ಭಾನುವಾರ, ಜೂನ್ 7, 2020
24 °C

ಕೊರೊನಾ ಆತಂಕದ ನಡುವೆ ಕೆಲಸಕ್ಕೆ ಕರೆದ ಅಮೆಜಾನ್‌: 75,000 ಉದ್ಯೋಗ 

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಅಮೆಜಾನ್‌ ಇ–ಕಾಮರ್ಸ್‌ ಕಂಪನಿ

ವಾಷಿಂಗ್ಟನ್‌: ಕೊರೊನಾ ವೈರಸ್‌ ಸೋಂಕು ಆತಂಕ ಜನರನ್ನು ಮನೆಯೊಳಗೇ ಇರುವಂತೆ ಮಾಡಿದೆ. ಇದರ ಪರಿಣಾಮ ಆನ್‌ಲೈನ್‌ ಮೂಲಕ ವಸ್ತುಗಳು, ತಿಂಡಿ–ತಿನಿಸುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ಪೂರೈಕೆಗೂ ಸಿಬ್ಬಂದಿ ಕಾರ್ಯನಿರ್ವಹಿಸಲೇ ಬೇಕಲ್ಲವೇ? ಆನ್‌ಲೈನ್‌ ಬೇಡಿಕೆಗೆ ತಕ್ಕಂತೆ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಅನುವಾಗಲು ಅಮೆಜಾನ್‌ 75,000 ಜನರನ್ನು ಉದ್ಯೋಗಕ್ಕೆ ಆಹ್ವಾನಿಸುತ್ತಿದೆ. 

ಅಮೆರಿಕ ಸೇರಿದಂತೆ ಹಲವು ಭಾಗಗಳಲ್ಲಿ ಕೊರೊನಾ ಭೀತಿಯಿಂದಾಗಿ ಅಂಗಡಿಗಳು ಇರುವ ಸಂಗ್ರಹಗಳನ್ನು ಖಾಲಿ ಮಾಡಿ, ದೀರ್ಘಾವಧಿಯವರೆಗೆ ಅಂಗಡಿಗಳನ್ನು ತೆರೆಯದಿರಲು ನಿರ್ಧರಿಸಿವೆ. ಆಹಾರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಸಿಗುವಂತೆ ಮಾಡಲು ಇ–ಕಾಮರ್ಸ್‌ ಕಂಪನಿಗಳು ಪ್ರಯತ್ನಿಸುತ್ತಿವೆ. ವಸ್ತುಗಳ ಸಂಗ್ರಹ ಕೇಂದ್ರಗಳು, ಮನೆಗಳಿಗೆ ಪೂರೈಕೆ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಲು ಹೆಚ್ಚುವರಿಯಾಗಿ ಸುಮಾರು 75 ಸಾವಿರ ಸಿಬ್ಬಂದಿ ಅಗತ್ಯವಿರುವುದಾಗಿ ಅಮೆಜಾನ್‌ ಹೇಳಿದೆ. 

ಕಂಪನಿಯ ಉಗ್ರಾಣಗಳಲ್ಲಿಯೂ ಸಿಬ್ಬಂದಿಗೆ ಸೋಂಕು ತಗುಲಿರುವ ಪ್ರಕರಣಗಳು ದಾಖಲಾಗಿರುವುದರಿಂದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವಂತೆಯೂ ಒತ್ತಡವಿದೆ. ಈ ನಡುವೆಯೂ ಅಮೆಜಾನ್‌ ಹೆಚ್ಚುವರಿ ಉದ್ಯೋಗ ನೀಡಲು ಮುಂದಾಗಿದೆ. ಉಷ್ಣಾಂಶ ಪರೀಕ್ಷೆ ಮತ್ತು ಮುಖಗವಸುಗಳನ್ನು ಅಮೆರಿಕ ಹಾಗೂ ಯುರೋಪ್‌ ಭಾಗದ ಎಲ್ಲ ಸಿಬ್ಬಂದಿಗೆ ನೀಡುವುದಾಗಿ ತಿಳಿಸಿದೆ. 

ಹಲವು ಅಧಿಕಾರಿಗಳೂ ಸಹ ಉಗ್ರಾಣಗಳನ್ನು ಬಂದ್‌ ಮಾಡುವಂತೆ ಕಂಪನಿಗೆ ಒತ್ತಾಯಿಸಿದ್ದಾರೆ. ಆದರೆ, ನಿರುದ್ಯೋಗ ಪ್ರಮಾಣ ಅತಿ ಹೆಚ್ಚು ದಾಖಲಾಗಿರುವುದರಿಂದ ಅದನ್ನು ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಈ ಪ್ರಯತ್ನ ಎಂದು ಅಮೆಜಾನ್‌ ಹೇಳಿದೆ. ಹೊಸಬರನ್ನು ಉದ್ಯೋಗದತ್ತ ಸೆಳೆಯಲಾಗುತ್ತಿದೆ. ಅಮೆರಿಕದಲ್ಲಿ ಪ್ರತಿ ಗಂಟೆ ಕಾರ್ಯನಿರ್ವಹಣೆಗೆ ಕನಿಷ್ಠ 15 ಡಾಲರ್‌ ನೀಡುವ ನಿಯಮಗಳಿದ್ದು, ಕಂಪನಿಯು ಇನ್ನೂ ಎರಡು ಡಾಲರ್‌ ಹೆಚ್ಚಿಗೆ ನೀಡಲು ಮುಂದಾಗಿದೆ.

ಈ ಹಿಂದೆ ಉದ್ಯೋಗ ಭರ್ತಿಗೆ ಜಾಹೀರಾತು ನೀಡಿದ್ದಂತೆ 1,00,000 ಸ್ಥಾನಗಳಿಗೆ ಸಿಬ್ಬಂದಿ ನೇಮಕಗೊಂಡಿದ್ದಾರೆ. ಅದಕ್ಕೆ ಹೆಚ್ಚುವರಿಯಾಗಿ 75,000 ಸ್ಥಾನಗಳಿಗೆ ಆಹ್ವಾನಿಸಲಾಗಿದೆ ಎಂದು ಸೋಮವಾರ ಕಂಪನಿ ಹೇಳಿದೆ. 

ಕೊರೊನಾ ವೈರಸ್‌ ಸಾಂಕ್ರಾಮಿಕವಾಗಿರುವ ಈ ಸಮಯದಲ್ಲಿ ಕಂಪನಿಯ ಸಿಬ್ಬಂದಿಗೆ ವೇತನ ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದು, ಅದಕ್ಕಾಗಿ ಜಾಗತಿಕವಾಗಿ ₹3,847 ಕೋಟಿ (500 ಮಿಲಿಯನ್‌ ಡಾಲರ್‌) ಹೆಚ್ಚುವರಿಯಾಗಿ ವ್ಯಯಿಸಬೇಕಿದೆ. 

ರೆಸ್ಟೊರೆಂಟ್‌ಗಳು, ಪ್ರವಾಸ, ಅತಿಥಿ ಸೇವೆಗಳು ಸೇರಿದಂತೆ ಹಲವು ವಲಯಗಳು ಕೋವಿಡ್‌–19ನಿಂದಾಗಿ ಹೊಡೆತ ಅನುಭವಿಸಿವೆ. ಆ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೂ ಅಮೆಜಾನ್‌ನಲ್ಲಿ ಕಾರ್ಯನಿರ್ವಹಿಸಲು ಆಹ್ವಾನಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ. 

ಪ್ರಸ್ತುತ ಅಮೆಜಾನ್‌ನಲ್ಲಿ 7,98,000ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಗತಿಕವಾಗಿ 18 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಹಾಗೂ 1 ಲಕ್ಷಕ್ಕೂ ಹೆಚ್ಚು ಸೋಂಕಿತರು ಸಾವಿಗೀಡಾಗಿದ್ದು, ಇಂಥ ಸಮಯದಲ್ಲಿ ಅಮೆಜಾನ್‌ ವರ್ತನೆಗೆ ಹಲವರಿಂದ ವಿರೋಧವೂ ವ್ಯಕ್ತವಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು