ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಸುರಕ್ಷತೆ | ಕುತಂತ್ರಾಂಶಗಳಿಂದ ರಕ್ಷಣೆ ಅಗತ್ಯ

Last Updated 5 ಮೇ 2020, 20:30 IST
ಅಕ್ಷರ ಗಾತ್ರ

‘ಕೋವಿಡ್‌–19’ ಪಿಡುಗು ಇಡೀ ವಿಶ್ವಕ್ಕೆ ಏಕಕಾಲಕ್ಕೆ ಹಲವಾರು ಸಂಕಷ್ಟಗಳನ್ನು ತಂದೊಡ್ಡಿದೆ. ಪ್ರತಿಯೊಂದು ದೇಶವೂ ‘ಕೊರೊನಾ–2’ ವೈರಾಣುವಿನ ಹಿಡಿತಕ್ಕೆ ಸಿಲುಕಿ ನಲುಗುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಕಾರ್ಪೊರೇಟ್‌ ಕಂಪನಿಗಳು ತಮ್ಮ ವಹಿವಾಟು ಮುಂದುವರೆಸುವ ಅನಿವಾರ್ಯತೆಗೆ ಅವಿರತವಾಗಿ ಪ್ರಯತ್ನಿಸುತ್ತಿವೆ. ತಮ್ಮೆಲ್ಲ ಸಿಬ್ಬಂದಿಯ ಸುರಕ್ಷತೆಗೆ ಗಮನ ನೀಡುವುದರ ಜತೆಗೆ ಉತ್ಪಾದನೆ ಮತ್ತು ತಯಾರಿಕೆ ಚಟುವಟಿಕೆಗಳಿಗೆ ಅಡಚಣೆಯಾಗದಂತೆ ಜಾಗರೂಕತೆ ವಹಿಸಿವೆ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನವು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಮಾಹಿತಿ ಕದಿಯುವಸೈಬರ್‌ ಕಳ್ಳರೂ ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಹೊಂಚು ಹಾಕಿ ಕುಳಿತುಕೊಂಡಿದ್ದಾರೆ. ಮನೆಯಿಂದ ಕೆಲಸ ಮಾಡುವವರ ಕಂಪ್ಯೂಟರ್‌ಗೆ ಹಲವಾರು ವಂಚನೆ ಸ್ವರೂಪದ ಇ–ಮೇಲ್‌ಗಳ ದಾಳಿ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ವಿಶ್ವದಾದ್ಯಂತ ಲಕ್ಷಾಂತರ ಕಂಪ್ಯೂರ್‌ಗಳು ಬಾಧಿತವಾಗಿವೆ.

ವಹಿವಾಟಿಗೆ ಸಂಬಂಧಿಸಿದ ಕೆಲಸಗಳು ನಿರ್ವಿಘ್ನವಾಗಿ ನಡೆಯಲು ಕಂಪನಿಗಳು ತಮ್ಮ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿವೆ. ಈ ಉದ್ದೇಶಕ್ಕೆ ಸುರಕ್ಷಿತ ಇ–ಮೇಲ್‌ ಸಂವಹನ ವ್ಯವಸ್ಥೆ, ದಕ್ಷತೆಯಿಂದ ಕಾರ್ಯನಿರ್ವಹಿಸುವ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳು ಮತ್ತು ಡೇಟಾ ಸುರಕ್ಷತೆಗೆ ಗಮನ ನೀಡಿವೆ. ನೌಕರರು ಮನೆಯಿಂದ ಕೆಲಸ ನಿರ್ವಹಿಸುವಾಗ ಸೂಕ್ಷ್ಮ ಸ್ವರೂಪದ ದತ್ತಾಂಶ ಸೋರಿಕೆಯಾಗದಂತೆ ಹೆಚ್ಚು ಜಾಗರೂಕತೆ ವಹಿಸುವ ಅಗತ್ಯ ಇದೆ. ನೌಕರರು ಮನೆಯಿಂದಲೇ ಕಚೇರಿಯ ಅತಿ ಮಹತ್ವದ ದತ್ತಾಂಶಗಳನ್ನು ಬಳಸುವುದಕ್ಕೆ ಅವಕಾಶ ನೀಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದತ್ತಾಂಶಗಳ ಮೇಲೆ ಕಂಪನಿಯು ಸೂಕ್ತ ನಿಯಂತ್ರಣ ಹೊಂದಿರಬೇಕಾಗುತ್ತದೆ.

ಕುತಂತ್ರಾಂಶಗಳನ್ನು ಬಳಸಿ ಕಳ್ಳ ಹಾದಿಯಲ್ಲಿ ಮಾಹಿತಿ ಕದಿಯುವ ಹ್ಯಾಕರ್ಸ್‌ಗಳು ಕೋವಿಡ್‌ ಬಿಕ್ಕಟ್ಟನ್ನು ದುರ್ಬಳಕೆ ಮಾಡಿಕೊಂಡು ಕಂಪ್ಯೂಟರ್‌ ಬಳಕೆದಾರರನ್ನು ವಂಚಿಸಲು ಹವಣಿಸುತ್ತಿದ್ದಾರೆ.

ಹೀಗಾಗಿಸೈಬರ್‌ ಸುರಕ್ಷತೆಗೆ ಸಂಬಂಧಿಸಿದಂತೆ ಎದುರಾಗಿರುವ ಸವಾಲುಗಳು ಹಿಂದೆಂದೂ ಕಂಡು ಬಂದಿರದ ಸ್ವರೂಪದಲ್ಲಿ ಇವೆ.ಸೈಬರ್‌ ಸುರಕ್ಷತೆಗೆ ಸಂಬಂಧಿಸಿದ ವೃತ್ತಿಪರರು ವಿಶ್ವದಾದ್ಯಂತ ಸದಾಕಾಲ ತುದಿಗಾಲಲ್ಲೇ ನಿಂತು ಕಾರ್ಯನಿರ್ವಹಿಸುವ ಪರಿಸ್ಥಿತಿ ಉದ್ಭವಿಸಿದೆ. ಹ್ಯಾಕರ್ಸ್‌ಗಳು ಏನೆಲ್ಲಾ ಕಸರತ್ತು ಮಾಡಿದರೂ ಬಳಕೆದಾರರಿಗೆ ಸಕಾಲದಲ್ಲಿ ಎಚ್ಚರಿಕೆ ನೀಡುವ, ನಿರಂತರವಾಗಿ ಅವರ ಕೃತ್ಯಗಳ ಮೇಲೆ ನಿಗಾ ವಹಿಸುವ ಅಗತ್ಯ ಇದೆ.

ಇಂತಹ ವಂಚನೆ ಉದ್ದೇಶದ ಇ–ಮೇಲ್‌ಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ ಎಚ್ಚರಿಸುವ ಇ–ಮೇಲ್‌ ಸುರಕ್ಷತಾ ವ್ಯವಸ್ಥೆ ಸದ್ಯದ ಅಗತ್ಯವಾಗಿದೆ. ಜತೆಗೆಸೈಬರ್‌ಸುರಕ್ಷತೆಬಗ್ಗೆ ಅರಿವು ಮೂಡಿಸುವುದೂ ಮಹತ್ವದ ಪಾತ್ರ ನಿರ್ವಹಿಸಲಿದೆ. ಮನೆಯಿಂದ ಕೆಲಸ ಮಾಡುವಾಗ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳನ್ನು ಸುರಕ್ಷಿತವಾಗಿ ಬಳಕೆ ಮಾಡಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಟ್ಯಾಂಡರ್ಡ್ಸ್‌ ಆ್ಯಂಡ್‌ ಟೆಕ್ನಾಲಜಿಯು (ಎನ್‌ಐಎಸ್‌ಟಿ) ಈ ಹಿಂದೆಯೇ ಹಲವು ಉಪಕ್ರಮಗಳನ್ನು ಪ್ರಕಟಿಸಿದೆ. ಉದ್ಯಮದ ಟೆಲಿವರ್ಕ್, ದೂರದಿಂದಲೇ ಮಾಹಿತಿ ಪಡೆಯುವುದು ಮತ್ತು ಪ್ರತಿಯೊಬ್ಬರೂ ಬಳಸುವ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗೆ ತಮ್ಮದೇ ಆದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಈಗ ಬಹುತೇಕರು ನೆನಪಿಸಿಕೊಳ್ಳುವ ಅಗತ್ಯ ಇದೆ.

ಹ್ಯಾಕರ್ಸ್‌ಗಳ ದಾಳಿ ತಡೆಗೆ ಮುಂಜಾಗ್ರತಾ ಕ್ರಮ

* ಸುರಕ್ಷಿತ ಇ–ಮೇಲ್‌ ಸಂವಹನ ವ್ಯವಸ್ಥೆ

* ದಕ್ಷತೆಯಿಂದ ಕಾರ್ಯನಿರ್ವಹಿಸುವ ಕಂಪ್ಯೂಟರ್ ಬಳಕೆ

* ಡೇಟಾ ಸುರಕ್ಷತೆಗೆ ಹೆಚ್ಚು ಗಮನ

* ಕಂಪ್ಯೂಟರ್‌ ಬಳಕೆದಾರರ ವಂಚಿಸುವ ಹ್ಯಾಕರ್ಸ್‌ಗಳ ಹವಣಿಕೆ ಮೇಲೆ ನಿರಂತರ ನಿಗಾ

* ಸುರಕ್ಷಿತ ಇ–ಮೇಲ್‌ ವ್ಯವಸ್ಥೆಯ ಬಳಕೆ

* ಕಂಪ್ಯೂಟರ್‌ಗಳ ಸುರಕ್ಷಿತ ಬಳಕೆಗೆ ವ್ಯಾಪಕ ತಿಳಿವಳಿಕೆ

(ಲೇಖಕ; ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಹಿರಿಯ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT