ಶನಿವಾರ, ಆಗಸ್ಟ್ 13, 2022
26 °C

ಹುಷಾರ್! ಬೆಚ್ಚಿಬೀಳಬೇಡಿ!!

ಕೃಷ್ಣ ಭಟ್ Updated:

ಅಕ್ಷರ ಗಾತ್ರ : | |

Prajavani

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀರಾ ಕ್ಲೀಷೆ ಶೀರ್ಷಿಕೆಗಳಿರುವ ಸುದ್ದಿಗಳು ‘ಬೆಚ್ಚಿ ಬೀಳ್ತೀರಾ...’, ‘...ಗೊತ್ತಾ?’ – ಎಂಬಂಥ ಶಬ್ದಗಳೇ ಪುನರಾವರ್ತನೆ ಆಗುತ್ತಿರುತ್ತವೆ. ಇಂಥ ಸುದ್ದಿ ತಡೆಯುವುದು ಹೇಗೆ?

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀರಾ ಕ್ಲೀಷೆ ಶೀರ್ಷಿಕೆಗಳಿರುವ ಸುದ್ದಿಗಳು ಹೆಚ್ಚು ಹೆಚ್ಚು ಕಣ್ಣಿಗೆ ಬೀಳುತ್ತಿವೆ. ಶೀರ್ಷಿಕೆಯಲ್ಲಿ ‘ಬೆಚ್ಚಿ ಬೀಳ್ತೀರಾ...’, ‘...ಗೊತ್ತಾ?’ – ಎಂಬಂಥ ಶಬ್ದಗಳೇ ಪುನರಾವರ್ತನೆಯಾಗುತ್ತಿರುತ್ತವೆ. ಆದರೆ ಆ ಸುದ್ದಿಯ ಒಳ ಹೋದರೆ, ಅದರಲ್ಲಿ ಒಂದು ಸಾಲಿನ ಸುದ್ದಿಯನ್ನು ಬಿಟ್ಟು ಬೇರೇನೂ ಇರುವುದಿಲ್ಲ. ಇಂಥ ಸುದ್ದಿಗಳಿಗೆ ಸೋಷಿಯಲ್‌ ಮೀಡಿಯಾಗಳೇ ಬಂಡವಾಳ. ಫೇಸ್‌ಬುಕ್‌ನಲ್ಲಿ ಇನ್‌ಸ್ಟಂಟ್ ಆರ್ಟಿಕಲ್ ಎಂಬ ಫೀಚರ್ ಇದೆ. ಇದನ್ನು ಕಳೆದ ಒಂದೆರಡು ವರ್ಷದ ಹಿಂದೆ ಭಾರತದಲ್ಲಿ ಪರಿಚಯಿಸಲಾಗಿತ್ತು. ಅಂದಿನಿಂದ ಈ ರೀತಿಯ ‘ಬೆಚ್ಚಿ ಬೀಳಿಸುವ...’ ಸುದ್ದಿಯ ಹಾವಳಿ ಶುರುವಾಯಿತು.

ಅಷ್ಟಕ್ಕೂ ಇದೇನೂ ಹೊಸ ಟ್ರೆಂಡ್ ಅಲ್ಲ. ಕೆಲವು ವರ್ಷಗಳ ಹಿಂದೆ ಟ್ಯಾಬ್ಲಾಯ್ಡ್‌ ಭಾರಿ ಪ್ರಚಾರಕ್ಕೆ ಬಂದಾಗ, ಅದರಲ್ಲಿ ಬೇರೆ ರೀತಿಯಲ್ಲಿ ದುಡ್ಡು ಮಾಡಬಹುದು ಅಂತ ಗೊತ್ತಾದಾಗ ಗಲ್ಲಿ ಗಲ್ಲಿಗೂ ಒಂದೊಂದು ಟ್ಯಾಬ್ಲಾಯ್ಡ್ ಹುಟ್ಟಿಕೊಂಡಿದ್ದವು. ಅದರ ಭಾಷೆಯೂ ಹೀಗೇ ಕ್ಲೀಷೆಯಾಗಿಯೇ ಇರುತ್ತಿದ್ದವು. ಆದರೆ, ಕಾಲ ಸರಿದ ಹಾಗೆ ಟ್ಯಾಬ್ಲಾಯ್ಡ್‌ ಟ್ರೆಂಡ್ ಕಡಿಮೆಯಾದ ಮೇಲೆ ಅವು ಮಾರುಕಟ್ಟೆಯಿಂದ ಮಾಯವಾದವು. ಇಂಟರ್ನೆಟ್‌ ಬಂದ ಮೇಲೆ ಈ ಮನಃಸ್ಥಿತಿ ಒಂಚೂರು ಬದಲಾಗಿ ‘ಬೆಚ್ಚಿ ಬೀಳಿಸುವ...’ ಕೆಲಸ ಶುರುವಾಗಿದೆ. ಇದಕ್ಕೆ ಈ ಸುದ್ದಿ ಮಾಡುವವರು ಎಷ್ಟು ಕಾರಣವೋ ಅಷ್ಟೇ ಪ್ರಮಾಣದಲ್ಲಿ ಫೇಸ್‌ಬುಕ್‌ ಮತ್ತು ನಾವೂ ಕಾರಣ.

ಫೇಸ್‌ಬುಕ್‌ ತನ್ನ ಅಲ್ಗಾರಿಥಂನಲ್ಲಿ ಇಂಥದ್ದೇ ಕಂಟೆಂಟ್‌ ಅನ್ನು ಹೆಚ್ಚು ನೋಡುತ್ತಾರೆ ಎಂಬುದನ್ನು ಕಂಡುಕೊಂಡು ಅದನ್ನೇ ಹೆಚ್ಚು ಹೆಚ್ಚು ನಮ್ಮ ಟೈಮ್‌ಲೈನ್‌ನಲ್ಲಿ ತೋರಿಸುತ್ತದೆ. ತಮಾಷೆ ಅಂದರೆ, ಇದೇ ವೆಬ್‌ಸೈಟ್‌ಗಳು ಗಂಭೀರವಾದ ಸುದ್ದಿ ಹಾಕಿದರೆ ಅದಕ್ಕೆ ಪ್ರಚಾರ ಸಿಗುವುದಿಲ್ಲ.

ವೆಬ್‌ಸೈಟ್‌ಗಳು ಒಂದು ಸುದ್ದಿಯನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿಕೊಂಡು, ಅದೇ ಸುದ್ದಿಯನ್ನು ಇನ್‌ಸ್ಟಂಟ್ ಆರ್ಟಿಕಲ್‌ ಆಗಿ ಫೇಸ್‌ಬುಕ್‌ನಲ್ಲಿ ಪ್ರಕಟಿಸುತ್ತವೆ. ದಿನಕ್ಕೆ ನಾಲ್ಕಾರು ಸುದ್ದಿಯನ್ನು ಇನ್‌ಸ್ಟಂಟ್ ಆರ್ಟಿಕಲ್ ಆಗಿ ಹಾಕುತ್ತ ಹೋಗಿ, ತಿಂಗಳಿಗೆ 40-50 ಸಾವಿರ ದುಡಿಯುವ ಸಣ್ಣ ಪುಟ್ಟ ವೆಬ್‌ಸೈಟ್‌ಗಳಿವೆ.

ಫೇಸ್‌ಬುಕ್ ಯಾವ ರೀತಿಯ ಲೇಖನಗಳನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ ಎಂಬ ನಾಡಿಮಿಡಿತ ಸಿಕ್ಕರೆ ಸಾಕು. ಇವರು ಗೂಗಲ್‌ ಟ್ರಾನ್ಸ್‌ಲೇಟ್‌ನಿಂದಲಾದರೂ ವಿಷಯವನ್ನು ಅನುವಾದ ಮಾಡಿ, ಚೆಂದದ ಶೀರ್ಷಿಕೆ ಅಂಟಿಸಿ ಇನ್‌ಸ್ಟಂಟ್ ಆರ್ಟಿಕಲ್‌ ಮಾಡ್ತಾರೆ. ಅದನ್ನು ಫೇಸ್‌ಬುಕ್‌ ಒಂದು ದಿನಕ್ಕೆ ಸಾವಿರಾರು ವೀಕ್ಷಣೆ ಸಿಗುವ ಹಾಗೆ ಪ್ರಚಾರ ಮಾಡುತ್ತದೆ. ಎಲ್ಲರ ಟೈಮ್‌ಲೈನ್‌ನಲ್ಲೂ ಅದು ಕಾಣಿಸಿಕೊಳ್ಳುತ್ತದೆ. ಇನ್‌ಸ್ಟಂಟ್ ಆರ್ಟಿಕಲ್‌ ಮಾಡಿದರೆ, ಫೇಸ್‌ಬುಕ್‌ನದೇ ಬ್ರೌಸರ್‌ನಲ್ಲಿ ಸುದ್ದಿ ಓದಲು ಸಿಗುತ್ತದೆ. ಮೂರು ಸಾಲು ಸುದ್ದಿಯ ಮಧ್ಯೆ ಒಂದು ಜಾಹೀರಾತನ್ನು ಫೇಸ್‌ಬುಕ್‌ ತೋರಿಸುತ್ತದೆ. ಇಷ್ಟು ವೀಕ್ಷಣೆಗಳಿಗೆ ಇಷ್ಟು ಹಣ ಎಂದು ನಿಗದಿ ಮಾಡಿಕೊಂಡು ಫೇಸ್‌ಬುಕ್‌ ಈ ಲೇಖನವನ್ನು ಪ್ರಕಟಿಸಿದವನಿಗೆ ಕೊಡುತ್ತದೆ.

ಇಂಥ ಸುದ್ದಿ ತಡೆಯುವುದು ಹೇಗೆ?
ಇಂಥ ಸುದ್ದಿಯನ್ನು ನಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಳ್ಳದಂತೆ ತಡೆಯುವ ಅಧಿಕಾರ, ವಿಧಾನ ಕೈಯಲ್ಲೇ ಇದೆ.

* ಮೊದಲು, ನಾವು ಇಂಥ ಸುದ್ದಿ ಬಂದಾಗ ಅದರ ಶೀರ್ಷಿಕೆ ಓದುವುದಕ್ಕೂ ನಿಲ್ಲಬಾರದು. ಈ ಹಿಂದಿನ ಪೋಸ್ಟ್‌ಗಳನ್ನು ಹೇಗೆ ಸ್ಕ್ರಾಲ್‌ ಮಾಡಿಕೊಂಡು ಹೋಗುತ್ತಿದ್ದೀರೋ ಹಾಗೆಯೇ ಮುಂದೆ ಹೋಗಿ.

* ಸುದ್ದಿಗಳ ಮೇಲೆ ಕ್ಲಿಕ್ ಮಾಡಿ ತೆರೆದೇ ಓದಬೇಕು ಎಂದೇನಿಲ್ಲ. ಎಲ್ಲವನ್ನೂ ಸ್ಕ್ರೋಲ್ ಮಾಡಿಕೊಂಡು ಹೋಗುತ್ತಿದ್ದ ನಾವು ಇಂಥ ಸುದ್ದಿ ಕಂಡಾಗ 3 ಸೆಕೆಂಡು ನಿಂತು ಶೀರ್ಷಿಕೆ ಓದಿದರೂ ಸರಿ, ನಾವು ಅವರಿಗೆ ಸಂಭಾವ್ಯ ಗ್ರಾಹಕ ಆಗುತ್ತೇವೆ. ನಮಗೆ ಅಂಥದ್ದೇ ಸುದ್ದಿಗಳು ಕಾಣಿಸತೊಡಗುತ್ತವೆ. ತೆರೆದು ಓದಿದರಂತೂ ಕಥೆ ಮುಗಿಯಿತು.  ಎಲ್ಲ ಇಂಥದ್ದೇ ಸುದ್ದಿಗಳು ಕಾಣಿಸಿಗುತ್ತದೆ.

* ಸ್ಕ್ರಾಲ್ ಮಾಡುವಾಗ ಇಂಥ ಸುದ್ದಿ ಕಣ್ಣಿಗೆ ಬಿದ್ದಾಗ ‘Hide all from ....’ ಅಂತ ಒತ್ತಿ.  ಆಗ ನಿಮಗೆ ಇಂಥ ಸುದ್ದಿಗಳು ಟೈಮ್‌ಲೈನ್‌ನಲ್ಲಿ ಕಾಣಿಸುವುದಿಲ್ಲ.

* ಹೆಚ್ಚು ಹೆಚ್ಚು ಜನ ಹೀಗೆ ಮಾಡಿದಷ್ಟೂ ಫೇಸ್‌ಬುಕ್ ಅಲ್ಗಾರಿಥಂ ಕಲಿಯುತ್ತಾ ಹೋಗುತ್ತದೆ. ‘ಓಹ್‌..! ಇಂಥದ್ದು ಜನರಿಗೆ ಇಷ್ಟವಾಗುತ್ತಿಲ್ಲ’ ಎಂದು ಅದು ಅರ್ಥ ಮಾಡಿಕೊಂಡು ಬೇರೆ ರೀತಿಯ ಸುದ್ದಿಗಳನ್ನು ಕೊಡಲು ಶುರು ಮಾಡುತ್ತದೆ.

ಕೊನೆಯ ಮಾತು
ನಿಮ್ಮ ಕುತೂಹಲವೇ ಸಾಮಾಜಿಕ ಬಂಡವಾಳ. ಆದರೆ, ನಮ್ಮ ಕುತೂಹಲ ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳು ಮತ್ತು ವೆಬ್‌ಸೈಟ್‌ಗಳು ಬಂಡವಾಳವನ್ನಾದರೂ ಮಾಡಿಕೊಳ್ಳಲಿ ಅಥವಾ ಅರಮನೆಯನ್ನಾದರೂ ಕಟ್ಟಿಕೊಳ್ಳಲಿ. ನಮ್ಮ ಅಭಿರುಚಿ ಉತ್ತಮವಾಗಿದೆ ಎಂದು ಅವರಿಗೆ ತೋರಿಸೋಣ. ಆ ಮೂಲಕ, ಅವರ ಅಭಿರುಚಿಯೂ ಸುಧಾರಿಸಲು. ಉಪಯುಕ್ತ, ಒಳನೋಟಗಳು ಇರುವ ಸುದ್ದಿಗಳನ್ನು ಅವರು ಪ್ರಕಟಿಸುವಂತಾಗಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು