ಮಂಗಳವಾರ, ಸೆಪ್ಟೆಂಬರ್ 28, 2021
20 °C

ಬದುಕಿನ ಚದುರಂಗದಲ್ಲಿ ಚತುರ ಅಂಗಿಯ ಭಂಗಿ: ಇಂಗಾಲದ ನ್ಯಾನೋ ಟ್ಯೂಬ್‌ ಸಂಶೋಧನೆ

ಕ್ಷಮಾ ವಿ. ಭಾನುಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಈ ಗಂತೂ ಪ್ಯಾಂಡೆಮಿಕ್‌ ಕಾಲ. ಮನೇಲೇ ಇದ್ದು ಆರೋಗ್ಯದ ಬಗ್ಗೆ ಕಾಳಜಿ ಮಾಡೋದು ಮನೆಮನೆಯ ನಿತ್ಯಸತ್ಯ. ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದಂತೆಲ್ಲಾ ಯೋಗಾಸನ, ಪಥ್ಯ ಮಾಡೋದಷ್ಟೇ ಅಲ್ಲದೇ 30–40 ವಯಸ್ಸಿನ ನಂತರ ಮಾಡಿಸಲೇಬೇಕು ಎಂಬ ವೈದ್ಯಕೀಯ ಪರೀಕ್ಷೆಗಳನ್ನು ತಾವೇತಾವಾಗಿಯೇ ಮಾಡಿಸುವವರು ಬಹುಪಾಲು ಜನ. ಅದರ ಭಾಗವಾಗಿ ಇಸಿಜಿ, ರಕ್ತಪರೀಕ್ಷೆಗಳು ಇತ್ಯಾದಿ ಸಾಮಾನ್ಯವಂತಾಗಿರುವುದು ಆರೋಗ್ಯದ ಬಗೆಗಿನ ಕಾಳಜಿಯಿಂದಲೋ, ಬಹುರಾಷ್ಟ್ರೀಯ ಕಂಪನಿಗಳ ಆರೋಗ್ಯವಿಮೆ ಸುಲಭವಾಗಿ ಲಭ್ಯ ಇರುವುದರಿಂದಲೋ ಎಂಬ ಪ್ರಶ್ನೆಗೆ ಉತ್ತರ ಕನ್ನಡಿಯ ಗಂಟು. ಆದರೆ, ದಿನದಿನಕ್ಕೂ ನಮ್ಮ ಆರೋಗ್ಯವನ್ನು ಗಮನಿಸಿಕೊಳ್ಳುವುದು, ಆರೋಗ್ಯದ ಸೂಚಕಗಳನ್ನು ದಾಖಲಿಸಿ ಅರ್ಥೈಸಿಕೊಳ್ಳುವುದು ಸರಳವಾಗುತ್ತಾ ಸಾಗುತ್ತಿದೆ; ಇದಕ್ಕೆ ಕಾರಣ ವಿನೂತನ ತಂತ್ರಜ್ಞಾನಗಳು; ಅಂತಹದ್ದೇ ಒಂದು ಅತ್ಯುಪಯುಕ್ತ ತಂತ್ರಜ್ಞಾನ ಧರಿಸಬಲ್ಲ ಆರೋಗ್ಯ ಸಾಧನಗಳು. ಸ್ಮಾರ್ಟ್‌ವಾಚುಗಳು, ಫಿಟ್ನೆಸ್‌ ಬ್ಯಾಂಡುಗಳು ನಮಗೆಲ್ಲಾ ಗೊತ್ತೇ ಇದೆ; ಅದಕ್ಕೂ ಮೀರಿ ನಾವು ಧರಿಸುವ ಅಂಗಿಯೂ ನಮ್ಮ ಆರೋಗ್ಯದ ಮಾಹಿತಿ ಕಲೆಹಾಕುವ ಜವಾಬ್ದಾರಿ ತೆಗೆದುಕೊಂಡುಬಿಟ್ಟಿದೆ ಈಗ. ಹೇಗಂತೀರಾ? ರೈಸ್‌ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯ ಭಾಗವಾಗಿ ಸೃಷ್ಟಿಯಾಗಿದೆ ಈ ಚತುರ ಅಂಗಿ.

ನೋಡಲು, ಮುಟ್ಟಲು, ಹೊಲಿಯಲು, ಒಗೆಯಲು ಈ ಚತುರ ಅಂಗಿಯೂ ನಮ್ಮ ಯಾವುದೇ ಇತರ ಅಂಗಿಯಂತೆಯೇ ಇರುತ್ತದೆ. ಆದರೆ ಇದು ಮಾಡಬಲ್ಲ ಉಪಕಾರಗಳ ಪಟ್ಟಿ ದೊಡ್ಡದಿದೆ. ಇಂಗಾಲದ ನ್ಯಾನೋ ಟ್ಯೂಬ್‌ಗಳ ಬಳಕೆಯಿಂದ ಈ ಚಾಣಾಕ್ಷ ಬಟ್ಟೆಯ ರಚನೆ ಸಾಧ್ಯವಾಯಿತು. ಒಂದು ದಶಕದಿಂದಲೂ ಚಾಣಾಕ್ಷ ಬಟ್ಟೆಯ ಸಂಶೋಧನೆಯಲ್ಲಿ ಜಗತ್ತಿನ ಅನೇಕ ವಿಜ್ಞಾನಿಗಳ ತಂಡಗಳು ತೊಡಗಿದ್ದವು; ತಕ್ಕಮಟ್ಟಿಗೆ ಯಶಸ್ವಿಯಾಗಿದ್ದವು ಕೂಡ. ಆದರೆ ಈ ಹೊಸ ಚತುರ ಬಟ್ಟೆಯು ಅವೆಲ್ಲವನ್ನೂ ವಿದ್ಯುತ್‌ವಾಹಕತೆಯಲ್ಲಿ, ನಮ್ಯತೆಯಲ್ಲಿ, ವಿದ್ಯುನ್ಮಾನ ಸಂವಹನದಲ್ಲಿ, ಮೃದುತ್ವದಲ್ಲಿ ಮೀರಿಸಿಬಿಟ್ಟಿದೆ. ಇಲ್ಲಿ ಇಂಗಾಲದ ನ್ಯಾನೋ ಕೊಳವೆಗಳನ್ನು ಬಳಸಿ ಮೊದಲಿಗೆ ದಪ್ಪವಾದ ದಾರಗಳನ್ನು ತಯಾರಿಸಿಕೊಳ್ಳಲಾಗಿದೆ. ವಿಜ್ಞಾನಿಗಳ ಮತ್ತು ಹಗ್ಗ ಹೊಸೆಯುವವರ ತಾಂತ್ರಿಕ ಜ್ಞಾನ ಇಲ್ಲಿ ಕೆಲಸಕ್ಕೆ ಬಂದಿದೆ. ಇಲ್ಲದಿದ್ದರೆ, ಹೆಸರೇ ಸೂಚಿಸುವಂತೆ ’ನ್ಯಾನೋ’ಕೊಳವೆಗಳು ಕೈಗೇ ಸಿಗದಷ್ಟು, ಬರಿಗಣ್ಣಿಗೆ ಕಾಣದಷ್ಟು ಸಪೂರ. ಹೀಗಿರುವಾಗ ಅವುಗಳನ್ನು ಬೇಕಾದ ಹಾಗೆ ಹೊಲಿಗೆಯಲ್ಲಿ ಬಳಸುವುದು ದೂರದ ಮಾತು. ಹೀಗಾಗಿ 22 ಮೈಕ್ರಾನ್‌ಗಳಷ್ಟು ಗಾತ್ರವಿರುವ ಈ ನ್ಯಾನೋದಾರಗಳನ್ನು 7 ದಾರಗಳ ಗುಂಪಾಗಿ ಹೊಸೆದು, ಇಂತಹ ಮೂರು ಗುಂಪುಗಳನ್ನು ಒಟ್ಟಿಗೆ ಹೆಣೆದು ಒಂದು ಚತುರ ದಾರ ರಚನೆಯಾಗಿದೆ. ಈ ದಾರಗಳನ್ನು ಹೊಲಿಗೆಯಂತ್ರ ಬಳಸಿ ಸಾಮಾನ್ಯ ದಾರದಂತೆಯೇ ಹೊಲಿಯಬಹುದಾಗಿದೆ. ಹೀಗೆ ಹೊಲಿಗೆ ಯಂತ್ರದ ಸೂಜಿಯ ತಾಳಕ್ಕೆ ಕುಣಿಯಬಲ್ಲ ದಾರವು ಯಾವುದೇ ಲೋಹದ ವಿದ್ಯುತ್‌ ತಂತಿಗೂ ಕಡಿಮೆಯಿಲ್ಲದಂತೆ ವಿದ್ಯುತ್ತನ್ನು ತನ್ನೊಳಗೆ ಹರಿಯಬಿಡುತ್ತದೆ ಎಂದರೆ ಎಂತಹ ಅಚ್ಚರಿಯಲ್ಲವೇ?

ತಂತಿಯಂತೆ ಚುಚ್ಚದು, ವಿದ್ಯುತ್‌ ಸರ್ಕ್ಯೂಟ್‌ನಂತೆ ಕಾಣದು, ಸಾಮಾನ್ಯ ದಾರದಂತೆ ಕಾಣುವ ಚತುರ ದಾರ ಮಾಡಬಲ್ಲ ಕೆಲಸಗಳು ಒಂದೆರಡಲ್ಲ. ನಮ್ಮ ಅಂಗಿಯು ಮೂಲಭೂತವಾಗಿ ಹತ್ತಿಯದ್ದೋ ಪಾಲಿಯೆಸ್ಟರದ್ದೋ ಆಗಿದ್ದರೂ, ಅಂಗಿಯ ಎದೆಯಭಾಗದಲ್ಲಿ ಈ ದಾರಗಳ ಚಿತ್ತಾರವಿದ್ದರೆ ಸಾಕು, ನಮ್ಮ ಹೃದಯಬಡಿತದ ಜಾತಕ ಈ ಅಂಗಿಯ ಮೂಲಕ ಸ್ಮಾರ್ಟ್‌ಫೋನಿಗೆ ರವಾನೆಯಾಗಿರುತ್ತದೆ. ಉಸಿರಾಟದ ಗತಿಯನ್ನೂ, ನಮ್ಮ ದೇಹದ ತಾಪಮಾನವನ್ನೂ ಹೃದಯದ ಸ್ಥಿತಿಗತಿಯ ಜೊತೆಗೆ ತಾಳೆಹಾಕಿ ನಮ್ಮ ಆರೋಗ್ಯದ ಗುಟ್ಟನ್ನು ರಟ್ಟು ಮಾಡುವುದು ಚತುರ ಅಂಗಿಗೆ ಸುಲಲಿತ.

ಈ ಅಂಗಿಯ ಆವಶ್ಯಕತೆಯೇನು? ಸ್ಮಾರ್ಟ್‌ವಾಚ್‌ ಈ ಕೆಲಸ ಮಾಡೋಲ್ಲವೇ? ಎಂದು ಯೋಚಿಸುತ್ತಿದ್ದೀರಾ? ಸ್ಮಾರ್ಟ್‌ವಾಚುಗಳು ಎಷ್ಟು ಮಹಾ ಅಗಲವಿರುತ್ತವೆ? ಅವುಗಳ ಮತ್ತು ನಮ್ಮ ಚರ್ಮದ ನಡುವೆ ಸಂಪರ್ಕ ಸಾಧ್ಯವಾಗುವುದು ಕಡಿಮೆ ಪ್ರಮಾಣದಲ್ಲಿ. ಆದರೆ ಇಡಿಯ ಅಂಗಿಯೇ ಅಥವಾ ಅಂಗಿಯ ಮುಂಭಾಗ ಪೂರಾ ಚತುರ ದಾರಗಳಿಂದ ಮಾಡಲಾಗಿದ್ದಾಗ, ಅದು ನಮ್ಮ ಚರ್ಮದೊಡನೆ ಸಂಪರ್ಕ ಸಾಧಿಸಲು ಹೆಚ್ಚು ಸ್ಥಳಾವಕಾಶವಿರುತ್ತದೆ. ಅಷ್ಟೇ ಅಲ್ಲದೆ, ಸೈನಿಕರ ಸಮವಸ್ತ್ರಗಳೊಳಗೆ ಈ ದಾರಗಳನ್ನು ಬಳಸಿ ಅವರ ಆರೋಗ್ಯದ ವಿವರಗಳಷ್ಟೇ ಅಲ್ಲದೇ ಅವರಿರುವ ಸ್ಥಳದ ರೂಪುರೇಷೆ ಕೂಡ ಪಡೆಯಬಹುದಾಗಿದೆ. ಫೋನುಗಳು, ಸ್ಮಾರ್ಟ್‌ವಾಚುಗಳನ್ನು ಬಳಸಿ ಜಿಪಿಎಸ್‌ನ ಮೂಲಕ ತಾವಿರುವ ಸ್ಥಳದ ಮಾಹಿತಿಯನ್ನು ತಮ್ಮ ಪಾಳಯಕ್ಕೆ ಕಳಿಸುವುದು ಶತೃಗಳ ನಡುವೆ ಸಿಲುಕಬಹುದಾದ ಸೈನಿಕರಿಗೆ ಸುಲಭಸಾಧ್ಯವಲ್ಲ. ಆದರೆ ಅವರು ಧರಿಸಿರುವ ಅಂಗಿಯೇ ಚತುರ ಅಂಗಿಯಾದರೆ? ಆಂಟೆನಾದಂತೆ ಕಾರ್ಯನಿರ್ವಹಿಸುವ ಈ ಇಂಗಾಲದ ನ್ಯಾನೋದಾರಗಳು ತಮ್ಮನ್ನು ಧರಿಸಿರುವವರ ಇರುವನ್ನು, ಇತರರಿಗೆ ಗೋಚರಿಸದಂತೆ ಸಂಬಂಧಪಟ್ಟ ಸಾಧನಗಳಿಗೆ ರವಾನಿಸಿ, ಜೀವರಕ್ಷಕವೆನಿಸಿಕೊಳ್ಳುತ್ತವೆ. ಮೆದುಳಿನ ಶಸ್ತ್ರಚಿಕಿತ್ಸೆಗಳಲ್ಲೂ, ಅಂಗಾಂಗ ಕಸಿಯಲ್ಲೂ ಬಳಕೆಯಾಗಬಹುದಾದ ಈ ಇಂಗಾಲದ ಮಾಯಾದಾರಗಳು ಚತುರ ಅಂಗಿಯ ರೂಪದಲ್ಲಿ ಆರೋಗ್ಯವನ್ನು, ಜೀವವನ್ನು ಕಾಯುವ ಕಾಣದಕೈಯಂತೆ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದೆ. ಬೃಹತ್‌ಪ್ರಮಾಣದಲ್ಲಿ ಈ ಚತುರ ಅಂಗಿಯನ್ನು ತಯಾರಿಸಲು ಹೂಡಿಕೆದಾರರು ಸಿಕ್ಕರೆ, ಈ ಚತುರ ಅಂಗಿಯು ನಮ್ಮೆಲ್ಲರ ವಾರ್ಡ್ರೋಬನ್ನು ಸೇರುವ ದಿನ ದೂರವಿಲ್ಲ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು