ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಪ್ಚಾ ಎಂದರೇನು? ಇದನ್ನೇಕೆ ನಾವು ಬಳಸಬೇಕು?

Last Updated 18 ಮೇ 2021, 11:26 IST
ಅಕ್ಷರ ಗಾತ್ರ

ಗೂಗಲ್ ಅಥವಾ ಸಾಮಾಜಿಕ ಜಾಲ ತಾಣಗಳ ಖಾತೆ ತೆರೆಯುವ ಸಂದರ್ಭ, ಬ್ಯಾಂಕಿಂಗ್ ತಾಣಗಳಿಗೆ ಲಾಗಿನ್ ಮಾಡುವಾಗ ಅಥವಾ ಯಾವುದಾದರೂ ಜಾಲತಾಣಗಳಿಗೆ ಕಾಮೆಂಟ್ ಹಾಕುವ ಸಂದರ್ಭದಲ್ಲಿ ನೀವು ಈ Captcha ಎಂಬ ಪದವನ್ನು ನೋಡಿದ್ದಿರಬಹುದು. ಅಂಕಗಣಿತದ ಸುಲಭ ಲೆಕ್ಕವನ್ನು ಬಿಡಿಸುವುದು, ತಿರುಚಿದ ವಿನ್ಯಾಸವಿರುವ ಇಂಗ್ಲಿಷ್ ಅಕ್ಷರ ಗುರುತಿಸುವುದು, ಅಕ್ಷರಗಳು-ಅಂಕಿಗಳನ್ನು ನಮೂದಿಸುವುದು, ಚಿತ್ರಗಳನ್ನು ಪತ್ತೆ ಮಾಡುವುದು - ಈ ರೀತಿಯ ಸುಲಭ ಒಗಟುಗಳಿರುತ್ತವೆ.

ಕ್ಯಾಪ್ಚಾ ತುಂಬಿಸುವುದು ಕಷ್ಟದ ಕೆಲಸವಲ್ಲ. ಆದರೂ ಇದೊಂದು ದೊಡ್ಡ ಕಿರಿಕಿರಿ ಅಂತ ಭಾವಿಸಬೇಕಿಲ್ಲ. ವಿಶ್ವವ್ಯಾಪಿ ಜಾಲ (ವರ್ಲ್ಡ್ ವೈಡ್ ವೆಬ್) ಬಳಸುತ್ತಿರುವ ನಮಗೆ, ನಮ್ಮ ಖಾಸಗಿತನಕ್ಕೆ ಎಲ್ಲೆಡೆಯಿಂದಲೂ ಸೈಬರ್ ವಂಚಕರಿಂದ ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಇವರು ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲರು ಅಥವಾ ನಿರುಪಯುಕ್ತ ವಿಷಯಗಳನ್ನು (ಸ್ಪ್ಯಾಮ್) ಕಳುಹಿಸುತ್ತಾ ವಿಘ್ನಸಂತೋಷಿಗಳಾಗಬಲ್ಲರು.

ಈ ಬಾಟ್ (Bot) ಎಂಬ ಸ್ವಯಂಚಾಲಿತ ಕೆಲಸ ಮಾಡಬಲ್ಲ ಅದರಲ್ಲಿಯೂ ತೊಂದರೆಯುಂಟು ಮಾಡಬಲ್ಲ, ಮಾನವನೇ ರೂಪಿಸಿದ ತಂತ್ರಾಂಶದಿಂದ ರಕ್ಷಣೆ ಪಡೆಯಲು ಇರುವುದೇ ಈ ಕ್ಯಾಪ್ಚಾ.

Captcha ಎಂದರೇನು?
Completely Automated Public Turing test to tell Computers and Humans Apart ಎಂಬುದರ ಹೃಸ್ವರೂಪ ಕ್ಯಾಪ್ಚಾ. ಎಂದರೆ, ಕಂಪ್ಯೂಟರ್‌ಗಳೇ (ಬಾಟ್) ಬೇರೆ, ಮನುಷ್ಯರೇ ಬೇರೆ ಎಂಬುದನ್ನು ಸ್ವಯಂಚಾಲಿತವಾಗಿ ಗುರುತಿಸುವ ಟ್ಯೂರಿಂಗ್ ಪರೀಕ್ಷಾ ವಿಧಾನವಿದು. ಆಧುನಿಕ ಕಂಪ್ಯೂಟಿಂಗ್ ಜಗತ್ತಿನ ಪಿತಾಮಹ ಅಲೆನ್ ಟ್ಯೂರಿಂಗ್ ಪರಿಕಲ್ಪನೆಯ ಪರೀಕ್ಷೆಯಿದು. ಹೀಗಾಗಿ ಅವರ ಹೆಸರು.

ಹೇಗೆ ಕೆಲಸ ಮಾಡುತ್ತದೆ?
ಈಗಾಗಲೇ ಅಕ್ಷರಗಳು, ಅಂಕಿಗಳನ್ನು ಗುರುತಿಸಿ ಓದಬಲ್ಲ ಒಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಆದರೆ, ಯಂತ್ರಗಳು ಗುರುತಿಸಲಾಗದಂತೆ ಮಾಡಿದರಷ್ಟೇ, ಬಾಟ್‌ಗಳ ಹಾವಳಿ, ಸ್ಪ್ಯಾಮ್ ಅಥವಾ ಸ್ವಯಂಚಾಲಿತ ಮಾಹಿತಿ ರವಾನೆಯಿಂದ ತಪ್ಪಿಸಬಹುದು. ಈ ಕಾರಣಕ್ಕೆ, ಯಂತ್ರಗಳು ಗುರುತಿಸಲಾಗದ, ಮನುಷ್ಯರಷ್ಟೇ ಗುರುತಿಸಬಲ್ಲ ಅಕ್ಷರ ತಂತ್ರಜ್ಞಾನವನ್ನು ರೂಪಿಸಲಾಯಿತು. ಇದು ಅಂಕಿಗಳ ಸಂಕಲನವಿರಬಹುದು, ವ್ಯವಕಲನವಿರಬಹುದು, ಅಂಕಿ-ಅಕ್ಷರಗಳ ಸಂಯೋಗವಿರಬಹುದು, ಚಿತ್ರಗಳನ್ನು ಗುರುತಿಸುವುದಿರಬಹುದು. ಇವೆಲ್ಲವೂ ಒಂದು ಬಾರಿಗೆ ಮಾತ್ರ ಬಳಕೆಯಾಗುವಂಥವು. ಮುಂದಿನ ಬಾರಿ ಏನಾದರೂ ವೆಬ್ ಫಾರ್ಮ್ ತುಂಬಿಸಬೇಕಿದ್ದರೆ, ಹೊಸದಾಗಿ ಬೇರೆಯೇ ಕ್ಯಾಪ್ಚಾ ಎದುರಿಸಬೇಕಾಗುತ್ತದೆ. ಈಗಿನ ಹೊಸ ವಿಧಾನದಲ್ಲಿ 'ನಾನು ರೋಬೋ ಅಲ್ಲ' ಅಂತ ಖಚಿತಪಡಿಸಲು ಚೆಕ್ ಬಾಕ್ಸ್ ಒಂದಕ್ಕೆ ಟಿಕ್ ಗುರುತು ಹಾಕುವ ಕ್ಯಾಪ್ಚಾ ಬಂದಿದೆ.

ಕ್ಯಾಪ್ಚಾದಿಂದೇನು ಲಾಭ?
ರೈಲು, ಬಸ್ಸು, ಸಿನಿಮಾ ಶೋ... ಹೀಗೆ ಆನ್‌ಲೈನ್‌ನಲ್ಲಿ ಯಾವುದೋ ಒಂದು ಟಿಕೆಟ್ ಬುಕ್ ಮಾಡಬೇಕಿರುತ್ತದೆ. ಅಥವಾ ಹೊಸ ಖಾತೆ ತೆರೆಯಬೇಕಾಗಿರುತ್ತದೆ. ಪೂರ್ವನಿರ್ದೇಶಿತ ಬಾಟ್‌ಗಳು ಕೇವಲ ಸೆಕೆಂಡುಗಳಲ್ಲಿ ನೂರಾರು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಇಲ್ಲವೇ ಖಾತೆಗಳನ್ನು ತೆರೆಯಬಹುದು. ಆನ್‌ಲೈನ್ ಪೋಲ್ ಅಥವಾ ಜನಾಭಿಪ್ರಾಯ ಗಣನೆಯಲ್ಲೂ ಅವು ಲೆಕ್ಕಾಚಾರವನ್ನೇ ಬುಡಮೇಲು ಮಾಡಬಲ್ಲವು. ಇದನ್ನು ತಡೆಯುವ ಮಾರ್ಗವೇ ಕ್ಯಾಪ್ಚಾ. ಮನುಷ್ಯನೇ ಆ ಒಂದು ಕ್ಯಾಪ್ಚಾವನ್ನು ಬಿಡಿಸಿದರಷ್ಟೇ ಮುಂದುವರಿಯಬಹುದು. ಹೀಗೆ, ಯಾವುದೇ ವೆಬ್ ಪುಟದಲ್ಲಿ ಸ್ವಯಂಚಾಲಿತವಾಗಿ ಕಾಮೆಂಟ್‌ಗಳು ದಾಖಲಾಗದಂತೆ, ಯಂತ್ರಮಾನವರ ಮೂಲಕ ನಮ್ಮ ಮಾಹಿತಿಯನ್ನು ಕದಿಯದಂತೆ ತಡೆಯುವಲ್ಲಿ ಈ ಕ್ಯಾಪ್ಚಾಗಳು ಯಶಸ್ವಿಯಾಗಿವೆ.

ಸುಲಭವಾಗಿ ಹೇಳುವುದಿದ್ದರೆ, ಆನ್‌ಲೈನ್ ಮತದಾನದಲ್ಲಿ ವಂಚನೆಯಾಗದಂತೆ, ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಹೈಜಾಕ್ ಮಾಡದಂತೆ ಅಥವಾ ಕಾರ್ಯಕ್ರಮದ ನೋಂದಣಿ ವ್ಯವಸ್ಥೆಯನ್ನು ಮಿತಿಗೊಳಿಸಲು ಹಾಗೂ ವೆಬ್ ತಾಣಗಳಲ್ಲಿ ಸ್ವಯಂಚಾಲಿತ ಕಾಮೆಂಟ್‌ಗಳು ದಾಖಲಾಗದಂತೆ, ಬಾಟ್‌ಗಳು ಮಾನವರ ಖಾತೆಗಳಿಗೆ ಲಾಗಿನ್ ಆಗದಂತೆ ತಡೆಯುವುದು ಈ ಕ್ಯಾಪ್ಚಾದ ಉದ್ದೇಶ.

ಹೀಗಿರುವಾಗ, ನಮ್ಮ ರಕ್ಷಣೆಗಾಗಿಯೇ ಇರುವ ಈ ಕ್ಯಾಪ್ಚಾಗಳ ಬಗ್ಗೆ ಅಸಹನೆ ಬೇಡ. ಅರ್ಥವಾಗದಿದ್ದರೆ, ಹೊಸ ಕ್ಯಾಪ್ಚಾ ಪಡೆಯುವ (ರಿಫ್ರೆಶ್ ಬಟನ್) ಆಯ್ಕೆಯೂ ಇರುತ್ತದೆ. ನಮ್ಮದೇ ಸುರಕ್ಷತೆಗಾಗಿ ಇರುವ ಕ್ಯಾಪ್ಚಾ ಬಗ್ಗೆ ತಾಳ್ಮೆಯಿಂದ ಮುಂದುವರಿಯುವುದು ವಿಹಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT