ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ–ಫೈ ರೂಟರ್‌ ಎಷ್ಟು ಸುರಕ್ಷಿತ?

Last Updated 19 ಜೂನ್ 2018, 16:34 IST
ಅಕ್ಷರ ಗಾತ್ರ

ಉಚಿತ ಎಂಬ ಕಾರಣಕ್ಕೆ, ಕಂಪನಿ ಕಲ್ಪಿಸಿದ ಸೌಲಭ್ಯ ಮನೆಯ ಎಲ್ಲ ಸದಸ್ಯರಿಗೆ ಅನುಕೂಲವಾಗುವ ಉದ್ದೇಶಕ್ಕೆ ವೈ–ಫೈ ಸೌಲಭ್ಯವನ್ನು ನಾವು ಬಳಸುತ್ತಿರುತ್ತೇವೆ. ಆದರೆ, ಹೀಗೆ ಸಂಪರ್ಕ ಪಡೆದುಕೊಂಡ ವೈ–ಫೈ ರೂಟರ್‌ ಎಷ್ಟು ಸುರಕ್ಷಿತ ಎಂದು ನಾವು ಯಾವತ್ತ ಯೋಚಿಸುವುದಿಲ್ಲ. ನಮ್ಮ ಗಮನವೇನಿದ್ದರೂ, ದತ್ತಾಂಶಗಳು ವರ್ಗಾವಣೆಯಾಗುವ ವೇಗ, ಸಂಪರ್ಕದ ಗುಣಮಟ್ಟದತ್ತ ಮಾತ್ರವಿರುತ್ತದೆ. ವೈ–ಫೈ ರೂಟರ್‌ ಬೇಗ ಸಂಪರ್ಕಕ್ಕೆ ಬಂದರೆ, ವಿಡಿಯೊ–ಫೋಟೊ ಅಥವಾ ಇನ್ನಾವುದೇ ದತ್ತಾಂಶ ಶೀಘ್ರದಲ್ಲಿ ಡೌನ್‌ಲೋಡ್‌ ಆದರೆ ನಮಗಷ್ಟೇ ಸಾಕು.

ಆದರೆ, ವೇಗಕ್ಕಿಂತ ಸುರಕ್ಷಿತ ನೆಟ್‌ವರ್ಕ್‌ ನಮ್ಮ ಆದ್ಯತೆಯಾಗಬೇಕಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ವಾಚ್‌ ಅಥವಾ ಟಿವಿಗೆ ಅಂತರ್ಜಾಲದ ಮೂಲಕ ಸಂಪರ್ಕ ಸಾಧಿಸಲು ವೈ–ಫೈ ನೆಟ್‌ವರ್ಕ್‌ ಮುಖ್ಯದ್ವಾರದಂತೆ ಕೆಲಸ ಮಾಡುತ್ತದೆ. ನಿಮ್ಮ ಇಂತಹ ನೆಟ್‌ವರ್ಕ್‌ ವೈರಸ್‌ನಿಂದ ಕೂಡಿದ್ದರೆ, ಹಾನಿಕಾರಕ ತಂತ್ರಾಂಶವನ್ನು ಒಳಗೊಂಡಿದ್ದರೆ, ಇಂತಹ ನೆಟ್‌ವರ್ಕ್‌ನ ಸಂಪರ್ಕ ಪಡೆದ ನಿಮ್ಮ ಎಲ್ಲ ಸಾಧನಗಳು ಹಾಳಾಗಿ ಹೋಗುತ್ತವೆ.

ಅದರಲ್ಲಿಯೂ, ಇತ್ತೀಚಿನ ಸೈಬರ್‌ ದಾಳಿಗಳು ಸುರಕ್ಷಿತ ನೆಟ್‌ವರ್ಕ್‌ ಅನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿವೆ. ಇತ್ತೀಚಿಗೆ ರಷ್ಯಾದಲ್ಲಿ ನೆಟ್‌ಗೇರ್‌, ಟಿಪಿ ಲಿಂಕ್‌ ಮತ್ತು ಲಿಂಕ್ಸಿಸ್‌ನಂತಹ ಖ್ಯಾತ ಕಂಪನಿಗಳು ಅಭಿವೃದ್ಧಿ ಪಡಿಸಿದ ವೈ–ಫೈ ರೂಟರ್‌ಗಳಿಗೇ ಮಾಲ್‌ವೇರ್‌ನಂತಹ ವೈರಸ್‌ ತಗುಲಿತ್ತು.ಇಂತಹ ವೈರಸ್‌ಗಳನ್ನು, ಅಪಾಯಕಾರಿ ತಂತ್ರಾಂಶವನ್ನು ಪತ್ತೆ ಹಚ್ಚಲೆಂದೇ ಇರುವ ಸಿಸ್ಕೊದ ಟಾಲೋಸ್‌ ತಂಡವು ಎಫ್‌ಬಿಐ ಜೊತೆಗೂಡಿ ಇದನ್ನು ಪತ್ತೆ ಮಾಡಿತ್ತು. ಈಗ, ಇಂತಹ ಸಮಸ್ಯೆ ಇನ್ನೂ ಹೆಚ್ಚಾಗಿದ್ದು, ಆಸುಸ್‌, ಡಿಲಿಂಕ್‌ನಂತಹ ಕಂಪನಿಗಳು ಒದಗಿಸಿರುವ ವೈ–ಫೈ ನೆಟ್‌ವರ್ಕ್‌ಗಳೂ ವೈರಸ್‌ಗೆ ತುತ್ತಾಗಿದ್ದವು ಎಂದು ಟಾಲೋಸ್‌ ಹೇಳಿದೆ. ಅಂದರೆ, ವೈ–ಫೈ ನೆಟ್‌ವರ್ಕ್‌ ಪೂರೈಸುವಂತಹ ಹೆಸರಾಂತ ಕಂಪನಿಗಳ ನೆಟ್‌ವರ್ಕ್‌ಗಳೇ ಮಾಲ್‌ವೇರ್‌ಗೆ ತುತ್ತಾಗಿವೆ. ಈಗ ಈ ವೈರಸ್‌ ಅನ್ನು ವಿಪಿಎನ್‌ಫಿಲ್ಟರ್‌ ಎಂದು ಕರೆಯಲಾಗುತ್ತಿದೆ. ನಕಲಿ ಬ್ಯಾಂಕಿಂಗ್‌ ವೆಬ್‌ಸೈಟ್‌ಗಳಿಗೆ ದಾಳಿಕೋರರು ಇಂತಹ ಅಪಾಯಕಾರಿ ತಂತ್ರಾಂಶವನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ.

ನೀವು ಸಹಜವಾಗಿ ಬಳಸುವ ತಂತ್ರಾಂಶದ ರೂಪದಲ್ಲಿಯೇ ಇವುಗಳು ಕೂಡ ಕಾಣಿಸಿಕೊಳ್ಳುತ್ತವೆ.ಇಂತಹ ಸೋಂಕು ಪೀಡಿತ ಪ್ರೋಗ್ರಾಂ ಚಲಾಯಿಸಿದಾಗ ಅದರ ಜೊತೆಗೇ ಸಕ್ರಿಯವಾಗುವ ವೈರಸ್‌ಗಳ ತಂತ್ರಾಂಶಗಳಿವು.ಇಂತಹ ದೋಷಪೂರಿತ ತಂತ್ರಾಂಶಗಳು, ಸಂಪರ್ಕ ಪಡೆದ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳನ್ನು ಹಾಳುಗೆಡುವುದಲ್ಲದೆ, ಮಾಹಿತಿಯನ್ನೂ ಕದಿಯುತ್ತವೆ. ಹೀಗೇ, ಪಾಸ್‌ವರ್ಡ್‌ಗಳನ್ನೂ ಕದ್ದು, ನಿಮ್ಮ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನೂ ದೋಚಬಹುದು.

ಹೀಗಾಗಿಯೇ, ನೆಟ್‌ಗೇರ್‌, ಡಿ–ಲಿಂಕ್‌ ಮತ್ತು ಲಿಂಕ್ಸಿಸ್‌ ತಮ್ಮ ಗ್ರಾಹಕರಿಗೆ ಹೊಸ ವರ್ಶನ್‌ಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುವಂತೆಸಲಹೆ ನೀಡಿವೆ. ಅಲ್ಲದೆ, ಹೆಚ್ಚು ಸುರಕ್ಷಿತವಾಗಿರುವಂತಹ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುವಂತೆ ಸೂಚಿಸಿವೆ. ಆದರೆ, ಟಿಪಿ–ಲಿಂಕ್‌ ಮತ್ತು ಆಸುಸ್‌ ಈ ನಿಟ್ಟಿನಲ್ಲಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪರಿಹಾರವೇನು?

ಹೊಸದಾಗಿ ವೈ–ಫೈ ಸಂಪರ್ಕಕ್ಕೆ ಒಳಗಾಗುವವರು ಆ ವೈ–ಫೈ ಸ್ಟೇಷನ್‌ ನಡೆಸುವ ತಂತ್ರಾಂಶವು ಪರಿಷ್ಕರಿಸಲ್ಪಟ್ಟಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಅಂದರೆ, ಲೇಟೆಸ್ಟ್‌ ವರ್ಶನ್‌ ತಂತ್ರಾಂಶ ಅದಾಗಿರಬೇಕು. ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಕಂಪ್ಯೂಟರ್‌ನ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು (ಆಪರೇಟಿಂಗ್‌ ಸಿಸ್ಟಂ) ನಿಯಮಿತವಾಗಿ ಅಪ್‌ಡೇಟ್‌ ಮಾಡಿಕೊಳ್ಳುತ್ತಿರಬೇಕು.

ಆದರೆ, ಒಂದು ಸಮಸ್ಯೆ ಏನೆಂದರೆ, ಬಹುತೇಕ ಮಂದಿಗೆ ಲೇಟೆಸ್ಟ್‌ ವರ್ಶನ್‌ ಅನ್ನು ಯಾವ ರೀತಿ ಅಪ್‌ಡೇಟ್‌ ಮಾಡಿಕೊಳ್ಳಬೇಕೆಂದು ತಿಳಿದಿರುವುದಿಲ್ಲ. 2014ರಲ್ಲಿ ಐ.ಟಿ ತಂತ್ರಜ್ಞರು ನಡೆಸಿದ ಸಮೀಕ್ಷೆಯ ಪ್ರಕಾರ, ಶೇ 32ರಷ್ಟು ಜನರಿಗೆ ಮಾತ್ರ ತಮ್ಮ ವೈ–ಫೈ ರೂಟರ್‌ ಅನ್ನು ಲೇಟೆಸ್ಟ್‌ ತಂತ್ರಾಂಶಕ್ಕೆ ಅಪ್‌ಟೇಡ್‌ ಮಾಡುವುದು ತಿಳಿದಿದೆ.

ಯಾವ ರೀತಿ ಅಪ್‌ಡೇಟ್‌ ಮಾಡಬೇಕು?

* ರೂಟರ್‌ನಲ್ಲಿ ಮೊದಲಿಗೆ ಬರುವ ಸೂಚನೆಗಳನ್ನು ಸರಿಯಾಗಿ ಗಮನಿಸಬೇಕು. ಅಲ್ಲದೆ, ಆ ರೂಟರ್‌ನ ಐ.ಪಿ ಅಡ್ರೆಸ್‌ ಪಡೆದುಕೊಳ್ಳಬೇಕು. ನಿರ್ದಿಷ್ಟ ವೆಬ್‌ ಬ್ರೌಸರ್‌ನಲ್ಲಿ ಸಂಖ್ಯೆಗಳ ಸಾಲೊಂದು ಕಾಣಿಸಿಕೊಳ್ಳುತ್ತದೆ. ಆ ಸಂಖ್ಯೆಗಳನ್ನು ಅಥವಾ ಐಪಿ ಅಡ್ರೆಸ್‌ ಅನ್ನು ಸುರಕ್ಷಿತವಾಗಿರುವ ಕಡೆ ಸೇವ್‌ ಮಾಡಿಟ್ಟುಕೊಳ್ಳಬೇಕು ಅಥವಾ ಕಾಗದದಲ್ಲಿ ಬರೆದಿಟ್ಟುಕೊಳ್ಳಬೇಕು.

* ರೂಟರ್‌ನ ಐಪಿ ಅಡ್ರೆಸ್‌ ಅನ್ನು ವೆಬ್‌ ಬ್ರೌಸರ್‌ನಲ್ಲಿ ಟೈಪಿಸಿ, ನಿಮ್ಮ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಬಳಸಿ ರೂಟರ್‌ನ ಬೇಸ್‌ ಸ್ಟೇಷನ್‌ಗೆ ಲಾಗಿನ್‌ ಆಗಬೇಕು. ಆಗ ರೂಟರ್‌ ವೆಬ್‌ ಡ್ಯಾ‌ಷ್‌ಬೋರ್ಡ್‌ ತೆರೆದುಕೊಳ್ಳುತ್ತದೆ. ಅಲ್ಲಿ, ‘ಫರ್ಮ್‌ವೇರ್‌ ಸೆಟ್ಟಿಂಗ್ಸ್‌’ ಮೇಲೆ ಕ್ಲಿಕ್‌ ಮಾಡಬೇಕು. ಲೇಟೆಸ್ಟ್‌ ಫರ್ಮ್‌ವೇರ್‌ ವರ್ಶನ್‌ಗಳನ್ನು ಒಳಗೊಂಡಿರುವ ಬಟನ್‌ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ, ಲೇಟೆಸ್ಟ್‌ ಮಾದರಿಯ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳಬೇಕು.

* ಒಂದು ವೇಳೆ ಅದರಲ್ಲಿ ‘ಅಪ್‌ಡೇಟ್‌’ ಆಯ್ಕೆ ಇದ್ದರೆ, ಅದನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು ಮತ್ತು ರೂಟರ್‌ ಅನ್ನು ರೀಸ್ಟಾರ್ಟ್‌ ಮಾಡಬೇಕು. ಈ ಪ್ರಕ್ರಿಯೆಯನ್ನು ಪ್ರತಿ ಮೂರರಿಂದ ಆರು ತಿಂಗಳಿಗೊಮ್ಮೆ ಮಾಡುತ್ತಿರಬೇಕು. ಅಲ್ಲದೆ, ಪ್ರತಿ ಬಾರಿ ವಿಶಿಷ್ಟ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಕೊಟ್ಟುಕೊಳ್ಳಬೇಕು.

* ನೀವು ರೂಟರ್‌ ಸಂಪರ್ಕಕ್ಕೆ ಬಂದಾಗ, ನಿಮ್ಮ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ಗಳು "admin'' ಮತ್ತು ’’password'’ ಎಂದೇ ಸರಳವಾಗಿ ಇಟ್ಟುಕೊಂಡಿದ್ದರೆ ನಿಮಗೆ ಸಮಸ್ಯೆ ಎದುರಾಯಿತೆಂದೇ ಅರ್ಥ. ಬಹಳಷ್ಟು ವೈ–ಫೈ ಸ್ಟೇಷನ್‌ಗಳು ಇಂತಹ ದುರ್ಬಲವಾದ ಪಾಸ್‌ವರ್ಡ್‌ಗಳನ್ನೇ ಸಾಮಾನ್ಯವಾಗಿ ಇಟ್ಟಿರುತ್ತವೆ. ಆದರೆ, ಎಲ್ಲ ಕಂಪನಿಗಳು ನಿಮಗೆ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ಗಳನ್ನು ಬದಲಿಸಿಕೊಳ್ಳಿ ಎಂದೇ ಸಲಹೆ ನೀಡಿರುತ್ತವೆ. ಆದರೆ, ಕಂಪನಿಗಳು ನೀಡಿದ ಬಳಕೆದಾರರ ಹೆಸರು ಮತ್ತು ಗುಪ್ತಸಂಖ್ಯೆಯನ್ನೇ ನೀವು ಇಟ್ಟುಕೊಂಡಿದ್ದರೆ ಸುಲಭವಾಗಿ ವೈರಸ್‌ಗೆ ತುತ್ತಾಗಬೇಕಾಗುತ್ತದೆ.

ದೀರ್ಘ ಮತ್ತು ಸಂಕೀರ್ಣವಾದ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುವುದು ಉತ್ತಮ. ಉದಾಹರಣೆಗೆ, My fav0rite numb3r is Gr33n4782# ಅಥವಾ The cat ate the C0TT0n candy 224%. ಇಷ್ಟುದ್ದದ ಪಾಸ್‌ವರ್ಡ್‌ ನೆನಪಿಟ್ಟುಕೊಳ್ಳುವುದು ಕಷ್ಟ. ಹಾಗಾಗಿ, ನೀವು ಮೊದಲು ಐಪಿ ಅಡ್ರೆಸ್‌ ಬರೆದಿಟ್ಟುಕೊಂಡ ಕಾಗದದಲ್ಲಿಯೇ, ಈ ಪಾಸ್‌ವರ್ಡ್‌ ಅನ್ನೂ ಬರೆದಿಟ್ಟುಕೊಂಡರೆ ಹುಡುಕುವುದು ಸುಲಭವಾಗಬಹುದು.

ಪಾಸ್‌ವರ್ಡ್‌ ಬದಲಾಯಿಸಿದಂತೆ ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ರೂಟರ್‌ ಅನ್ನು ಕೂಡ ಬದಲಾಯಿಸುವುದು ಉತ್ತಮ. ನಿಮ್ಮ ರೂಟರ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಅದರ ಸಂಪರ್ಕ ಪಡೆದ ಸಾಧನಗಳು (ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌) ಫರ್ಮ್‌ವೇರ್‌ ಅಪ್‌ಡೇಟ್‌ ಪಡೆಯಲು ವಿಫಲವಾದಾಗಲೂ ವೈರಸ್‌ಗಳು ದಾಳಿ ಇಡಬಹುದು. ಹೀಗಾಗಿ, ರೂಟರ್‌ಗಳನ್ನೂ ನಿಯಮಿತವಾಗಿ ಬದಲಾಯಿಸುವುದು ಉತ್ತಮ.

ನ್ಯೂಯಾರ್ಕ್ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT