ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರರ ಕೇಂದ್ರಿತ 5ಜಿ: ಮಹಾಂತೇಶ್‌

Last Updated 21 ಜನವರಿ 2020, 9:27 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಹೃದಯ ಬಡಿತವನ್ನು ಬಳಸಿಕೊಂಡು ಮೊಬೈಲ್ ಚಾರ್ಜ್ ಮಾಡಲು ಸಾಧ್ಯವೇ? ಮೊಬೈಲ್‍ ಮೂಲಕವೇ ನಮ್ಮ ದೇಹದ ಸಕ್ಕರೆ ಮಟ್ಟವನ್ನು ತಿಳಿಯಬಹುದೇ? ಮನೆಯಲ್ಲೇ ಏನೇನಾಗುತ್ತಿದೆ ಎಂದು ಮೊಬೈಲ್‌ ಪರದೆಯಲ್ಲೇ ಕ್ಷಣಕ್ಷಣಕ್ಕೂ ಮಾಹಿತಿ ಪಡೆಯಬಹುದೇ?

ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೌದು. ಆದರೆ, ಇದು ಸಾಕಾರಗೊಳ್ಳಲು ಐದನೇ ತಲೆಮಾರಿನ (5ಜಿ) ತಂತ್ರಜ್ಞಾನ ಬಳಸುವ ಮೊಬೈಲ್‌ ಸೇವೆ ಶುರುವಾಗುವವರೆಗೂ ಕಾಯಬೇಕು.

5ಜಿ ಮೊಬೈಲ್‌ ಸೇವೆ ಆರಂಭವಾದ ಬಳಿಕ ಏನೆಲ್ಲ ಬದಲಾವಣೆಗಳನ್ನು ಕಾಣಬಹುದು ಎಂಬ ಚಿತ್ರಣವನ್ನು ಟೆಲಿಕಾಂ ಎಂಜಿನಿಯರ್ ಮಹಾಂತೇಶ ವಿ. ಅಂಗಡಿ ಸೊಗಸಾಗಿ ಕಟ್ಟಿಕೊಟ್ಟರು. ಮುನ್ನೋಟ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಅರಿಮೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘3ಜಿ ತಂತ್ರಜ್ಞಾನ ಆಪರೇಟರ್‌ ಕೇಂದ್ರಿತವಾಗಿದ್ದರೆ, 4 ಜಿ ಸೇವಾ ಕೇಂದ್ರಿತವಾಗಿತ್ತು. 5ಜಿ ಸಂಪೂರ್ಣ ಬಳಕೆದಾರ ಕೇಂದ್ರಿತವಾಗಿರಲಿದೆ. ಬಳಕೆದಾರನ ಮನಸ್ಥಿತಿಗೆ ಅನುಗುಣವಾಗಿ ಮೊಬೈಲ್‌ ರಿಂಗಿಣಿಸುವಷ್ಟರ ಮಟ್ಟಿಗೆ ಇದು ಬಳಕೆದಾರಸ್ನೇಹಿ. ಮೊಬೈಲ್ ಬಳಸಿ ಮನೆ, ಕಚೇರಿ, ಡೆಸ್ಕ್‌ಟಾಪ್, ಲ್ಯಾಪ್‍ಟಾಪ್‌ಗಳನ್ನೂ ಜಾಲಾಡಬಹುದು. ಕಾರು, ಬೈಕುಗಳನ್ನೂ ಚಲಾಯಿಸಬಹುದು’ ಎಂದು ವಿವರಿಸಿದರು.

‘ಮಗು ಹುಟ್ಟಿದ ಸಮಯವನ್ನು ನ್ಯಾನೊ ಸೆಕೆಂಡುಗಳಲ್ಲಿ ಅಳೆಯುವಷ್ಟರ ಮಟ್ಟಿನ ನಿಖರತೆ ಸಾಧಿಸಲು ಈ ತಂತ್ರಜ್ಞಾನ ನೆರವಾಗಲಿದೆ. ಸಮರ್ಪಕವಾಗಿ ಬಳಸಿದ್ದೇ ಆದರೆ, ಸುನಾಮಿ, ಭೂಕಂಪನದಂತಹ ಅವಘಡಗಳನ್ನು ಮುಂಚೆಯೇ ಗ್ರಹಿಸಬಹುದು. ಕಳವಾದ ಮೊಬೈಲ್‌ ಎಲ್ಲಿದೆ ಎಂಬುದನ್ನು ನ್ಯಾನೊ ಸೆಕೆಂಡ್‌ಗಳಲ್ಲಿ ಪತ್ತೆಹಚ್ಚಬಹುದು’ ಎಂದು ಹೊಸ ಸಾಧ್ಯತೆಗಳನ್ನು ತಿಳಿಸಿದರು.

‘5 ಜಿ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ, ಯಂತ್ರ–ಯಂತ್ರಗಳ ನಡುವಿನ ಸಂವಹನ, ಅಗೋಚರ ವಿಷಯಗಳನ್ನೂ ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವ ವರ್ಚ್ಯುವಲ್ ರಿಯಾಲಿಟಿ (ವಿ.ಆರ್‌) ತಂತ್ರಜ್ಞಾನಕ್ಕೆ ಹೊಸ ಆಯಾಮವನ್ನೇ ನೀಡಲಿದೆ. ತಾನೇ ತಾನಾಗಿ ಓಡುವ ಕಾರುಗಳಿಂದ ಹಿಡಿದು ಉಪಗ್ರಹ ಉಡ್ಡಯನದವರೆಗೆ ಕಾರ್ಯವಿಧಾನವನ್ನೇ ಬದಲಾಯಿಸಲಿದೆ. ವಿವಿಧ ಸಾಧನಗಳನ್ನು ಬೆಸೆಯಲು (ಐಒಟಿ) ನೆರವಾಗಲಿದೆ. ಕೈಗಾರಿಕೆಗಳಲ್ಲಿ ಹಾಗೂ ಸೇವಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಗೆ ಹೊಸ ಹಾದಿ ತೆರೆದುಕೊಳ್ಳಲಿದೆ. ತಜ್ಞವೈದ್ಯರು ಎಲ್ಲೋ ಕುಳಿತು ರೋಬೊಟ್‍ಗಳ ನೆರವಿನಿಂದ ಶಸ್ತ್ರಚಿಕಿತ್ಸೆಯನ್ನು ನಡೆಸಬಹುದು. ವಿ.ಆರ್‌. ತಂತ್ರಜ್ಞಾನ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಲಿದೆ’ ಎಂದು ಹೊಸ ಸಾಧ್ಯತೆಗಳ ಚಿತ್ರಣ ನೀಡಿದರು.

‘ಜೀವ ಸಂಕುಲಕ್ಕೆ ಅಪಾಯ’
‘5 ಜಿ ತಂತ್ರಜ್ಞಾನಕ್ಕೆ 30–300 ಗಿಗಾ ಹರ್ಡ್ಸ್‌ ಕಂಪನಾಂಕದಲ್ಲಿ ಮಿಲಿಮೀಟರ್‌ ಬ್ಯಾಂಡ್‌ ವಿಡ್ತ್‌ ಬಳಸುವುದರಿಂದ ಜೀವಸಂಕುಲಕ್ಕೂ ಕೆಲವು ಅಪಾಯಗಳಿವೆ’ ಎಂದು ಮಹಾಂತೇಶ್‌ ಎಚ್ಚರಿಸಿದರು.

‘5ಜಿ ಟವರ್‌ ಹೊರಸೂಸುವ ಪ್ರಬಲ ವಿಕಿರಣಗಳಿಂದ ಜೀವಕೋಶಗಳಲ್ಲಿನ ವರ್ಣತಂತುಗಳ ಮೇಲೆ ದುಷ್ಪರಿಣಾಮ ಉಂಟಾಗಿ ಆನುವಂಶೀಯ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ನಪುಂಸಕತ್ವ, ವೀರ್ಯಾಣು ಮತ್ತು ಅಂಡಾಣು ಸಂಖ್ಯೆ ಏರುಪೇರಾಗಬಹುದು. ಕ್ಯಾನ್ಸರ್‌, ಕೇಂದ್ರ ನರಮಂಡಲದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು’ ಎಂದರು.

‘ವಿಕಿರಣ ಹೊರಸೂಸುವಿಕೆಗೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ನಿಗದಿಪಡಿಸುವ ಮಿತಿಯನ್ನು ಕಾಯ್ದುಕೊಳ್ಳದಿದ್ದರೆ ಮಾತ್ರ ಅಪಾಯ. 4 ಜಿ ತಂತ್ರಜ್ಞಾನ ಬರುವಾಗಲೂ ಇಂತಹ ಆತಂಕಗಳಿದ್ದವಾದರೂ ಅದರಿಂದ ಗಮನಾರ್ಹ ಸಮಸ್ಯೆಗಳು ಕಾಣಿಸಿಲ್ಲ’ ಎಂದು ಇನ್ನೊಬ್ಬ ಟೆಲಿಕಾಂ ಎಂಜಿನಿಯರ್‌ ವಿಘ್ನೇಶ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT