ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪ ಹೊತ್ತಿತು.. ಹಳ್ಳಿ ಬೆಳಗಿತು..

ಕತ್ತಲು ಕರಗಿದ ಕತ್ತೆಹೊಳೆಯೆಂಬ ಹಳ್ಳಿಯ ಕತೆ
Last Updated 23 ಜುಲೈ 2018, 19:30 IST
ಅಕ್ಷರ ಗಾತ್ರ

ರಾತ್ರಿ ಯಾವ ಹೊತ್ನಲ್ಲಿ ಸೂರಿಂದ ಚೇಳು, ಮಂಡ್ರಗಪ್ಪೆ ಉದುರುತ್ತವೋ ಅಂತ ಹೆದರ್ಕೊಂಡು ಮುದುರ್ಕೊಂಡು ಮಕ್ಕೊತ್ತಿದ್ವಿ.. ಬುಟ್ಟಿ ದೀಪ ಹಚ್ಕೊಂಡು ಮನೆಯೊಳಗೆ ಕುಂತಿದ್ದರೆ, ಕತ್ಲೊತ್ನಾಗೆ ಕಾಲ್ಕೆಳೆಗೆ ಏನೋ ಸರದಂಗೆ ಆಗೋದು.. ಯಾಕಾದರೂ ಕತ್ಲಾಗುತ್ತೋ ಅಂತಿದ್ದೆವು.. ಕತ್ಲಾದ್ಮೇಲೆ ಯಾವಾಗ ಬೆಳಕ್ ಹರಿಯುತ್ತೋ ಅಂತ ಟೈಮ್ ಎಣಿಸ್ತಾ ಇದ್ದೆವು... ನಲ್ವತ್ತು ವರ್ಸದ್ ಮ್ಯಾಗೆ ಈಗ ಬೆಳಕು ಕಾಣ್ತಿದ್ದೀವಿ.. ಆ ಭಯ ಎಲ್ಲ ಹೋಗೈತೆ..!

ಹೀಗೆ ಹಾರರ್‌ ಸಿನಿಮಾ ಕಥೆಯಂತೆ ತಾವು ದಶಕಗಳ ಕಾಲ ಕತ್ತಲಲ್ಲಿ ಕಳೆದ ಬದುಕಿನ ಅನುಭವ ಹಂಚಿಕೊಳ್ಳುವಾಗ ಕತ್ತೆಹೊಳೆಯ ನಿವಾಸಿಗಳ ಮುಖದ ಮೇಲೆ ಭಯದ ಛಾಯೆ ಕಾಣುತ್ತಿತ್ತು. ಹತ್ತು ವರ್ಷಗಳ ಹಿಂದೆ ಕತ್ತಲ ಬದುಕು ಸರಿದು, ಬೆಳಕು ಬಂದ ಕ್ಷಣವನ್ನು ವಿವರಿಸುವಾಗ ಅವರ ಮುಖದ ಮೇಲೆ ಸಂಭ್ರಮ ಸಂತಸ ಮನೆ ಮಾಡುತ್ತಿತ್ತು.

‘ಕತ್ತೆಹೊಳೆ’ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಿಂದ 20 ಕಿ.ಮೀ ದೂರದಲ್ಲಿರುವ ಸ್ಥಳ. ಇದು ಗ್ರಾಮ ಎಂದು ಸರ್ಕಾರದ ದಾಖಲೆಗಳಲಿಲ್ಲ. ಹಾಗಾಗಿ ಇಲ್ಲಿಗೆ ವಿದ್ಯುತ್, ರಸ್ತೆ ಸೇರಿದಂತೆ ಯಾವ ಸೌಲಭ್ಯಗಳೂ ದೊರೆತಿಲ್ಲ. ಆದರೂ ಇಲ್ಲಿ ನಾಲ್ಕು ದಶಕಗಳಿಂದ ನಲ್ವತ್ತು ಕುಟುಂಬಗಳು ವಾಸ ಮಾಡುತ್ತಿವೆ.

ಇಂಥ ಕಗ್ಗತ್ತಲ ಕಾಡಂಚಿನಲ್ಲಿರುವ ಕತ್ತೆಹೊಳೆಗೆ ಬೆಳಕು ಬಂದಿದ್ದು ಹತ್ತು ವರ್ಷಗಳ ಹಿಂದೆ. ಡಾ. ಹರೀಶ್ ಹಂದೆ ಅವರ ‘ಸೆಲ್ಕೋ ಸೋಲಾರ್ ಪ್ರತಿಷ್ಠಾನ’ದ ಪರಿಶ್ರಮದಿಂದ ಇಲ್ಲಿನ ನಿವಾಸಿಗಳ ಮನೆಗಳಲ್ಲಿ ಸೋಲಾರ್ ಬೆಳಕಿನ ದೀಪಗಳು ಹೊತ್ತಿಕೊಳ್ಳಲು ಸಾಧ್ಯವಾಯಿತು.

ನಾಲ್ಕು ದಶಕಗಳ ಕಥೆ

ನಾಲ್ಕು ದಶಕಗಳ ಹಿಂದಿನ ಮಾತು. ಆಗ ಭೂ ರಹಿತರು ಜೀವನ ನಡೆಸುವುದು ಕಷ್ಟವಾಗಿತ್ತು. ಕೂಲಿಯೂ ಹುಟ್ಟುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ಕಂದಾಯ ಅಧಿಕಾರಿಯೊಬ್ಬರು ‘ಕತ್ತೆಹೊಳೆ ಎಂಬ ಜಾಗವಿದೆ. ಅದು ರೆವಿನ್ಯೂ ಇಲಾಖೆಗೆ ಸೇರಿದೆ’ ಎಂದು ತೋರಿಸಿದರು. ‘ಮೊದಲಿಗೆ ಚೌಳಕಟ್ಟೆಯ ರಾಮಯ್ಯ ಮತ್ತು ಅವರ ಮಕ್ಕಳು ಕತ್ತೆಹೊಳೆಗೆ ಬಂದು ಗುಡ್ಲು ಹಾಕಿ, ಕೈ ಬೇಸಾಯ ಮಾಡಿಕೊಂಡಿದ್ದರು. ನಂತರ ಹೊಸದುರ್ಗ, ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು ಭಾಗದಲ್ಲಿದ್ದ ಕೆಲ ಭೂರಹಿತರು ಒಬ್ಬೊಬ್ಬರೇ ಇಲ್ಲಿಗೆ ಬರತೊಡಗಿದರು’ ಎನ್ನುತ್ತಾ ಕತ್ತೆಹೊಳೆ ಹುಟ್ಟಿನ ಕುರಿತು ಮಾಹಿತಿ ಹಂಚಿಕೊಂಡರು ಊರಿನ ಮುಖಂಡರಾದ ಹನುಮಂತಪ್ಪ.

ಈ ಸ್ಥಳದಲ್ಲಿದ್ದ ಕೆರೆಯನ್ನು ನಂಬಿಕೊಂಡು ಬಂದು ಕೃಷಿ ಬದುಕು ಕಟ್ಟಿಕೊಂಡ ಜನರಿಗೆ ಸೀಮೆಎಣ್ಣೆ ದೀಪದ ಬೆಳಕೇ ಆಧಾರವಾಗಿತ್ತು. ಆದರೆ, ಆ ಸೀಮೆಎಣ್ಣೆ ತರಲು ಕೂಡ ಅಷ್ಟೇ ಪ್ರಯಾಸಪಡಬೇಕಾಗಿತ್ತು. ಸಂಜೆ ಆರೇಳು ಗಂಟೆಗೇ ಅವರ ರಾತ್ರಿ ಪ್ರಾರಂಭವಾಗುತ್ತಿತ್ತು. ಬೆಳಕಿಲ್ಲದ ರಾತ್ರಿ ಕಳೆಯಲಾಗದೇ, ಹೊತ್ತು ಮುಳುಗುತ್ತಲೇ ಮಲಗಿಬಿಡುತ್ತಿದ್ದರು. ರಾತ್ರಿಹೊತ್ತು ದೂರದಿಂದ ನೋಡಿದರೆ ಅಲ್ಲೊಂದು ಊರಿತ್ತು ಎಂದೂ ಗೊತ್ತಾಗದಷ್ಟು ನಿಶ್ಯಬ್ದವಾಗಿತ್ತು ಕತ್ತೆಹೊಳೆ. ಹೀಗೆ ಕತ್ತಲೆಯೇ ಜೀವನ ಎಂದುಕೊಂಡವರ ಬದುಕಲ್ಲಿ ಒಂದು ದಿನ ಝಗ್ಗನೆಂದು ಬೆಳಕು ಹೊತ್ತಿಕೊಂಡಿತು.

ಹೇಗಾಯಿತು..?

ಸುಸ್ಥಿರ ಪರಿಹಾರಕ್ಕೆ ಹೆಸರಾದ ಸೆಲ್ಕೋ ಸೋಲಾರ್ ಸಂಸ್ಥೆ ಆ ಊರಿನ ಮನೆಮನೆಗೆ ಸೌರದೀಪಗಳನ್ನು ನೀಡಿತು. ನಂತರ ನಾಲ್ಕಾರು ಟಿವಿಗಳನ್ನೂ ನೀಡಿತು. ‘2008ರಲ್ಲಿ ಸೆಲ್ಕೋದವರು ಸೋಲಾರ್ ಲೈಟ್ ಕೊಟ್ಟಿದ್ದರಿಂದ ಮನೆಗಳಲ್ಲಿ ಬೆಳಕು ಬಂದಿದೆ. ಮನೆಗೆಲಸ, ಜೀವನ, ಮಕ್ಕಳ ಓದು ಎಲ್ಲವೂ ಸಲೀಸಾಗಿ ನಡೀತಿದೆ’ ಎಂದು ಹನುಮಂತಪ್ಪನವರು ಹೇಳುತ್ತಾರೆ. ‘ನಾವೆಲ್ಲ ಚಿಮಣಿಬುಡ್ಡಿ ದೀಪದಲ್ಲಿ ಮೂಗಿಗೆ ಹೊಗೆ ಹಿಡಿಸಿಕೊಂಡು, ಕಣ್ಣು ಉರಿಸಿಕೊಂಡು ಓದಿದೆವು. ಈಗ ಸೌರದೀಪ ಬಂದಿರುವುದರಿಂದ ನಮ್ಮ ಮಕ್ಕಳಿಗೆ ಆ ಸಮಸ್ಯೆ ಇಲ್ಲ’ ಎಂದು ವಿವರಿಸುತ್ತಾರೆ ಪಿಯುಸಿವರೆಗೆ ಓದಿದ ಸುಬ್ರಹ್ಮಣ್ಯ.

ಇದೆಲ್ಲ ಅಷ್ಟು ಸುಲಭವಿರಲಿಲ್ಲ

ಮೊದಮೊದಲು ಯಾರಾದೂ ಅಪರಿಚಿತರು ಆ ಊರಿಗೆ ಬಂದರೆ ಓಡಿ ಹೋಗಿ ಬಾಗಿಲು ಹಾಕಿಕೊಳ್ಳುತ್ತಿದ್ದರು. ಕಾರಣ ಈಗಾಗಲೇ ಆ ಊರನ್ನು ಉದ್ಧಾರ ಮಾಡುತ್ತೇವೆಂದು ಬಂದ ಕೆಲವರು ಅವರಿಂದ ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಹಾಗಾಗಿ ನಮ್ಮನ್ನೂ ಅನುಮಾನದಿಂದಲೇ ನೋಡಿದ್ದರು, ಆದರೆ ಹತ್ತಾರು ಸಲ ಅಲ್ಲಿಗೆ ಹೋಗಿ ಅವರ ಮನವೊಲಿಸಿ ಸೋಲಾರ್ ಲೈಟ್ ಮತ್ತು ಟಿವಿಗಳನ್ನು ನೀಡಿದ್ದೇವೆ’ ಎಂದು ವಿವರಿಸುತ್ತಾರೆ ಚಿತ್ರದುರ್ಗದ ಸೆಲ್ಕೋ ಶಾಖೆಯ ಸೀನಿಯರ್ ಮ್ಯಾನೇಜರ್ ಮಂಜುನಾಥ್ ಭಾಗವತ್.

ಸೌರದೀಪಗಳನ್ನು ಅಳವಡಿಸಿಕೊಳ್ಳಲು ದುಡ್ಡು ಬೇಕು. ಆದರೆ, ಯಾವ ಬ್ಯಾಂಕ್‌ನವರೂ ಇವರಿಗೆ ಸಾಲ ಸೌಲಭ್ಯ ಕೊಡಲು ಸಿದ್ಧರಿರಲಿಲ್ಲ. ಏಕೆಂದರೆ ಯಾರ ಹೆಸರಿನಲ್ಲೂ ಬ್ಯಾಂಕ್ ಖಾತೆಯೇ ಇರಲಿಲ್ಲ. ವಾಣಿವಿಲಾಸಪುರದ ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್ ಶಾಖೆಯ ಆಗಿನ ವ್ಯವಸ್ಥಾಪಕ ನಾಗರಾಜ್ ಅವರನ್ನು ಒಂದು ರಾತ್ರಿ ಕತ್ತೆಹೊಳೆಗೆ ಕರೆದೊಯ್ದು ಅಲ್ಲಿನ ಪರಿಸ್ಥಿತಿ ತೋರಿಸಿದೆವು. ಆ ನಂತರ ಅದೇ ಶಾಖೆಯಿಂದ ಸೋಲಾರ್ ಲೈಟ್ ಖರೀದಿಗೆ ಸಾಲ ನೀಡಿದರು ಎಂದು ವಿವರಿಸುತ್ತಾರೆ ಮಂಜುನಾಥ್ ಭಾಗವತ್.

ತೆರೆಯಿತು ಶಾಲೆ

ಒಂದು ತಂತ್ರಜ್ಞಾನ ಏನೆಲ್ಲ ಕೆಲಸ ಮಾಡಬಹುದು ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ ಇಲ್ಲಿದೆ.

ಈ ಊರಿಗೆ ಸೌರ ದೀಪದಿಂದಾಗಿ ಬೆಳಕು ಬಂತು, ಟಿ.ವಿ.ಯಿಂದ ನಾಗರಿಕ ಪ್ರಪಂಚದ ವಿದ್ಯಮಾನಗಳನ್ನು ಅರಿಯಲು ಸಾಧ್ಯವಾಯಿತು. ಅಲ್ಲಿರುವ ಬಹುತೇಕರು ಶಾಲೆಗೆ ಹೋದವರಲ್ಲ. ಆದರೆ ತಮ್ಮ ಮಕ್ಕಳಿಗೆ ವಿದ್ಯೆ ಕಲಿಸುತ್ತೇವೆಂದು ಪಣ ತೊಟ್ಟಿದ್ದಾರೆ. ಊರಿನಲ್ಲಿ ಒಂದು ಪ್ರಾಥಮಿಕ ಶಾಲೆಯಿದೆ. ಆದರೆ ಅದು ತೆರೆದದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು. ‘2005-06ರಲ್ಲಿ ನಮ್ಮಲ್ಲಿ ಶಾಲೆ ಪ್ರಾರಂಭ ಆಗಿತ್ತು. ಆಗ ಶಿಕ್ಷಕರು ಬರಲಿಲ್ಲ. ಈಗ ನಮ್ಮ ಮಕ್ಕಳಿಗೆ ಶಿಕ್ಷಣ ಬೇಕೇಬೇಕು ಎಂಬ ಹಟಮಾಡಿ ಶಾಲೆ ಮಂಜೂರು ಮಾಡಿಸಿಕೊಂಡಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಊರಿನ ಜನ.

ಇದಾದ ನಂತರ 5ನೇ ತರಗತಿಯ ನಂತರ ಹಿರಿಯೂರು, ಚಿತ್ರದುರ್ಗದಲ್ಲಿ ಹಾಸ್ಟೆಲ್‍ಗಳಲ್ಲಿಟ್ಟು ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ. ಹಾಗೆ ಓದಿದವರ ಪೈಕಿ ನಾಲ್ಕೈದು ಮಂದಿ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 76, 78, 79 ರಷ್ಟು ಅಂಕಗಳನ್ನು ಪಡೆದು ಮುಂದಿನ ಓದಿನತ್ತ ಹೆಜ್ಜೆ ಹಾಕಿದ್ದಾರೆ.

ಮುಂಜಾನೆಯೇ ಟಿವಿಎಸ್ ಸದ್ದು

ಈರುಳ್ಳಿ ಇಲ್ಲಿನ ಪ್ರಮುಖ ಬೆಳೆ. ಜೊತೆಗೆ ರಾಗಿ, ಜೋಳ, ತರಕಾರಿಗಳು, ದಾಳಿಂಬೆ, ಬಾಳೆ ಬೆಳೆಯುತ್ತಾರೆ. ಈ ಉತ್ಪನ್ನಗಳನ್ನು ಇಲ್ಲಿಂದ ಸಾಗಿಸುವ ಬಗೆಯೇ ತುಂಬ ಸೋಜಿಗವಾದದ್ದು.

ನಿಜ. ಕತ್ತೆಹೊಳೆಯ ದಿನಚರಿ ಪ್ರಾರಂಭವಾಗುವುದೇ ಬೆಳಗಿನ ಜಾವ 4 ಗಂಟೆಗೆ. ಬೆಳಗಿನ ಜಾವದಲ್ಲೇ ಎಲ್ಲರ ಮನೆಯ ಟಿವಿಎಸ್ ಸದ್ದು ಮಾಡುತ್ತಿದೆ ಎಂದರೆ, ತಾವು ಬೆಳೆದ ತರಕಾರಿಗಳನ್ನು ಹೇರಿಕೊಂಡು ಹಿರಿಯೂರಿಗೆ ಹೊರಟರೆಂದೇ ಅರ್ಥ. ರಸಗೊಬ್ಬರಗಳನ್ನು ಬಳಸದಿರುವ ಕಾರಣಕ್ಕೆ ಇಲ್ಲಿನ ತರಕಾರಿಗಳಿಗೆ ಒಳ್ಳೆ ಬೆಲೆ ಇದೆ. ಮೊದಲೆಲ್ಲ ಎತ್ತಿನ ಗಾಡಿಗಳ ಮೇಲೆ ಸಾಮಾನುಗಳನ್ನು ಹೇರಿಕೊಂಡು ಅಷ್ಟೂ ದೂರ ನಡೆದೇ ಬರುತ್ತಿದ್ದೆವು. ನಂತರ ಸೈಕಲ್ ಬಂತು. ಈಗ ಎಲ್ಲರ ಮನೆಗಳಲ್ಲೂ ಒಂದೊಂದು ಟಿವಿಎಸ್ ಇಟ್ಟುಕೊಂಡಿದ್ದೇವೆ ಎಂದು ಕತೆ ಬಿಚ್ಚಿಡುತ್ತಾರೆ ಸುಬ್ರಹ್ಮಣ್ಯ.

ಮೊಬೈಲೂ ಬಂತು

ಮೊದಲು ಒಂದೆರೆಡು ಮನೆಗಳಲ್ಲಿ ಮಾತ್ರ ಮೊಬೈಲ್‍ಗಳಿದ್ದವು. ಆದರೆ ಚಾರ್ಜಿಂಗ್ ಮಾಡಿಸಲು 20 ಕಿ.ಮೀ.ದೂರದ ಹಿರಿಯೂರಿಗೆ ಹೋಗಬೇಕಾಗಿತ್ತು. ಆದರೆ ಈಗ ಸೋಲಾರ್ ಬಂದಿರುವುದರಿಂದ ಪ್ರತಿಯೊಬ್ಬರ ಮನೆಗಳಲ್ಲೂ ಮೊಬೈಲ್‍ ಚಾರ್ಜ್ ಆಗ್ತಿದೆ.

ಅಷ್ಟೇ ಅಲ್ಲ, ಬೀಡಿಕಟ್ಟುವಂಥ ಗುಡಿ ಕೈಗಾರಿಕೆ, ಹೊಲಿಗೆ ಮುಂತಾದ ಉದ್ಯಮಗಳಿಗೆ ಸೋಲಾರ್ ದೀಪ ಅನುಕೂಲ ಕಲ್ಪಿಸಿದಂತಾಗಿದೆ. ಮೊದಲು ಸಂಜೆ ಆರು ಗಂಟೆಗೇ ಈ ಗುಡಿ ಕೈಗಾರಿಕೆಯನ್ನು ಬಂದ್ ಮಾಡಿಬಿಡಬೇಕಾಗಿತ್ತು. ಆದರೆ ಬೆಳಕಿರುವ ಕಾರಣ ಈಗ ರಾತ್ರಿ 10ರವರೆಗೂ ಮುಂದುವರಿಸಬಹುದು. ಇದರಿಂದ ಅವರ ಜೀವನಮಟ್ಟ ಸುಧಾರಿಸಿದೆ. ಹೀಗೆ ದೀಪದಿಂದ ಹಳ್ಳಿ ಬೆಳಗಿದ ಈ ಕತೆ ದೇಶವಿದೇಶಗಳಿಗೂ ತಲುಪಿ, ಅಲ್ಲಿಂದಲೂ ಇಲ್ಲಿಗೆ ಭೇಟಿ ನೀಡಿ, ಈ ಮಾದರಿಯನ್ನು ತಮ್ಮ ದೇಶಗಳಲ್ಲಿ ಕಾರ್ಯಗತಗೊಳಿಸಿದ್ದೂ ಇದೆ.

ಕತ್ತೆಹೊಳೆಯೆಂಬ ಈ ಹಳ್ಳಿ ನಾಗರಿಕ ಪ್ರಪಂಚದಿಂದ ದೂರವಿದ್ದರೇನಂತೆ. ನಾಗರಿಕ ಪ್ರಪಂಚವನ್ನೇ ತಮ್ಮ ಬಳಿ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಆ ಊರಿನವರು. ಇವೆಲ್ಲ ಸಾಧ್ಯವಾಗಿದ್ದು ಒಂದು ಬೆಳಕಿನಿಂದ. ಒಂದು ದೀಪದಿಂದ, ತಂತ್ರಜ್ಞಾನದಿಂದ ಎಂದರೆ ನಂಬಲೇಬೇಕು.

ಮತದಾನ ಅಸ್ತಿತ್ವದ ಪ್ರಶ್ನೆ...

ನಮ್ಮ ಜನಪ್ರತಿನಿಧಿಗಳು ಚುನಾವಣಾ ಸಮಯದಲ್ಲಿ ಈ ಕತ್ತೆಹೊಳೆಗೆ ಹೋಗಿ ಓಟು ಕೇಳುತ್ತಾರೆ. ಚುನಾವಣೆ ನಂತರ ಯಾರೂ ಆ ಕಡೆ ಅತ್ತ ಸುಳಿಯುವುದಿಲ್ಲ. ಇಲ್ಲಿ ಬಸ್ ಸಂಚಾರ ಬೇಕು, ಇಲ್ಲೊಂದು ಉತ್ತಮ ರಸ್ತೆ ಬೇಕು, ಅವನ್ನೆಲ್ಲ ಮಾಡಿಕೊಟ್ಟರೆ ಮಾತ್ರ ಓಟು ಹಾಕುತ್ತೇವೆ, ಇಲ್ಲದಿದ್ದರೆ ಇಲ್ಲವೆಂದು ಹೇಳಬೇಕಾಗಿತ್ತು ಎಂದರೆ, ‘ನಾವು ಈ ಜಗತ್ತಿನಲ್ಲಿ ಇದ್ದೇವೆಂದು ಹೇಳುವ ಒಂದೇ ಒಂದು ಕುರುಹು ಎಂದರೆ ಅದು ಓಟು ಹಾಕುವುದು. ಓಟು ಹಾಕದೇ ಇದ್ದರೆ ನಾವಿದ್ದೇವೆಂದು ಹೇಗೆ ತಿಳಿಯುತ್ತದೆ ಈ ಸರ್ಕಾರಕ್ಕೆ, ಈ ಸಮಾಜಕ್ಕೆ’ ಎಂದು ಪ್ರಶ್ನಿಸುತ್ತಾರೆ ಆ ಊರಿನ ಮಹಿಳೆಯರಾದ ಪ್ರತಿಭಾ, ಲಕ್ಷ್ಮವ್ವ, ನೀಲವ್ವ ಮುಂತಾದವರು. ಹಾಗಾಗಿ ಮತದಾನ ಇವರಿಗೆ ಅಸ್ತಿತ್ವದ ಪ್ರಶ್ನೆ.

ಸಾರಾಯಿ ನಿಷೇಧ: ಇನ್ನೊಂದು ವಿಶೇಷವೆಂದರೆ ಆ ಊರಿನಲ್ಲಿ ಸಾರಾಯಿ ಅಂಗಡಿಗಳಿಲ್ಲ. ಮೊದಲು ಒಂದಿಬ್ಬರು ಸಾರಾಯಿ ಅಂಗಡಿ ಇಡುತ್ತೇವೆಂದು ಬಂದರು. ಆದರೆ ಊರವರೆಲ್ಲ ಸೇರಿ ಸಾರಾಯಿ ಅಂಗಡಿಯನ್ನು ಬಹಿಷ್ಕರಿಸಿದರು.

ಸಾರಾಯಿ ನಿಷೇಧ
ಇನ್ನೊಂದು ವಿಶೇಷವೆಂದರೆ ಆ ಊರಿನಲ್ಲಿ ಸಾರಾಯಿ ಅಂಗಡಿಗಳಿಲ್ಲ. ಮೊದಲು ಒಂದಿಬ್ಬರು ಸಾರಾಯಿ ಅಂಗಡಿ ಇಡುತ್ತೇವೆಂದು ಬಂದರು. ಆದರೆ ಊರವರೆಲ್ಲ ಸೇರಿ ಸಾರಾಯಿ ಅಂಗಡಿಯನ್ನು ಬಹಿಷ್ಕರಿಸಿದರು.
ಸಹಕಾರ ಮನೋಭಾವ..

ಕತ್ತೆಹೊಳೆಯಲ್ಲಿ ಬಂಜಾರರು, ಬೋವಿಗಳು, ಬೆಸ್ತರು, ಸೇರಿದಂತೆ ಎಲ್ಲ ಜಾತಿಯವರೂ ಇದ್ದಾರೆ. ಹಾಗಾಗಿ ಅಲ್ಲಿ ಸಕಲೆಂಟು ಜಾತಿಯವರೂ ಇದ್ದಾರೆ. ಒಂದು ದೇವಿ ದೇವಸ್ಥಾನವಿದೆ. ವರ್ಷಕ್ಕೊಮ್ಮೆ ಊರಹಬ್ಬ ಮಾಡುತ್ತಾರೆ. ಒಬ್ಬರಿಗೆ ಹುಷಾರಿಲ್ಲವೆಂದರೆ ಊರವರೆಲ್ಲ ಒಟ್ಟಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ. ಕೆಲವರ ಮನೆಗಳಲ್ಲಿ ಹಸುಗಳಿವೆ. ಇಲ್ಲದವರ ಮನೆಗಳಿಗೆ ಹಾಲನ್ನು ಉಚಿತವಾಗಿ ಕೊಡುತ್ತೇವೆ. ಹಾಗೆಯೇ ಉಳುಮೆ ಕೂಡ, ಒಬ್ಬರಿಗೊಬ್ಬರು ಸಹಕರಿಸಿಕೊಂಡು ಮಾಡುತ್ತೇವೆಂದು ವಿವರಿಸುತ್ತಾರೆ ಹನುಮಂತಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT