ಶನಿವಾರ, ಮೇ 21, 2022
26 °C

5ಜಿ ಸೇವೆಗೆ ಏರ್‌ಟೆಲ್ ರೆಡಿ; ಹೈದರಾಬಾದ್‌ನಲ್ಲಿ ಯಶಸ್ವಿ ಪ್ರಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹೈದರಾಬಾದ್ ನಗರದ ಕಮರ್ಷಿಯಲ್ ನೆಟ್‌ವರ್ಕ್‌ನಲ್ಲಿ ಐದನೇ ತಲೆಮಾರಿನ ಅಲ್ಟ್ರಾ ಹೈಸ್ಪೀಡ್ ಸೇವೆಯನ್ನು ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಿರುವ ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್ ಈಗ ದೇಶದಲ್ಲಿ 5ಜಿ ಸೇವೆಗೆ ಸಂಪೂರ್ಣ ಸಿದ್ಧವಾಗಿದೆ ಎಂದು ಘೋಷಿಸಿದೆ.

5ಜಿ ಸೇವೆಯ ಯಶಸ್ವಿ ಪ್ರಯೋಗ ನಡೆಸಿದ ದೇಶದ ಮೊದಲ ಟೆಲಿಕಾಂ ಸಂಸ್ಥೆ...
ಕಳೆದ 25 ವರ್ಷಗಳಲ್ಲಿ ಭಾರತದ ಡಿಜಿಟಲ್ ರೂಪಾಂತರಕ್ಕೆ ಕಾರಣವಾಗಿರುವ ಏರ್‌ಟೆಲ್, ಕಮರ್ಷಿಯಲ್ ನೆಟ್‌ವರ್ಕ್‌ನಲ್ಲಿ 5ಜಿ ಸೇವೆಯನ್ನು ಯಶಸ್ವಿಯಾಗಿ ಪ್ರಯೋಗ ನಡೆಸಿದ ದೇಶದ ಮೊದಲ ಟೆಲಿಕಾಂ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭವಿಷ್ಯದ 5ಜಿ ನೆಟ್‌ವರ್ಕ್ ಸೇವೆಯ ಗಮನದಲ್ಲಿಟ್ಟುಕೊಂಡು ಈ ಬೆಳವಣಿಗೆಯು ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿದ್ದು, ಆದಾಯವನ್ನು ಹೆಚ್ಚಿಸಲು ಹಾಗೂ ಗರಿಷ್ಠ ಗ್ರಾಹಕ ಸೇವೆ ಒದಗಿಸಲು ಏರ್‌ಟೆಲ್‌ಗೆ ಸಾಧ್ಯವಾಗಲಿದೆ.

ಈಗ ನಡೆಸಿರುವ ಏರ್‌ಟೆಲ್ 5ಜಿ ಪ್ರಾಯೋಗಿಕ ಪ್ರದರ್ಶನವು ಭವಿಷ್ಯದಲ್ಲಿ 5ಜಿ ಸೇವೆಯನ್ನು ಒದಗಿಸಲು ಸಂಸ್ಥೆಯ ತಂತ್ರಜ್ಞಾನ ಸಾಮರ್ಥ್ಯವನ್ನು ನಿರೂಪಿಸಿದೆ. ಅಲ್ಲದೆ ಸರ್ಕಾರದ ಅನುಮೋದನೆ ಪಡೆದಾಗ ನೈಜ 5ಜಿ ಸೇವೆಯನ್ನು ಗ್ರಾಹಕರಿಗೆ ಒದಗಿಸಲು ಸಾಧ್ಯವಾಗಲಿದೆ.

ಇದನ್ನೂ ಓದಿ: 

ಏರ್‌ಟೆಲ್ ಅಸ್ತಿತ್ವದಲ್ಲಿರುವ ಸ್ಪೆಕ್ಟ್ರಂ 1800 ಮೆಗಾಹರ್ಟ್ಜ್‌ನಲ್ಲಿ 5ಜಿ ಸೇವೆಯನ್ನು ಪರೀಕ್ಷಿಸಿದೆ. ಕೇವಲ ಒಂದು ಫ್ಲಿಕ್ ಮೂಲಕ 5ಜಿ ನೆಟ್‌ವರ್ಕ್ ಆನ್ ಮಾಡಬಹುದಾಗಿದೆ. ನೈಜ 5ಜಿ ಅನುಭವಕ್ಕಾಗಿ ಸರಿಯಾದ ಬ್ಯಾಂಡ್‌ಗಳಲ್ಲಿ ಬೇಕಾದಷ್ಟು ಸ್ಪೆಕ್ಟ್ರಂ ಲಭ್ಯತೆ ಅತ್ಯಗತ್ಯವಾಗಿದೆ.

 

 

 

ಏರ್‌ಟೆಲ್ 5ಜಿ ಸೇವೆಗೆ ಸನ್ನದ್ಧ; ಸೆಕೆಂಡುಗಳಲ್ಲೇ ಸಿನಿಮಾ ಡೌನ್‌ಲೋಡ್...
ಏರ್‌ಟೆಲ್‌ಗೆ ಸಂಬಂಧಿಸಿದಂತೆ ಇಂದು ನಾವು 5ಜಿಗೆ ಸನ್ನದ್ಧರಾಗಿದ್ದೇವೆ ಎಂಬುದನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ ಎಂದು ಭಾರ್ತಿ ಏರ್‌ಟೆಲ್ ಮಹಾ ನಿರ್ದೇಶಕ ಹಾಗೂ ಸಿಇಒ ಗೋಪಾಲ್ ವಿಠಾಲ್ ತಿಳಿಸಿದ್ದಾರೆ.

 

ಈಗಿನ ತಂತ್ರಜ್ಞಾನಗಳಿಗೆ ಹೋಲಿಸಿದಾಗ ಏರ್‌ಟೆಲ್ 10x ವೇಗ, 10x ಲೇಟೆನ್ಸಿ ಹಾಗೂ 100x ಕಾನ್ಕರೆನ್ಸಿ ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಹೈದರಾಬಾದ್‌ನಲ್ಲಿ ಬಳಕೆದಾರರು 5ಜಿ ಫೋನ್‌ಗಳಲ್ಲಿ ಕೆಲವೇ ಸೆಕೆಂಡುಗಳಲ್ಲೇ ಸಂಪೂರ್ಣ ಸಿನಿಮಾವನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ.

ಡೈನಾಮಿಕ್ ಸ್ಪೆಕ್ಟ್ರಂ ಹಂಚಿಕೆಯನ್ನು ಬಳಸಿಕೊಂಡು ಏರ್‌ಟೆಲ್ ಏಕಕಾಲದಲ್ಲಿ ಸುಲಲಿತವಾಗಿ 5ಜಿ ಹಾಗೂ 4ಜಿ ಸ್ಪ್ರೆಕ್ಟ್ರಂ ಬ್ಲಾಕ್‌ಗಳನ್ನು ನಿರ್ವಹಿಸುತ್ತಿದೆ. ಈಗ ನಮ್ಮ ನೆಟ್‌ವರ್ಕ್‌ನ ಪ್ರತಿಯೊಂದು ಭಾಗವು 5ಜಿಗೆ ಸಿದ್ಧವಾಗಿದೆ ಎಂದವರು ತಿಳಿಸಿದರು.

ದೇಶದ ಟೆಕ್ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ ಏರ್‌ಟೆಲ್, ನಾವೀನ್ಯ ತಂತ್ರಜ್ಞಾನಗಳನ್ನು ಪರಿಚಯಿಸಲು ಸದಾ ಬದ್ಧವಾಗಿದೆ ಎಂದು ತಿಳಿಸಿದೆ. 5ಜಿ ತಂತ್ರಜ್ಞಾನದಲ್ಲಿ ಜಗತ್ತನೇ ಮುನ್ನಡೆಸುವ ಸಾಮರ್ಥ್ಯ ಭಾರತಕ್ಕಿದೆ. ಈ ನಿಟ್ಟಿನಲ್ಲಿ ಅಪ್ಲಿಕೇಷನ್, ಡಿವೈಸ್ ಹಾಗೂ ನೆಟ್‌ವರ್ಟ್ ನಾವೀನ್ಯತೆಯು ಒಟ್ಟಾಗಬೇಕು ಎಂದು ತಿಳಿಸಿದರು.

ಸರ್ಕಾರದಿಂದ ಅನುಮೋದನೆ ಪಡೆದ ಕೂಡಲೇ ಸರಿಯಾದ ಪ್ರಮಾಣದಲ್ಲಿ ಬೇಕಾದಷ್ಟು ಸ್ಪೆಕ್ಟ್ರಂ ಬ್ಯಾಂಡ್‌ಗಳನ್ನು ಹೊಂದಿರುವ ಏರ್‌ಟೆಲ್, ತಕ್ಷಣ 5ಜಿ ಸೇವೆಯನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: 

ಈಗಿರುವ ಸ್ಪೆಕ್ಟ್ರಂನಲ್ಲೇ 5ಜಿ ಸೇವೆಯನ್ನು ಆನ್ ಮಾಡಬಹುದಾಗಿದೆ. ಆದರೆ ಸರ್ಕಾರದಿಂದ ಸಾಕಷ್ಟು ಸ್ಪೆಕ್ಟ್ರಂ ಲಭ್ಯವಾದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಆನಂದಿಸಲು ಸಾಧ್ಯವಾಗಲಿದೆ.

ವಿಶ್ವದ ಎರಡನೇ ಅತಿ ದೊಡ್ಡ ದೂರವಾಣಿ ಸಂಪರ್ಕಗಳನ್ನು ಹೊಂದಿರುವ ಲಾಭದಾಯಕ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತ 5ಜಿ ಸೇವೆಗೆ ಕಾಲಿಡಲು ಸಜ್ಜಾಗುತ್ತಿರುವಂತೆಯೇ ಟೆಲಿಕಾಂ ಸಂಸ್ಥೆಗಳು ತನ್ನ ಅವಕಾಶವನ್ನು ಕುದುರಿಸಿಕೊಳ್ಳಲು ಎದುರು ನೋಡುತ್ತಿವೆ. ರಿಲಯನ್ಸ್ ಜಿಯೋ ಈಗಾಗಲೇ ದೇಶಿಯವಾಗಿ ಅಭಿವೃದ್ಧಿಪಡಿಸುತ್ತಿರುವ 5ಜಿ ಸೇವೆಯನ್ನು ಒದಗಿಸಲು ಮುಂದಾಗಿದೆ. 5ಜಿ ಕೈಗೆಟುವ ದರಗಳಲ್ಲಿ ಎಲ್ಲೆಡೆ ಲಭ್ಯವಾಗಲಿದ್ದು, ಇದು ಸ್ವಾವಲಂಬಿ ಭಾರತದ ದರ್ಶನಕ್ಕೆ ಸಾಕ್ಷಿಯಾಗಲಿದೆ ಎಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು