ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಗಳಿಂದ ಬಿಎಸ್‌ಎಲ್‌ಎನ್‌ ಸ್ತಬ್ಧ: ಗ್ರಾಹಕರ ಪರದಾಟ

ಮೊಬೈಲ್‌ ಕರೆಯೂ ಬಂದ್
Last Updated 18 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಮೂರು ದಿನಗಳಿಂದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಂಪೂರ್ಣ ಸ್ಥಗಿತಗೊಂಡಿದ್ದು, ಗ್ರಾಹಕರು ಪರದಾಡುವಂತೆ ಆಗಿದೆ.

ಭಾನುವಾರದಿಂದಲೇ ನೆಟ್‌ವರ್ಕ್‌ ಸಂಪೂರ್ಣ ಸ್ತಬ್ಧವಾಗಿದೆ. ಬಿಎಸ್‌ಎನ್‌ಎಲ್‌ನ ಸ್ಥಿರ ದೂರವಾಣಿ, ಮೊಬೈಲ್‌ ಹಾಗೂ ಅಂತರ್ಜಾಲ ಸೇವೆಯು ನಿಂತಿದೆ. ಇದರಿಂದಾಗಿ ಅಸಂಖ್ಯ ದೂರವಾಣಿ ಬಳಕೆದಾರರು ಸಂಪರ್ಕ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ.

ಕಾರಣವೇನು: ಮೂರು ದಿನದ ಹಿಂದೆ ಕನಕಪುರ ತಾಲ್ಲೂಕಿನಲ್ಲಿ ಕಂಪನಿಯ ನೆಟ್‌ವರ್ಕ್‌ ತಂತಿಗಳು ತುಂಡಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಇದನ್ನು ಸರಿಪಡಿಸುವ ಕಾರ್ಯ ತ್ವರಿತವಾಗಿ ನಡೆದಿದೆ ಎಂದು ಕಂಪನಿಯ ಸಿಬ್ಬಂದಿ ತಿಳಿಸಿದರು.

ಕಚೇರಿಗೆ ಲಗ್ಗೆ: ಕನಿಷ್ಠ ಮೊಬೈಲ್‌ ನೆಟ್‌ವರ್ಕ್‌ ಸಿಗದ ಕಾರಣ ಬೇಸರಗೊಂಡ ಗ್ರಾಹಕರು ಇಲ್ಲಿನ ಪ್ರವಾಸಿ ಮಂದಿರ ಬಳಿ ಇರುವ ಬಿಎಸ್‌ಎನ್‌ಎಲ್‌ ಕಚೇರಿಗೆ ಮಂಗಳವಾರ ಲಗ್ಗೆ ಇಟ್ಟು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು. ಸಬೂಬು ಹೇಳಲಾಗದೇ ಸಿಬ್ಬಂದಿ ಒಳನಡೆದರು.

ರಾಮನಗರ ಒಂದರಲ್ಲಿಯೇ 1800ಕ್ಕೂ ಹೆಚ್ಚು ಸ್ಥಿರ ದೂರವಾಣಿ ಸಂಪರ್ಕಗಳಿವೆ. ಇದರೊಟ್ಟಿಗೆ ಸಾವಿರಾರು ಮಂದಿ ಈ ಕಂಪನಿಯ ಮೊಬೈಲ್‌ ಸಿಮ್‌ಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಸರ್ಕಾರಿ ಅಧಿಕಾರಿಗಳ ಮೊಬೈಲ್‌ಗಳು ಇದೇ ಕಂಪನಿಯದ್ದಾಗಿದ್ದು, ಈಗ ಅವರು ಜನರ ಸಂಪರ್ಕಕ್ಕೂ ಸಿಗುತ್ತಿಲ್ಲ.

ನೆಟ್‌ವರ್ಕ್‌ ಕಾರಣದಿಂದಾಗಿ ಬ್ಯಾಂಕಿಂಗ್‌, ಆನ್‌ಲೈನ್‌ ಹರಾಜು, ಆಸ್ತಿಗಳ ನೋಂದಣಿ ಮೊದಲಾದ ಕೆಲಸಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕೆಲವು ಕಚೇರಿಗಳಲ್ಲಿ ಪರ್ಯಾಯ ವ್ಯವಸ್ಥೆ ಆಗಿದ್ದರೆ, ಇನ್ನೂ ಕೆಲವು ಸರ್ಕಾರಿ ಕಚೇರಿಗಳಲ್ಲಿ ಇದೇ ಕಾರಣಕ್ಕೆ ಕೆಲಸ ಸಾಗುತ್ತಿಲ್ಲ.

‘ಬೃಹತ್‌ ಕಂಪನಿಯೊಂದು ಮೂರು ದಿನಗಳ ಕಾಲ ನೆಟ್‌ವರ್ಕ್‌ ಸರಿಪಡಿಸಲು ಆಗಲಿಲ್ಲ ಎಂದರೆ ಏನು ಹೇಳುವುದು. ಕನಿಷ್ಠ ಮೊಬೈಲ್‌ ನೆಟ್‌ವರ್ಕ್‌ ಸಹ ಸಿಗುತ್ತಿಲ್ಲ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಬೇಕು’ ಎಂದು ಬಿಎಸ್‌ಎನ್‌ಎಲ್‌ ಕಚೇರಿಗೆ ಬಂದಿದ್ದ ಗ್ರಾಹಕ ರಮೇಶ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT