟಿಯಲ್ಲಿ ಬ್ರಿಯಾನ್‌ ಹುಡ್‌ ಬಗ್ಗೆ ಮಾಹಿತಿ ಕೇಳಿದಾಗ, ’2000ನೇ ಇಸವಿಯಲ್ಲಿ ಬ್ರಿಯಾನ್‌ ಹುಡ್‌ ‘ಫಾರಿನ್‌ ಬ್ರೈಬರಿ‘ ಹಗರಣದಲ್ಲಿ (ವಿದೇಶಿ ಸಾರ್ವಜನಿಕ ಅಧಿಕಾರಿಗೆ ಲಂಚ ನೀಡಿ ಪ್ರಯೋಜನ ಪಡೆಯುವುದು) ಅಪರಾಧಿ ಎಂದು ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸಿದ್ದಾರೆ‘ ಎಂದು ಉತ್ತರಿಸಿತ್ತು. ಬ್ರಿಯಾನ್‌ ಸ್ನೇಹಿತರು ಈ ಮಾಹಿತಿಯನ್ನು ಅವರಿಗೆ ತಿಳಿಸಿದ್ದು, ತಕ್ಷಣ ಎಚ್ಚೆತ್ತ ಬ್ರಿಯಾನ್‌ ಟೆಕ್‌ ದೈತ್ಯ ‘ಚಾಟ್‌ಜಿಪಿಟಿ‘ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಬ್ರಿಯಾನ್‌ ಪರ ವಕೀಲ ಚಾಟ್‌ಜಿಪಿಟಿಯ ಮಾಲೀಕ ಸಂಸ್ಥೆ ‘ಓಪನ್‌ ಎಐ‘ಗೆ ಇ–ಮೇಲ್‌ ಮುಖಾಂತರ ನೋಟಿಸ್‌ ನೀಡಿದ್ದು, 28 ದಿನದೊಳಗೆ ಮಾಹಿತಿ ಸರಿಪಡಿಸುವಂತೆ ಸೂಚಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ಕ್ರಮ ಎದುರಿಸುವಂತೆ ತಿಳಿಸಿದ್ದಾರೆ. ವಕೀಲರ ನೋಟಿಸ್‌ಗೆ ಓಪನ್‌ ಎಐ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ಚಾಚ್‌ಜಿಪಿಟಿಯಂತಹ ಕೃತಕ ಬುದ್ದಿಮತ್ತೆ ತಂತ್ರಜ್ಞಾನಗಳು ಹೇಗೆ ಒಬ್ಬ ಮನುಷ್ಯನ ವ್ಯಕ್ತಿತ್ವವನ್ನು ಹಾಳು ಮಾಡಬಹುದು ಎಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ‘ ಎಂದು ಬ್ರಿಯಾನ್‌ ಪರ ವಕೀಲ ಜೇಮ್ಸ್ ನಾಟನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT