ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಿಕ್ಷದಲ್ಲಿ ಕಸದ ನಿರ್ವಹಣೆ!

Last Updated 27 ಜುಲೈ 2022, 2:46 IST
ಅಕ್ಷರ ಗಾತ್ರ

ಭೂಮಿಯ ವಾತಾವರಣದಾಚೆ ಇರುವ ಅಂತರಿಕ್ಷದಲ್ಲಿ ನೂರಾರು, ಇಲ್ಲವೇ ಸಾವಿರಾರು ಕಿಲೋಮೀಟರ್ ಎತ್ತರದ ಕಕ್ಷೆಗಳಲ್ಲಿ ಕೃತಕ ಭೂ ಉಪಗ್ರಹಗಳಿಂದು ವಿಹರಿಸುತ್ತಿವೆ. ಸಾವಿರಾರು ಸಂಖ್ಯೆಯಲ್ಲಿ ಭೂಮಿಯನ್ನು ಸುತ್ತುತ್ತಿರುವ ಈ ಸಾಧನಗಳು ಸಂಪರ್ಕ, ಮನೋರಂಜನೆ, ಹವಾಮಾನ ಮುನ್ಸೂಚನೆ, ಸಂಚಾರ, ಕೃಷಿ, ಮೀನುಗಾರಿಕೆ – ಹೀಗೆ ಭೂಮಿಯ ಮೇಲಿನ ನಮ್ಮ ದಿನನಿತ್ಯ ಜೀವನದ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿವೆ.

1957ರಲ್ಲಿ ‘ಸ್ಪುತ್ನಿಕ್-1’ ಎಂಬ ಭೂಮಿಯ ಮೊದಲ ಕೃತಕ ಉಪಗ್ರಹದ ಉಡಾವಣೆಯೊಂದಿಗೆ ಅಂತರಿಕ್ಷಯುಗ ಆರಂಭವಾಯಿತು. ಅದಾದ ಮೊದಲ ವರ್ಷಗಳಲ್ಲೇ ಭಾರತೀಯ ಅಂತರಿಕ್ಷ ಕಾರ್ಯಕ್ರಮವೂ 1962ರಲ್ಲಿ ಜನಿಸಿತು. ಆ ಕಾರ್ಯಕ್ರಮವಿಂದು ದೇಶದ ತ್ವರಿತ ಹಾಗೂ ಸರ್ವತೋಮುಖವಾದ ಅಭಿವೃದ್ಧಿಗಾಗಿ ಅಂತರಿಕ್ಷ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಬಳಸಿಕೊಳ್ಳುವುದನ್ನು ಮುಖ್ಯ ಉದ್ದೇಶವನ್ನಾಗಿ ಹೊಂದಿದೆ. ಹೀಗಾಗಿ ಅಂತರಿಕ್ಷ ತಂತ್ರಜ್ಞಾನ ನಮ್ಮಲ್ಲಿ ದಿನನಿತ್ಯ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನೆರವಾಗುತ್ತಿದೆ. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೋ’ ನಿರ್ಮಿಸಿದ ಉಪಗ್ರಹಗಳಿಂದು ದೂರಸಂಪರ್ಕ, ಟಿ. ವಿ. ಪ್ರಸರಣ, ಹವಾಮಾನ ವೀಕ್ಷಣೆ, ಭೂಮಿಯ ಸಂಪನ್ಮೂಲಗಳ ಮಾಪನ ಹಾಗೂ ದಕ್ಷವಾದ ನಿರ್ವಹಣೆ, ಯಾನ ನಿರ್ವಹಣೆ ಮುಂತಾದ ಕ್ಷೇತ್ರಗಳ ಮುನ್ನಡೆಗೆ ಕಾರಣವಾಗಿ ನಮ್ಮ ಆರ್ಥಿಕ ಕ್ಷೇತ್ರ ಸುಗಮವಾಗಿ ಕಾರ್ಯನಿರ್ವಹಿಸುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತಿವೆ.

ಆದರೆ ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪಗ್ರಹಗಳ ಹಾಗೂ ಉಪಯುಕ್ತವಾದ ಕಾರ್ಯಾವಧಿ ಮುಗಿದು ಅಂತರಿಕ್ಷದಲ್ಲಿನ ‘ಕಸ’ವಾಗಿರುವ ಉಪಗ್ರಹಗಳ ಮತ್ತು ಉಡಾವಣೆಯ ಸಂಬಂದದಲ್ಲಿನ ತ್ಯಾಜ್ಯವಸ್ತುಗಳ ಸಂಖ್ಯೆ ಕಳೆದ ಆರು ದಶಕಗಳಲ್ಲಿ ನಿರಂತರವಾಗಿ ಹೆಚ್ಚಿದೆ. ಅದರಲ್ಲೂ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಅದು ಗಣನೀಯವಾಗಿ ಹೆಚ್ಚಿದೆ. ಹೀಗಾಗಿ ಭೂಕಕ್ಷೆಯಲ್ಲಿನ ಉಪಗ್ರಹಗಳು ಅಲ್ಲಿನ ಇತರ ಉಪಗ್ರಹಗಳೊಂದಿಗೆ ಇಲ್ಲವೇ ಅಂತರಿಕ್ಷದಲ್ಲಿನ ‘ಕಸ’ದೊಡನೆ ಡಿಕ್ಕಿ ಹೊಡೆಯುವ ಸಾಧ್ಯತೆ ಇಂದು ಹೆಚ್ಚಿದೆ. ಇದು ಅಂತರಿಕ್ಷವನ್ನು ಸುರಕ್ಷಿತವಾಗಿ ಹಾಗೂ ಸುಸ್ಥಿರವಾಗಿ ಬಳಸಿಕೊಳ್ಳುವ ಕಾರ್ಯಕ್ಕೆ ಭೀತಿಯನ್ನು ತಂದೊಡ್ಡಿದೆ. ಏಕೆಂದರೆ ಭೂಮಿಯ ಮೇಲೆ ಒಂದಕ್ಕೊಂದು ವಾಹನಗಳು ಅಪ್ಪಳಿಸಿದರೆ ಆ ವಾಹನಗಳಿಗೆ ಹಾಗೂ ಅದರಲ್ಲಿರುವ ವ್ಯಕ್ತಿಗಳಿಗೆ ಹಾನಿಯಾಗಬಹುದು, ಅಷ್ಟೆ. ರಸ್ತೆ ಅಪಘಾತವೊಂದು ಆದ ಬಳಿಕ ಆ ವಾಹನಗಳನ್ನು ಅ ಸ್ಥಳದಿಂದ ತೆಗೆದು ಆ ರಸ್ತೆಯನ್ನು ವಾಹನಸಂಚಾರಕ್ಕೆ ತೆರವುಗೊಳಿಸುವುದು ಭೂಮಿಯ ಮೇಲೆ ದಿನವೂ ನಡೆಯುವ ವಿದ್ಯಮಾನವಾಗಿದೆ. ಆದರೆ ಭೂಕಕ್ಷೆಯಲ್ಲಿ ಆ ರೀತಿ ಆಗುವುದಿಲ್ಲ. ಅಲ್ಲಿ ಉಪಗ್ರಹಗಳು ಹಾಗೂ ಇನ್ನಿತರ ವಸ್ತುಗಳು ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿರುತ್ತವೆ. ಇದರಿಂದಾಗಿ ಎರಡು ಉಪಗ್ರಹಗಳು ಒಂದನ್ನೊಂದು ಅಪ್ಪಳಿಸಿದರೆ ಆಗ ಅದರಿಂದ ಲಕ್ಷಾಂತರ ಚೂರುಗಳು ಉತ್ಪತ್ತಿಯಾಗುತ್ತವೆ. ಮುಂದೆ ಆ ಚೂರುಗಳೂ ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗವನ್ನು ಹೊಂದಿರುವುದರಿಂದ ಆ ಪೈಕಿ ಒಂದು ಸಣ್ಣ ಚೂರು ಸಹ ಕಾರ್ಯನಿರ್ವಹಿಸುತ್ತಿರುವ ದುಬಾರಿ ಉಪಗ್ರಹವೊಂದಕ್ಕೆ ಘಾಸಿಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಅಂತರಿಕ್ಷ ವಿಶಾಲವಾದುದಾಗಿರುವುದರಿಂದ ಹಾಗೂ ಇತ್ತೀಚಿನ ವರ್ಷಗಳವರೆಗೂ ದೊಡ್ಡ ಸಂಖ್ಯೆಯಲ್ಲಿ ಉಪಗ್ರಹಗಳು ಅಲ್ಪಾವಧಿಯಲ್ಲಿ ಉಡಾಯಿಸಲ್ಪಟ್ಟಿರದಿದ್ದರಿಂದ ಪರಿಸ್ಥಿತಿ ಹೇಗೋ ನಿಯಂತ್ರಿತವಾದ ಮಟ್ಟದಲ್ಲಿ ಇರುತ್ತಿತ್ತು. ಆದರೆ ಇಂದು ಇಲಾನ್ ಮಸ್ಕ್ ಎಂಬ ಅಂತರಿಕ್ಷ ಉದ್ಯಮಿ ಆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಅವರ ‘ಸ್ಪೇಸ್ ಎಕ್ಸ್’ ಸಂಸ್ಥೆ ಸುಮಾರು 42 ಸಾವಿರ ಉಪಗ್ರಹಗಳನ್ನು (!) ತನ್ನ ‘ಸ್ಟಾರ್ ಲಿಂಕ್’ ಕಾರ್ಯಕ್ರಮದಡಿ ಮುಂದಿನ ಕೆಲವು ವರ್ಷಗಳಲ್ಲಿ ಭೂಮಿಯಿಂದ ಕೆಲವೇ ನೂರು ಕಿಲೋಮೀಟರ್ ಎತ್ತರದ ಕಕ್ಷೆಗೆ ಉಡಾಯಿಸುವ ಯೋಜನೆಯನ್ನು ಹಾಕಿಕೊಂಡಿದೆ. ಆ ಪೈಕಿ ಸುಮಾರು ಎರಡು ಸಾವಿರ ಉಪಗ್ರಹಗಳು ಕಳೆದ ನಾಲ್ಕು ವರ್ಷದ ಸುಮಾರಿನಲ್ಲಿ ಕಕ್ಷೆಯನ್ನು ತಲುಪಿ ದೊಡ್ಡ ಮಟ್ಟದ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಬಹುಮಟ್ಟಿಗೆ ಜಗತ್ತಿನಾದ್ಯಂತ ಒದಗಿಸುತ್ತಿವೆ.

ಸ್ಟಾರ್ ಲಿಂಕ್ ವ್ಯವಸ್ಥೆಯಂತಹದೇ ಉಪಗ್ರಹಗಳನ್ನು ಇನ್ನೂ ಕೆಲವು ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ಹಾರಿಬಿಡುವ ಯೋಜನೆಯನ್ನು ಹಾಕಿಕೊಂಡಿವೆ. ಈ ಅಂಶವೇ ಅಂತರಿಕ್ಷದಲ್ಲಿ ಮುಂದೆ ಟ್ರಾಫಿಕ್ ನಿಯಂತ್ರಣಾ ಸಮಸ್ಯೆಯ ಬಗ್ಗೆ ಹೊಸದಾಗಿ ಭೀತಿಯನ್ನು ಹುಟ್ಟಿಹಾಕಿದೆ.
ಅಂತರಿಕ್ಷದಲ್ಲಿನ ಉಪಗ್ರಹಗಳ ಹಾಗೂ ನಿಷ್ಪ್ರಯೋಜಕವಾದ ‘ಕಸ’ದ ಸಂಖ್ಯೆ, ಸ್ಥಾನ, ಕಕ್ಷೆ, ಅವುಗಳ ಸ್ವರೂಪ, ಗಾತ್ರ, ಚಲನೆ, ಈ ಕುರಿತಾದ ಅರಿವನ್ನು ಇಂದು ‘ಅಂತರಿಕ್ಷ ಪರಿಸ್ಥಿತಿಯ ಅರಿವು (ಸ್ಪೇಸ್ ಸಿಚ್ಯುಏಷನಲ್ ಅವೇರ್ ನೆಸ್, ಸಂಕ್ಷಿಪ್ತವಾಗಿ ಎಸ್ ಎಸ್ ಎ - SSA)’ ಎಂದು ಕರೆಯಲಾಗುತ್ತದೆ. ಇಂದು ಅಂತರಿಕ್ಷ ಕ್ಷೇತ್ರದಲ್ಲಿನ ಒಂದು ಪ್ರಮುಖ ರಾಷ್ಟ್ರವಾದ ಭಾರತ ತನ್ನ ಅಂತರಿಕ್ಷ ಕಾರ್ಯಕ್ರಮವನ್ನು ಎಚ್ಚರಿಕೆಯಿಂದ ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ನಡೆಸಲು ‘ಅಂತರಿಕ್ಷದಲ್ಲಿನ ಪರಿಸ್ಥಿತಿ’ಯನ್ನು ಕುರಿತ ಅರಿವಿಗೆ ಪ್ರಾಮುಖ್ಯವನ್ನು ನೀಡುವುದು ತನಗೆ ಹಾಗೂ ಇತರ ದೇಶಗಳಿಗೆ ಸೇರಿದ ಉಪಗ್ರಹಗಳ ಹಿತದೃಷ್ಟಿಯಿಂದ ಈ ಪರಿಸ್ಥಿತಿಯಲ್ಲಿ ಅದಕ್ಕೆ ಅನಿವಾರ್ಯವಾಗುತ್ತದೆ. ಅಂತರಿಕ್ಷದಲ್ಲಿನ ಉಪಗ್ರಹ ಹಾಗೂ ಇತರ ಸಾಧನಗಳ ಇಲ್ಲವೇ ವಸ್ತುಗಳ ಸಮರ್ಥವಾದ ವೀಕ್ಷಣೆ, ಲಕ್ಷ್ಯವಿಡುವ ಕಾರ್ಯ, ಆ ಸಾಧನಗಳ ಕಕ್ಷೆಯನ್ನು ಲೆಕ್ಕ ಹಾಕುವ ಕಾರ್ಯ, ಅವುಗಳ ವೈಶಿಷ್ಟ್ಯದ ನಿರೂಪಣೆ – ಈ ಎಲ್ಲ ಮಾಹಿತಿಯ ಕ್ರಮಬದ್ಧವಾದ ಸಂಗ್ರಹಣೆ, ಈ ಎಲ್ಲ ಕಾರ್ಯಗಳನ್ನೂ ಇಡೀಯಾಗಿ ಪರಿಗಣಿಸಿ ಮುಂದುವರೆಯುವುದು ‘ಅಂತರಿಕ್ಷ ಪರಿಸ್ಥಿತಿ’ಯನ್ನು ನಿಖರವಾಗಿ ಅರಿಯಲು ಅತ್ಯಗತ್ಯ.

ಈ ಎಲ್ಲ ಚಟುವಟಿಕೆಗಳನ್ನು ಸಮರ್ಥವಾಗಿ ಜೋಡಿಸಿ ಮುನ್ನಡೆಸಲು ‘SSA ನಿಯಂತ್ರಣಾ ಕೇಂದ್ರ’ವನ್ನು ‘ಇಸ್ರೋ’ ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಈ ಕೇಂದ್ರದಲ್ಲಿ ‘ಅಂತರಿಕ್ಷ ಚಟುವಟಿಕೆಗಳನ್ನು ಸುರಕ್ಷಿತವಾಗಿ ಹಾಗೂ ಸುಸ್ಥಿರವಾಗಿ ನಿರ್ವಹಿಸುವ ವ್ಯವಸ್ಥೆ (ಸಂಕ್ಷಿಪ್ತವಾಗಿ ‘ಐ ಎಸ್ ಫ಼ೋರ್ ಒ ಎಮ್ – IS4OM’)’ ಎಂಬ ಒಂದು ವ್ಯವಸ್ಥೆ ಇದೆ. ಸುರಕ್ಷಿತ ಹಾಗೂ ಮುಂದಿನ ಪೀಳಿಗೆಯವರಿಗೂ ಲಭ್ಯವಿರುವ ರೀತಿಯಲ್ಲಿ ಅಂತರಿಕ್ಷ ಚಟುವಟಿಕೆಗಳನ್ನು ನಡೆಸುವ ಮೂಲಕ ನಿರಂತರವಾದ ರಾಷ್ಟ್ರೀಯ ಅಭಿವೃದ್ಧಿಗೆ ಅಂತರಿಕ್ಷವನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿದೆ.

ಭೂಮಿಯ ಮೇಲಿನ ಚಟುವಟಿಕೆಗಳೆಲ್ಲವಕ್ಕೂ ಬಹುಮಟ್ಟಿಗೆ ಕಾರಣವಾದ ಸೂರ್ಯ ಕೆಲವೊಮ್ಮೆ ‘ಸಿಟ್ಟಾಗಿ’ ಭೂಕಕ್ಷೆಯಲ್ಲಿನ ಉಪಗ್ರಹಗಳು ಹಾಗೂ ಭೂಮಿಯ ಮೇಲಿನ ವಿದ್ಯುತ್ ವ್ಯವಸ್ಥೆಗಳಿಗೆ ಹಾನಿಯುಂಟುಮಾಡುತ್ತಾನೆ. ‘ಅಂತರಿಕ್ಷ ಹವಾಮಾನ ಗಮನಿಸುವಿಕೆ ಹಾಗೂ ಅದರ ಮುನ್ಸೂಚನೆ’ಗೆ ಸಂಬಂಧಿಸಿದ ಸೌಲಭ್ಯಗಳು ‘ಸಿಟ್ಟಾಗುವ’ ನಮ್ಮ ಸೂರ್ಯನ ಚಟುವಟಿಕೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವ ಮೂಲಕ ಅಂತರಿಕ್ಷದಲ್ಲಿನ ಹಾಗೂ ಭೂಮಿಯ ಮೇಲಿನ ಸಾಧನಗಳನ್ನು ರಕ್ಷಿಸುವಲ್ಲೂ ನಿರ್ಣಾಯಕವಾದ ಪಾತ್ರಹಿಸುತ್ತವೆ.

ಅದೇ ರೀತಿ ಅಪಾಯಕಾರಿ ಕ್ಷುದ್ರಗ್ರಹಗಳ (‘ಆಸ್ಟರಾಯ್ಡ್ಸ್’) ಗುರುತಿಸುವಿಕೆ ಹಾಗೂ ಅವುಗಳು ಭೂಮಿಗೆ ಅಪ್ಪಳಿಸುವ ಭೀತಿಯ ನಿವಾರಣೆ ಮಾನವನ ಉಳಿಯುವಿಕೆಗೆ ಅತ್ಯಗತ್ಯ. ಇಂತಹ ಮಹತ್ತರವಾದ ಕಾರ್ಯಕ್ಕೂ ‘ಅಂತರಿಕ್ಷ ಹವಾಮಾನ ಗಮನಿಸುವಿಕೆ ಹಾಗೂ ಅದರ ಮುನ್ಸೂಚನೆ’ಗೆ ಸಂಬಂಧಿಸಿದ ಸೌಲಭ್ಯಗಳು ನೆರವು ನೀಡುತ್ತವೆ. ಈ ಸೌಲಭ್ಯಗಳ ಅವಿಭಾಜ್ಯ ಅಂಗವಾದ ರೇಡಾರ್ ಹಾಗೂ ಅಪಾರವಾದ ಸಾಮರ್ಥ್ಯವುಳ್ಳ ಕಂಪ್ಯೂಟರ್ ವ್ಯವಸ್ಥೆಗಳನ್ನು ಸ್ಥಾಪಿಸುವ ಕಾರ್ಯ ಇಂದು ‘ಇಸ್ರೋ’ದಿಂದ ಮುಂದುವರೆಯುತ್ತಿದೆ.

ಒಟ್ಟಿನಲ್ಲಿ ‘ಐಎಸ್4ಒಎಮ್’ ವ್ಯವಸ್ಥೆ ಅಂತರಿಕ್ಷದಲ್ಲಿನ ಪರಿಸ್ಥಿತಿಯನ್ನು ಅರಿಯುವುದಕ್ಕೆ ಸಂಬಂಧಿಸಿದ ಉದ್ದೇಶಗಳನ್ನು ಸಾಧಿಸಲು ಇಂದಿನ ಸನ್ನಿವೇಶದಲ್ಲಿ ಭಾರತಕ್ಕೆ ನೆರವನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT