ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ ಕುತ್ತಿಗೆ ಮೇಲಿನ ಭಾರ ಇಳಿಸಿದ ಪ್ರಾಧ್ಯಾಪಕ: ಸುಧಾರಿತ ನೊಗದ ಆವಿಷ್ಕಾರ

ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರಿಂದ ಸುಧಾರಿತ ನೊಗ ಅಭಿವೃದ್ಧಿ
Last Updated 23 ಜನವರಿ 2021, 11:09 IST
ಅಕ್ಷರ ಗಾತ್ರ

ಧಾರವಾಡ: ಶತಮಾನಗಳಿಂದ ಎತ್ತಿನ ಕತ್ತಿನ ಮೇಲಿದ್ದ ನೊಗವನ್ನು ಬೆನ್ನಿನ ಮೇಲೆ ತರುವ ಹೊಸ ಮಾದರಿಯ ವ್ಯವಸ್ಥೆಯನ್ನು ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ಮೃತ್ಯುಂಜಯ ಕಪ್ಪಾಳಿ ಅಭಿವೃದ್ಧಿಪಡಿಸಿದ್ದಾರೆ.

ಈ ಕುರಿತು ಕಾಲೇಜು ಆವರಣದಲ್ಲಿ ಶನಿವಾರ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ ಡಾ. ಕಪ್ಪಾಳಿ, ‘ಗಾಡಿಯ ನೊಗವನ್ನು ಎತ್ತಿನ ಕತ್ತಿನ ಮೇಲೆ ಹಾಕುವುದರಿಂದ ಗಾಡಿಯ ಸಂಪೂರ್ಣ ಭಾರ ಕತ್ತಿನ ಮೇಲೆ ಬೀಳಲಿದೆ. ಇದರಿಂದ ಅದರ ಕಾರ್ಯಕ್ಷಮತೆ ತಗ್ಗುವುದರ ಜತೆಗೆ, ಕತ್ತಿನ ಬಾವು ಎಂಬ ಗಂಟಿನ ಕಾಯಿಲೆಗೂ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಕೈಹಾಕಲಾಯಿತು’ ಎಂದು ತಿಳಿಸಿದರು.

‘ಸುಧಾರಿತ ಮಾದರಿಯಲ್ಲಿ ಕತ್ತಿನ ಬದಲು ನೊಗವನ್ನು ಬೆನ್ನಿನ ಮೇಲೆ ಕೂರಿಸಲಾಗುತ್ತದೆ. ಆದರೆ ಎತ್ತಿನ ಎಳೆಯುವ ಶಕ್ತಿ ಇರುವುದು ಭುಜದಿಂದಲೇ ಆಗಿರುವುದರಿಂದ, ಭಾರವನ್ನು ಬೆನ್ನಿನ ಮೇಲೆ ಹಾಗೂ ಗಾಡಿಯನ್ನು ಭಜದಿಂದ ಎಳೆಯಲಿದೆ. ಸದ್ಯ ಇರುವ ಕಟ್ಟಿಗೆ ಗಾಡಿಯಲ್ಲಿ ಖಾಲಿ ಗಾಡಿಯ ಕನಿಷ್ಠ ಭಾರವೂ ಎತ್ತಿನ ಕತ್ತಿನ ಮೇಲೆ ಬೀಳುತ್ತಿದೆ. ಆದರೆಬೆನ್ನಿಗೆ ನೊಗ ಹಾಕುವುದರಿಂದ ಗಾಡಿಯ ಸಂಪೂರ್ಣ ಭಾರ ಒಂದೆಡೆ ಬೀಳದೆ, ಎಲ್ಲಾ ಕಡೆ ಸಮನಾಗಿ ಹಂಚಿಕೆಯಾಗಲಿದೆ’ ಎಂದು ಡಾ. ಕಪ್ಪಾಳಿ ವಿವರಿಸಿದರು.

‘ಈ ತಂತ್ರಜ್ಞಾನ ಪ್ರಾಥಮಿಕ ಹಂತದಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಹಲವು ರೈತರು ಸಹಕಾರ ನೀಡಿದ್ದಾರೆ. ಸದ್ಯ ಇದನ್ನು ಅಲ್ಯುಮಿನಿಯಂ ಲೋಹದಿಂದ ನಿರ್ಮಿಸಲಾಗಿದ್ದು, ಇದು 5.5ಕೆ.ಜಿ. ಇದೆ. ಈ ಭಾರವೂ ಇರದಂತೆ ಕೇವಲ ಜಾಕೆಟ್ ರೂಪದಲ್ಲಿ ಎತ್ತಿಗೆ ತೊಡಿಸುವಂತೆ ಮಾಡುವ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿದಿದೆ. ಇದಕ್ಕೆ ಗದುಗಿನ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ತಜ್ಞರು ಹಾಗೂ ಪಶು ವೈದ್ಯರಾದ ಡಾ. ವಿಲಾಸ ಕುಲಕರ್ಣಿ, ಡಾ. ಎ.ಎಂ.ಮುಲ್ಲಾ ಹಾಗೂ ಡಾ. ಹಳ್ಳಿಕೇರಿ ಅವರು ಅಗತ್ಯ ಸಲಹೆಗಳನ್ನು ನೀಡುತ್ತಿದ್ದಾರೆ. ಉನ್ನತ ಭಾರತ ಅಭಿಯಾನದಿಂದ ₹1.5ಲಕ್ಷ ಅನುದಾನವೂ ಈ ಯೋಜನೆಗೆ ದೊರೆತಿದೆ’ ಎಂದು ತಿಳಿಸಿದರು.

‘ಅಧ್ಯಯನದಲ್ಲಿ ಭಾಗಿಯಾದ ಎತ್ತು ಸುಧಾರಿತ ನೊಗವನ್ನು ಒಪ್ಪಿಕೊಂಡಿರುವುದು ಸಂತಸದ ಸಂಗತಿ. ಈ ಸಾಧನ ಬಳಕೆಯೋಗ್ಯವಾದಲ್ಲಿ ಎತ್ತುಗಳ ಕತ್ತಿನ ಮೇಲಿನ ಅನಗತ್ಯ ಭಾರವು ತಗ್ಗಲಿದೆ. ಜತೆಗೆ ಗಾಡಿಯ ಭಾರ ಎತ್ತಿನ ಎಲ್ಲಾ ಭಾಗಗಳಿಗೂ ಸಮಾನವಾಗಿ ಹಂಚಿಕೆಯಾಗಿ ಅವುಗಳ ಬಳಲಿಕೆಯನ್ನು ತಗ್ಗಿಸುವ ವಿಶ್ವಾಸವಿದೆ. ಇದಕ್ಕೆ ಪೇಟೆಂಟ್ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ’ ಎಂದು ಡಾ. ಕಪ್ಪಾಳಿ ವಿಶ್ವಾಸ ವ್ಯಕ್ತಪಡಿಸಿದರು.

ಎಸ್‌ಡಿಎಂ ಕಾರ್ಯದರ್ಶಿ ಜೀವಿಂದರ್ ಕುಮಾರ್, ಕಾಲೇಜಿನ ಪ್ರಾಚಾರ್ಯ ಡಾ. ಕೆ.ಗೋಪಿನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT